Letter to Nikhil: ಚನ್ನಪಟ್ಟಣದಲ್ಲಿ ಸೋಲುಂಡ ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ! ಲೆಟರ್‌ನಲ್ಲೇನಿದೆ?
ಚಿಕ್ಕಮಗಳೂರು ನವೆಂಬರ್ 24: ಚನ್ನಪಟ್ಟಣ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೀನಾಯ ಸೋಲು ಕಂಡಿದ್ದಾರೆ. ಕಳೆದ ದಿನ ನಡೆದ ಮತ ಎಣಿಕೆಯಲ್ಲಿ ಎನ್‌ಡಿಎ ಅಭ್ಯರ್ಥಿ ಹಾಗೂ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ವಿರುದ್ಧ ಸೋತಿದ್ದಾರೆ. ಇದರಿಂದಾಗಿ ಅವರ ಆಪ್ತರು, ಸಂಬಂಧಿಕರು ಹಾಗೂ ಕಾರ್ಯಕರ್ತರಿಗೆ ಸಾಕಷ್ಟು ಬೇಸರವಾಗಿದೆ. ಈ ನಡುವೆ ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರವೊಂದು ಬಂದಿದೆ.
ಹೌದು...ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕು ಮೂಲದ ಹರ್ಷಿತ್ ಎಂಬಾತ ರಕ್ತದಲ್ಲಿ ಪತ್ರ ಬರೆದು ನಿಖಿಲ್ ಕುಮಾರಸ್ವಾಮಿಗೆ ಕಳುಹಿಸಿದ್ದಾನೆ. ಜೆಡಿಎಸ್ ಎಂದು ರಕ್ತದಲ್ಲಿ ಬರೆದ ಪತ್ರದಲ್ಲಿ 'ನೀವು ಸೋತಿರಬಹುದು ಆದರೆ ಜನರ ಮನಸ್ಸಿನಲ್ಲಿದ್ದೀರಾ. ಎಷ್ಟೊ ನಮ್ಮಂತ ನಿಷ್ಠಾವಂತ ಕಾರ್ಯಕರ್ತರಲ್ಲಿ ನಮ್ಮ ಪಕ್ಷದ ಉಸಿರಿದೆ. ಒಂದಲ್ಲ ಒಂದು ದಿನ ಒಳ್ಳೆತನ ಗೆದ್ದೆ ಗೆಲ್ಲುತ್ತೆ. ನಿಮ್ಮ ಜೊತೆ ನಾವಿದ್ದೇವೆ ಧೈರ್ಯವಾಗಿರಿ. ನನ್ನ ರಕ್ತದಲ್ಲಿ ಜೆಡಿಎಸ್ ಎಂದು ಪತ್ರ ಬರೆದಿದ್ದೇನೆ' ಎಂದು ಬರೆದಿದ್ದಾರೆ.

ಚನ್ನಪಟ್ಟಣ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ನಿನ್ನೆ ಪೂರ್ಣಗೊಂಡಿದೆ. ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಗೆದ್ದೇ ಗೆಲ್ತಾರೆ ಅಂತ ವಿಶ್ವಾಸದಲ್ಲಿ ಇದ್ದ ನೂರಾರು ಕಾರ್ಯಕರ್ತರಿಗೆ ಸಾಕಷ್ಟು ಬೇಸರವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಚನ್ನಪಟ್ಟಣದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್ ಸಿಪಿ ಯೋಗೇಶ್ವರ್ 25,515 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಯೋಗೇಶ್ವರ್ಗೆ 1,12,642 ಮತ ದೊರೆತರೆ, ಎನ್‌ಡಿಎ ಅಭ್ಯರ್ಥಿ ನಿಖಿಲ್‌ಗೆ 87,229 ಮತಗಳು ದೊರೆತಿವೆ. ಪಕ್ಷೇತರ ಅಭ್ಯರ್ಥಿಗಳಾದ ನಿಂಗರಾಜುಗೆ 2352, ಜೆ.ಟಿ.ಪ್ರಕಾಶ್‌ಗೆ 1649 ಮತಗಳು ದೊರೆತಿವೆ.
ರಾಜ್ಯದ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆದರೂ, ಚನ್ನಪಟ್ಟಣದಲ್ಲಿ ಈ ಬಾರಿ ಜಿದ್ದಾಜಿದ್ದಿ ಜೋರಾಗಿತ್ತು. 2018ರಲ್ಲಿ ಲೋಕಸಭೆ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಮಂಡ್ಯದಲ್ಲಿ ಸೋಲು ಅನುಭವಿಸಿದ್ದರು. 2023ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರದಲ್ಲೂ ನಿಖಿಲ್ ಸೋಲು ಕಂಡರು. ಹೀಗೆ ಎರಡು ಸೋಲು ಕಂಡಿದ್ದ ಜೆಡಿಎಸ್ನ ನಿಖಿಲ್ ಕುಮಾರಸ್ವಾಮಿ ಈ ಬಾರಿ ಚನ್ನಪಟ್ಟಣದಲ್ಲಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿಸಲಾಗಿತ್ತು. ಅತ್ತ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿರುವ ಸಿಪಿ ಯೋಗೇಶ್ವರ್ಗೆ ಕೂಡಾ ಈ ಚುನಾವಣೆ ಅಗ್ನಿ ಪರೀಕ್ಷೆಯಾಗಿತ್ತು. ನಿಖಿಲ್, ಯೋಗೇಶ್ವರ್ ಅಭ್ಯರ್ಥಿಯಾದರೂ, ಇದು ಹೆಚ್‌ಡಿ ಕುಮಾರಸ್ವಾಮಿ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡುವಿನ ಯುದ್ಧ ಆಗಿದ್ದು ಸುಳ್ಳಲ್ಲ.

ಈ ಯುದ್ಧದಲ್ಲಿ ಕೊನೆಗೂ ಡಿಕೆ ಬ್ರದರ್ಸ್ ಗೆಲುವು ಸಾಧಿಸಿದ್ದಾರೆ. ಹೀಗಾಗಿ ಮೂರನೇ ಬಾರಿಯೂ ನಿಖಿಲ್ ಸೋಲನ್ನು ಅನುಭವಿಸಿರುವುದು ಕಾರ್ಯಕರ್ತರಿಗೆ ಸಾಕಷ್ಟು ಬೇಸರ ತಂದಿದೆ. ಮತದಾನದ ಬಳಿಕ ಸಿಪಿಯೋಗೇಶ್ವರ್ ಸುದ್ದಿಗೋಷ್ಠಿ ನಡೆಸಿ ಚನ್ನಪಟ್ಟಣದಲ್ಲಿ ಗೆಲುವಿನ ಸಂಶಯ ವ್ಯಕ್ತಪಡಿಸಿದ್ದರು. ಇದರಿಂದಾಗಿ ಚನ್ನಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತರು ನಿಖಿಲ್ ಗೆಲುವು ಸಾಧಿಸಿದಷ್ಟೇ ಸಂಭ್ರಮಿಸಿದ್ದರು. ಆದರೆ ಫಲಿತಾಂಶ ಬೇರೆಯದ್ದೇ ಆಗಿದೆ.
ನಿಖಿಲ್ ಕುಮಾರಸ್ವಾಮಿ ಗೆದ್ದೆ ಗೆಲ್ತಾರೆ ಅಂದುಕೊಂಡಿದ್ದ ಕಾರ್ಯಕರ್ತರು ಸದ್ಯ ಸುಕ್ಕಾಪಟ್ಟೆ ಬೇಸರಗೊಂಡಿದ್ದಾರೆ. ಅಲ್ಲದೆ ಹಲವರು ನಿಖಿಲ್ ಗೆಲ್ಲುವು ವಿಶ್ವಾಸದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೆಟ್ಟಿಂಗ್ ಕಟ್ಟಿದ್ದರು. ಇದು ಕೂಡ ಕೆಲವರಿಗೆ ಭಾರೀ ಅಘಾತವನ್ನುಂಟು ಮಾಡಿದೆ. ಒಟ್ಟಿನಲ್ಲಿ ನಿಖಿಲ್ ಸೋಲು ಕಾರ್ಯಕರ್ತರಿಗೆ ಸಾಕಷ್ಟು ಬೇಸರ ತಂದಿದ್ದು ಈ ಪತ್ರದಿಂದ ತಿಳಿದು ಬರುತ್ತಿದೆ.












Click it and Unblock the Notifications