ರಾಮನಗರದ ಜೆಡಿಎಸ್ ನಲ್ಲಿನ ಅತೃಪ್ತಿ ಬಿಜೆಪಿಗೆ ಲಾಭನಾ?
ರಾಮನಗರ, ಅಕ್ಟೋಬರ್.10: ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಹೊರತುಪಡಿಸಿ ಬೇರೆ ಯಾರೂ ಗೆಲುವು ಸಾಧಿಸುವುದಿಲ್ಲವೆಂಬ ಭ್ರಮೆ ಹರಡಿದ್ದು, ಈ ಭ್ರಮೆಯಲ್ಲಿಯೇ ಇದೀಗ ಪತ್ನಿ ಅನಿತಾಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲು ಜೆಡಿಎಸ್ ಮುಂದಾಗಿದೆ.
ಆದರೆ ಬಿಜೆಪಿ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಈ ಭ್ರಮೆಯನ್ನು ಹೋಗಲಾಡಿಸಬೇಕೆಂಬ ಹಠಕ್ಕೆ ಬಿದ್ದಿದೆ. ಈ ನಡುವೆ ಅನಿತಾಕುಮಾರಸ್ವಾಮಿ ಅವರು ಸ್ಪರ್ಧಿಸುತ್ತಿರುವುದಕ್ಕೆ ಜೆಡಿಎಸ್ ನ ಸ್ಥಳೀಯ ನಾಯಕರಲ್ಲೇ ಅಸಮಾಧಾನವಿರುವುದು ಇದೀಗ ಬಹಿರಂಗವಾಗಿದ್ದು, ಇದರ ಲಾಭ ಪಡೆದುಕೊಳ್ಳಲು ಬಿಜೆಪಿ ಹವಣಿಸಿದರೆ ಅಚ್ಚರಿ ಪಡಬೇಕಾಗಿಲ್ಲ.
ಪ್ರತಿ ಸಲವೂ ದೇವೇಗೌಡರ ಕುಟುಂಬದವರೇ ಇಲ್ಲಿ ಸ್ಪರ್ಧಿಸಿ ಗೆಲುವು ಪಡೆಯುತ್ತಿದ್ದರೆ, ಸ್ಥಳೀಯವಾಗಿ ಪಕ್ಷವನ್ನು ಕಟ್ಟಿ ಬೆಳೆಸಿದ ನಾಯಕರ ಗತಿ ಏನು? ತಮ್ಮ ರಾಜಕೀಯ ಜೀವನದುದ್ದಕ್ಕೂ ಯಾವುದೇ ಸ್ಥಾನಮಾನ ಪಡೆಯದೇ ಬರೀ ಸಂಘಟನೆ ಮಾಡಿಕೊಂಡು ಹೋಗುವುದಷ್ಟೆನಾ ಎಂಬ ಪ್ರಶ್ನೆಗಳೇ ಕೆಲ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಅಸಮಾಧಾನದ ಹೊಗೆ ಈಗ ಸಣ್ಣದಾಗಿ ಕಂಡರೂ ಅದು ರಾಮನಗರ ಜೆಡಿಎಸ್ ನಲ್ಲಿ ಒಗ್ಗಟ್ಟಿಲ್ಲ ಎಂಬುದನ್ನು ಬಹಿರಂಗಪಡಿಸಿದ್ದಂತು ಸತ್ಯ. ಈಗ ಸ್ಥಳೀಯ ಜೆಡಿಎಸ್ ನಲ್ಲಿ ನಡೆಯುತ್ತಿರುವ ಬೆಳವಣಿಗೆ ರಾಜ್ಯ ನಾಯಕರಿಗೆ ಮುಜುಗರ ತಂದಿದ್ದಂತು ಸತ್ಯ. ಇದು ತಣ್ಣಗಾಗದೆ ಭುಗಿಲೆದ್ದರೆ ಬಿಜೆಪಿಗೆ ವರವಾಗುವ ಲಕ್ಷಣಗಳು ಕಾಣಿಸತೊಡಗಿದೆ. ಈ ಕುರಿತ ಸವಿವರವಾದ ವರದಿ ಇಲ್ಲಿದೆ ಓದಿ..

ಅಪ್ಪಾಜಣ್ಣ ಹೇಳುವ ಹಾಗೆ
ಜೆಡಿಎಸ್ ಹಿರಿಯ ಮುಖಂಡ ಅಪ್ಪಾಜಣ್ಣ ಎಂಬುವರು ಸದ್ಯ ತಕರಾರು ಎತ್ತಿದ್ದು ಅವರ ಮಾತಿನಲ್ಲೇ ಹೇಳುವುದಾದರೆ " ಅನಿತಾ ಕುಮಾರಸ್ವಾಮಿ ಅವರ ಸ್ಪರ್ಧೆಗೆ ನಮ್ಮದೇನು ತಕರಾರಿಲ್ಲ. ಆದರೆ ಅವರು ನಾನೇ ಅಭ್ಯರ್ಥಿ ಅಂತ ಎಲ್ಲೂ ಹೇಳಿಲ್ಲ. ಕಾರ್ಯಕರ್ತರು ಮತ್ತು ಮುಖಂಡರೊಂದಿಗೆ ಚರ್ಚೆ ನಡೆಸಿಲ್ಲ.
ಅಷ್ಟೇ ಅಲ್ಲ ತಾಲೂಕು ಜೆಡಿಎಸ್ ಘಟಕದ ವತಿಯಿಂದ ಸಭೆ ನಡೆಸಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಜೆಡಿಎಸ್ ನಲ್ಲಿ ನಾಲ್ಕೈದು ಮುಖಂಡರು ಏಕಾಏಕಿ ತೀರ್ಮಾನ ತೆಗೆದುಕೊಂಡು ಅನಿತಾರವರೇ ಸ್ಪರ್ಧೆ ಮಾಡುತ್ತಾರೆ ಎಂದು ಹೇಳಿಕೆ ನೀಡಿದರೆ ಅರ್ಥವಿಲ್ಲ".
ಇದು ಅಪ್ಪಾಜಣ್ಣ ಅವರ ಒಬ್ಬರ ಅಭಿಪ್ರಾಯ ಎಂದು ಹೇಳಲಾಗುವುದಿಲ್ಲ. ಸ್ಥಳೀಯವಾಗಿ ನೊಂದ ಹಲವು ಜೆಡಿಎಸ್ ನಾಯಕರ ಧ್ವನಿಯೂ ಇದ ಹಿಂದೆ ಅಡಗಿದೆ ಎಂಬುದನ್ನು ತಳ್ಳಿಹಾಕುವಂತಿಲ್ಲ.

ದೇವೇಗೌಡರ ಕುಟುಂಬದ ನಿರ್ಧಾರ ಅಂತಿಮ
ಉಪಚುನಾವಣೆ ಘೋಷಣೆ ನಂತರ ರಾಮನಗರ ಕ್ಷೇತ್ರದಲ್ಲಿ ಎಚ್.ಡಿ,ದೇವೇಗೌಡರ ಕುಟುಂಬದ ಸ್ಪರ್ಧೆಗೆ ಮಾತ್ರ ಮುಖಂಡರು ಒಲವು ತೋರುತ್ತಾರೆ. ಕುಮಾರಸ್ವಾಮಿ ಬಿಟ್ಟರೆ ಅನಿತಾಕುಮಾರಸ್ವಾಮಿ ಇಲ್ಲವೇ ನಿಖಿಲ್ ಗೌಡ ಎಂಬ ಮಾತುಗಳನ್ನು ಕೆಲವರು ಹೇಳುತ್ತಿದ್ದಾರೆ.
ಹಾಗಾದರೆ ರಾಮನಗರದಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸುವ ಅರ್ಹತೆ ಇರುವ ನಾಯಕರಿಲ್ಲವೆ ಎಂಬುದು ಹಲವು ಮುಖಂಡರ ಪ್ರಶ್ನೆಯಾಗಿದೆ. ಇಲ್ಲಿ ತಳಮಟ್ಟದ ನಾಯಕರು ಏನೇ ತಕರಾರು ಮಾಡಿದರೂ ದೇವೇಗೌಡರ ಕುಟುಂಬ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮವಾಗಿದ್ದು, ಇದಕ್ಕೆ ಎಲ್ಲರೂ ತಲೆಬಾಗಲೇಬೇಕಾಗಿದೆ.

ಗರಿಗೆದರಿದ ರಾಜಕೀಯ ಚಟುವಟಿಕೆ
ಒಂದು ವೇಳೆ ಅಸಮಾಧಾನಗೊಂಡ ವರ್ಗಗಳು ಚುನಾವಣೆ ವೇಳೆ ತಟಸ್ಥರಾದರೆ ಅಥವಾ ಭಿನ್ನಮತೀಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಅದರ ಲಾಭ ಬಿಜೆಪಿ ಪಡೆದುಕೊಳ್ಳುವ ಎಲ್ಲ ಸೂಚನೆಗಳು ಕಾಣುತ್ತಿವೆ.
ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಬಿಜೆಪಿಯಲ್ಲಿಯೂ ರಾಜಕೀಯ ಚಟುವಟಿಕೆ ಗರಿಗೆದರಿದೆ. ಆದರೆ ಇಲ್ಲಿ ಯಾರು ಸ್ಪರ್ಧಿಸುತ್ತಾರೆ ಎಂಬುದು ಇನ್ನೂ ನಿಗೂಢವಾಗಿದೆ. ಸಿ.ಪಿ.ಯೋಗೇಶ್ವರ್ ಕಣಕ್ಕಿಳಿಯುವ ಬಗ್ಗೆ ಒಲವು ತೋರುತ್ತಿಲ್ಲ ಎನ್ನಲಾಗುತ್ತಿದೆ. ಇನ್ನೊಂದೆಡೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ಪುತ್ರಿ ಶಾಂಭವಿ ಅವರ ಹೆಸರು ಕೂಡ ಕೇಳಿ ಬರುತ್ತಿದೆ.

ಸ್ಪರ್ಧೆ ನಡೆಯುತ್ತಿರುವುದು ಜೆಡಿಎಸ್- ಬಿಜೆಪಿಗೆ
ಸ್ಥಳೀಯವಾಗಿ ಬಿಜೆಪಿ ನಾಯಕರು ಒಗ್ಗಟ್ಟಾಗಿ ಪಕ್ಷದ ವರಿಷ್ಠರು ಯಾರನ್ನು ಅಭ್ಯರ್ಥಿಯಾಗಿ ಸೂಚಿಸುತ್ತಾರೊ ಅವರ ಪರ ಕೆಲಸ ಮಾಡಲು ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ. ಸ್ಥಳೀಯ ನಾಯಕರು ಕೆಲವರು ಸ್ಪರ್ಧಿಸಲು ಆಕಾಂಕ್ಷಿಗಳಾಗಿದ್ದಾರೆ. ಆದರೆ ರಾಜ್ಯ ಬಿಜೆಪಿ ನಾಯಕರು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ನಂತರವೇ ಎಲ್ಲ ಚಟುವಟಿಕೆ ನಡೆಯಬೇಕಿದೆ.
ಸದ್ಯದ ಪರಿಸ್ಥಿತಿಯನ್ನು ನೋಡಿದರೆ ಕಾಂಗ್ರೆಸ್ ಜೆಡಿಎಸ್ ಗೆ ಶರಣಾಗಿರುವ ಕಾರಣದಿಂದಾಗಿ ಇಲ್ಲಿ ಸ್ಪರ್ಧೆ ನಡೆಯುತ್ತಿರುವುದು ಜೆಡಿಎಸ್ ಮತ್ತು ಬಿಜೆಪಿಗೆ. ಜತೆಗೆ ಎರಡು ಪಕ್ಷಗಳಿಗೂ ಇದು ಪ್ರತಿಷ್ಠೆಯ ವಿಷಯವೂ ಹೌದು. ಹೀಗಾಗಿ ಮುಂದೆ ಏನಾಗುತ್ತದೆ ಎಂಬ ಕುತೂಹಲ ಎಲ್ಲರನ್ನು ಕಾಡುತ್ತಲೇ ಇದೆ.












Click it and Unblock the Notifications