ವೈರಲ್ ಆಯ್ತು ಬಾಲಕೃಷ್ಣ-ನಿಖಿಲ್ ಕುಮಾರಸ್ವಾಮಿಯ ವಾಕ್ಸಮರ
Recommended Video

ರಾಮನಗರ, ಏಪ್ರಿಲ್ 29: ಮಾಗಡಿ ಕ್ಷೇತ್ರದ ಮಾಜಿ ಜೆಡಿಎಸ್ ಶಾಸಕ ಎಚ್.ಸಿ.ಬಾಲಕೃಷ್ಣ ಜೆಡಿಎಸ್ ಪಕ್ಷ ತೊರೆದ ಬಳಿಕ ದೊಡ್ಡಗೌಡರ ಕುಟುಂಬ ಹಾಗೂ ಬಾಲಕೃಷ್ಣ ನಡುವಿನ ವಾಕ್ಸಮರ ಕೆಲದಿನಗಳ ಕಾಲ ಜೋರಾಗಿಯೇ ನಡೆದಿತ್ತು. ಆದರೆ ಈಗ ಬಾಲಕೃಷ್ಣ ಹಾಗೂ ಜೆಡಿಎಸ್ ಯುವ ನಾಯಕ, ದೊಡ್ಡಗೌಡರ ಮೊಮ್ಮಗನ ಜಗಳ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೌದು, ಎಚ್.ಸಿ.ಬಾಲಕೃಷ್ಣ ಹಾಗೂ ನಿಖಿಲ್ ಕುಮಾರಸ್ವಾಮಿ ನಡುವೆ ಮಾತಿನ ಸಮರ ಬಹಳ ಜೋರಾಗಿಯೇ ನಡೆದಿದೆ. ಬಾಲಕೃಷ್ಣ ಜೆಡಿಎಸ್ ತೊರೆದ ಬಳಿಕ ಎಚ್‌ಡಿಕೆ ಹಾಗೂ ಬಾಲಕೃಷ್ಣ ನಡುವೆ ನಡೆಯುತ್ತಿದ್ದ ಕೋಲ್ಡ್ ವಾರ್ ತಣ್ಣಗಾಗುವಷ್ಟರಲ್ಲೇ ಈಗ ಪುತ್ರ ನಿಖಿಲ್ ಹಾಗೂ ಬಾಲಕೃಷ್ಣ ನಡುವಿನ ಜಗಳ ತಾರಕಕ್ಕೇರಿದೆ.
ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಾಲಕೃಷ್ಣ ಸಂಸದ ಡಿ.ಕೆ.ಸುರೇಶ್ ಜೊತೆ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದಾಗ ನಿಖಿಲ್ ಕುಮಾರಸ್ವಾಮಿ ನಮ್ಮ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಲು ಬರ್ತಾರಂತೆ. ಅವರು ಬಂದರೆ ಅವರ ಪಕ್ಷದ ಪರವಾಗಿ ಪ್ರಚಾರ ಮಾಡಿಕೊಂಡು ಹೋಗಬೇಕು ಅಷ್ಟೇ, ಆದರೆ ನಮ್ಮ ವಿರುದ್ಧ ಮಾತನಾಡಿದರೆ ನಾವು ಮಾತನಾಡುತ್ತೇವೆ. ನಿಖಿಲ್ ಅವರ ಅನೇಕ ಸಿಡಿಗಳು ನಮ್ಮ ಬಳಿ ಇವೆ. ನಮ್ಮ ವಿರುದ್ಧ ಮಾತನಾಡಿದರೆ ಆ ಸಿಡಿಗಳನ್ನ ಬಿಡುಗಡೆ ಮಾಡುತ್ತೇವೆಂದು ವೀರಾವೇಶದ ಮಾತುಗಳನ್ನಾಡಿದ್ದರು.

ಇನ್ನು ಬಾಲಕೃಷ್ಣ ಹೇಳಿಕೆಗೆ ಕೆಂಡಾಮಂಡಲರಾಗಿ ತೀಕ್ಷ್ಣವಾಗಿಯೇ ಪ್ರತಿಕ್ರಿಯಿಸಿರುವ ನಿಖಿಲ್ ಕುಮಾರಸ್ವಾಮಿ ಹೇ ಯಾವ ಸಿಡಿ ಇದೇ, ತಾಕತ್ತಿದ್ದರೆ ಬಿಡುಗಡೆ ಮಾಡಲಿ ಎಂದು ಬಾಲಕೃಷ್ಣಗೆ ಸವಾಲು ಹಾಕಿದ್ದಾರೆ. ರಾಮನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಂದೆ ಕುಮಾರಸ್ವಾಮಿ ಪರ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ನಿಖಿಲ್ ಕುಮಾರಸ್ವಾಮಿ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
ಒಂದು ಹೇಳ್ತೇನೆ ಬರೆದುಕೊಳ್ಳಿ, ಬಾಲಕೃಷ್ಣ ಮುಂದಿನ ದಿನಗಳಲ್ಲಿ ರಾಜಕೀಯದಿಂದ ನಿವೃತ್ತಿಯಾಗಬೇಕು ಹಾಗೇ ಮಾಡ್ತೀವಿ. ಇವರನ್ನೆಲ್ಲ ಬೆಳೆಸಿದಕ್ಕೆ ನಮ್ಮ ಬೆನ್ನಿಗೆ ಚೂರಿ ಹಾಕಿದ್ದಾರೆ. ಈ ಬಾರಿ ಮಾಗಡಿಯಲ್ಲಿ ಹೇಗೆ ಗೆಲ್ತಾರೆ ನೊಡ್ತೀನಿ ಎಂದು ಚಾಲೆಂಜ್ ಹಾಕಿದರು.
ಇನ್ನು ನಿಖಿಲ್ ಹೇಳಿಕೆಗೆ ಉತ್ತರಿಸಿರುವ ಬಾಲಕೃಷ್ಣ, ನಾನು ನಿಖಿಲ್ ಬಗ್ಗೆ ಆ ರೀತಿ ಹೇಳಿಕೆ ಕೊಟ್ಟಿಲ್ಲ ಎಂದು ಉಲ್ಟಾ ಹೊಡೆದಿದ್ದಾರೆ. ನಿಖಿಲ್ ಹದ್ದುಮೀರಿ ಮಾತನಾಡುತ್ತಾರೆ. ಅವರ ವ್ಯಾಪ್ತಿಯಲ್ಲಿ ಮಾತನಾಡಬೇಕೆಂದು ಹೇಳಿದ್ದೇನೆ ಅಷ್ಟೇ. ಆದರೆ ಮಾಧ್ಯಮದವರು ನನ್ನ ಹೇಳಿಕೆಯನ್ನ ತಿರುಚಿದ್ದಾರೆಂದು ಮಾಧ್ಯಮದವರ ಮೇಲೆಯೇ ಆರೋಪಿಸಿದ್ದಾರೆ. ಹಾಗೇ ದೇವೇಗೌಡರ ಮನೆಯವರು ಏನು ಬೇಕಾದರೂ ಮಾತನಾಡುತ್ತಾರೆ. ಅವರದ್ದು ಆನೆ ರೀತಿ ನಡೆದಿದ್ದೆ ದಾರಿ ಎನ್ನುವ ಸಂಸ್ಕೃತಿ ಎಂದು ವ್ಯಂಗ್ಯವಾಡಿದರು.
ಒಟ್ಟಾರೆ ಮಾತು ಆಡಿದರೆ ಹೋಯಿತು. ಮುತ್ತು ಒಡೆದರೆ ಹೋಯಿತು ಎಂಬಂತೆ ಬಾಲಕೃಷ್ಣ ಹೇಳಿಕೆ ಈಗ ಬಹಳ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ಬಾಲಕೃಷ್ಣ ಹಾಗೂ ದೊಡ್ಡಗೌಡರ ಕುಟುಂಬದ ನಡುವೆ ಮತ್ತಷ್ಟು ವಾಕ್ ಸಮರ ನಡೆಯುವ ಸಾಧ್ಯತೆ ಹೆಚ್ಚಾಗಿ ಕಂಡುಬರುತ್ತಿದೆ.












Click it and Unblock the Notifications