ರಾಮನಗರದಲ್ಲೇ ನನ್ನ ರಾಜಕೀಯ ಜೀವನ ಪ್ರಾರಂಭ ಹಾಗೂ ಅಂತ್ಯ- ನಿಖಿಲ್ ಕುಮಾರಸ್ವಾಮಿ
ರಾಮನಗರ, ಜನವರಿ 17: ನನ್ನ ರಾಜಕೀಯ ಜೀವನ ಇಲ್ಲಿಂದಲೇ ಪ್ರಾರಂಭ ಹಾಗೂ ಇಲ್ಲೇ ಅಂತ್ಯ, ಯಾವುದೇ ಕಾರಣಕ್ಕೂ ಯಾರೊಬ್ಬರ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ನನ್ನ ಕೊನೆ ಉಸಿರು ಇರುವ ತನಕ ನಿಮ್ಮ ಜೊತೆಗೆ ನಿಲ್ಲುತ್ತೇನೆ. ಈ ಕ್ಷೇತ್ರ ಬಿಟ್ಟು ನಾನೆಲ್ಲಿಯೂ ಹೋಗುವುದಿಲ್ಲ ಎಂದು ವಿಧಾನಸಭಾ ಕ್ಷೇತ್ರದ ನಿಯೋಜಿತ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಮಂಗಳವಾರ ಕಸಬಾ ಹೋಬಳಿ ಹಲವು ಹಳ್ಳಿಗಳಿಲ್ಲಿ ಪ್ರವಾಸ ನಡೆಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ನನಗೆ ತಮ್ಮಗಳ ಸೇವೆ ಮಾಡುವ ಅವಕಾಶ ಮಾಡಿಕೊಡುತ್ತೀರಿ ಎನ್ನುವ ಅಚಲ ವಿಶ್ವಾಸವಿದೆ. ಕ್ಷೇತ್ರದಲ್ಲಿ ನಡೆದ ಪಂಚರತ್ನ ಯಾತ್ರೆ ವೇಳೆ ನನ್ನ ಅಭ್ಯರ್ಥಿಯಾಗಿ ನಮ್ಮ ತಾಯಿ ಭಾವನಾತ್ಮಕವಾಗಿ ಘೋಷಣೆ ಮಾಡಿದರು ಎಂದರು.
ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಕ್ಷೇತ್ರ ಯುವ ಸಮುದಾಯ, ಮಹಿಳೆಯರು, ಕ್ಷೇತ್ರದ ಮತದಾರರ ಅಪೇಕ್ಷೆಯಂತೆ ನನ್ನ ಹೆಸರು ಘೋಷಣೆ ಮಾಡಿದ್ದಾರೆ. ಯುವಕನಾಗಿ ನನ್ನದೇ ಕಾರ್ಯಕ್ರಮಗಳನ್ನು ಕ್ಷೇತ್ರಕ್ಕೆ ನೀಡುತ್ತೇನೆ. ರಾಮನಗರ ಕ್ಷೇತ್ರಕ್ಕೆ ನನ್ನದೇ ಆದ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವ ನಿರ್ಧಾರ ಮಾಡಿದ್ದೇನೆ. ನೀವುಗಳು ಕೊಟ್ಟ ಅವಕಾಶವನ್ನು ನಾವು ದುರುಪಯೋಗ ಮಾಡಿಕೊಳ್ಳುವುದಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಕಾರ್ಯಕರ್ತರಿಗೆ ಭರವಸೆ ನೀಡಿದರು.

ಜೆಡಿಎಸ್‌ನಲ್ಲಿ ಸಾಮಾನ್ಯ ಕಾರ್ಯಕರ್ತರ ಮಾತಿಗೆ ಬೆಲೆ ಇದೆ
ನಿಷ್ಠಾವಂತ ಕಾರ್ಯಕರ್ತರೇ ಜೆಡಿಎಸ್ ಪಕ್ಷದ ಆಸ್ತಿ, ಅಂತಹ ಪ್ರಾಮಾಣಿಕ ಕಾರ್ಯಕರ್ತರನ್ನು ಜೆಡಿಎಸ್ ಪಕ್ಷದಲ್ಲಿ ಮಾತ್ರ ಕಾಣಲು ಸಾಧ್ಯ. ಎರಡು ರಾಷ್ಟ್ರೀಯ ಪಕ್ಷಗಳಿಗೆ ಹೊಲಿಸಿದರೆ ಜೆಡಿಎಸ್‌ನಲ್ಲಿ ಮಾತ್ರ ಸಾಧ್ಯ. ಕುಮಾರಣ್ಣಅವರು ಕಾರ್ಯಕರ್ತರಿಗೆ ಬೆಲೆ ನೀಡುತ್ತಾರೆ. ಸ್ಥಳೀಯ ಕಾರ್ಯಕರ್ತರನ್ನು ಮಾಜಿ ಸಿಎಂ ಕುಮಾರಸ್ವಾಮಿ ಗೌರವಿಸುತ್ತಾರೆ. ಹೀಗಾಗಿ ನಿಷ್ಠಾವಂತ ಕಾರ್ಯಕರ್ತರು ನಮ್ಮ ಜೆಡಿಎಸ್ ಪಕ್ಷದಲ್ಲಿ ಇದ್ದಾರೆ ಎಂಬುದೇ ನಮಗೆ ಹೆಮ್ಮೆ. ರಾಜ್ಯದಲ್ಲಿರುವ ಎರಡು ರಾಷ್ಟ್ರೀಯ ಪಕ್ಷಗಳು ತಮ್ಮದೇ ಪ್ರೋಟೋಕಾಲ್ ಇಟ್ಟುಕೊಂಡಿವೆ. ವೇದಿಕೆಯಲ್ಲಿ ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ಇಲ್ಲ ಇಂತಹವರೇ ಇರಬೇಕು ಎಂದು ನಿಯಮ ಹಾಕುತ್ತಾರೆ. ಆದರೆ ಜೆಡಿಎಸ್‌ನಲ್ಲಿ ಇಂತಹ ಸಂಸ್ಕೃತಿ ಇಲ್ಲ, ಸಾಮಾನ್ಯ ಕಾರ್ಯಕರ್ತರ ಮಾತಿಗೆ ಬೆಲೆ ಇದೆ. ಹಾಗಾಗಿ ಸ್ಥಳೀಯ ಮಟ್ಟದ ಸಮಸ್ಯೆ ಗ್ರಾಮ ಸಂದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ ಎಂದರು.
ಸ್ಥಳೀಯವಾಗಿ ಇರುವ ಸಮಸ್ಯೆಗಳು, ಹಿಂದೆ ಕುಮಾರಣ್ಣ ಮಾಡಿರುವ ಅಭಿವೃದ್ಧಿ, ಕಳೆದ ನಾಲ್ಕುವರೆ ವರ್ಷಗಳಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಜನರಿಗೆ ತಿಳಿಸುವ ಮೂಲಕ ಅರಿವು ಮೂಡಿಸಲು ಕ್ಷೇತ್ರದ ಪ್ರತಿ ಗ್ರಾಮ ಸಂದರ್ಶನ ಹಮ್ಮಿಕೊಂಡಿದ್ದೇನೆ

ರಾಮನಗರ ಭೂಮಿಯಲ್ಲಿ ಒಂದು ಶಕ್ತಿ ಇದೆ
ರಾಮನಗರ ಕ್ಷೇತ್ರ ನಮ್ಮ ಕುಟುಂಬದ ರಾಜಕೀಯ ಕರ್ಮಭೂಮಿ, ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹುಟ್ಟಿದ್ದು ಹಾಸನ ಜಿಲ್ಲೆಯಾದರೂ ರಾಮನಗರ ನಮ್ಮ ಕರ್ಮಭೂಮಿ 1994 ರಲ್ಲಿ ದೇವೇಗೌಡರನ್ನು ಇಲ್ಲಿಂದ ಸ್ಪರ್ಧೆ ಮಾಡುವಂತೆ ಕುಮಾರಣ್ಣ ಒತ್ತಡ ಹಾಕುತ್ತಾರೆ. ರಾಮನಗರದ ಜನ ನಿಮ್ಮ ಕೈ ಹಿಡಿಯುತ್ತಾರೆ ಎಂದು ದೃಢವಾದ ನಿರ್ಧಾರವನ್ನು ಕುಮಾರಣ್ಣ ಮಾಡುತ್ತಾರೆ. ಆ ಚುನಾವಣೆಯಲ್ಲಿ ಮಾಜಿ ಪ್ರಧಾನಿಗಳಾ ದೇವೇಗೌಡರು 9,500 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಅಂದಿನಿಂದಲೂ ಜಿಲ್ಲೆಯ ಜನರು ನಮ್ಮ ಕುಟುಂಬದ ಕೈಹಿಡಿದಿದ್ದಾರೆ.
ರಾಮನಗರ ಭೂಮಿಯಲ್ಲಿ ಒಂದು ಶಕ್ತಿ ಇದೆ. ಮಾಜಿ ಪ್ರಧಾನಿ ದೇವೇಗೌಡರು ಇಲ್ಲಿಂದ ಆಯ್ಕೆಯಾಗಿ ನಂತರ ಪ್ರಧಾನಿ ಹುದ್ದೆ ಅಲಂಕರಿಸಿದರು. ಎರಡು ಬಾರಿ ಹೆಚ್.ಡಿ.ಕುಮಾರಸ್ವಾಮಿ ಇಲ್ಲಿಂದಲೇ ಆಯ್ಕೆಯಾಗಿ ಸಿಎಂ ಆಗಿದ್ದಾರೆ. ಈ ಮಣ್ಣಿನ ಗುಣವೇ ಅಂತಹದ್ದು, ನೀವುಗಳು ನಮ್ಮನ್ನು ಬೆಂಬಲಿಸಿ ಅಧಿಕಾರ ನೀಡಿದ್ದೀರಿ, ನಮ್ಮ ಕುಟುಂಬವೂ ಅಷ್ಟೇ ಎಂದು ಕ್ಷೇತ್ರದ ಜನರನ್ನು ಬಿಟ್ಟುಕೊಟ್ಟಿಲ್ಲ. ನೀವು ಕೊಟ್ಟ ಶಕ್ತಿಯನ್ನು ನಿಮಗೆ ಧಾರೆ ಎರೆದಿದ್ದೇವೆ ಎಂದು ನಿಖಿಲ್ ಕುಮಾರಸ್ವಾಮಿ ಅಭಿಮಾನ ವ್ಯಕ್ತಪಡಿಸಿದರು.

ಬಹಳಷ್ಟು ಕನಸನ್ನು ಹೊತ್ತು ರಾಮನಗರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೇನೆ
ಮಾತು ಮುಂದುವರಿಸಿದ ಅವರು, ಎಂದಿಗೂ ನಾನು ನನ್ನ ವಿರೋಧಿಗಳ ಬಗ್ಗೆ ಚರ್ಚೆ ಮಾಡವ ಸಣ್ಣತನದ ರಾಜಕೀಯ ಮಾಡುವುದಿಲ್ಲ. ಮಂಡ್ಯ ಚುನಾವಣೆಯಲ್ಲೂ ವಿರೋಧಿಗಳ ಬಗ್ಗೆ ಚರ್ಚೆ ಮಾಡಲಿಲ್ಲ. ಇಲ್ಲಿಯೂ ಅಷ್ಟೇ ಈ ಬಗ್ಗೆ ಚರ್ಚೆ ನಡೆಸಲು ಹೋಗಲ್ಲ. ನಾನೊಬ್ಬ ಯುವಕನಾಗಿ ನನ್ನ ಕನಸಿನ ರಾಮನಗರ ಯಾವ ರೀತಿ ಕಟ್ಟಬೇಕು, ಯಾವ ರೀತಿ ಯುವ ಸಮುದಾಯಕ್ಕೆ ಉದ್ಯೋಗ ಸೃಷ್ಟಿ ಮಾಡಬೇಕು ಯುವ ಸಮೂಹದ ಶಿಕ್ಷಣಕ್ಕೆ ಯಾವ ರೀತಿ ಕಾರ್ಯಕ್ರಮ ನೀಡಬೇಕು ಎಂಬುದನ್ನು ಗಮನದಲ್ಲಿರಿಸಿಕೊಂಡು ಕಾರ್ಯಕ್ರಮ ನೀಡುತ್ತೇನೆ ಸ್ವಾಭಿಮಾನದಿಂದ ಈ ಕ್ಷೇತ್ರದ ಜನರು ಬದುಕಬೇಕು ಎನ್ನುವ ಬಹಳಷ್ಟು ಕನಸನ್ನು ಹೊತ್ತು ರಾಮನಗರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೇನೆ ಎಂದು ಮತದಾರರಿಗೆ ತಿಳಿಸಿದರು.

ನಿಮ್ಮ ನಿರೀಕ್ಷೆಗೂ ಮೀರಿ ಪ್ರಾಮಾಣಿಕವಾಗಿ ದುಡಿಯುತ್ತೇನೆ
ಇನ್ನು ಮುಂದಿನ 5 ವರ್ಷಗಳಲ್ಲಿ ಏನು ಮಾಡಬೇಕೆಂದು ಅರಿತಿದ್ದೇನೆ. ಯುವಕನಾಗಿ ನನ್ನದೇ ಆದ ಕಾರ್ಯಕ್ರಮ ನೀಡುತ್ತೇನೆ. ದೇವೇಗೌಡರು, ಕುಮಾರಣ್ಣ ಹೆಸರಲ್ಲಿ ಮತ ನೀಡುವುದು ಒಂದು ಭಾಗವಾದರೆ, ಇನ್ನೊಂದು ಒಬ್ಬ ಯುವಕನಿಗೆ, ಯುವಕ ಇಟ್ಟುಕೊಂಡ ಕನಸಿಗೆ ನೀವುಗಳು ನನ್ನ ಜೊತೆ ನಿಲ್ಲುತ್ತೀರಿ ಎಂಬ ಆತ್ಮವಿಶ್ವಾಸ ಇಟ್ಟುಕೊಂಡು ನಿಮ್ಮ ಎದುರು ನಿಂತುಕೊಂಡಿದ್ದೇನೆ. ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಸಿಎಂ ಹೆಚ್‌ಡಿಕೆ, ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರಂತೆಯೇ ನಾನು ಕೆಲಸ ಮಾಡಬೇಕೆಂಬ ನಿರೀಕ್ಷೆ ನಿಮ್ಮಲ್ಲಿದೆ. ನಿಮ್ಮ ನಿರೀಕ್ಷೆಗೂ ಮೀರಿ ಪ್ರಾಮಾಣಿಕವಾಗಿ ದುಡಿಯುತ್ತೇನೆ. ನೀವು ನನಗೆ ಶಕ್ತಿ ನೀಡುತ್ತಿರಿ ಎಂಬ ನಂಬಿಕೆಯಿದೆ. ನಮ್ಮ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.












Click it and Unblock the Notifications