ಮೃತರ ಮನೆಯಲ್ಲಿ ಮರಿ ಗೂಬೆ ಪತ್ತೆ: ರಾಮನಗರದ ವಕೀಲನಿಂದ ರಕ್ಷಣೆ
ರಾಮನಗರ, ಡಿಸೆಂಬರ್ 22: ನಿಶಾಚಾರ ಪಕ್ಷಿ ಗೂಬೆ ಯಾರಿಗೂ ಯಾವುದೇ ತೊಂದರೆ ಮಾಡದ ನಿರುಪದ್ರವಿ. ಪುರಾಣ ಕಥೆಗಳಲ್ಲಿ ಲಕ್ಷ್ಮಿ ವಾಹನ ಎಂಬ ಪ್ರಾಮುಖ್ಯತೆ ಪಡೆದಿದ್ದರು ಗೂಬೆ ಮನೆಯ ಬಳಿ ಸುಳಿದಾಡಿದರೆ ಸಾಕು ಭಯಪಡುವ ಜನರಿದ್ದಾರೆ. ಇನ್ನು ನಿರ್ಮಾಣ ಹಂತದ ಮನೆಯಲ್ಲಿ ಗೂಬೆ ಕಂಡರೆ ಅದರ ಜೀವಕ್ಕೆ ಸಂಚಕಾರ ತಪ್ಪಿದ್ದಲ್ಲ, ಅಂತಹದ ಪರಿಸ್ಥಿತಿಯಲ್ಲಿದ್ದ ಅಪರೂಪದ ಗೂಬೆ ಮರಿಯನ್ನು ಯುವ ವಕೀಲ ರಕ್ಷಣೆ ಮಾಡಿದ್ದಾರೆ.
ತಾಯಿಯಿಂದ ದೂರಾಗಿ ಸಾವು ಬದುಕಿನ ನಡುವೆ ಸೆಣಸುತ್ತಿದ್ದ ಅತಿ ಅಪರೂಪದ ಬಾರ್ನ್ ಔಲ್ ಜಾತಿಗೆ ಸೇರಿದ ಗೂಬೆ ಮರಿಯನ್ನು ಚನ್ನಪಟ್ಟಣದ ಉರುಗ ಪ್ರೇಮಿ ಹಾಗೂ ವಕೀಲ ಸುರೇಶ್ ರಕ್ಷಣೆ ಮಾಡಿ ಒಂದು ದಿನ ಆರೈಕೆ ಮಾಡಿ ನಂತರ ಪಿಏಫ್ಎ ಸಂಸ್ಥೆಗೆ ನೀಡಿದ್ದಾರೆ.

ಮರಿ ಗೂಬೆ ರಕ್ಷಿಸಿದ ಯುವ ವಕೀಲ
ಚನ್ನಪಟ್ಟಣ ತಾಲೂಕಿನ ಶ್ಯಾನುಭೋಗನಹಳ್ಳಿ ಗ್ರಾಮದಲ್ಲಿ ಇತ್ತೀಚಿಗೆ ವ್ಯಕ್ತಿಯೋಬ್ಬರು ಮೃತಪಟ್ಟಿದ್ದರು. ಮೃತರ ತಿಥಿ ಕಾರ್ಯ ಮಾಡಲು ಮನೆ ಸ್ವಚ್ಚ ಮಾಡುವ ಸಮಯದಲ್ಲಿ ಮನೆ ಮುಂದೆ ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ಗೂಬೆಗಳು ವಾಸಿಸುತ್ತಿರುವುದು ಗೊತ್ತಾಗಿ ತೆರವು ಮಾಡಲು ಮುಂದಾಗಿದ್ದಾರೆ. ಈ ಸಮಯದಲ್ಲಿ ಹೆದರಿದ ತಾಯಿ ಗೂಬೆ ಮರಿಯನ್ನು ಬಿಟ್ಟು ಹಾರಿಹೋಗಿದೆ. ಮನೆಯಲ್ಲಿ ಗೂಬೆ ವಾಸವಾಗಿದ್ದ ಕಾರಣದಿಂದ ಮನೆಯಲ್ಲಿ ಸಾವು ಸಂಭವಿಸಿದೆ ಎಂಬ ಮೂಢನಂಬಿಕೆಯಿಂದ ತಾಯಿಯಿಂದ ದೂರಾದ ರೆಕ್ಕೆ ಬಲಿಯದ ಒಂದು ತಿಂಗಳು ಮರಿ ಗೂಬೆಯ ಬಗ್ಗೆ ವಕೀಲ ಸುರೇಶ್‌ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಗ್ರಾಮಕ್ಕೆ ತೆರಳಿದ ಸುರೇಶ್ ಮರಿಗೂಬೆ ರಕ್ಷಣೆ ಮಾಡಿ ಅರಣ್ಯ ಇಲಾಖೆಯಿಂದ ಅನುಮತಿ ಪಡೆದು ಬೆಂಗಳೂರಿನ ಪೀಪಲ್ ಫಾರ್ ಅನಿಮಲ್ ಸಂಸ್ಥೆಗೆ ನೀಡಿದ್ದಾರೆ.

ನಿರ್ಮಾಣ ಹಂತದ ಕಟ್ಟಡದಲ್ಲಿ ವಿಶೇಷ ಗೂಬೆ ಪತ್ತೆ
ಈ ಸಂಬಂಧ ಪ್ರತಿಕ್ರಿಯೆ ನೀಡಿದ ವಕೀಲ ಸುರೇಶ್, ಶ್ಯಾನುಭೋಗನಹಳ್ಳಿ ಗ್ರಾಮದಲ್ಲಿ ರಕ್ಷಿಸಲಾದ ಕಣಜದ ಗೂಬೆಯ ಪ್ರಭೇದಕ್ಕೆ (ಬಾರ್ನ್ ಔಲ್) ಸೇರಿದ ಗೂಬೆ ಮರಿಯನ್ನು ಪಾಲನೆಗಾಗಿ ಬೆಂಗಳೂರಿನಲ್ಲಿರುವ People for Animal (PFA) ಸಂಸ್ಥೆಗೆ ಹಸ್ತಾಂತರಿಸಿದ್ದೇನೆ ಎಂದು ತಿಳಿಸಿದರು. ಐದು ದಿನಗಳ ಹಿಂದೆ ನಮ್ಮ ಸ್ನೇಹಿತರೊಬ್ಬರು ನನಗೆ ಕರೆ ಮಾಡಿ ಅವರ ದೊಡ್ಡಪ್ಪ ಮರಣ ಹೊಂದಿದ ಕಾರಣ ಅವರ ಮನೆಯನ್ನು ಸ್ವಚ್ಛ ಮಾಡಲು ಮುಂದಾದಾಗ ಮನೆಯ ಮುಂದಿರುವ ಅರೆ ನಿರ್ಮಾಣಾವಸ್ಥೆಯ ಕಟ್ಟಡದಲ್ಲಿ ಪಕ್ಷಿಯೊಂದರ ಮರಿ ಇರುವುದಾಗಿ ತಿಳಿಸಿ ಅದರ ಛಾಯಾಚಿತ್ರವನ್ನು ಸಹ ಕಳುಹಿಸಿದ್ದರು. ಛಾಯಾಚಿತ್ರವನ್ನು ನೋಡಿದಾಗ ಅದು ಗೂಬೆಯ ಮರಿ ಎಂದು ಮನವರಿಕೆಯಾಯಿತು ಎಂದರು.

ಅರಣ್ಯ ಇಲಾಖೆಯ ಅನುಮತಿಯ ಮೇರೆಗೆ ಗೂಬೆ ರಕ್ಷಣೆ
ಗೂಬೆಯ ಮರಿ ಎಂದು ತಿಳಿದ ನಂತರ ಗೂಬೆ ಮನೆಯಲ್ಲಿರುವುದು ಅಪಶಕುನವೆಂದು ಭಯಭೀತರಾಗಿ ಅದನ್ನು ಅಲ್ಲಿಂದ ತೆರವುಗೊಳಿಸಲು ಮುಂದಾಗಿದ್ದರು. ರೆಕ್ಕೆ ಬಲಿತ ನಂತರ ಅದು ಅಲ್ಲಿಂದ ಹೊರಟು ಹೋಗುತ್ತದೆ ಅಲ್ಲಿಯವರೆಗೆ ತಾಳ್ಮೆಯಿಂದಿರಿ ಎಂದು ಅವರ ಮನವೊಲಿಸಿ ಮುಗ್ದ ಜೀವಿಗೆ ತೊಂದರೆಯಾಗುವುದನ್ನು ತಾತ್ಕಾಲಿಕವಾಗಿ ತಪ್ಪಿಸಿದ್ದೆ. ನಂತರದಲ್ಲಿ ಮನೆಯಲ್ಲಿ ಗೂಬೆ ಮರಿ ಮಾಡಿರುವುದರಿಂದಲೇ ಸಾವು ಸಂಭವಿಸಿರುವುದು ಎಂಬ ಮೂಢನಂಬಿಕೆಯ ಕಾರಣದಿಂದ ನಿರುಪದ್ರವಿ ಜೀವಿಯನ್ನು ಮನೆಯಿಂದ ಹೊರಗಾಕಿದ್ದರು. ನಂತರ ವಿಷಯ ನನಗೆ ತಿಳಿದು ಗೂಬೆ ಮರಿಯನ್ನು ರಕ್ಷಿಸಿ ತಂದು ಅರಣ್ಯ ಇಲಾಖೆಯ ಅನುಮತಿಯ ಮೇರೆಗೆ ಒಂದು ದಿನ ಹಾರೈಕೆ ಮಾಡಿ ನಂತರ ಪಿಎಫ್ಎ ಸಂಸ್ಥೆಗೆ ಸದರಿ ಗೂಬೆ ಮರಿಯನ್ನು ಹಸ್ತಾಂತರ ಮಾಡಿದ್ದೇನೆ ಎಂದು ತಿಳಿಸಿದರು.

ಉರಗ ಪ್ರೇಮಿಯಾಗಿ ಗುರುತಿಸಿಕೊಂಡ ಆರ್.ಸುರೇಶ್
ಇನ್ನು ಆಜಾದ್ ಎಂಬ ಸಂಘಟನೆ ಮೂಲಕ ಹಲವು ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ವಕೀಲ ಆರ್.ಸುರೇಶ್, ವನ್ಯಜೀವಿ ಸಂರಕ್ಷಕ ಕೂಡ ಹೌದು. ಈಗಾಗಲೇ ಸಾವಿರಾರು ಹಾವುಗಳನ್ನು ಹಿಡಿದು ಸಂರಕ್ಷಿತಾ ಪ್ರದೇಶಗಳಿಗೆ ಬಿಡುವ ಮೂಲಕ ಉರಗ ಪ್ರೇಮಿಯಾಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೇ ಸ್ವಯಂ ಸೇವಕರಾಗಿ ಹುಲಿ ಗಣತಿ ಕಾರ್ಯದಲ್ಲೂ ಪಾಲ್ಗೊಂಡಿದ್ದಾರೆ. ವನ್ಯಜೀವಿಗಳು ಯಾವುದೇ ರೀತಿಯ ತೊಂದರೆಗೆ ಒಳಾಗಾಗಿರುವುದು ಕಂಡರೆ ದಯವಿಟ್ಟು ನನ್ನ 9611006100 ಸಂಖ್ಯೆಯ ಮೊಬೈಲ್‌ಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ.












Click it and Unblock the Notifications