ಚುನಾವಣೆಗೂ ಮುನ್ನ ಒಕ್ಕಲಿಗ ಮತದ ಮೇಲೆ ದೃಷ್ಠಿ ನೆಟ್ಟರಾ ಡಿಕೆಶಿ-ಎಚ್ಡಿಕೆ?
ರಾಮನಗರ, ಜುಲೈ 21: ರಾಜ್ಯ ರಾಜಕೀಯದಲ್ಲಿ ಒಕ್ಕಲಿಗರ ಒಲೈಕೆಯ ರಾಜಕಾರಣ ಜೋರಾಗಿ ನಡೆಯುತ್ತಿದೆ. ಇದೀಗ ರಾಮನಗರ ನೆಲದಲ್ಲಿ ಒಕ್ಕಲಿಗ ಸಮುದಾಯವನ್ನು ತಮ್ಮೆಡೆಗೆ ಸೆಳೆಯುವುದರ ಮೂಲಕ ಮುಂದಿನ ಮುಖ್ಯಮಂತ್ರಿ ಕನಸಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪೈಪೋಟಿಗಿಳಿದಿರುವುದು ಭಾರೀ ಸುದ್ದಿ ಮಾಡುತ್ತಿದೆ.
ರಾಮನಗರದಲ್ಲಿನ ಒಕ್ಕಲಿಗ ಸಮುದಾಯ ಜೆಡಿಎಸ್ ಪಕ್ಷದ ಅದರಲ್ಲೂ ದೇವೇಗೌಡರು ಹಾಗೂ ಎಚ್.ಡಿ.ದೇವೇಗೌಡರ ಬೆನ್ನಿಗೆ ನಿಂತಿದ್ದಾರೆ ಎನ್ನುವುದು ಗೊತ್ತಿರುವ ವಿಚಾರವೇ. ಇದು ಇದುವರೆಗಿನ ಚುನಾವಣೆಗಳಲ್ಲಿ ಸಾಬೀತಾಗಿದೆ. ಹೀಗಾಗಿಯೇ ಜೆಡಿಎಸ್ ರಾಮನಗರದಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಸಾಧ್ಯವಾಗಿದೆ.
ಕನಕಪುರ ಹೊರತು ಪಡಿಸಿದರೆ ಇತರೆ ಕ್ಷೇತ್ರಗಳಲ್ಲಿ ಜೆಡಿಎಸ್ ಪ್ರಾಬಲ್ಯವಿದೆ. ಜತೆಗೆ ಒಕ್ಕಲಿಗ ಸಮುದಾಯ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ನಿಂತಿದೆ. ಇದು ಹೀಗೆಯೇ ಮುಂದುವರೆದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸಂಕಷ್ಟ ತಪ್ಪಿದಲ್ಲ ಎಂಬುದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೂ ಗೊತ್ತಾಗಿದೆ. ಹೀಗಾಗಿಯೇ ಅವರು ಈ ಹಿಂದೆ ಮೇಕೆದಾಟು ಪಾದಯಾತ್ರೆ ಮೂಲಕ ಒಕ್ಕಲಿಗ ಸಮುದಾಯವನ್ನು ತನ್ನೆಡೆಗೆ ಸೆಳೆಯುವುದರೊಂದಿಗೆ ತನ್ನ ಶಕ್ತಿ ಪ್ರದರ್ಶನವನ್ನು ಮಾಡಿದ್ದನ್ನು ಸ್ಮರಿಸಬಹುದು.
ಯಾವಾಗ ಡಿ.ಕೆ.ಶಿವಕುಮಾರ್ ಒಕ್ಕಲಿಗ ಸಮುದಾಯವನ್ನು ತಮ್ಮತ್ತ ಓಲೈಕೆಗೆ ಮುಂದಾಗಿದ್ದಾರೆ ಎನ್ನುವುದು ಗೊತ್ತಾಗುತ್ತಿದ್ದಂತೆಯೇ ಜೆಡಿಎಸ್ ಮತ್ತು ಬಿಜೆಪಿ ಎಚ್ಚೆತ್ತುಕೊಂಡಿದೆ. ಅದರಲ್ಲೂ ಎಚ್.ಡಿ.ಕುಮಾರಸ್ವಾಮಿ ಅವರು ನೇರವಾಗಿ ಡಿ.ಕೆ.ಶಿವಕುಮಾರ್ ಅವರಿಗೆ ಟಕ್ಕರ್ ನೀಡಲಾರಂಭಿಸಿದರು. ಈ ನಡುವೆ ನಾವಿನ್ನು ಸುಮ್ಮನೆ ಕುಳಿತರೆ ಕಷ್ಟವೆಂದರಿತ ಬಿಜೆಪಿ ನಾಯಕರು ಕೂಡ ಎಚ್ಚೆತ್ತುಕೊಂಡು ಡಾ.ಸಿ.ಎನ್.ಅಶ್ವತ್ ನಾರಾಯಣ ಅವರನ್ನು ರಾಮನಗರಕ್ಕೆ ಕಳುಹಿಸಿಕೊಟ್ಟಿತು.

ರಾಮನಗರಕ್ಕೆ ಕಾಂಗ್ರೆಸ್ ಗಾಳ
ರಾಮನಗರ ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಜೆಡಿಎಸ್ ಮತ್ತು ಕಾಂಗ್ರೆಸ್‌ಗೆ ಸೆಡ್ಡು ಹೊಡೆದು ಗೆಲುವು ಸಾಧಿಸುವುದು ಅಷ್ಟು ಸುಲಭದ ಕೆಲಸವಲ್ಲ. ಆದರೂ ಈ ಬಾರಿ ರಾಮನಗರದಲ್ಲಿ ಕನಿಷ್ಟ ಒಂದು ಕ್ಷೇತ್ರವನ್ನಾದರೂ ಗೆದ್ದೇ ಗೆಲ್ಲಬೇಕೆಂಬ ಹಠಕ್ಕೆ ಬಿಜೆಪಿ ಬಿದ್ದಿದೆ. ಆದರೆ ಜೆಡಿಎಸ್ ಈಗಾಗಲೇ ಜಿಲ್ಲೆಯಲ್ಲಿ ಪ್ರಾಬಲ್ಯ ಸಾಧಿಸಿದ್ದು, ಪಕ್ಷದ ಭದ್ರಕೋಟೆಯನ್ನಾಗಿ ಮಾಡಿಕೊಂಡಿದೆ. ಈ ಭದ್ರಕೋಟೆ ಮೇಲೆ ಕಾಂಗ್ರೆಸ್ ಅದರಲ್ಲೂ ಡಿ.ಕೆ.ಶಿವಕುಮಾರ್ ಕಣ್ಣಿಟ್ಟಿದ್ದಾರೆ.
ಈಗಾಗಲೇ ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಯಾರಾಗಬೇಕು ಎಂಬ ವಿಚಾರಗಳು ಮುನ್ನಲೆಗೆ ಬಂದಿದ್ದು, ಒಂದೆಡೆ ನಾನೇ ಮುಂದಿನ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಹೇಳುತ್ತಿದ್ದರೆ, ಇನ್ನೊಂದೆಡೆ ಡಿ.ಕೆ.ಶಿವಕುಮಾರ್ ನಾನೇ ಮುಂದಿನ ಮುಖ್ಯಮಂತ್ರಿಯಾಗುವ ಬಯಕೆಯನ್ನು ತೆರೆದಿಟ್ಟಿದ್ದು, ಅದಕ್ಕಾಗಿ ಒಕ್ಕಲಿಗ ಸಮುದಾಯದ ಓಲೈಕೆಯಲ್ಲಿ ತೊಡಗಿದ್ದಾರೆ ಎನ್ನಲಾಗುತ್ತಿದೆ. ರಾಜ್ಯದಲ್ಲಿ ಸುಮಾರು ಎಪ್ಪತ್ತು ಸ್ಥಾನಗಳಲ್ಲಿ ಒಕ್ಕಲಿಗರ ಪ್ರಭಾವವಿದೆ. ಆ ಕ್ಷೇತ್ರಗಳಲ್ಲಿ ಗೆಲುವು ಪಡೆದರೆ ತಾನು ಮುಖ್ಯಮಂತ್ರಿಯಾಗಲು ಸಹಕಾರಿಯಾಗುತ್ತದೆ ಎನ್ನುವುದು ಡಿಕೆಶಿ ಅವರ ಆಲೋಚನೆಯಾಗಿದೆ.

ರಾಮನಗರದಲ್ಲಿ ಕೈ ಅಭ್ಯರ್ಥಿಯನ್ನು ಗೆಲ್ಲಿಸಲು ಮನವಿ
ಡಿಕೆ ಶಿವಕುಮಾರ್ ತಮ್ಮ ಮನದಾಳವನ್ನು ಹಂಚಿಕೊಳ್ಳಲು ಮತ್ತು ಒಕ್ಕಲಿಗರನ್ನು ತನ್ನತ್ತ ಸೆಳೆಯಲು ರಾಮನಗರದಲ್ಲಿ ನಡೆದ ಚಾಮುಂಡೇಶ್ವರಿ ಕರಗ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯನ್ನು ಬಳಸಿಕೊಂಡಿದ್ದು, ಅಲ್ಲಿ ಮಾತನಾಡಿದ ಅವರು, ಎಚ್.ಡಿ. ದೇವೇಗೌಡರು, ಎಚ್.ಡಿ. ಕುಮಾರಸ್ವಾಮಿಯವರಿಗೆ ಮುಖ್ಯ ಮಂತ್ರಿಗಳಾಗಲು ಅವಕಾಶ ಮಾಡಿಕೊಟ್ಟಿದ್ದೀರಿ. ಜಿಲ್ಲೆಯ ಮಗನಾಗಿರುವ ನನಗೂ ಒಂದು ಅವಕಾಶ ಕೊಡಿ. ರಾಮನಗರ ವಿಧಾಸಭಾ ಕ್ಷೇತ್ರಕ್ಕೆ ಯಾರನ್ನು ಸ್ಪರ್ಧೆಗೆ ಇಳಿಸಲಿದ್ದೇವೆಯೋ ಅವರು ವಿಧಾನಸೌಧದಲ್ಲಿ ಬಂದು ಕುಳಿತುಕೊಂಡಾಗ ಮಾತ್ರ ನನಗೆ ಜಿಲ್ಲೆಯ ಗೌರವ ದೊರಕಿದಂತೆ ಆಗುತ್ತದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ರಾಜ್ಯದಲ್ಲಿ ಸೇವೆ ಮಾಡುವ ಅವಕಾಶವನ್ನು ತಾವು ಕಲ್ಪಿಸಿಕೊಡಬೇಕು. ಜಿಲ್ಲೆಯ ಮಗನಿಗೆ ಒಂದು ಅವಕಾಶ ಮಾಡಿಕೊಡಿ ಎಂದು ಕೋರಿಕೆ ಸಲ್ಲಿಸಿದ್ದಾರೆ.

ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ಎಚ್‌ಡಿಕೆ ಇಂಗಿತ
ಯಾವಾಗ ಡಿ.ಕೆ.ಶಿವಕುಮಾರ್ ಒಕ್ಕಲಿಗ ಸಮುದಾಯದ ಮುಂದೆ ಕೋರಿಕೆಯಿಟ್ಟರೋ ಎಚ್ಚೆತ್ತುಕೊಂಡ ಎಚ್.ಡಿ.ಕುಮಾರಸ್ವಾಮಿ ಅವರು ಚಾಮುಂಡೇಶ್ವರಿ ಕರಗ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯಲ್ಲಿಯೇ ಮಾತನಾಡಿ, 2023ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಐದು ವರ್ಷಗಳ ಸರಕಾರ ನಡೆಸುವ ಅಧಿಕಾರ ಕೊಡಿ, ನಿಮ್ಮ ಮನೆ ಮಗನಾಗಿ ಸೇವೆ ಮಾಡುತ್ತೇನೆಂದು ಮನವಿ ಮಾಡಿದ್ದಾರೆ.
ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ಅವರಿಗೆ ಟಕ್ಕರ್ ನೀಡುತ್ತಾ ಮುಂದಿನ ದಿನಗಳಲ್ಲಿ ಬಹಳ ಜನರು ಸಿಎಂ ಆಗಬೇಕೆಂದು ಆಸೆ ಪಟ್ಟಿದ್ದಾರೆ. ಆದರೆ ಭಗವಂತನ ಇಚ್ಛೆ ಬೇರೆಯೇ ಇದೆ. ತಾಯಿ ಚಾಮುಂಡೇಶ್ವರಿ ಮತ್ತು ಜನರ ಆಶೀರ್ವಾದದಿಂದ ರಾಜ್ಯದಲ್ಲಿ ಮತ್ತೆ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ನಿಮ್ಮ ಆಶೀರ್ವಾದ ದಿಂದ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಬರುತ್ತೇನೆಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎಚ್‌ಡಿಕೆ ಭಾವನಾತ್ಮಕ ತಂತ್ರ ಫಲಿಸುತ್ತಾ?
ನನಗೆ ರಾಜಕೀಯ ಜನ್ಮ ಕೊಟ್ಟಿರುವ ನಿಮ್ಮ ಜೊತೆ ನನ್ನ ಮನಸ್ಸಿನಲ್ಲಿರುವ ಭಾವನೆ ಹಂಚಿಕೊಳ್ಳುತ್ತಿದ್ದೇನೆ. ರೈತರು ನೆಮ್ಮದಿಯಿಂದ ಬದುಕಲು ಚಾಮುಂಡೇಶ್ವರಿ ತಾಯಿ ಕರುಣಿಸಲಿ. 2019ರ ಜುಲೈ ತಿಂಗಳಲ್ಲಿ ಕುತಂತ್ರದಿಂದ ನನ್ನನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆಯಲಾಗಿತ್ತು. ಕಳೆದ ರಾಜಕೀಯ ಸನ್ನಿವೇಶದಲ್ಲಿ ಎರಡು ಕಡೆ ಕಾರ್ಯಕರ್ತರ ಒತ್ತಡದಿಂದ ಚುನಾವಣೆಗೆ ಸ್ವರ್ಧೆ ಮಾಡಿದ್ದೇನೆ. ಸಸಿಯಾಗಿ ನೆಟ್ಟು, ರಾಜ್ಯದಲ್ಲಿ ಹೆಮ್ಮರವಾಗಿ ಬೆಳೆಸಿದ್ದೀರಿ. ನಾನು ಮಣ್ಣಲಿ ಮಣ್ಣಾಗುವುದು ಇದೇ ರಾಮನಗರ ಮಣ್ಣಿನಲ್ಲಿ. ನೀವು ಕೊಟ್ಟ ಶಕ್ತಿಯನ್ನು ಲಕ್ಷಾಂತರ ಜನರಿಗೆ ಧಾರೆ ಎರೆದಿದ್ದೇನೆ.
ನನ್ನ ರಾಮನಗರ ತಾಲೂಕಿನ ಸಂಬಂಧ ತಾಯಿ ಮಗನ ಸಂಬಂಧ. ನನ್ನ ಜೀವನದ ಸವಾಲು ಪಂಚರತ್ನ ಯೋಜನೆ. ನಾನು ಬದುಕಿರುವ ಒಂದೊಂದು ಕ್ಷಣ ಬಡವರಿಗಾಗಿ ನೀವು ಕೊಟ್ಟಿರುವ ಶಕ್ತಿಯಿಂದ ಕೆಲಸ ಮಾಡುತ್ತಿದ್ದೇನೆ ಎಂದು ಭಾವುಕರಾಗಿ ಮಾತನಾಡಿದ್ದಾರೆ.
ಒಟ್ಟಾರೆ ರಾಮನಗರದಲ್ಲಿ ಆರಂಭವಾಗಿರುವ ಒಕ್ಕಲಿಗ ಸಮುದಾಯದ ಓಲೈಕೆ ತಂತ್ರ ಮುಂದೆ ಯಾವ ಹಂತಕ್ಕೆ ಹೋಗಿ ತಲುಪುತ್ತೋ ಗೊತ್ತಿಲ್ಲ. ಆದರೆ ಸರ್ವ ಜನಾಂಗದ ತೋಟ ಮಾಡ್ತೀವಿ ಎನ್ನುವ ನಾಯಕರು ಇದೀಗ ಸಮುದಾಯಗಳ ಓಲೈಕೆಗೆ ಮುಂದಾಗಿರುವುದು ಅಚ್ಚರಿಗೆ ಕಾರಣವಾಗಿದೆ. ಇಷ್ಟಕ್ಕೂ ಯಾವುದೋ ಒಂದು ಸಮುದಾಯದ ಬಲದಿಂದ ಮುಖ್ಯಮಂತ್ರಿಯಾಗಲು ಸಾಧ್ಯನಾ ಎಂಬ ಪ್ರಶ್ನೆಗೆ ಕಾಲವೇ ಉತ್ತರ ನೀಡಬೇಕಿದೆ.












Click it and Unblock the Notifications