ಬಿಡದಿ ಭಾಗದಲ್ಲಿ ತುಂಬಿಕೊಂಡ ಹೊರರಾಜ್ಯದವರು: ವಲಸೆ ಕಂಡು ಸ್ಥಳೀಯರಲ್ಲಿ ಆತಂಕ
ರಾಜಧಾನಿ ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲೂ ವಲಸಿಗರ ಹಾವಳಿ ಮಿತಿಮೀರಿ ಹೋಗಿದೆ. ಪ್ರತಿ ದಿನವೂ ಗಂಟು ಮೂಟೆ ಕಟ್ಟಿಕೊಂಡು ಕರ್ನಾಟಕಕ್ಕೆ ಸಾವಿರಾರು ಸಂಖ್ಯೆಯಲ್ಲಿ ವಲಸಿಗರು ಲಗ್ಗೆ ಇಡುತ್ತಿದ್ದಾರೆ. ಈ ವಲಸೆ ಈಗ ಬೆಂಗಳೂರಿನ ಹೊರಭಾಗಗಳಿಗೂ ಎಂಟ್ರಿ ನೀಡಿದೆ. ಉದ್ಯೋಗ ಅರಸಿ ಸಾವಿರಾರು ಮಂದಿ ಒಮ್ಮೆಯೇ ಇಲ್ಲಿನ ಪ್ರದೇಶಗಳಲ್ಲಿ ನೆಲೆಯೂರುತ್ತಿದ್ದಾರೆ. ಇದರಿಂದ ಸ್ಥಳೀಯರಿಗೆ ದೊಡ್ಡ ಆತಂಕ ಶುರುವಾಗಿದೆ. ಬೆಂಗಳೂರು ಪಕ್ಕದ ರಾಮನಗರ ಜಿಲ್ಲೆಯ ಬಿಡದಿಯಲ್ಲೂ ವಲಸಿಗರ ಹಾವಳಿ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.
ಹೌದು ರಾಜ್ಯದ ಪ್ರಮುಖ ಕೈಗಾರಿಕಾ ಪ್ರದೇಶವಾದ ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಹೊರ ರಾಜ್ಯಗಳಿಂದ ಆಗಮಿಸಿರುವ ವಲಸೆ ನೌಕರರ ಹಾವಳಿ ಹೆಚ್ಚಾಗಿದೆ. ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಉತ್ತರ ಪ್ರದೇಶ, ಅಸ್ಸಾಂ, ಬಿಹಾರ್ ಸೇರಿದಂತೆ ಉತ್ತರ ಭಾರತದ ಜನರು ಹೊರಗುತ್ತಿಗೆ ಆಧಾರದ ಮೇಲೆ ಕಾರ್ಮಿಕರಿಗಾಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ರಾಜ್ಯದಲ್ಲಿ ಹೊರರಾಜ್ಯದವರಿಂದ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ವಲಸಿಗರ ಮಾಹಿತಿ ಸಂಗ್ರಹಣೆ ಮಾಡಬೇಕು ಎಂದು ಇಲ್ಲಿನ ಜನರು ಆಗ್ರಹಿಸುತ್ತಿದ್ದಾರೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಅಪರಾಧ ಪ್ರಕರಣಗಳಲ್ಲಿ ಹೊರರಾಜ್ಯದವರ ಹೆಸರು ಕೇಳಿಬಂದಿತ್ತು. ಹುಬ್ಬಳ್ಳಿಯಲ್ಲಿ ಐದು ವರ್ಷದ ಮಗುವಿನ ಮೇಲೆ ಕೃತ್ಯದಲ್ಲೂ ಬಿಹಾರ್ ಮೂಲದವನೇ ಆರೋಪಿ ಎಂದು ತಿಳಿದುಬಂದಿತ್ತು. ಈ ಹಿನ್ನೆಲೆ ವಲಸಿಗರೇ ತುಂಬಿಕೊಂಡಿರುವ ಬಿಡದಿ ಮಂದಿಗೆ ದೊಡ್ಡ ನಡುಕ ಶುರುವಾಗಿದೆ. ಸದ್ಯ ಬಿಡದಿ ಕೈಗಾರಿಕಾ ಪ್ರದೇಶದಲ್ಲಿಯೂ ಕಾನೂನು ಸುವ್ಯವಸ್ಥೆ ಬಗ್ಗೆ ಸ್ಥಳೀಯರಲ್ಲಿ ಆತಂಕ ವ್ಯಕ್ತವಾಗಿದ್ದು, ಈ ಸಂಬಂಧ ಬಿಡದಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜು ಅವರು ಪೊಲೀಸರಿಗೂ ಮನವಿ ಮಾಡಿದ್ದಾರೆ.
ಹೊರ ರಾಜ್ಯಗಳ ಕಾರ್ಮಿಕರು ಕೆಲಸಕ್ಕಾಗಿ ಬಿಡದಿಗೆ ಬಂದಿಳಿಯುತ್ತಿದ್ದಾರೆ. ವಾಸಕ್ಕೆ ಇಲ್ಲಿ ಬಾಡಿಗೆ ಮನೆಗಳನ್ನು ಕೂಡ ಪಡೆಯುತ್ತಿದ್ದಾರೆ. ಆದರೆ, ಉತ್ತರ ಭಾರತೀಯರಿಗೆ ಬಾಡಿಗೆ ನೀಡುವ ಸ್ಥಳೀಯ ಮಾಲೀಕರು ಅವರಿಂದ ಗುರುತಿನ ಚೀಟಿಯಾಗಲಿ, ಆಧಾರ್ ಕಾರ್ಡ್ ಸೇರಿದಂತೆ ಯಾವುದೇ ರೀತಿಯ ದಾಖಲೆಗಳನ್ನು ಪರಿಶೀಲಿಸಿ ಮಾಹಿತಿ ಪಡೆದುಕೊಳ್ಳುತ್ತಿಲ್ಲ. ಇದರಿಂದ ಈ ಭಾಗದಲ್ಲಿ ಏನೇ ಅಪರಾಧ ಕೃತ್ಯಗಳು ನಡೆದರೂ ಅದಕ್ಕೆ ಸಂಬಂಧಿಸಿದಂತೆ ಮಾಹಿತಿ ಸಿಗೋದಿಲ್ಲ ಎಂದು ದೂರಿದ್ದಾರೆ.

ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ವ್ಯಾಪ್ತಿಯಲ್ಲಿರುವ ಕಾರ್ಖಾನೆಗಳಲ್ಲಿ ಸರಿ ಸುಮಾರು 10,000ಕ್ಕೂ ಹೆಚ್ಚು ಮಂದಿ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ಬಂದಿದ್ದಾರೆ. ಈ ಪೈಕಿ ಬಿಹಾರ, ಅಸ್ಸಾಂ, ಉತ್ತರ ಪ್ರದೇಶ, ಮಣಿಪುರ ಸೇರಿದಂತೆ ಹಲವು ರಾಜ್ಯಗಳ ಜನ ಇದ್ದಾರೆ. ಇವರೆಲ್ಲರೂ ಬಿಡದಿ ನಗರ, ಮೇಡನಹಳ್ಳಿ, ಗೊಲ್ಲರಪಾಳ್ಯ ಬಿಲ್ಲಿಕೆಂಪನಹಳ್ಳಿ, ರಂಗೇಗೌಡನದೊಡ್ಡಿ, ಬಾನಂದೂರು, ಅಬ್ಬನಕುಪ್ಪೆ, ಗೊಲ್ಲಹಳ್ಳಿ, ಲಕ್ಷ್ಮೀಸಾಗರ, ಹನುಮಂತನಗರ, ಮಂಚನಾಯಕನಹಳ್ಳಿ, ಹೆಜ್ವಾಲ, ಜಡೇನಹಳ್ಳಿ, ವಾಜರಹಳ್ಳಿ ಭಾಗಗಳಲ್ಲಿ ಬಾಡಿಗೆಗೆ ಇದ್ದಾರೆ.
ಜನ ಹೆಚ್ಚಾದಂತೆ ಈ ಭಾಗದಲ್ಲಿ ಅವರ ಪುಂಡಾಟವೂ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಹೊರರಾಜ್ಯದ ಯುವಕರ ವರ್ತನೆಗಳು ಕೂಡ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ಬಿಡದಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಉತ್ತರ ಭಾರತದ ಯುವಕರು ಮನಬಂದಂತೆ ವರ್ತಿಸುತ್ತಿದ್ದಾರೆ. ಸ್ಥಳೀಯರು ಬಾಡಿಗೆ ಹಣ ಬರುತ್ತೆ ಎಂದು ಒಂದೇ ಮನೆಯಲ್ಲಿ ಹತ್ತಾರು ಮಂದಿಗೆ ಬಾಡಿಗೆಗೆ ನೀಡುತ್ತಿದ್ದಾರೆ. ಹಣದ ಆಸೆಗಾಗಿ ಈ ಕೃತ್ಯ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕದಿದ್ದರೆ, ಅಪಾಯ ಕಟ್ಟಿಟ್ಟಬುತ್ತಿ ಎನ್ನುತ್ತಿದ್ದಾರೆ. ಈ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ವಲಸಿಗರ ಐಡಿ ಕಾರ್ಡ್ ಮತ್ತು ಮನೆ ವಿಳಾಸದ ಕಾರ್ಡ್ ಪರಿಶೀಲಿಸಬೇಕು. ಪೊಲೀಸ್ ಇಲಾಖೆಯ ಬೀಟ್ ಕೂಡ ಹೆಚ್ಚಿಸಬೇಕು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಒತ್ತಾಯಿಸಿದ್ದಾರೆ.












Click it and Unblock the Notifications