channapatna by election: ಗೆಲುವಿಗೂ ಮುನ್ನವೇ 'MLA ನಿಖಿಲ್' ನಾಮಫಲಕ ರೆಡಿ!
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಫಲಿತಾಂಶ ನಾಳೆ ಹೊರಬೀಳಲಿದೆ. ಚುನಾವಣೋತ್ತರ ಸಮೀಕ್ಷೆಗಳು ಈ ಬಾರಿ ಚನ್ನಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲುವು ಸಾಧಿಸಲಿದ್ದಾರೆ ಎಂದು ಭವಿಷ್ಯ ನುಡಿದಿವೆ. ಗೆಲುವು ಖಚಿತವಾಗುವ ಮುನ್ನವೇ MLA ನಿಖಿಲ್ ಎನ್ನುವ ಫಲಕ ಸಿದ್ಧವಾಗಿರುವುದು ಗಮನ ಸೆಳೆದಿದೆ.
ಚನ್ನಪಟ್ಟಣದಲ್ಲಿ ಈ ಬಾರಿ ನಿಖಿಲ್ ಕುಮಾರಸ್ವಾಮಿ ಅವರೇ ಬಹುತೇಕ ಗೆಲ್ಲುವ ಸಾಧ್ಯತೆಗಳಿವೆ ಎಂದು ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಸೆಲೆಬ್ರೇಷನ್‌ಗೆ ಮುಂದಾಗಿದ್ದಾರೆ. ಇನ್ನು ನಾಳೆ ಎಲ್ಲೆಡೆ ನಿಖಿಲ್ ಅವರ ಫೋಟೋಗಳು ರಾರಾಜಿಸಲು ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇಲ್ಲಿವರೆಗೆ MLA ನಿಖಿಲ್ ಕುಮಾರಸ್ವಾಮಿ ಎನ್ನುವ ಫಲಕ ಕೂಡ ರೆಡಿ ಮಾಡಿದ್ದಾರೆ ಎನ್ನಲಾಗಿದೆ. ನಿಖಿಲ್ ಕುಮಾರಸ್ವಾಮಿ (ಶಾಸಕರು, ಚನ್ನಪಟ್ಟಣ) ಎನ್ನುವ ನಾಮಫಲಕ ಸಿದ್ಧಪಡಿಸಿದ್ದಾರಂತೆ. ನಿಖಿಲ್ ಬೆಂಬಲಿಗರು ತಮ್ಮ ನಾಯಕ ಚನ್ನಪಟ್ಟಣದಲ್ಲಿ ಗೆದ್ದಾಯ್ತು ಎನ್ನುವ ವಿಶ್ವಾಸದಲ್ಲಿ ಶಾಸಕರ ಕಚೇರಿಗೆ ನಾಮಫಲಕವನ್ನು ರೆಡಿ ಮಾಡಿಸಿದ್ದಾರೆ.
ಶ್ರೀಯುತ ನಿಖಿಲ್ ಕುಮಾರಸ್ವಾಮಿ (ಶಾಸಕರು, ಚನ್ನಪಟ್ಟಣ) ಎನ್ನುವ ನಾಮಫಲಕವನ್ನು ಶಾಸಕರ ಕಚೇರಿಯ ಟೇಬಲ್ ಮೇಲೆ ಇಡಲು ಈಗಲೇ ಸಿದ್ಧಪಡಿಸಲಾಗಿದ್ದು, ಫೋಟೋ ವೈರಲ್ ಆಗಿದೆ. ಇನ್ನು ಕುಮಾರಸ್ವಾಮಿ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರಿಂದ ಅವರು ಶಾಸಕರಾಗಿದ್ದ ಚನ್ನಪಟ್ಟಣ ಕ್ಷೇತ್ರ ಖಾಲಿಯಾಗಿತ್ತು.
ಬಳಿಕ ಬೈ ಎಲೆಕ್ಷನ್ ಘೋಷಣೆಯಾಗಿ ತಂದೆಯ ಶಾಸಕ ಸ್ಥಾನಕ್ಕೆ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲಾಗಿದೆ. ಕಳೆದ ಬಾರಿ ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಸತತ ಸೋಲಿನ ಬಳಿಕ ಈ ವಿಧಾನಸಭೆ ಚುನಾವಣೆಯಲ್ಲಿ ಬಹುತೇಕ ಗೆಲುವು ಸಾಧಿಸುವುದು ಪಕ್ಕಾ ಎಂದೇ ಹೇಳಲಾಗುತ್ತಿದೆ.

ಕಾಂಗ್ರೆಸ್ ಗೆಲ್ಲುತ್ತೆ ಎಂದ ಡಿಸಿಎಂ
ನಾಳಿನ ಬೈಎಲೆಕ್ಷನ್ ಫಲಿತಾಂಶದ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಚುನಾವಣೋತ್ತರ ಸಮೀಕ್ಷೆಗಳೆಲ್ಲ ಸುಳ್ಳಾಗಲಿದೆ, ಚನ್ನಪಟ್ಟಣ ಸೇರಿ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದಿದ್ದಾರೆ.
ಎಕ್ಸಿಟ್ ಪೋಲ್ ಫಲಿತಾಂಶಗಳೆಲ್ಲವೂ ತಲೆಕೆಳಗಾಗುತ್ತೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಗೆಲ್ಲುತ್ತಾರೆ ಎಂದಿದ್ದಾರೆ. ನಾಳೆ ಬೈಎಲೆಕ್ಷನ್ ಫಲಿತಾಂಶ ಪ್ರಕಟವಾಗಲಿದೆ. ಮಹಾರಾಷ್ಟ್ರದಲ್ಲೂ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತೆ. ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರು ಬಹುಮತ ಪಡೆದು ಸರ್ಕಾರ ರಚನೆ ಮಾಡುವುದಾಗಿ ಹೇಳಿದ್ದಾರೆ ಎಂದು ಡಿಕೆಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತೆರವಾದ ಸ್ಥಾನಕ್ಕೆ ನಡೆದ ಚುನಾವಣೆ ಆಗಿರುವುದರಿಂದ ಈಗ ಗೆದ್ದರೂ ಶಾಸಕರಿಗೆ ಸಿಗಲಿರುವುದು ಕೇವಲ ಮೂರುವರೆ ವರ್ಷಗಳ ಅಧಿಕಾರ ಮಾತ್ರ. ಜೆಡಿಎಸ್‌ನ ನಿಖಿಲ್ ಕುಮಾರಸ್ವಾಮಿ ಮತ್ತು ಕಾಂಗ್ರೆಸ್‌ನ ಸಿ.ಪಿ.ಯೋಗೇಶ್ವರ್ ನಡುವೆ ನೇರ ಹಣಾಹಣಿಯಿದ್ದರೂ, ಕಾಂಗ್ರೆಸ್ ನಾಯಕರ ಹೇಳಿಕೆಗಳು ಹಿನ್ನಡೆಗೆ ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ. ಇನ್ನು ಇತರೆ 21 ಪಕ್ಷೇತರರು ಸಹ ಅಖಾಡದಲ್ಲಿದ್ದು, ನಾಳೆ ಭವಿಷ್ಯ ನಿರ್ಧಾರವಾಗಲಿದೆ.

ಈ ಬಾರಿ ಗೆಲ್ಲೋದು ನಾವೇ ಎನ್ನುವ ವಿಶ್ವಾಸದಲ್ಲಿರುವ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಈಗಾಗಲೇ ಸಂಭ್ರಮಾಚರಣೆಗೆ ಸಜ್ಜಾಗಿದ್ದಾರೆ. ನಾಳೆಗಾಗಿ ಭಾರೀ ಪ್ರಮಾಣದ ಪಟಾಕಿ ಖರೀದಿಸಿದ್ದಾರೆ. ನಾಯಕರಿಗೆ ಹಾಕಲು ದೊಡ್ಡ ಹಾರಗಳಿಗೆ ಆರ್ಡರ್ ಕೂಡ ಕೊಟ್ಟಿದ್ದಾರೆ. ನೂತನ ಶಾಸಕರನ್ನು ವೆಲ್‌ಕಮ್ ಮಾಡುವ ಹಾಗೂ ಅಭಿನಂದಿಸುವ ಫ್ಲೆಕ್ಸ್‌ಗಳು ಕೂಡ ತಯಾರಾಗುತ್ತಿವೆ ಎನ್ನಲಾಗಿದೆ.












Click it and Unblock the Notifications