ಅರಣ್ಯದಲ್ಲಿ ಎಣ್ಣೆ ಪಾರ್ಟಿ ಪ್ರಶ್ನಿಸಿದ ಅಧಿಕಾರಿಗಳ ಮೇಲೆ ರೌಡಿ ಗ್ಯಾಂಗ್ ಹಲ್ಲೆ
ರಾಮನಗರ ಜಿಲ್ಲೆಯಲ್ಲಿ ರೌಡಿಗಳ ಅಟ್ಟಹಾಸ ಮಿತಿಮೀರಿದೆ. ಇದಕ್ಕೆ ಸಾಕ್ಷಿ ಎನ್ನುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ರೌಡಿಶೀಟರ್ ಗ್ಯಾಂಗ್‌ವೊಂದು ಅರಣ್ಯ ಪ್ರದೇಶದಲ್ಲಿ ಎಣ್ಣೆ ಪಾರ್ಟಿ ಹೆಸರಲ್ಲಿ ಮೋಜು ಮಸ್ತಿ ಮಾಡುತ್ತಿದ್ದರು. ಇದನ್ನು ಪ್ರಶ್ನಿಸಿದ ಅರಣ್ಯ ಇಲಾಖೆ ಹಾಗೂ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಘಟನೆ ಕನಕಪುರ ತಾಲ್ಲೂಕಿನ ಕುರುಬಳ್ಳಿದೊಡ್ಡಿ ಗ್ರಾಮದ ಬಳಿ ನಡೆದಿದೆ.
ಬಳಿಕ ಆರೋಪಿಗಳನ್ನು ಸಾತನೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ರೌಡಿಶೀಟರ್ ಕಿರಣ್, ಗುರುಪ್ರಸಾದ್, ಸುಂದರ್ ಎಂದು ತಿಳಿದುಬಂದಿದೆ. ಕಬ್ಬಾಳು ಅರಣ್ಯ ವ್ಯಾಪ್ತಿಯಲ್ಲಿ ಈ ರೌಡಿಶೀಟರ್ ಗ್ಯಾಂಗ್ ಸೋಮವಾರ ರಾತ್ರಿ ಎಣ್ಣೆ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ ಇವರ ಕಣ್ಣಿಗೆ ಬಿದ್ದಿದ್ದರು. ಪಾರ್ಟಿ ಬಗ್ಗೆ ಪ್ರಶ್ನಿಸಿದಾಗ ಗಲಾಟೆ ಶುರುವಾಗಿದೆ. ಕೊನೆಗೆ ಇಲಾಖೆ ಅಧಿಕಾರಿಗಳು ಹಾಗು ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದಾರೆ.

ಮೊದಲಿಗೆ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಈ ಗ್ಯಾಂಗ್ ಹಲ್ಲೆ ನಡೆಸಿತ್ತು. ಅಲ್ಲದೆ ಇಲಾಖೆ ವಾಹನಕ್ಕೆ ಬೆಂಕಿ ಹಚ್ಚಿ ಅಟ್ಟಹಾಸ ಮೆರೆಯಲು ಮುಂದಾಗಿದ್ದರು. ಕೊನೆಗೆ ಪೊಲೀಸರಿಗೆ ಕರೆ ಮಾಡಿದ ನಂತರ ಅವರು ಸ್ಥಳಕ್ಕೆ ದೌಡಾಯಿಸಿ ಗಲಾಟೆ ಬಿಡಿಸಲು ಮುಂದಾಗಿದ್ದರು. ಮದ್ಯದ ಅಮಲಿನಲ್ಲಿದ್ದ ಪುಂಡರು ಪೊಲೀಸರ ಮೇಲೂ ಹಲ್ಲೆ ಮಾಡಿದ್ದಾರೆ. ಬಳಿಕ ಮತ್ತಷ್ಟು ಪೊಲೀಸರು ಬಂದು ಆರೋಪಿಗಳನ್ನು ಎತ್ತಾಕೊಂಡು ಹೋಗಿದ್ದಾರೆ.
ಸಾತನೂರು ಪೊಲೀಸರು ಭೇಟಿ ನೀಡಿ ಗ್ಯಾಂಗ್‌ನಲ್ಲಿದ್ದ ಮೂವರನ್ನು ಬಂಧಿಸಿದ್ದಾರೆ. ಇನ್ನಿಬ್ಬರು ಪರಾರಿಯಾಗಿದ್ದು, ಅವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಈ ಸಂಬಂಧ ಸಾತನೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಅರಣ್ಯಪ್ರದೇಶದಲ್ಲಿ ಅತಿಕ್ರಮಣ ಮಾಡಿ ಈ ರೀತಿಯ ಪಾರ್ಟಿ ಮಾಡುವುದು ಕಾನೂನುಬಾಹಿರ. ಈ ಯುವಕರು ಗುಂಪು ಕಟ್ಟಿಕೊಂಡು ಅರಣ್ಯ ಪ್ರದೇಶದಲ್ಲಿ ರಾಜಾರೋಷವಾಗಿ ಮದ್ಯದ ಪಾರ್ಟಿಯಲ್ಲಿ ತೊಡಗಿದ್ದರು. ಅರಣ್ಯ ಇಲಾಖೆಯವರು ಗಸ್ತು ತಿರುಗುತ್ತಿದ್ದಾಗ ಎಣ್ಣೆ ಪಾರ್ಟಿಯಲ್ಲಿ ತೊಡಗಿದ್ದವರು ಕಾಣಿಸಿದ್ದರು.

ನೀವು ರೂಲ್ಸ್ ಬ್ರೇಕ್ ಮಾಡಿ ಪಾರ್ಟಿ ಮಾಡುತ್ತಿದ್ದೀರಿ ಎಂದು ಅರಣ್ಯ ಸಿಬ್ಬಂದಿ ಕೇಳಿದ್ದರು. ಇದರಿಂದ ಕೋಪಗೊಂಡ ಯುವಕರು ಅಧಿಕಾರಿಗಳ ಮೇಲೆ ದರ್ಪ ತೋರಿ ಹಲ್ಲೆಗೆ ಮುಂದಾಗಿದ್ದರು. ರಕ್ಷಣೆಗೆ ಬಂದ ಪೊಲೀಸರ ಮೇಲೂ ಮನಬಂದಂತೆ ಹಲ್ಲೆ ನಡೆಸಿ ಅಟ್ಟಹಾಸ ಮೆರೆದಿದ್ದರು. ಕೊನೆಗೂ ಆರೋಪಿಗಳನ್ನು ಬಂಧಿಸಿ, ಜೈಲಿಗಟ್ಟಲಾಗಿದೆ. ಈ ಗ್ಯಾಂಗ್‌ನಲ್ಲಿದ್ದ ಇನ್ನಿಬ್ಬರು ಎಸ್ಕೇಪ್ ಆಗಿದ್ದು, ಅವರನ್ನು ಬಂಧಿಸಲು ಪೊಲೀಸರು ಬಲೆ ಬೀಸಿ ಫೀಲ್ಡಿಗಿಳಿದಿದ್ದಾರೆ.












Click it and Unblock the Notifications