ರಾಮನಗರದ ಚುನಾವಣೆ : ಡಿಕೆ ಶಿವಕುಮಾರ್, ಕುಮಾರಸ್ವಾಮಿ ನಡುವಿನ ಹೋರಾಟ!
ರಾಮನಗರ, ಮೇ 09 : ರಾಮನಗರ ಜಿಲ್ಲೆಯ ಚುನಾವಣಾ ಕಣ ಈ ಬಾರಿ ಕುತೂಹಲ ಮೂಡಿಸಿದೆ. ಇಂಧನ ಸಚಿವ ಡಿ.ಕೆ.ಶಿವಕುಮಾರ್, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ನಡುವಿನ ಹೋರಾಟಕ್ಕೆ ರಾಮನಗರ ಸಾಕ್ಷಿಯಾಗಲಿದೆ. ಕುಮಾರಸ್ವಾಮಿ ಅವರು ಜಿಲ್ಲೆಯ 2 ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ, ಸಿ.ಪಿ.ಯೋಗೇಶ್ವರ, ಎಚ್.ಸಿ.ಬಾಲಕೃಷ್ಣ, ಡಿ.ಕೆ.ಶಿವಕುಮಾರ್ ಅವರು ರಾಮನಗರ ಜಿಲ್ಲೆಯಲ್ಲಿ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು. ಜಿಲ್ಲೆಯಲ್ಲಿ 67,455 ಹೊಸ ಮತದಾರರು ಸೇರ್ಪಡೆಗೊಂಡಿದ್ದಾರೆ. ಆದ್ದರಿಂದ, ಚುನಾವಣಾ ಫಲಿತಾಂಶವೂ ಬದಲಾಗುವ ನಿರೀಕ್ಷೆ ಇದೆ.
ರಾಮನಗರ ಜಿಲ್ಲೆಯಲ್ಲಿ ರಾಮನಗರ, ಕನಕಪುರ, ಚನ್ನಪಟ್ಟಣ ಮತ್ತು ಮಾಗಡಿ ವಿಧಾನಸಭಾ ಕ್ಷೇತ್ರಗಳಿವೆ. ಕನಕಪುರದಿಂದ ಡಿ.ಕೆ.ಶಿವಕುಮಾರ್, ಚನ್ನಪಟ್ಟಣದಿಂದ ಸಿ.ಪಿ.ಯೋಗೇಶ್ವರ, ರಾಮನಗರ ಮತ್ತು ಚನ್ನಪಟ್ಟಣದಿಂದ ಎಚ್.ಡಿ.ಕುಮಾರಸ್ವಾಮಿ ಅವರು ಕಣದಲ್ಲಿದ್ದಾರೆ.
ಜಿಲ್ಲೆಯ ಚುನಾವಣೆಯಲ್ಲಿ ಈ ಬಾರಿ ಪಕ್ಷಾಂತರದ ಬಗ್ಗೆ ಚರ್ಚೆ ನಡೆಯುತ್ತಿದೆ. ಇಬ್ಬರು ಹಾಲಿ ಶಾಸಕರು ಪಕ್ಷ ನಿಷ್ಠೆ ಬದಲಾವಣೆ ಮಾಡಿ, ಬೇರೆ ಪಕ್ಷ ಸೇರಿದ್ದಾರೆ. ಎಚ್.ಸಿ.ಬಾಲಕೃಷ್ಣ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಸಿ.ಪಿ.ಯೋಗೇಶ್ವರ ಅವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಎಚ್.ಡಿ.ಕುಮಾರಸ್ವಾಮಿ ಸ್ಪರ್ಧೆ
ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರದಲ್ಲಿ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸಿದ್ದಾರೆ. ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವುದು ದೇವೇಗೌಡರ ಕುಟುಂಬಕ್ಕೆ ಹೊಸತಲ್ಲ. 1985ರ ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರು ಹೊಳೆನರಸೀಪುರ ಮತ್ತು ಸಾತನೂರು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು.
1989ರ ಚುನಾವಣೆಯಲ್ಲಿ ಕನಕಪುರ ಮತ್ತು ಹೊಳೆನರಸೀಪುರ ಕ್ಷೇತ್ರದಿಂದ ಕಣಕ್ಕಿಳಿದಿದ್ದರು.
ಈ ಬಾರಿಯ ಚುನಾವಣೆಯಲ್ಲಿ ಒದೊಂದು ಕ್ಷೇತ್ರವೂ ಬಹುಮುಖ್ಯವಾದದ್ದು. ಆದ್ದರಿಂದ ಕುಮಾರಸ್ವಾಮಿ ಅವರು ತಮ್ಮ ಸ್ವ ಕ್ಷೇತ್ರ ರಾಮನಗರದ ಜೊತೆ ಚನ್ನಪಟ್ಟಣದಿಂದಲೂ ಕಣಕ್ಕಿಳಿಸಿದ್ದಾರೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಕಳೆದ ಬಾರಿ ಅನಿತಾ ಕುಮಾರಸ್ವಾಮಿ ಅವರು ಸೋಲುಕಂಡಿದ್ದರು.
ರಾಮನಗರದಲ್ಲಿ ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್‌ನ ಇಕ್ಬಾಲ್ ಹುಸೇನ್ ಎದುರಾಳಿ. ಬಿಜೆಪಿಯಿಂದ ಎಚ್.ಲೀಲಾವತಿ ಅವರು ಕಣದಲ್ಲಿದ್ದಾರೆ.

ಮಾಗಡಿ ಕ್ಷೇತ್ರದ ಚುನಾವಣಾ ಕಣ
ಒಂದು ಕಾಲದಲ್ಲಿ ಕುಮಾರಸ್ವಾಮಿ ಅವರ ಆಪ್ತ ಮಿತ್ರರಾಗಿದ್ದ ಎಚ್.ಸಿ.ಬಾಲಕೃಷ್ಣ ಅವರು ಪಕ್ಷಾಂತರ ಮಾಡಿ ಕಾಂಗ್ರೆಸ್ ಸೇರಿದ್ದಾರೆ. ಮಾಗಡಿ ಕ್ಷೇತ್ರದಿಂದ ಅವರು ಅಭ್ಯರ್ಥಿಯಾಗಿದ್ದಾರೆ. ಬಾಲಕೃಷ್ಣ ಅವರ ಬೆಂಬಲಕ್ಕೆ ಡಿ.ಕೆ.ಶಿವಕುಮಾರ್ ಅವರು ನಿಂತಿದ್ದಾರೆ. 5ನೇ ಬಾರಿ ಶಾಸಕರಾಗಿ ಆಯ್ಕೆಯಾಗುವ ವಿಶ್ವಾದಲ್ಲಿ ಬಾಲಕೃಷ್ಣ ಅವರಿದ್ದಾರೆ.
ಕಳೆದ ಬಾರಿ ಮಾಗಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎ.ಮಂಜುನಾಥ್ ಅವರು ಈ ಬಾರಿ ಜೆಡಿಎಸ್ ಅಭ್ಯರ್ಥಿ. ಮಾಗಡಿಯಲ್ಲಿ ಬಾಲಕೃಷ್ಣ ಅವರನ್ನು ಸೋಲಿಸಲೇಬೇಕು ಎಂದು ದೇವೇಗೌಡರು ಹಠ ಹಿಡಿದಿದ್ದಾರೆ.
ಬಿಜೆಪಿಯಿಂದ ಹನುಮಂತರಾಜ, ಕಾಂಗ್ರೆಸ್‌ನಿಂದ ಎಚ್.ಸಿ.ಬಾಲಕೃಷ್ಣ, ಜೆಡಿಎಸ್‌ನಿಂದ ಎ.ಮಂಜುನಾಥ್ ಕ್ಷೇತ್ರದ ಅಭ್ಯರ್ಥಿಗಳು. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಹಣಾಹಣಿ ನಡೆಯುತ್ತಿದೆ.

ಸಿ.ಪಿ.ಯೋಗೇಶ್ವರ, ಎಚ್.ಡಿ.ಕುಮಾರಸ್ವಾಮಿ
ಚನ್ನಪಟ್ಟಣ ಕ್ಷೇತ್ರದ ಕದನ ಕುತೂಹಲ ಮೂಡಿಸಿದೆ. 2008ರ ಚುನಾವಣೆಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಸಿ.ಪಿ.ಯೋಗೇಶ್ವರ ಅವರು ಉಪ ಚುನಾವಣೆಯಲ್ಲಿ ಸೋತಿದ್ದರು. ನಂತರ ಬಿಜೆಪಿಯಿಂದ ಗೆದ್ದು ಸಚಿವರೂ ಆದರು. 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದರಿಂದ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ ಗೆಲುವು ಕಂಡರು. ಈ ಪುನಃ ಬಿಜೆಪಿ ಸೇರಿದ್ದಾರೆ.
ಮಾಗಡಿ ಕ್ಷೇತ್ರದಿಂದ ಎರಡು ಬಾರಿ ಗೆದ್ದು ಶಾಸಕರಾಗಿದ್ದ ಎಚ್.ಎಂ.ರೇವಣ್ಣ ಅವರು ಚನ್ನಪಟ್ಟಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ. ಜೆಡಿಎಸ್‌ನಿಂದ ಎಚ್.ಡಿ.ಕುಮಾರಸ್ವಾಮಿ ಅವರು ಅಭ್ಯರ್ಥಿ. ಸಿ.ಪಿ.ಯೋಗೇಶ್ವರ ಅವರನ್ನು ಸೋಲಿಸಬೇಕು ಎಂದು ಡಿಕೆಶಿ ಸಹೋದರರು ಕೂಡಾ ತಂತ್ರ ರೂಪಿಸಿದ್ದಾರೆ.

ಡಿ.ಕೆ.ಶಿವಕುಮಾರ್ ಭದ್ರಕೋಟೆ
ಕನಕಪುರ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ತವರು ಕ್ಷೇತ್ರ. ಜೆಡಿಎಸ್ ಮತ್ತು ಬಿಜೆಪಿ ಪಾಲಿಗೆ ಕನಕಪುರ ಅಭೇದ್ಯ ಕೋಟೆಯಾಗಿಯೇ ಉಳಿದಿವೆ. ಡಿ.ಕೆ.ಶಿವಕುಮಾರ್ ಅವರಿಗೆ ಸೆಡ್ಡು ಹೊಡೆಯದೇ ಜೆಡಿಎಸ್ ಸಹ ಪ್ರಚಾರದಿಂದ ದೂರ ಉಳಿದಿದೆ. ರಾಮನಗರದಲ್ಲಿ ಹಲವು ಕುಮಾರಪರ್ವ ಸಮಾವೇಶಗಳು ನಡೆದಿವೆ. ಆದರೆ, ಇದುವರೆಗೂ ಕನಕಪುರದಲ್ಲಿ ಸಮಾವೇಶಗಳು ನಡೆದಿಲ್ಲ.
ಕನಕಪುರದಲ್ಲಿ ಬಿಜೆಪಿಯಿಂದ ನಂದಿನಿ ಗೌಡ, ಕಾಂಗ್ರೆಸ್‌ನಿಂದ ಡಿ.ಕೆ.ಶಿವಕುಮಾರ್, ಜೆಡಿಎಸ್‌ನಿಂದ ನಾರಾಯಣ ಗೌಡ ಅವರು ಕಣದಲ್ಲಿದ್ದಾರೆ. ಆದರೆ, ಡಿ.ಕೆ.ಶಿವಕುಮಾರ್ ಅವರಿಗೆ ಪೈಪೋಟಿ ನೀಡುವವರು ಯಾರು? ಎಂದು ಕಾದು ನೋಡಬೇಕು.











Click it and Unblock the Notifications