ಕನಕಪುರದಲ್ಲಿ ತಮಿಳುನಾಡಿನ ರಾಗಿ ಅಕ್ರಮ ಮಾರಾಟ ಆರೋಪ: ಡಿಕೆ ಶಿವಕುಮಾರ್ ಹೇಳಿದ್ದೇನು?
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತವರು ಕ್ಷೇತ್ರ ಕನಕಪುರದಲ್ಲಿ ರೈತರಿಂದ ದೊಡ್ಡ ಆರೋಪ ಕೇಳಿಬಂದಿದೆ. ಕನಕಪುರದ ರಾಗಿ ಕೇಂದ್ರದಲ್ಲಿ ಮಧ್ಯವರ್ತಿಗಳ ಮೂಲಕ ತಮಿಳುನಾಡಿನ ರಾಗಿ ಮಾರಾಟ ಮಾಡಲಾಗುತ್ತಿದೆ ಎಂಬ ವಿಡಿಯೋ ವೈರಲ್ ಆಗಿದೆ. ಇದರಿಂದ ಈ ಭಾಗದ ರೈತರಿಗೆ ಭಾರಿ ಹಿನ್ನಡೆಯಾಗುತ್ತಿದ್ದು, ತಮಿಳುನಾಡಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ಇಲ್ಲಿನ ರೈತರು ಕೂಡ ಗಂಭೀರ ಆರೋಪ ಮಾಡುತ್ತಿದ್ದು, ಈ ವಿಚಾರವಾಗಿ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದಾರೆ. ಈ ಆರೋಪ ನಿಜವಾದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಭರವಸೆಯೂ ನೀಡಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್ ಅವರು ಕನಕಪುರ ರಾಗಿ ಖರೀದಿ ಕೇಂದ್ರದಲ್ಲಿ ಮಧ್ಯವರ್ತಿಗಳ ಮೂಲಕ ತಮಿಳುನಾಡಿನ ರಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಕನಕಪುರದಲ್ಲಿ ಇಂತಹ ಅಕ್ರಮಕ್ಕೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ. ಶೀಘ್ರವೇ ರಾಗಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ರಾಮನಗರ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ನಮ್ಮ ರೈತರ ಹಿತರಕ್ಷಣೆಗೆ ನಾವು ಸದಾ ಕಂಕಣಬದ್ಧ ಎಂದಿದ್ದಾರೆ.

ಅಧಿಕಾರಿಗಳು ಕೂಡ ಈ ಅಕ್ರಮದಲ್ಲಿ ಶಾಮೀಲಾಗಿ ರೈತರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ. ಇಲ್ಲಿಗೆ ತಮಿಳುನಾಡಿನಿಂದ ನೂರಾರು ಮೂಟೆ ರಾಗಿ ಬರುತ್ತಿದೆ. ಮಧ್ಯವರ್ತಿಗಳು ಹೊರ ರಾಜ್ಯದಿಂದ ರಾಗಿ ತಂದು ಇಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಸ್ಥಳೀಯ ರೈತರ ರಾಗಿ ಮಾರಾಟವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಜೆಡಿಎಸ್ ಈ ವಿಡಿಯೋ ಹಂಚಿಕೊಂಡು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
ತಮಿಳುನಾಡಿಗೆ ಬೆಣ್ಣೆ, ಕರ್ನಾಟಕಕ್ಕೆ ಸುಣ್ಣ: ಜೆಡಿಎಸ್
ಇದೇ ವಿಚಾರವಾಗಿ ಜೆಡಿಎಸ್ ಕೂಡ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಕಮಿಷನ್ ಕಾಂಗ್ರೆಸ್ ಸರ್ಕಾರ ರಾಜ್ಯದ ರೈತರಿಗೆ ಅನ್ಯಾಯ ಆಗುತ್ತಿದ್ದರೂ ಕಣ್ಮುಚ್ಚಿ ಕುಳಿತಿದೆ. ʼರಿಪಬ್ಲಿಕ್ ಆಫ್ ಕನಕಪುರʼದಲ್ಲಿ ಡಿಕೆ ಬ್ರದರ್ಸ್ ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ತಮಿಳುನಾಡು ರೈತರಿಗೆ ಮಣೆ ಹಾಕಿ, ರಾಜ್ಯದ ರೈತರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ ಎಂದು ಆರೋಪಿಸಿದೆ.
ಕನಕಪುರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಅಧಿಕಾರಿಗಳು ಮತ್ತು ದಲ್ಲಾಳಿಗಳ ಕಮಿಷನ್ ಹಾವಳಿಯು ರಾಜ್ಯದ "ರಾಗಿ ಬೆಳಗಾರರಿಗೆ" ಶಾಪವಾಗಿ ಪರಿಣಮಿಸಿದೆ. ಖರೀದಿ ಕೇಂದ್ರದಲ್ಲಿ ಕಮಿಷನ್ ಆಸೆಗೆ ಡಿಕೆ ಬ್ರದರ್ಸ್ ಮತ್ತು ಅಧಿಕಾರಿಗಳು ತಮಿಳುನಾಡಿನ ಸಾವಿರಾರು ಕ್ವಿಂಟಾಲ್ ರಾಗಿಯನ್ನು ಅಕ್ರಮವಾಗಿ ಖರೀದಿಸುತ್ತಿದ್ದಾರೆ. ಎಪಿಎಂಸಿಗಳು ರೈತರು-ಗ್ರಾಹಕರ ಮಧ್ಯೆ ದಲ್ಲಾಳಿ ಕಾಟ ತಪ್ಪಿಸಿ ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ದೊರಕಿಸಬೇಕಾದ ಕಾಂಗ್ರೆಸ್ ಸರ್ಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಮ್ಮ ಇಂಡಿ ಕೂಟದ ಸ್ಟಾಲಿನ್ ಸರ್ಕಾರವನ್ನು ಮೆಚ್ಚಿಸಲು ಅಂದು ಕದ್ದುಮುಚ್ಚಿ ಕಾವೇರಿ ನೀರು ಬಿಟ್ಟಾಯ್ತು, ಈಗ ತಮಿಳುನಾಡಿನ ರಾಗಿ ಖರೀದಿಸಿ, ನಮ್ಮ ರಾಜ್ಯದ ರೈತರ ಬಾಯಿಗೆ ಮಣ್ಣು ಹಾಕಬೇಡಿ ಎಂದು ಜೆಡಿಎಸ್ ಖಂಡಿಸಿದೆ.












Click it and Unblock the Notifications