ಗಂಡನ ಕೊಂದು ಆತ್ಮಹತ್ಯೆ ಬಣ್ಣ ಕಟ್ಟಿದ್ದ ಹೆಂಡತಿ, ಆಕೆಯ ಪ್ರಿಯಕರನಿಗೆ ಬಿತ್ತು ಕೋಳ
ರಾಮನಗರ, ಅಕ್ಟೋಬರ್ 15: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪ್ರಿಯಕರನೊಂದಿಗೆ ಸೇರಿ ಹೆಂಡತಿಯೇ ಗಂಡನನ್ನು ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿದ್ದ ಪ್ರಕರಣವನ್ನು ರಾಮನಗರ ಟೌನ್ ಪೊಲೀಸರು ಭೇದಿಸಿ ಇಬ್ಬರನ್ನು ಬಂಧಿಸಿದ್ದಾರೆ.
ರಾಮನಗರ ಗೌಸಿಯಾ ನಗರದ ನಿವಾಸಿ ಸಾದಿಕ್ ಪಾಷಾ (32)ನನ್ನು ಆತನ ಪತ್ನಿ ಮುಂಬೈ ಮೂಲದ ಅಸ್ಮಾ ಬಾನು (27) ಹಾಗೂ ಆಕೆಯ ಪ್ರಿಯಕರ ಪಶ್ಚಿಮ ಬಂಗಾಳ ಮೂಲದ ಮಹಮ್ಮದ್ ರಂಜಾನ್ (20) ಕೊಲೆ ಮಾಡಿದ್ದರು. ನಂತರ ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದ್ದರು.
ಆತ್ಮಹತ್ಯೆ ಎಂದು ಬಿಂಬಿಸಲು ಯತ್ನ: ಸಾದಿಕ್ ಪಾಷಾ ಮತ್ತು ಆರೋಪಿಗಳಾದ ಆತನ ಪತ್ನಿ, ಆಕೆಯ ಪ್ರಿಯಕರ ರಂಜಾನ್, ರೇಷ್ಮೆ ಪಿಲೇಚಾರಿಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಆಸ್ಮಾ ಬಾನು ಹಾಗು ರಂಜಾನ್ ನಡುವೆ ಪ್ರೇಮಾಂಕುರವಾಗಿ ಇಬ್ಬರ ನಡುವೆ ಅನೈತಿಕ ಸಂಬಂಧ ಬೆಳೆದಿದೆ. ತಮ್ಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಸಾದಿಕ್ ಪಾಷಾನನ್ನು ಕೊಲೆ ಮಾಡಲು ಇಬ್ಬರೂ ಹೊಂಚು ಹಾಕಿದ್ದಾರೆ.

ಇಬ್ಬರೂ ಸೇರಿ ಅಕ್ಟೋಬರ್ 13ರ ಭಾನುವಾರ ಮನೆಯಲ್ಲಿದ್ದ ಸಾದಿಕ್ ಪಾಷಾನನ್ನು ಹತ್ಯೆ ಮಾಡಲು ಮುಂದಾಗಿದ್ದಾರೆ. ಮೊದಲಿಗೆ ಸಾದಿಕ್ ಪಾಷಾ ಹಾಗೂ ರಂಜಾನ್ ಹೊಡೆದಾಡಿಕೊಂಡಿದ್ದಾರೆ. ಇದೇ ವೇಳೆ ಆಸ್ಮಾ ಬಾನು ಲಟ್ಟಣಿಗೆಯಿಂದ ಸಾದಿಕ್ ತಲೆಗೆ ಹೊಡೆದಿದ್ದಾಳೆ. ನೆಲಕ್ಕೆ ಬಿದ್ದ ಸಾದಿಕ್ ನನ್ನು ದಿಂಬಿನಿಂದಿ ಉಸಿರುಗಟ್ಟಿಸಿ ಕೊಂದಿದ್ದಾರೆ. ಇದಾದ ಬಳಿಕ ತನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆಸ್ಮಾ ಬಾನು ಕಥೆ ಕಟ್ಟಿದ್ದಾಳೆ.
ಆದರೆ ಆಕೆಯ ನಡವಳಿಕೆಯಿಂದ ಅನುಮಾನಗೊಂಡ ಮೃತನ ಸಹೋದರ ಬಕಾಸ್ ರಾಮನಗರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಇದೀಗ ಪೊಲೀಸರ ವಿಚಾರಣೆಯಿಂದ ನಿಜಾಂಶ ಹೊರ ಬಿದ್ದಿದೆ. ಕೊಲೆ ಮಾಡಿದ ಬಳಿಕ ರಂಜಾನ್ ಪಶ್ಚಿಮ ಬಂಗಾಳಕ್ಕೆ ಪರಾರಿಯಾಗಲು ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ. ಈ ವೇಳೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಮೃತನ ಪತ್ನಿ ಮತ್ತು ಆಕೆಯ ಪ್ರಿಯಕರ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.












Click it and Unblock the Notifications