ರಾಮನಗರ: ಭದ್ರಕೋಟೆಯನ್ನೇ ಕಳೆದುಕೊಂಡ ಜೆಡಿಎಸ್‌, ಕಾಂಗ್ರೆಸ್‌ ಮಾಡಿದ ಪ್ಲಾನ್‌ ಏನು?, ಇಲ್ಲಿದೆ ವರದಿ

ರಾಮನಗರ, ಮೇ, 16: ರಾಮನಗರ ಜಿಲ್ಲೆಯನ್ನು ಜೆಡಿಎಸ್‌ನ ಭದ್ರಕೋಟೆ ಎಂದೇ ಕರೆಯಲಾಗುತ್ತಿತ್ತು. ಅದರಲ್ಲೂ ರಾಮನಗರದಲ್ಲಿ ಕನಕಪುರವನ್ನು ಹೊರತುಪಡಿಸಿ ಉಳಿದ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಪ್ರಾಬಲ್ಯ ಸಾಧಿಸುವುದರೊಂದಿಗೆ ಎಚ್.ಡಿ.ಕುಮಾರಸ್ವಾಮಿಗೆ ಬೆನ್ನೆಲುಬಾಗಿ ಮತದಾರರು ನಿಂತಿದ್ದರು. ಆದರೆ ಈ ಬಾರಿ ಜೆಡಿಎಸ್‌ನ ಭದ್ರಕೋಟೆಗೆ ಕಾಂಗ್ರೆಸ್ ನುಸುಳಿದೆ.

ಹಾಗೆಯೇ ಬೇರೆ ಕಡೆಯೂ ಜೆಡಿಎಸ್ ಸೋಲು ಕಂಡರೂ ರಾಮನಗರ ಜಿಲ್ಲೆಯ ಜನ ನಮ್ಮ ಕೈಬಿಡುವುದಿಲ್ಲ ಎಂದೇ ಕುಮಾರಸ್ವಾಮಿ ನಂಬಿದ್ದರು. ಆದರೆ ಈ ಬಾರಿಯ ಚುನಾವಣೆಯ ಫಲಿತಾಂಶ ಅದನ್ನು ಸುಳ್ಳು ಮಾಡಿದೆ. ಅಷ್ಟೇ ಅಲ್ಲದೆ ಜೆಡಿಎಸ್‌ಗೆ ಒತ್ತಾಸೆಯಾಗಿದ್ದ ಒಕ್ಕಲಿಗರು ನಿಧಾನವಾಗಿ ಪಕ್ಷವನ್ನು ಬಿಟ್ಟು ಹೋಗುತ್ತಿರುವುದು ಈ ಬಾರಿಯ ಚುನಾವಣೆಯಿಂದ ಸಾಬೀತಾಗಿದೆ.

Ramanagara Election Results 2023

ಎಚ್.ಡಿ.ದೇವೇಗೌಡರನ್ನು ಒಕ್ಕಲಿಗರು ತಮ್ಮ ನಾಯಕನೆಂದೇ ನಂಬಿದ್ದರು. ಅಲ್ಲದೆ ಇದೇ ಕಾರಣಕ್ಕಾಗಿ ಜೆಡಿಎಸ್ ಅನ್ನು ಬೆಂಬಲಿಸುತ್ತಾ ಬಂದಿದ್ದರು. ಒಂದಷ್ಟು ಒಕ್ಕಲಿಗ ನಾಯಕರು ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿದ್ದರು. ಆದ್ದರಿಂದ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಭದ್ರವಾಗಿ ನೆಲೆಯೂರಿತ್ತು. ಅಷ್ಟೇ ಅಲ್ಲದೆ ಕಾಂಗ್ರೆಸ್‌ಗೆ ಸದಾ ಎದುರಾಳಿಯಾಗಿಯೇ ಚುನಾವಣೆಯನ್ನು ಎದುರಿಸಿತ್ತು. ಜನ ಕೂಡ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಬೇಕೆನ್ನುವ ಬಯಕೆ ಹೊಂದಿದ್ದರು. ದೇವೇಗೌಡರು ರಾಷ್ಟ್ರ ರಾಜಕಾರಣದತ್ತ ಮುಖ ಮಾಡಿದ ಬಳಿಕ ರಾಜ್ಯದಲ್ಲಿ ಜೆಡಿಎಸ್‌ಗೆ ಎಚ್.ಡಿ.ಕುಮಾರಸ್ವಾಮಿಯವರು ಐಕಾನ್ ಆಗಿದ್ದರು.

ಡಿಕೆಶಿ ವರ್ಚಸ್ಸು ಹೆಚ್ಚಿಸಿದ ಮೇಕೆದಾಟು ಪಾದಯಾತ್ರೆ

ಹಾಗೆ ನೋಡಿದರೆ ಕುಮಾರಸ್ವಾಮಿ ಅವರು ರಾಷ್ಟ್ರೀಯ ಪಕ್ಷಗಳೊಂದಿಗೆ ಕೈಜೋಡಿಸಿದಾಗಲೆಲ್ಲ ಹಲವು ಸಮಸ್ಯೆಗಳನ್ನು ಎದುರಿಸಿದ್ದಾರೆ. ಮೊದಲ ಬಾರಿಗೆ ಬಿಜೆಪಿಯೊಂದಿಗೆ ಸೇರಿ ಟ್ವೆಂಟಿ ಟ್ವೆಂಟಿ ಸರ್ಕಾರ ರಚಿಸಿದ ಬಳಿಕ ಚುನಾವಣೆಯಲ್ಲಿ ಒಂದಷ್ಟು ಸ್ಥಾನಗಳನ್ನು ಕಳೆದುಕೊಂಡಿದ್ದರು. ಆದರೆ 2018ರಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಸರ್ಕಾರ ಮಾಡಿದ್ದು, ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಸಂಪೂರ್ಣ ನೆಲಕಚ್ಚುವಂತಾಗಿದೆ.

ಹಾಸನದಲ್ಲಿ ಎಚ್.ಡಿ.ರೇವಣ್ಣ ಪ್ರಾಬಲ್ಯ ಸಾಧಿಸಿದ್ದರೆ ಕುಮಾರಸ್ವಾಮಿ ಅವರು ರಾಮನಗರವನ್ನು ಭದ್ರಕೋಟೆಯನ್ನಾಗಿ ಮಾಡಿಕೊಂಡಿದ್ದರು. ಎಷ್ಟೇ ಪ್ರಯತ್ನ ಮಾಡಿದರೂ ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್ ಅವರಿಗೆ ಕನಕಪುರ ಹೊರತುಪಡಿಸಿ ಬೇರೆ ಕ್ಷೇತ್ರವನ್ನು ಗೆಲ್ಲಿಸಿಕೊಂಡು ಬರುವುದು ಸಾಧ್ಯವಾಗಿರಲಿಲ್ಲ. ಆದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಬಳಿಕ ಡಿ.ಕೆ.ಶಿವಕುಮಾರ್ ಅವರು ರಾಮನಗರದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಮುಂದಾಗಿದ್ದರು. ಅದರಲ್ಲೂ ಅವರು ರಾಮನಗರದಿಂದ ಆರಂಭಿಸಿದ ಮೇಕೆದಾಟು ಪಾದಯಾತ್ರೆ ಅವರ ವರ್ಚಸ್ಸನ್ನು ಹೆಚ್ಚಿಸುವಂತೆ ಮಾಡಿತ್ತು.

ನನಸಾಗದ ನಿಖಿಲ್ ಕುಮಾರಸ್ವಾಮಿ ಕನಸು

ಚನ್ನಪಟ್ಟಣದಲ್ಲಿ ಎಚ್.ಡಿ.ಕುಮಾರಸ್ವಾಮಿ, ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ, ಮಾಗಡಿಯಲ್ಲಿ ಎ.ಮಂಜುನಾಥ್ ಹೀಗೆ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಪ್ರಾಬಲ್ಯ ಹೊಂದಿತ್ತು. ಮತದಾರರು ತನ್ನ ಬೆಂಬಲಕ್ಕಿದ್ದಾರೆ ಎಂಬ ಧೈರ್ಯ ಕುಮಾರಸ್ವಾಮಿ ಅವರಲ್ಲಿತ್ತು. ಹೀಗಾಗಿಯೇ ಅವರು ಪತ್ನಿ ಅನಿತಾ ಕುಮಾರಸ್ವಾಮಿ ಪ್ರತಿನಿಧಿಸುತ್ತಿದ್ದ ರಾಮನಗರದಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ಕಣಕ್ಕಿಳಿಸಿ ಸುಲಭವಾಗಿ ಗೆಲ್ಲಿಸಿಕೊಂಡು ಬರಬಹುದು ಎಂದು ನಂಬಿದ್ದರು.

ಆದರೆ ಈ ಬಾರಿ ರಾಮನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಶ್ರಮ ಮತ್ತು ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು ಮತದಾರರು ಕಾಂಗ್ರೆಸ್‌ನತ್ತ ಒಲವು ತೋರುವಂತೆ ಮಾಡಿದ್ದರೆ, ಮೂರು ಕ್ಷೇತ್ರದ ಮತದಾರರು ನಮ್ಮನ್ನು ಕೈಬಿಡಲ್ಲ ಎಂಬ ಅತಿಯಾದ ಆತ್ಮವಿಶ್ವಾಸ ಜೆಡಿಎಸ್ ರಾಮನಗರದಲ್ಲಿ ಎರಡು ಕ್ಷೇತ್ರಗಳನ್ನು ಕಳೆದುಕೊಳ್ಳುವಂತಾಗಿದೆ. ಅದೃಷ್ಟ ಪರೀಕ್ಷೆಗಿಳಿದಿದ್ದ ನಿಖಿಲ್ ಕುಮಾರಸ್ವಾಮಿ ಮೊದಲ ಪ್ರಯತ್ನದಲ್ಲಿಯೇ ಸೋಲು ಕಾಣುವಂತಾಗಿದೆ.

ಕಾಂಗ್ರೆಸ್‌ನತ್ತ ಒಲವು ತೋರಿದ ಮತದಾರರು

ರಾಮನಗರ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರರಲ್ಲಿ ನೇರ ಸ್ಪರ್ಧೆ ಏರ್ಪಟ್ಟಿತ್ತು. ಸ್ಪರ್ಧಾ ಕಲಿಗಳ ಜಿದ್ದಾಜಿದ್ದಿನ ಸೆಣಸಾಟದಿಂದ ಫಲಿತಾಂಶವನ್ನು ರಾಜಕೀಯ ತಜ್ಞರೂ ಕೂಡ ನಿಖರವಾಗಿ ಹೇಳಲಾಗದಂತಹ ಸ್ಥಿತಿ ಇತ್ತು. ಎಲ್ಲೋ ಒಂದು ಕಡೆ ಮತದಾರರು ತಮ್ಮ ಕೈಹಿಡಿಯುತ್ತಾರೆ ಎಂಬ ನಂಬಿಕೆಯಿಂದ ಕುಮಾರಸ್ವಾಮಿ ಜಿಲ್ಲೆಯತ್ತ ಹೆಚ್ಚಿನ ಆಸಕ್ತಿ ತೋರಿರಲಿಲ್ಲ.

2018ರ ಚುನಾವಣೆಯಲ್ಲಿ ಜೆಡಿಎಸ್-3 ಹಾಗೂ ಕಾಂಗ್ರೆಸ್ ಒಂದು ಸ್ಥಾನವನ್ನು ಪಡೆದುಕೊಂಡಿದ್ದವು. ಆದರೆ ಈ ಬಾರಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಚನ್ನಪಟ್ಟಣ ಕ್ಷೇತ್ರದಲ್ಲಿ ಸ್ಪರ್ಧಿಸಿ ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲಾಗಿತ್ತು. ಆದರೆ ರಾಮನಗರ ಮತದಾರರು ನಿಖಿಲ್‌ಗೆ ಮಣೆ ಹಾಕಲಿಲ್ಲ. ಬದಲಿಗೆ ಡಿ.ಕೆ.ಶಿವಕುಮಾರ್‌ ಅವರ ಆಪ್ತ ಕಾಂಗ್ರೆಸ್‌ನ ಅಲ್ಪಸಂಖ್ಯಾತ ಅಭ್ಯರ್ಥಿ ಇಕ್ಬಾಲ್ ಹುಸೇನ್ ಅವರ ಕೈ ಹಿಡಿದಿದ್ದಾರೆ. ಮಾಗಡಿ ಕ್ಷೇತ್ರದಲ್ಲೂ ಜೆಡಿಎಸ್‌ನ ಮಂಜುನಾಥ್ ಬದಲಿಗೆ ಕಾಂಗ್ರೆಸ್‌ನ ಬಾಲಕೃಷ್ಣ ಅವರನ್ನು ಗೆಲ್ಲಿಸಿದ್ದಾರೆ.

ಜೆಡಿಎಸ್ ಮರುಸ್ಥಾಪನೆ ಮಾಡ್ತಾರಾ ಎಚ್‌ಡಿಕೆ?

ಇನ್ನು ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸುವಲ್ಲಿ ಎಚ್.ಎ.ಇಕ್ಬಾಲ್ ಹುಸೇನ್ ಅವರು ಯಶಸ್ವಿಯಾಗಿದ್ದಾರೆ. ಅವರು ಕಳೆದ ಒಂದು ವರ್ಷದಿಂದ ಕಾಂಗ್ರೇಸ್ ಪಕ್ಷದ ಸಂಘಟನೆಯಲ್ಲಿ ತೊಡಗಿ ಚುನಾವಣೆಗೆ ಸಮರಭ್ಯಾಸ ನಡೆಸಿದ್ದರು. ಕೋವಿಡ್ ಸಂಕಷ್ಟದಲ್ಲಿ ಹಾಗೂ ನೆರೆ ಹಾವಳಿಯಿಂದ ನೊಂದ ಜನರಿಗೆ ನೆರವು ನೀಡಿದ್ದರು. ಚುನಾವಣೆಗೆ ಸಂಸದ ಡಿ.ಕೆ.ಸುರೇಶ್ ಅವರಾದಿಯಾಗಿ ಕೆಲವು ಘಟಾನುಘಟಿ ನಾಯಕರು ನಡೆಸಿದ ಒಗ್ಗಟ್ಟಿನ ಮಂತ್ರ ಪಠಿಸುವ ಮೂಲಕ ಗೆಲುವು ಕಂಡಿದ್ದಾರೆ.

ಈ ಬಾರಿಯ ಚುನಾವಣೆಯನ್ನು ಗಮನಿಸಿದರೆ ರಾಮನಗರದಲ್ಲಿ ಜೆಡಿಎಸ್‌ನ ವರ್ಚಸ್ಸು ಕಡಿಮೆಯಾಗಿರುವುದು ಗೋಚರಿಸುತ್ತಿದೆ. ಅಷ್ಟೇ ಅಲ್ಲದೆ ಡಿ.ಕೆ.ಶಿವಕುಮಾರ್ ಒಕ್ಕಲಿಗ ನಾಯಕನಾಗಿಯೂ ಹೊರಹೊಮ್ಮಿದ್ದಾರೆ. ಕಳೆದು ಕೊಂಡ ಸ್ಥಾನಗಳನ್ನು ಮರುಸಸ್ಥಾಪಿಸಬೇಕಾದರೆ ಜೆಡಿಎಸ್ ನಾಯಕರು ಕಷ್ಟಪಡಲೇಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+