ಸಾಲ ಬಾಧೆ: ಒಂದೇ ಕುಟುಂಬ ಏಳು ಮಂದಿ ಆತ್ಮಹತ್ಯೆಗೆ ಯತ್ನ, ಮಹಿಳೆ ಸಾವು
ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದ ವ್ಯಕ್ತಿ ಸಾಲ ಮರಳಿಸಲಾಗದೇ ಕುಟುಂಬಸ್ಥರೆಲ್ಲರಿಗೂ ವಿಷ ನೀಡಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ದಾರುಣ ಘಟನೆ ರಾಮನಗರ ತಾಲೂಕಿನ ದೊಡ್ಡಮಣ್ಣು ಗುಡ್ಡೆ ಗ್ರಾಮದಲ್ಲಿ ನಡೆದಿದೆ.
ರಾಮನಗರ, ಫೆಬ್ರವರಿ 3: ಸಾಲ ಬಾಧೆಗೆ ಸಿಲುಕಿದ ಒಂದೇ ಕುಟುಂಬದ ಏಳು ಮಂದಿ ಆತ್ಮಹತ್ಯೆಗೆ ಯತ್ನಿಸಿದ್ದು , ಒಬ್ಬರು ಮೃತಪಟ್ಟಿರುವ ದಾರುಣ ಘಟನೆ ರಾಮನಗರ ತಾಲೂಕಿನ ದೊಡ್ಡಮಣ್ಣು ಗುಡ್ಡೆ ಗ್ರಾಮದಲ್ಲಿ ನಡೆದಿದೆ.
ದೊಡ್ಡಮಣ್ಣು ಗುಡ್ಡೆ ಗ್ರಾಮದಲ್ಲಿ ಕಳೆದ ಒಂದು ವರ್ಷಗಳಿಂದ ವಾಸವಾಗಿದ್ದ ರಾಜು (40) ಎನ್ನುವವರ ಕುಟುಂಬದ ಸದಸ್ಯರು ಸಾಲಗಾರರ ಕಾಟಕ್ಕೆ ಹೆದರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಷ ಸೇವಿಸಿದ ರಾಜು ಪತ್ನಿ ಮಂಗಳಮ್ಮ (28) ಸಾವನ್ನಪ್ಪಿದ್ದಾರೆ. ಇನ್ನುಳಿದ ಆರು ಮಂದಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ವಿಷ ಸೇವಿಸಿ ಮೃತಪಟ್ಟ ಮಂಗಳಮ್ಮ ಅವರ ಪತಿ ರಾಜು, ಮೃತಳ ತಾಯಿ ಸೋಂಪುರದಮ್ಮ, ಮೃತಳ ಮಕ್ಕಳಾದ ಆಕಾಶ್, ಕೃಷ್ಣ, ಮೃತಳ ಸಹೋದರಿ ಸವಿತಾ, ಅವರ ಪುತ್ರಿ ದರ್ಶಿನಿಯ ಸ್ಥಿತಿ ಗಂಭೀರವಾಗಿದೆ.

ಮೂಲತಃ ಬೆಂಗಳೂರಿನಲ್ಲಿ ತಾವರೆಕೆರೆ ಹೋಬಳಿ ಕುಂಬಳಗೂಡು ಸುಬ್ರಪ್ಪನ ಪಾಳ್ಯ ನಿವಾಸಿಯಾದ ರಾಜು ಹಾಗೂ ಮಂಗಳಮ್ಮ ದಂಪತಿಗಳು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ರಾಜು 11 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದು, ಸಾಲ ತೀರಿಸಲು ಆಗದೇ, ಸಾಲಗಾರರ ಕಾಟಕ್ಕೆ ಹೆದರಿ ತನ್ನ ಪತ್ನಿ ಮಂಗಳಮ್ಮ ತವರಾದ ದೊಡ್ಡಮಣ್ಣು ಗುಡ್ಡೆ ಗ್ರಾಮಕ್ಕೆ ಬಂದು ನೆಲಸಿದ್ದರು.
ರಾಜುಗೆ ಸಾಲ ನೀಡಿದವರು, ಆತ ತನ್ನ ಅತ್ತೆ ಮನೆಯಲ್ಲಿ ವಾಸವಾಗಿರುವುದನ್ನು ಪತ್ತೆ ಮಾಡಿ, ಹಣ ನೀಡುವಂತೆ ಕೇಳುತ್ತಿದ್ದರು.
ಸಾಲಗಾರರ ನೀಡುತ್ತಿದ್ದ ಕಿರುಕುಳಕ್ಕೆ ಬೆಸತ್ತ ರಾಜು ಸಾಯುವ ನಿರ್ಧಾರ ಮಾಡಿದ್ದಾನೆ. ಗುರುವಾರ ಮಧ್ಯಾಹ್ನ ಸುಮಾರು ಮೂರು ಗಂಟೆಗೆ ಮನೆಗೆ ಬೀಗ ಜಡಿದು, ಕುಟುಂಬಸ್ಥರೊಂದಿಗೆ ಊರಿನ ಹೊರಗೆ ತೆಳಿದ್ದಾರೆ. ಮನೆಯಿಂದ ಹೊರ ಹೋದವರು ರಾತ್ರಿ 8 ಗಂಟೆಯಾದರೂ ವಾಪಸ್ ಬರದಿರುವುದನ್ನು ಗಮನಿಸಿದ ಗ್ರಾಮಸ್ಥರು ಹುಡುಕಾಟ ನಡೆಸಿದಾಗ ಗ್ರಾಮದ ಹೊರ ವಲಯದ ಜಮೀನಲ್ಲಿ ಮಕ್ಕಳು ಸೇರಿದಂತೆ ಮನೆ ಮಂದಿಯಲ್ಲ ವಿಷ ಸೇವಿಸಿರುವುದು ತಿಳಿದು ಬಂದಿದೆ. ಕೂಡಲೇ ಗ್ರಾಮಸ್ಥರು ರಾಮನಗರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸಾಲಗಾರರ ಕಾಟದಿಂದ ಬೇಸತ್ತಿದ್ದ ರಾಜು ತನ್ನ ಕುಟುಂಬದ ಮಾನ ಹೋಗುವ ಭಯಕ್ಕೆ ಹೆದರಿ ಜೊತೆಗೆ ಮಾಡಿದ ಸಾಲ ತೀರಿಸಲು ಸಾಧ್ಯವಾಗದು ಎಂಬ ನಿರ್ಧಾರಕ್ಕೆ ಬಂದಿದ್ದ ಎನ್ನಲಾಗಿದ್ದು, ಕುಟುಂಬದ ಎಲ್ಲಾ ಸದಸ್ಯರೂ ತೀರ್ಮಾನಿಸಿಯೇ ಮನೆ ಬಿಟ್ಟು ಊರಿನ ಹೋರಗೆ ಹೋಗಿ ಮಕ್ಕಳಿಗೆ ಕಲ್ಲುಸಕ್ಕರೆ ಮತ್ತು ಬಾಳೆಹಣ್ಣು ಜೊತೆಗೆ ಇಲಿ ಪಾಷಾಣ ನೀಡಿದ್ದಾರೆ. ಅಲ್ಲದೆ ಮನೆ ಮಂದಿ ಊಟದ ಜೊತೆಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777












Click it and Unblock the Notifications