ರಾಮನಗರದಲ್ಲಿ ಕಾಡಾನೆ ಹಾವಳಿ: ಸರ್ಕಾರ ಕೃಷಿ ಜಮೀನನ್ನು ಗುತ್ತಿಗೆ ಪಡೆಯುವಂತೆ ರೈತರ ಆಗ್ರಹ
ರಾಮನಗರ, ಜುಲೈ 30: ಜಿಲ್ಲೆಯಲ್ಲಿ ಕಾಡು ಪ್ರಾಣಿಗಳು ಹಾಗೂ ಮಾನವನ ನಡುವಿನ ಸಂಘರ್ಷ ಹೆಚ್ಚಾಗಿದ್ದು, ಕಾಡಾನೆಗಳ ಹಾವಳಿಯಿಂದ ರೈತರು ಕೃಷಿ ಮಾಡಲಾಗುತ್ತಿಲ್ಲ. ರೈತರು ತಮ್ಮ ಕೃಷಿ ಜಮೀನನ್ನು ಸರ್ಕಾರಕ್ಕೆ ಗುತ್ತಿಗೆ ನೀಡುತ್ತಾರೆ. ಸರ್ಕಾರದಿಂದ ರೈತರ ಜಮೀನಿನಲ್ಲಿ ಬೆಳೆಯುವ ಫಸಲಿನ ಆಧಾರದಲ್ಲಿ ವಾರ್ಷಿಕ ಪರಿಹಾರವನ್ನು ಕಟ್ಟುಕೊಡಿ ಎಂದು ಜಿಲ್ಲಾ ರೈತರು ಆಗ್ರಹಿಸಿದ್ದಾರೆ.
ಜಿಲ್ಲಾ ಅರಣ್ಯಾಧಿಕಾರಿಗಳ ಕಚೇರಿಯ ಮುಂದೆ ರೈತರು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ನೇತೃತ್ವದಲ್ಲಿ, ಜಿಲ್ಲೆಯ ಅನ್ನದಾತರನ್ನು ಕಾಡಾನೆಗಳ ಹಾವಳಿಯಿಂದ ಉಳಿಸಿ ಎಂದು ಆಗ್ರಹಿಸಿ ಪ್ರತಿಭಟನೆಯಲ್ಲಿ ನಡೆಸಿದರು. ಜಿಲ್ಲೆಯಲ್ಲಿ ಕಾಡಾನೆ ಸೇರಿದಂತೆ ಚಿರತೆ, ಕರಡಿ ಹಾಗೂ ಕಾಡು ಹಂದಿ ಹಾವಳಿಯಿಂದ ರೈತರು ಹೈರಣಾಗಿದ್ದಾರೆ. ರೈತರ ಸಂಕಷ್ಟ ನಿವಾರಣೆಗೆ ಅರಣ್ಯ ಇಲಾಖೆ ಮುಂದಾಗಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕಾಡಾನೆ ದಾಳಿಗೆ 200 ಕೋಟಿ ರೂ ಬೆಳೆ ನಷ್ಟ
ಪ್ರತಿಭಟನೆಯಲ್ಲಿ ಮಾತನಾಡಿದ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ಎಲ್.ರಮೇಶ್ ಗೌಡ, ಕಾಡಾನೆಗಳನ್ನು ಸಾಕಲು ವನ್ಯಧಾಮಗಳಿವೆ ಆದರೆ ಕಾಡಾನೆಗಳು ವನ್ಯಧಾಮಗಳನ್ನು ಬಿಟ್ಟು ಗ್ರಾಮೀಣ ಭಾಗದಲ್ಲಿ ರೈತರು ಬೆಳೆದ ಬೆಳೆ ಹಾನಿ ಮಾಡಲು ಜಿಲ್ಲೆಗೆ ದಾಂಗುಡಿ ಇಡುತ್ತಿವೆ. 2006 ರಿಂದ 2023ರವರೆಗೆ 17 ವರ್ಷಗಳಲ್ಲಿ ಕಾಡಾನೆ ದಾಳಿಯಿಂದ ಸುಮಾರು 200 ಕೋಟಿ ರೂ. ಮೌಲ್ಯದ ಫಸಲು ನಷ್ಟವಾಗಿದ್ದು ಎಂದು ಎಂದರು.
ಕಾಡಾನೆ ದಾಳಿಯಿಂದ ಕೇವಲ ರೈತರ ಫಸಲು ಮಾತ್ರ ಹಾನಿಯಾಗಿಲ್ಲ, ಮಾನವರ ಪ್ರಾಣಹಾನಿ ಕೂಡ ಆಗಿದೆ. ಸುಮಾರು 20 ಮಂದಿಯ ಮೇಲೆ ಕಾಡಾನೆ ದಾಳಿ ಮಾಡಿದ್ದು, ಅವರಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. ಜೊತೆಗೆ ಕರಡಿ ದಾಳಿ, ಚಿರತೆ ದಾಳಿಯಿಂದಲೂ ಜನರು ಗಾಯಗೊಂಡಿದ್ದಾರೆ. ವನ್ಯಜೀವಿಗಳು ಕಾಡಿನಿಂದ ನಾಡಿಗೆ ಬಾರದಂತೆ ರಕ್ಷಣೆ ನೀಡಲೆಂದೇ ಸರ್ಕಾರವು ಅರಣ್ಯ ಇಲಾಖೆ ಮೂಲಕ ಕೋಟ್ಯಾಂತರ ರೂ. ಅನುದಾನ ನೀಡುತ್ತಿದ್ದು, ಈ ಅನುದಾನ ವ್ಯರ್ಥವಾಗುತ್ತಿದೆ ಎಂದು ಆರೋಪಿಸಿದರು.
ಕಾಡಾನೆಗಳ ಹಾವಳಿ ತಪ್ಪಿಸಲಾಗದ ಅರಣ್ಯ ಇಲಾಖೆಯನ್ನು ನಿಷ್ಕ್ರೀಯಗೊಳಿಸಿ. ಆ ಅನುದಾನವನ್ನು ಕಾಡಿನ ಹಂಚಿನಲ್ಲಿರುವ ಜಮೀನಿನ ರೈತರಿಗೆ ವಾರ್ಷಿಕ ಪರಿಹಾರವಾಗಿ ನೀಡಲಿ. ದೇಶಕ್ಕೆ ಅನ್ನ ನೀಡುವ ರೈತ ದಿನದ 24 ಗಂಟೆಗಳ ಕಾಲ ಬೇಸಾಯ ಮಾಡಬೇಕಿದೆ. ಬೆಸ್ಕಾಂ ನವರು ರಾತ್ರಿ ವೇಳೆ ವಿದ್ಯುತ್ ನೀಡುವ ನಿಟ್ಟಿನಲ್ಲಿ ರೈತರು ರಾತ್ರಿ ವೇಳೆ ಹೊಲ ಗದ್ದೆಗಳಿಗೆ ನೀರು ಬಿಡಬೇಕು. ಆದರೆ ಕಾಡಾನೆಗಳು ಮತ್ತು ಕಾಡುಪ್ರಾಣಿಗಳ ಹಾವಳಿಯಿಂದ ರೈತರು ನಿರ್ಭೀತಿಯಿಂದ ಓಡಾಡಲು ಆಗುತ್ತಿಲ್ಲ ಎಂದು ತಮ್ಮ ಆತಂಕ ವ್ಯಕ್ತಪಡಿಸಿದರು.

ಪಾದಯಾತ್ರೆ ಮೂಲಕ ಎಚ್ಚರಿಕೆ ನೀಡಿದ ಪ್ರತಿಭಟನಕಾರರು
ಕಾಡಾನೆ ದಾಳಿಗೆ ಹೆದರಿ ರಾತ್ರಿ 6 ಗಂಟೆಗೆ ಮನೆ ಸೇರುವಂತಾಗಿದ್ದು, ಮುಂಜಾನೆ 7 ಗಂಟೆಯಾದರೂ ಮನೆಯಿಂದ ಹೊರಗೆ ಬರಲು ಹೆದರುವ ವಾತಾವರಣ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ರೈತರು ಕೃಷಿ ಚಟುವಟಿಕೆಯಿಂದ ವಿಮುಕರಾಗುತ್ತಿದ್ದು, ರೈತರ ಸಂಕಷ್ಟ ಕೇಳಲು ಆಗದ ಸರ್ಕಾರ ಕಾಡಾನೆಗಳ ಹಾವಳಿ ತಪ್ಪಿಸಲು ಆಗದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಇದರ ನಡುವೆ ರೈತರು ಕೃಷಿಗೆ ಬ್ಯಾಂಕ್‌ಗಳಲ್ಲಿ ಹಾಗೂ ಖಾಸಗಿ ಅವರನ್ನು ಪಡೆದ ಸಾಲದ ಬಡ್ಡಿ ಬೆಟ್ಟದಂತೆ ಬೆಳೆಯುತ್ತಿದೆ. ಈ ನಿಟ್ಟಿನಲ್ಲಿ ಕಾಡಂಚಿನ ರೈತರ ಜಮೀನಿ ಪಹಣಿಗಳನ್ನು ಅರಣ್ಯ ಇಲಾಖೆ ಗುತ್ತಿಗೆ ಪಡೆದು ಅವರೇ ಕೃಷಿ ಮಾಡಿ ಕಾಡಾನೆಗಳಿಗೆ ಆಹಾರ ನೀಡಲಿ. ಜಮೀನಿನ ಫಲಸಿನ ಆದಾರದಲ್ಲಿ ರೈತರಿಗೆ ವಾರ್ಷಿಕ 2 ರಿಂದ 5 ಲಕ್ಷ ಪರಿಹಾರವಾಗಿ ನೀಡಲಿ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಒಂದು ತಿಂಗಳ ಕಾಲ ಅರಣ್ಯ ಇಲಾಖೆಗೆ ಕಾಲಾವಕಾಶ ನೀಡುತ್ತೇವೆ. ಈ ವೇಳೆಗೆ ಕಾಡಾನೆಗಳನ್ನು ಶಾಶ್ವತವಾಗಿ ಜಿಲ್ಲೆಯ ಗಡಿಯಿಂದ ಓಡಿಸಿ ಕಾವೇರಿ ವನ್ಯಧಾಮ, ಮುತ್ತತ್ತಿ ಹಾಗೂ ಬನ್ನೇರುಘಟ್ಟ ವನ್ಯಧಾಮಕ್ಕೆ ಓಡಿಸಿ, ಕಾಡಾನೆಯಿಂದ ರೈತರಿಗೆ ಮುಕ್ತಿ ನೀಡಬೇಕು. ಇಲ್ಲವಾದರೆ ಚನ್ನಪಟ್ಟಣ ತಾಲೂಕಿನ ಸಿಂಗರಾಜಪುರದಿಂದ ಬೆಂಗಳೂರಿನ ಅರಣ್ಯ ಖಾತೆ ಸಚಿವರ ನಿವಾಸದವರಗೆ ಬೃಹತ್ ಪಾದಯಾತ್ರೆ ಮಾಡಿ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಅರಳಾಳುಸಂದ್ರ ರೈತ ರಾಜಪ್ಪ ಮಾತನಾಡಿ, ರೈತರ ಜಮೀನು ಖರೀದಿ ಮಾಡಲು ಸಹ ಉದ್ಯಮಿಗಳು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಳೆದ ನಾಲ್ಕೈದು ತಿಂಗಳ ಹಿಂದೆ ಬಿ.ವಿ.ಹಳ್ಳಿ ಗ್ರಾಮದ ಮಹಿಳೆಯೊಬ್ಬರು ಮಗಳ ಮದುವೆ ಜಮೀನು ಮಾರಾಟ ಮಾಡಿ 9 ಲಕ್ಷ ರೂ. ಪಡೆದು ಮದುವೆ ಮಾಡಿದ್ದು, ಜಮೀನು ಖರೀದಿ ಮಾಡಿದವರು ಬಂದ ದಿನ ಕಾಡಾನೆಗಳ ಹಿಂಡನ್ನು ನೋಡಿ ಅವರು ಭಯಭೀತರಾಗಿದ್ದು, ನಮಗೆ ಜಮೀನು ಬೇಡ ಹಣವನ್ನು ಪಾಪಸ್ ನೀಡಿ ಎಂದು ಹೇಳುತ್ತಾರೆ.
ಕಾಡಾನೆ ಹಾವಳಿಯಿಂದ ರೈತರು ಯಾವ ರೀತಿ ಜೀವನ ಮಾಡಬೇಕು ಎಂದು ಪ್ರಶ್ನೆ ಮಾಡಿದರು. ಕಾಡಾನೆ ದಾಳಿಯಿಂದ ಜನರು ಸತ್ತರೆ ಕಾಡಾನೆ ಹಿಡಿಯುವ ಕಣ್ಣಾಮುಚ್ಚಾಲೆ ಆಡುವ ಅಧಿಕಾರಿಗಳು ಲಕ್ಷಾಂತರ ಬಿಲ್ ಮಾಡುತ್ತಾರೆ ಆದರೆ ರೈತರ ಜಮೀನಿನಲ್ಲಿ ಬೆಳೆದ ಬೆಳೆ ಹಾನಿಗೆ ಪರಿಹಾರ ನೀಡಲು ಮೀನಾಮೇಷ ಏಣಿಸಿ ಇಲಾಖೆಗೆ ಅಲೆಸುವ ಜೊತೆಗೆ ಅರೆಕಾಸು ನೀಡುತ್ತಾರೆ ಎಂದು ಆರೋಪ ಮಾಡಿದರು.
ಅರಣ್ಯಾಧಿಕಾರಿಗಳ ಭರವಸೆ
ಈ ಬಗ್ಗೆ ಜಿಲ್ಲಾ ಅರಣ್ಯಾಧಿಕಾರುಗಳು ಮಾತನಾಡಿದ್ದು, ಕಾಡಾನೆಗಳ ಹಾವಳಿ ತಪ್ಪಿಸಲು ಜಿಲ್ಲೆಯ ಅರಣ್ಯ ವ್ಯಾಪ್ತಿಯಲ್ಲಿ ಕಾಡಾನೆಗಳು ಪ್ರವೇಶ ಮಾಡದಂತೆ ಡ್ರೆಂಚ್‍ಗಳನ್ನು ನಿರ್ಮಿಸಿ ತಡೆಗೋಡೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಆರೇಳು ತಿಂಗಳಲ್ಲಿ ಜಿಲ್ಲೆಯಿಂದ ಕಾಡಾನೆಗಳನ್ನು ಶಾಶ್ವತವಾಗಿ ಓಡಿಸುವ ಭರವಸೆ ನೀಡಿ ಹಿನ್ನಲೆಯಲ್ಲಿ ರೈತರು ಪ್ರತಿಭಟನೆ ಕೈಬಿಟ್ಟರು.
ಪ್ರತಿಭಟನೆಯಲ್ಲಿ ವೇದಿಕೆಯ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‍ಗೌಡ, ರಾಜ್ಯ ಕಾರ್ಯಾಧ್ಯಕ್ಷ ಉಮಾಶಂಕರ್, ವೀರೇಶ್, ರಾಜ್ಯ ಉಪಾಧ್ಯಕ್ಷರುಗಳಾದ ಬೆಂಕಿ ಶ್ರೀಧರ್ ರಂಜಿತ್ ಗೌಡ, ರಾಜ್ಯ ಸಂಘಟನಾ ಕಾರ್ಯದರ್ಶಿ ಕೃಷ್ಣೇಗೌಡ, ರೈತ ಘಟಕದ ಅಧ್ಯಕ್ಷರುಗಳಾದ ಶಂಕರ್ ಸಿಂಗರಾಜಿಪುರ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.












Click it and Unblock the Notifications