ಚುನಾವಣಾ ಆಯೋಗ ಕುಮಾರಸ್ವಾಮಿಯನ್ನು 6 ವರ್ಷ ಅಮಾನತು ಮಾಡಬೇಕು-ಶಾಸಕ ಹೆಚ್.ಸಿ.ಬಾಲಕೃಷ್ಣ
ರಾಮನಗರ, ಮೇ 29: ಚುನಾವಣೆಯಲ್ಲಿ ನಮ್ಮ ಹೆಸರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್‌ಡಿ.ಕುಮಾರಸ್ವಾಮಿ ಮತದಾರರಿಗೆ ಗಿಫ್ಟ್ ಕಾರ್ಡ್ ಹಂಚಿಕೆ ಮಾಡಿರಬೇಕು ನಾನು ಯಾವುದೇ ಗಿಫ್ಟ್ ಕಾರ್ಡ್ ಹಂಚಿಕೆ ಮಾಡಿಲ್ಲ ಎಂದು ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿದರು.
ಚುನಾವಣೆಯಲ್ಲಿ ಮತದಾರರಿಗೆ ಗಿಫ್ಟ್ ಕಾರ್ಡ್ ಹಂಚಿದ್ದೇವೆ ಅದು ನಮ್ಮ ಚುನಾವಣಾ ತಂತ್ರಗಾರಿಕೆ ಎಂದು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಹೇಳಿಕೆ ನೀಡಿದರೆ, ಅವರದೇ ಪಕ್ಷದ ಶಾಸಕ ಹೆಚ್.ಸಿ.ಬಾಲಕೃಷ್ಣ ಗಿಫ್ಟ್ ಕಾರ್ಡ್ ವಿಚಾರದಲ್ಲಿ ಉಲ್ಟಾ ಹೊಡೆದಿದ್ದಾರೆ.

ರಾಮನಗರ ಮತ್ತು ಮಾಗಡಿಯಲ್ಲಿ ಚುನಾವಣೆಯ ಬೆಳಿಗ್ಗೆ ಕಾಂಗ್ರೆಸ್ ಮುಖಂಡರು ಮತದಾರರಿಗೆ ಗಿಫ್ಟ್ ಕಾರ್ಡ್ ಹಂಚಿಕೆ ಮಾಡಿದ ಕಾರಣ ಜೆಡಿಎಸ್ ಅಭ್ಯರ್ಥಿಗಳಿಗೆ ಸೋಲಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ಅವರು, ನಾನು ಯಾವುದೇ ಗಿಫ್ಟ್ ಕಾರ್ಡ್ ಹಂಚಿಲ್ಲ, ಗಿಫ್ಟ್ ಕಾರ್ಡ್‌ಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ತಿರುಗೇಟು ನೀಡಿದರು.
ನಮ್ಮ ಹೆಸರು ಕೆಡಿಸಲು ನಮ್ಮ ವಿರೋಧಿಗಳೇ ಇದನ್ನು ಮಾಡಿರಬಹುದು. ಅಥವಾ ಆರೋಪ ಮಾಡುತ್ತಿರುವ ಕುಮಾರಸ್ವಾಮಿ ಅವರೇ ಇದನ್ನ ಮಾಡಿಸಿರಬಹುದು. ಅದು ಪ್ರಚಾರದ ಕಾರ್ಡ್ ಅಷ್ಟೇ. ಗಿಫ್ಟ್ ಕಾರ್ಡ್ ಬಗ್ಗೆ ನನಗೆ ಗೊತ್ತಿಲ್ಲ. ಯಾರು ಹಂಚಿದ್ದಾರೋ ಅವರನ್ನು ಕೇಳಿ ಎಂದು ಮಾಗಡಿ ಕ್ಷೇತ್ರದ ಶಾಸಕ ಹೆಚ್.ಸಿ. ಬಾಲಕೃಷ್ಣ ತಮ್ಮ ಮೇಲಿನ ಆರೋಪ ಸುಳ್ಳು ಎಂದರು.
ಮಾತು ಮುಂದುವರೆಸಿದ ಅವರು, ಮತದಾರರು ಮತದಾನ ಕೇಂದ್ರ ಒಳಗೆ ಪಾಂಪ್ಲೇಟ್ ತೆಗೆದುಕೊಂಡು ಹೋಗಲು ಆಗುವುದಿಲ್ಲ ಹಾಗಾಗಿ ಅವರಿಗೆ ತಿಳಿಯಲಿ ಎಂದು ನಮ್ಮ ಫೋಟೋ ಹಾಗೂ ಪಕ್ಷದ ಗುರುತು ಇರುವ ಕಾರ್ಡ್‌ಗಳನ್ನು ವಿತರಣೆ ಮಾಡಿದ್ದೇವೆ. ಅದು ಯಾವುದೇ ಗಿಫ್ಟ್ ಕಾರ್ಡ್ ಅಲ್ಲ ಎಂದರು.

ಕುಮಾರಸ್ವಾಮಿ ಅವರನ್ನು 6 ವರ್ಷ ಅಮಾನತು ಮಾಡಬೇಕು
ಇನ್ನು ಕಾಂಗ್ರಸ್ ಗಿಫ್ಟ್ ಕಾರ್ಡ್ ಆರೋಪ ಮಾಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಹರಿಹಾಯ್ದ ಶಾಸಕ ಹೆಚ್.ಸಿ.ಬಾಲಕೃಷ್ಣ, ಕುಮಾರಸ್ವಾಮಿ ಅವರು ಚನ್ನಪಟ್ಟಣದಲ್ಲಿ ಮತದಾರರಿಗೆ ಹಣ ಹಂಚಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ. ಹಾಗಾಗಿ ಚುನಾವಣಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಂಡು 6 ವರ್ಷ ಚುನಾವಣೆಗೆ ಸ್ಪರ್ಧೆ ಮಾಡದಂತೆ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ನಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ಆದರೆ ಬೇರೆಯವ ತಟ್ಟೆಯ ನೊಣದ ಬಗ್ಗೆ ಮಾತನಾಡುತ್ತಾರೆ. ಈ ಬಗ್ಗೆ ನಾವು ಯಾರಿಗೂ ದೂರು ನೀಡುವುದಿಲ್ಲ. ನಾವು ಅವರ ಮಟ್ಟಕ್ಕೆ ಇಳಿಯುವುದಿಲ್ಲ. ಚುನಾವಣೆ ವ್ಯವಸ್ಥೆ ಹದಗೆಟ್ಟು ಹೋಗಿದೆ. ನಾನು ಚುನಾವಣೆಯಲ್ಲಿ ಹಣ ಹಂಚಿ ಚುನಾವಣೆ ನಡೆಸಿದ್ದೇನೆ ಎಂದು ಅವರೇ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದಾರೆ. ಕಾನೂನಿನ ದೃಷ್ಟಿಯಲ್ಲಿ ಅದು ಅಪರಾಧವಲ್ಲವೇ ಎಂದು ಹೆಚ್.ಸಿ.ಬಾಲಕೃಷ್ಣ ಪ್ರಶ್ನಿಸಿದರು.












Click it and Unblock the Notifications