ರಾಮನಗರ: ಮೀನು ಕೃಷಿಗೆ ಮಾರಕವಾದ ತ್ಯಾಜ್ಯ; ವಿಷ ತ್ಯಾಜ್ಯಕ್ಕೆ ಸಾವಿರಾರು ಮೀನುಗಳು ಬಲಿ
ರಾಮನಗರ, ಏಪ್ರಿಲ್ 22: ನಗರೀಕರಣದ ಅಬ್ಬರದಲ್ಲಿ ಪಟ್ಟಣದ ವಿಷಯುಕ್ತ ತ್ಯಾಜ್ಯ ಕೆರೆಗೆ ಸೇರಿದ ಹಿನ್ನಲೆಯಲ್ಲಿ ಸಾವಿರಾರು ಮೀನುಗಳು ಮೃತಪಟ್ಟಿದ್ದು, ಮೀನು ಕೃಷಿ ಮಾಡಲು ಲಕ್ಷಾಂತರ ಹಣ ಖರ್ಚುಮಾಡಿ ಕೆರೆಯನ್ನು ಗುತ್ತಿಗೆ ಪಡೆದಿದ್ದ ರೈತನ ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ಸ್ಥಿತಿ ನಿರ್ಮಾಣವಾಗಿದೆ.
ರಾಮನಗರ ಜಿಲ್ಲೆಯ ಬೊಂಬೆ ನಾಡು ಖ್ಯಾತಿಯ ಚನ್ನಪಟ್ಟಣ ತಾಲ್ಲೂಕಿನ ತಿಟ್ಟಮಾರನಹಳ್ಳಿ ಬಳಿಯ ರಾಮಮ್ಮನ ಕೆರೆಗೆ ಪಟ್ಟಣದ ವಿಷಯುಕ್ತ ತ್ಯಾಜ್ಯ ಸೇರುತ್ತಿರುವ ಹಿನ್ನಲೆಯಲ್ಲಿ ಸಾವಿರಾರು ಮೀನುಗಳು ಸಾವನ್ನಪ್ಪುತ್ತಿವೆ. ಅಲ್ಲದೇ ಪ್ರತಿದಿನ ಮೀನುಗಳ ಸಾವಿನ ಸಂಖ್ಯೆ ಹೆಚ್ಚುತ್ತಿದ್ದು, ಸತ್ತ ಮೀನುಗಳು ಗಾಳಿ ಬೀಸಿದ ಹಾಗೆ ದಡಕ್ಕೆ ತೇಲಿ ಬರುತ್ತಿವೆ. ಇದರಿಂದಾಗಿ ಮೀನು ಕೃಷಿಯನ್ನೇ ನಂಬಿದ್ದ ರೈತನ ಕುಟುಂಬ ಸಂಕಷ್ಟಕ್ಕೆ ಒಳಗಾಗಿದೆ.
ತಿಟ್ಟಮಾರನಹಳ್ಳಿ ಗ್ರಾಮದ ರೈತ ಸಂಪತ್ ಕುಮಾರ್ ಮೀನುಗಾರಿಕೆ ಇಲಾಖೆ ವತಿಯಿಂದ ಮೀನು ಸಾಕಣೆಗಾಗಿ ರಾಮಮ್ಮನ ಕೆರೆಯನ್ನು ಹರಾಜಿನಲ್ಲಿ 26.30 ಲಕ್ಷ ರೂಪಾಯಿಗೆ ಟೆಂಡರ್ ಪಡೆದಿದ್ದರು. ಸುಮಾರು ಲಕ್ಷ ಮೀನು ಮರಿಗಳನ್ನು ಕೆರೆಗೆ ಬಿಟ್ಟು ಮೀನು ಕೃಷಿ ಪ್ರಾರಂಭಿಸಿದ್ದರು. ಆದರೆ ಇದೀಗ ಮೀನುಗಳು ಅನುಮಾನಸ್ಪಾದವಾಗಿ ಸಾಯುತ್ತಿರುವುದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಕೆರೆಗೆ ಬಿಡಲಾಗಿದ್ದ 1 ಲಕ್ಷ ಮೀನು ಮರಿಗಳು ಪ್ರಸ್ತುತ 1 ರಿಂದ 2 ಕೆಜಿ ತೂಕದಷ್ಟು ಬೆಳವಣಿಗೆ ಆಗಿದ್ದು, ಇನ್ನೇನು ಕೆರೆಗೆ ಬಲೆ ಹಾಕಿ ಮೀನುಗಳನ್ನು ಹಿಡಿದು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಸಮಯದಲ್ಲಿ ಮೀನುಗಳು ಸಾವನ್ನಪ್ಪುತ್ತಿವೆ. ಇದರಿಂದ ಗುತ್ತಿಗೆದಾರ ಸಾಲದ ಸುಳಿಗೆ ಸಿಲುಕಿದ್ದಾನೆ.

ಮೀನುಗಳು ಸಾವನ್ನಪ್ಪುತ್ತಿರುವ ಬಗ್ಗೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದರೆ, ರೈತನ ನೆರವಿಗೆ ಧಾವಿಸಿ, ರೈತನ ಸಮಸ್ಯೆಗೆ ಪರಿಹಾರ ಸೂಚಿಸಬೇಕಾದ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು, ಅಸಡ್ಡೆ ಹಾಗೂ ಬೇಜವಾಬ್ದಾರಿತನ ತೋರಿಸುತ್ತಿದ್ದಾರೆ ಎಂದು ಮೀನು ಕೃಷಿಕ ಸಂಪತ್ ಆರೋಪಿಸಿದ್ದಾರೆ.
ಅಂದಹಾಗೆ ಪಟ್ಟಣದ ಸುಮಾರು 40% ತ್ಯಾಜ್ಯ ನೀರು ರಾಮಮ್ಮನ ಕೆರೆಯನ್ನು ಸೇರುತ್ತಿದೆ. ಪ್ರಮುಖವಾಗಿ ನಗರದ ಹೃದಯ ಭಾಗದ ಜೆ.ಸಿ ರಸ್ತೆ, ಡಿ.ಟಿ. ರಾಮು ಸರ್ಕಲ್ ಸೇರಿದಂತೆ ಬಡಾಮಕಾನ್, ಎಲೇಕೇರಿ, ಕೋಟೆ ಹಾಗೂ ಮಾರುತಿ ಬಡವಾಣೆ ಸೇರಿ ಹಲವು ಬಡಾವಣೆಯ ಕೊಳಚೆ ನೀರು ರಾಮಮ್ಮನ ಕೆರೆ ಸೇರುತ್ತಿದೆ.

ಪಟ್ಟಣದ ಒಳ ಚರಂಡಿ ಹಾಗೂ ಕೊಳಚೆ ನೀರಿನ ಜೊತೆಗೆ ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಯ ವೈದ್ಯಕೀಯ ತ್ಯಾಜ್ಯ ಕೂಡ ರಾಮಮ್ಮನ ಕೆರೆ ಸೇರುತ್ತಿದೆ. ಇದರಿಂದ ಕೆರೆಯ ನೀರು ವಿಷಪೂರಿತವಾಗಿದ್ದು, ಮೀನುಗಳು ಸಾಯುತ್ತಿರಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಾರೆ.
ಅಲ್ಲದೇ ಇತ್ತೀಚೆಗೆ ಏತ ನೀರಾವರಿ ಯೋಜನೆ ಮೂಲಕ ಚನ್ನಪಟ್ಟಣ ತಾಲ್ಲೂಕಿನ ಹಲವು ಕೆರೆಗಳಿಗೆ ನೀರು ತುಂಬಿಸಲಾಗುತ್ತಿದ್ದು, ಏತ ನೀರಾವರಿಯ ನೀರಿನ ಹರಿವಿನಲ್ಲಿ ನಿಷೇಧಿತ ಕ್ಯಾಟ್ ಫಿಶ್ ಕೆರೆಗಳನ್ನು ಸೇರುತ್ತಿವೆ ಇವುಗಳು ಸಹ ಮೀನುಗಳನ್ನು ಸಾಯಿಸುತ್ತಿವೆ ಎನ್ನುವ ಆತಂಕದ ಮಾತುಗಳು ಕೇಳಿ ಬರುತ್ತಿವೆ.












Click it and Unblock the Notifications