ಮಂಚನಬೆಲೆ ಜಲಾಶಯದಿಂದ ನೀರು ಬಿಡುಗಡೆ; ನದಿ ಪಾತ್ರದ ಜನರಿಗೆ ಎಚ್ಚರಿಕೆ
ರಾಮನಗರ, ನವೆಂಬರ್ 21; ರಾಮನಗರದಲ್ಲಿ ಮಳೆ ಮುಂದುವರೆದಿದ್ದು ಜಿಲ್ಲೆಯ ಅರ್ಕಾವತಿ ಮತ್ತು ಕುಮುದ್ವತಿ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತಿದೆ. ಇದರಿಂದಾಗಿ ಮಂಚನಬೆಲೆ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು, ಹೆಚ್ಚುವರಿ ನೀರನ್ನು ಹೊರ ಬಿಡಲಾಗುತ್ತಿದೆ.
ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಪ್ರವಾಹದ ಮುನ್ಸೂಚನೆ ನೀಡಿದೆ. ನದಿ ಪಾತ್ರದ ಗ್ರಾಮಗಳ ಜನರು ನದಿಯನ್ನು ದಾಟಬಾರದು ಮತ್ತು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಬೇಕು. ಜಾನುವಾರುಗಳನ್ನು ನದಿಯಲ್ಲಿ ಬಿಡದಂತೆ ಮನವಿ ಮಾಡಲಾಗಿದೆ.
ಮಂಚನಬೆಲೆ ಜಲಾಶಯಕ್ಕೆ ಒಳಹರಿವು ಹೆಚ್ಚಾಗುತ್ತಿದ್ದು ಜಲಾಶಯದ ನೀರಿನ ಮಟ್ಟ ಗರಿಷ್ಟ ಮಟ್ಟವನ್ನು ತಲುಪಿರುತ್ತದೆ. ಜಲಾಶಯದ ಸುರಕ್ಷತೆಯ ಹಿತ ದೃಷ್ಟಿಯಿಂದ ಜುಲೈ 2021 ರಿಂದ ಇಲ್ಲಿಯವರೆಗೆ ಸುಮಾರು 500 ರಿಂದ 1500 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.

ನವೆಂಬರ್ 19ರಂದು ನದಿಗೆ ಸುಮಾರು 3500 ಕ್ಯೂಸೆಕ್ ಹೆಚ್ಚುವರಿ ನೀರನ್ನು ಹರಿಸಲಾಗಿದೆ. ಪ್ರಸ್ತುತ ಮಳೆಯು ಮುಂದುವರೆಯುವ ಸಾಧ್ಯತೆಗಳಿವೆ. ಆದ್ದರಿಂದ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚುವರಿಯಾಗಿ ನೀರನ್ನು ಬಿಡುವ ಸಾಧ್ಯತೆಯಿರುತ್ತದೆ.
ನದಿ ಪಾತ್ರದ ಗ್ರಾಮಗಳ ಜನರು ನದಿಯನ್ನು ದಾಟುವುದಾಗಲೀ ಮತ್ತು ತಮ್ಮ ಜಾನುವಾರುಗಳನ್ನು ನದಿಗೆ ಬಿಡುವುದಾಗಲೀ ಮಾಡಬಾರದೆಂದು ಹಾಗೂ ರಾಮನಗರ ನಗರ ವ್ಯಾಪ್ತಿಯಲ್ಲಿ ನದಿ ದಂಡೆಯಲ್ಲಿ ವಾಸಿಸುತ್ತಿರುವ ಜನರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಬೇಕು ಎಂದು ಕಾವೇರಿ ನೀರಾವರಿ ನಿಗಮದ ಮಂಚನಬೆಲೆ ಯೋಜನಾ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಹೇಳಿದ್ದಾರೆ.
ಮಂಚನಬೆಲೆ ಜಲಾಶಯದ ಮೇಲ್ಬಾಗದಲ್ಲಿರುವ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಪುನರುಜ್ಜೀವನ ಕಾಮಗಾರಿ ನಡೆಯುತ್ತಿದ್ದು ಅಲ್ಲಿ ನೀರು ಸಂಗ್ರಹಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಪ್ರಕಟಣೆ ತಿಳಿಸಿದೆ.
ಇತ್ತೀಚಿನ ದಿನಗಳಲ್ಲಿ ಅರ್ಕಾವತಿ ಹಾಗೂ ಕುಮುದ್ವತಿ ಜಲಾನಯನ ಪ್ರದೇಶದಲ್ಲಿ ಅಧಿಕ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಈ ನದಿ ಪಾತ್ರಗಳಲ್ಲಿ ಪ್ರವಾಹವು ಹೆಚ್ಚಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಅರ್ಕಾವತಿ ಮತ್ತು ಕುಮದ್ವತಿ ಜಲಾನಯನ ಪ್ರದೇಶದಲ್ಲಿ ಅಧಿಕ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಆದ್ದರಿಂದ ನದಿ ಪಾತ್ರದಲ್ಲಿ ಪ್ರವಾಹ ಜಾಸ್ತಿಯಾಗುತ್ತಿದೆ. ಈ ಹಿನ್ನಲೆಯಲ್ಲಿ ಜಲಾಶಯಕ್ಕೆ ಒಳಹರಿವು ಹೆಚ್ಚಿದ್ದು, ನೀರು ಹೊರಬಿಡಲಾಗುತ್ತಿದೆ.
ಕಂಟ್ರೋಲ್ ರೂಂ ಆರಂಭ; ರಾಮನಗರ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಅತಿವೃಷ್ಟಿಯ ಹಿನ್ನಲೆಯಲ್ಲಿ ಉಂಟಾಗುವ ಪ್ರಾಣ ಹಾನಿ, ಮನೆ ಹಾನಿ ಹಾಗೂ ಬೆಳೆ ಹಾನಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಹಾಗೂ ಜನ ಪ್ರತಿನಿಧಿಗಳಿಂದ ದೂರು ಸ್ವೀಕರಿಸಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 24*7 ಕಂಟ್ರೋಲ್ ರೂಂ ಆರಂಭ ಮಾಡಲಾಗಿದೆ.
ಅತಿವೃಷ್ಟಿಯಿಂದ ಉಂಟಾಗುವ ಪ್ರಾಣ ಹಾನಿ, ಬೆಳೆ ಹಾನಿ ಹಾಗೂ ಮನೆ ಹಾನಿಗೆ ಸಂಬಂಧಿಸಿದಂತೆ ದೂರುಗಳಿದ್ದಲ್ಲಿ ದೂರವಾಣಿ ಸಂಖ್ಯೆ 080-27271029 ಗೆ ಕರೆ ಮಾಡಬಹುದಾಗಿದೆ ಎಂದು ರಾಮನಗರ ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ . ಕೆ ತಿಳಿಸಿದ್ದಾರೆ.
ರಾಮನಗರದಿಂದ 18 ಕಿ.ಮೀ. ದೂರದಲ್ಲಿರುವ ಮಂಚನಬೆಲೆ ಜಲಾಶಯವನ್ನು ಅರ್ಕಾವತಿ ನದಿಗೆ ಅಡ್ಡವಾಗಿ ನಿರ್ಮಿಸಲಾಗಿದೆ. ಈ ಜಲಾಶಯದ ನೀರನ್ನು ರಾಮನಗರ, ಮಾಗಡಿಗೆ ಕುಡಿಯುವ ನೀರು ಪೂರೈಕೆಗೆ ಸಹ ನೀರನ್ನು ಬಳಕೆ ಮಾಡಲಾಗುತ್ತಿದೆ.
"ಜಲಾಶಯವನ್ನು ಅಭಿವೃದ್ಧಿಗೊಳಿಸಿ ಪ್ರವಾಸಿಗರ ತಾಣವನ್ನಾಗಿರುವ ಉದ್ದೇಶವಿದೆ" ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ. ಎನ್. ಅಶ್ವತ್ಥ ನಾರಾಯಣ ಹೇಳಿದ್ದಾರೆ.
"ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ ಮನರಂಜನಾ ಪಾರ್ಕ್ ಅಭಿವೃದ್ಧಿಗೊಳಿಸಲಾಗುತ್ತದೆ. ದೋಣಿ ವಿಹಾರ ಸೇರಿದಂತೆ ಹಲವು ಬಗೆಯ ಮನರಂಜನೆಯ ಥೀಮ್ ಒಳಗೊಂಡ ಪಾರ್ಕ್ ನಿರ್ಮಿಸುವ ಚಿಂತನೆ ಇದೆ" ಎಂದು ಸಚಿವರು ಹೇಳಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದಾಗ ಮಂಚನಬೆಲೆ ಕೆಳ ಭಾಗ ಸುಮಾರು 200 ಎಕರೆಗೂ ಹೆಚ್ಚು ಜಾಗದಲ್ಲಿ ಉದ್ಯಾನವನ ನಿರ್ಮಾಣ ಮಾಡಲು 150 ಕೋಟಿ ಅನುದಾನ ಮೀಸಲಿಟ್ಟಿತ್ತು.
ಕಾವೇರಿ ನೀರಾವರಿ ನಿಗಮ ಮಂಚನಬೆಲೆ ಜಲಾಶಯವನ್ನು ಉಳಿಸಿಕೊಳ್ಳಲು ಮುಂದಾಗಿದೆ. ಜಲಾಶಯದ ಸುತ್ತ ಬೇಲಿ ನಿರ್ಮಾಣ ಮಾಡಿ ಅಕ್ರಮವಾಗಿ ಯಾರೂ ಪ್ರವೇಶ ಮಾಡದಂತೆ ವ್ಯವಸ್ಥೆ ಮಾಡಲಾಗುತ್ತದೆ.












Click it and Unblock the Notifications