ಮಾಗಡಿ; ವೃದ್ದೆ ಹೊಟ್ಟೆಯಲ್ಲಿತ್ತು 9.4 ಕೆಜಿ ಗಾತ್ರದ ಗೆಡ್ಡೆ
ರಾಮನಗರ, ಫೆಬ್ರವರಿ 06; ಸುಮಾರು ಎರಡು ವರ್ಷಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವೃದ್ಧೆಗೆ ಮಾಗಡಿ ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಿದರು. ಹೊಟ್ಟೆಯಿಂದ 9.4 ಕೆಜಿ ತೂಕದ ಬಾರಿ ಗಾತ್ರದ ಗೆಡ್ಡೆಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ತೂಬಿನಕೆರೆ ಗ್ರಾಮದ 75 ವರ್ಷದ ವೃದ್ಧೆ ಪುಟ್ಟಮ್ಮ ಹೊಟ್ಟೆಯಲ್ಲಿದ್ದ 9.4 ಕೆಜಿ ತೂಕದ ಗೆಡ್ಡೆಯನ್ನು ಶಸ್ತ್ರ ಚಿಕಿತ್ಸೆ ಮೂಲಕ ಮಾಗಡಿ ಪಟ್ಟಣದ ಮೈತ್ರಿ ಆಸ್ಪತ್ರೆಯಲ್ಲಿ ಡಾ. ಉಪಾಧ್ಯಾಯ ಮಾರ್ಗದರ್ಶನದಲ್ಲಿ ವೈದ್ಯರ ತಂಡ ಹೊರತೆಗೆದಿದೆ.
ವೃದ್ಧೆ ಪುಟ್ಟಮ್ಮ ಕಳೆದ 2 ವರ್ಷಗಳಿಂದಲೂ ಹೊಟ್ಟೆನೋವಿನಿಂದ ಬಳಲುತ್ತಿದ್ದರು. 6 ತಿಂಗಳಿನಿಂದ ಹೊಟ್ಟೆ ನೋವು ತೀವ್ರವಾದ ಹಿನ್ನಲೆಯಲ್ಲಿ ವೈದ್ಯರ ಬಳಿ ಪರೀಕ್ಷೆಗೆ ಆಗಮಿಸಿದ್ದರು. ಆಗ ಅಂಡಾಶಯದಲ್ಲಿ ಗೆಡ್ಡೆ ಬೆಳೆದಿರುವುದು ಪತ್ತೆಯಾಗಿದೆ.

ಕಳೆದ ಒಂದು ತಿಂಗಳಿನಿಂದ ವೈದ್ಯರಲ್ಲಿ ಚಿಕಿತ್ಸೆ ಪಡೆದರು ಹೊಟ್ಟೆನೋವು ಕಡಿಮೆಯಾಗದ ಕಾರಣ ಶಸ್ತ್ರಚಿಕಿತ್ಸೆ ಮಾಡುವ ನಿರ್ಧಾರ ತೆಗೆದುಕೊಂಡ ವೈದ್ಯರ ತಂಡ ಡಾ. ಉಪಾಧ್ಯಾಯರ ನೇತೃತ್ವದಲ್ಲಿ ಗೆಡ್ಡೆ ಹೊರತೆಗೆದಿದೆ.
ಶಸ್ತ್ರ ಚಿಕಿತ್ಸೆಯ ಬಳಿಕ ಗೆಡ್ಡೆಯ ಗಾತ್ರ ಕಂಡು ವೈದ್ಯರ ತಂಡವು ಆಶ್ಚರ್ಯಗೊಂಡಿದೆ.
ವೈದ್ಯರು ನಡೆಸಿದ ಶಸ್ತ್ರಚಿಕಿತ್ಸೆಯಲ್ಲಿ ವೃದ್ದೆ ಪುಟ್ಟಮ್ಮನವರ 3 ಸಮಸ್ಯೆಗಳನ್ನು ವೈದ್ಯರು ಬಗೆಹರಿಸಿದ್ದಾರೆ. ಪಿತ್ತ ಕೋಶದಲ್ಲಿ ಗೆಡ್ಡೆ, ಗರ್ಭಕೋಶ ಜಾರಿದ್ದು ಜೊತೆಗೆ ಪಿತ್ತಕೋಶದಲ್ಲಿ ಕಲ್ಲು ಮೂರು ಸಮಸ್ಯೆಗಳನ್ನು ವೈದ್ಯರು ಶಸ್ತ್ರ ಚಿಕಿತ್ಸೆ ಮೂಲಕ ಪರಿಹರಿಸಿದ್ದಾರೆ.
ಭಾರಿ ಗಾತ್ರದ ಈ ಗೆಡ್ಡೆಯನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುತ್ತದೆ. ಈ ಶಸ್ತ್ರ ಚಿಕಿತ್ಸೆಯಲ್ಲಿ ಕಿದ್ವಾಯಿ ಆಸ್ಪತ್ರೆಯ ಡಾ. ಪ್ರಕಾಶ್, ಡಾ. ಉಪಾಧ್ಯಾಯ, ಡಾ. ಶರಣ್, ಡಾ. ಮನೋಜ್ ಇತರರು ಪಾಲ್ಗೊಂಡಿದ್ದರು. ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರಿಗೆ ಪುಟ್ಟಮ್ಮ ಸಂಬಂಧಿಕದರು ಧನ್ಯವಾದ ತಿಳಿಸಿದರು.
ವೈಧ್ಯರ ಪ್ರತಿಕ್ರಿಯೆ; ಶಸ್ತ್ರಚಿಕಿತ್ಸೆಯ ನೇತೃತ್ವ ವಹಿಸಿದ್ದ ಡಾ. ಉಪಾಧ್ಯಾಯ ಮಾತನಾಡಿ, "ನನ್ನ ವೃತ್ತಿ ಜೀವನದಲ್ಲಿ 9.4 ಕೆಜಿ ತೂಕದ ಗೆಡ್ಡೆ ಹೊರ ತೆಗೆದಿರುವುದು ಇದೇ ಮೊದಲು, ಶಸ್ತ್ರಚಿಕಿತ್ಸೆ ಯಶಸ್ವಿಯಾಗಿರುವುದು ಸಂತೋಷ ತಂದಿದೆ" ಎಂದು ಹೇಳಿದ್ದಾರೆ.
"ವೃದ್ದೆಗೆ ಬಿಪಿ, ಶುಗರ್ ಸೇರಿದಂತೆ ಯಾವುದೇ ಸಮಸ್ಯೆ ಇಲ್ಲ. ವೃದ್ಧೆ ಪುಟ್ಟಮ್ಮ ಆರೋಗ್ಯವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ. ಅಂಡಾಶಯದಲ್ಲಿ ಆಗುವ ಸಣ್ಣ ಗೆಡ್ಡೆಯನ್ನು ಓವೇರಿನ್ ಸೀಸ್ಟ್ ಎನ್ನಲಾಗುತ್ತದೆ. ದಿನ ಕಳೆದಂತೆ ಜನರು ನಿರ್ಲಕ್ಷ್ಯ ಮಾಡುವ ಕಾರಣ ದೊಡ್ಡಾದಾಗುತ್ತದೆ ಅದನ್ನು ಓವೇರಿನ್ ಮಾಸ್ ಎನ್ನುತ್ತೇವೆ ಸಮಸ್ಯೆ ಕಂಡ ಪ್ರಾರಂಭದಲ್ಲೇ ಚಿಕಿತ್ಸೆ ಪಡೆದಿದ್ದರೆ ಈ ಸಮಸ್ಯೆ ಉಂಟಾಗುವುದಿಲ್ಲ" ಎಂದರು.
"ಇನ್ನೂ ವೃದ್ಧೆ ಪುಟ್ಟಮ್ಮ ಹಣಕಾಸಿನ ತೊಂದರೆಯಿಂದ ಹೊಟ್ಟೆ ನೋವನ್ನು ನಿರ್ಲಕ್ಷ್ಯ ಮಾಡಿದ್ದರು. ಅದನ್ನು ಗಮನಿಸಿ ನಾವು ಕೂಡ ಅತಿ ಕಡಿಮೆ ಖರ್ಚಿನಲ್ಲಿಯೇ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿ ಗೆಡ್ಡೆ ಹೊರತೆಗೆದು ಸಮಸ್ಯೆಯನ್ನು ಪರಿಹಾರ ಮಾಡಿದ್ದೇವೆ. ಶಸ್ತ್ರ ಚಿಕಿತ್ಸೆಯ ನಂತರ ಪುಟ್ಟಮ್ಮ ಮತ್ತು ಅವರ ಕುಟುಂಬದವರು ಸಂತೋಷಪಟ್ಟರು" ಎನ್ನುತ್ತಾರೆ ಡಾ. ಉಪಾಧ್ಯಾಯ.
ಪುರಸಭಾ ಸದಸ್ಯೆ ಪ್ರತಿಕ್ರಿಯೆ; "ಗ್ರಾಮೀಣ ಭಾಗದ ಜನರು ನಗರ ಪ್ರದೇಶಕ್ಕೆ ತೆರಳಿ ಶಸ್ತ್ರ ಚಿಕಿತ್ಸೆ ಎಂಬುದು ಮರಿಚೀಕೆಯಾಗಿದೆ. ಕೆಲವೊಮ್ಮೆ ಹಣಕಾಸಿನ ತೊಂದರೆ ಇಲ್ಲವೇ, ಜನರು ನಿರ್ಲಕ್ಷ್ಯ ತನದಿಂದ ಚಿಕಿತ್ಸೆ ತೆಗೆದುಕೊಳ್ಳಲು ಮುಂದಾಗುವುದಿಲ್ಲ. ಕಡಿಮೆ ಖರ್ಚಿನಲ್ಲಿ ಡಾ.ಉಪಾಧ್ಯಾಯ ಅವರು ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಮಾದರಿಯಾಗಿದ್ದಾರೆ" ಎಂದು ಪುರಸಭಾ ಸದಸ್ಯೆ ಶಿವರುದ್ರಮ್ಮ ವಿಜಯ್ ಕುಮಾರ್ ವೈದ್ಯರನ್ನು ಅಭಿನಂದಿಸಿದರು.












Click it and Unblock the Notifications