Karnataka elections 2023: ರಾಮನಗರದಲ್ಲಿ ಈ ಬಾರಿಯಾದ್ರೂ ಕಾಂಗ್ರೆಸ್‌ನ ಗೆಲುವಿನ ಕನಸು ನನಸಾಗುತ್ತಾ?

ರಾಮನಗರ, ಏಪ್ರಿಲ್‌, 11: ಕನಕಪುರದ ಬಂಡೆ ಎಂದು ಕರೆಯಲ್ಪಡುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕನಕಪುರಕ್ಕಷ್ಟೆ ಸೀಮಿತರಾಗಿದ್ದು, ಅದರಾಚೆಗೆ ರಾಮನಗರ ಜಿಲ್ಲೆಯ ಇತರೆ ವಿಧಾನಸಭಾ ಕ್ಷೇತ್ರಗಳಲ್ಲಿ ಅವರ ನಾಯಕತ್ವದಲ್ಲಿ ಒಂದೇ ಒಂದು ಸ್ಥಾನವನ್ನು ಗೆಲ್ಲಿಸಿಕೊಂಡು ಬರಲು ಸಾಧ್ಯವಾಗಿಲ್ಲ. ಹೀಗಾಗಿ ಈ ಬಾರಿ ಕನಕಪುರ ಮಾತ್ರವಲ್ಲದೆ, ಇತರೆ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಅನ್ನು ಗೆಲ್ಲಿಸುವ ತಯಾರಿ ನಡೆಯುತ್ತಿದೆ.

ಕೆಪಿಸಿಸಿ ಅಧ್ಯಕ್ಷರಾಗಿದ್ದುಕೊಂಡು ತಮ್ಮ ಜಿಲ್ಲೆಯಲ್ಲಿಯೇ ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನ ತಂದುಕೊಡದೆ ಹೋದರೆ ತಮ್ಮ ವರ್ಚಸ್ಸಿನ ಬಗ್ಗೆ ವಿರೋಧ ಪಕ್ಷಗಳು ಟೀಕೆ ಮಾಡಬಹುದು ಎಂಬ ಆಲೋಚನೆಯೂ ಕಾಡುತ್ತಿದೆ. ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಕನಕಪುರ ಹೊರತುಪಡಿಸಿದರೆ ಉಳಿದಂತೆ ಮಾಗಡಿ, ರಾಮನಗರ, ಚನ್ನಪಟ್ಟಣದಲ್ಲಿ ಜೆಡಿಎಸ್ ಬಿಗಿಯಾಗಿದೆ. ಆದ್ದರಿಂದ ಜೆಡಿಎಸ್‌ನ ಭದ್ರಕೋಟೆಯನ್ನು ಛಿದ್ರಮಾಡಬೇಕೆಂಬುದು ಕಾಂಗ್ರೆಸ್‌ನ ಬಹುದಿನದ ಬೇಡಿಕೆಯಾಗಿದೆ. ಆದರೆ ಅದು ಹಿಂದಿನ ಚುನಾವಣೆಗಳಲ್ಲಿಯೂ ಸಾಧ್ಯವಾಗಿಲ್ಲ.

Karnataka elections 2023: Congress plan for victory in Ramanagara Assembly Constituency

ಕಾಂಗ್ರೆಸ್‌ನಿಂದ ಇಕ್ಬಾಲ್ ಹುಸೇನ್‌ ಸ್ಪರ್ಧೆ

ಈ ಬಾರಿ ರಾಮನಗರ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಹೆಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಸ್ಪರ್ಧಿಸುತ್ತಿದ್ದಾರೆ. ಅವರಿಗೆ ಎದುರಾಳಿಯಾಗಿ ಕಾಂಗ್ರೆಸ್‌ನಿಂದ ಇಕ್ಬಾಲ್ ಹುಸೇನ್ ಅವರು ಸ್ಪರ್ಧಿಸುತ್ತಿದ್ದಾರೆ. ಒಕ್ಕಲಿಗರು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಮತ್ತು ರಾಮನಗರ ಜೆಡಿಎಸ್‌ನ ಭದ್ರಕೋಟೆ ಆಗಿರುವುದರಿಂದ ಸುಲಭವಾಗಿ ಗೆಲುವು ಸಾಧಿಸಬಹುದು ಎಂಬುದು ಜೆಡಿಎಸ್‌ನ ಲೆಕ್ಕಾಚಾರವಾಗಿದೆ.

ಅಖಾಡಕ್ಕೆ ಡಿ.ಕೆ.ಸುರೇಶ್ ಎಂಟ್ರಿ

ಕಳೆದೊಂದು ವರ್ಷದಿಂದ ಕಾಂಗ್ರೆಸ್‌ನ ಅಭ್ಯರ್ಥಿ ಇಕ್ಬಾಲ್ ಹುಸೇನ್ ಅವರು ಅಖಾಡಕ್ಕಿಳಿದಿದ್ದು, ಇದೀಗ ಮತದಾರರ ಮನೆ ಬಾಗಿಲು ತಟ್ಟುತ್ತಿದ್ದಾರೆ. ಅಷ್ಟೇ ಅಲ್ಲದೆ ಕ್ಷೇತ್ರದ ವೈಫಲ್ಯತೆಯನ್ನು ಪಟ್ಟಿ ಮಾಡಿ ಜನರ ಮುಂದಿಡುತ್ತಿದ್ದಾರೆ. ಜೊತೆಗೆ ಡಿ.ಕೆ.ಶಿವಕುಮಾರ್‌ ಸಹೋದರ ಸಂಸದ ಡಿ.ಕೆ.ಸುರೇಶ್‌ ಅವರು ಎಂಟ್ರಿ ಕೊಟ್ಟಿದ್ದು, ಅವರು ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ. ಪ್ರತಿದಿನವೂ ಬೇರೆ ಬೇರೆ ಊರುಗಳಲ್ಲಿರುವ ಜೆಡಿಎಸ್ ನಾಯಕರು ಮತ್ತು ಕಾರ್ಯಕರ್ತರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವ ಕಾರ್ಯ ಭರದಿಂದ ಸಾಗುತ್ತಿದೆ.

ಈ ರೀತಿಯ ಪಕ್ಷ ಸೇರ್ಪಡೆ ಕಾರ್ಯ ಎಷ್ಟರ ಮಟ್ಟಿಗೆ ಕಾಂಗ್ರೆಸ್‌ಗೆ ಲಾಭ ತಂದುಕೊಡುತ್ತದೆಯೋ ಗೊತ್ತಿಲ್ಲ. ಆದರೆ ಈಗಾಗಲೇ ನೂರಾರು ಮುಖಂಡರು ಕಾಂಗ್ರೆಸ್‌ಗೆ ಸೇರ್ಪಡೆ ಆಗಿದ್ದಾರೆ. ಈ ಕಾರ್ಯ ಮುಂದುವರೆದರೂ ಅಚ್ಚರಿ ಪಡಬೇಕಾಗಿಲ್ಲ. ಪಕ್ಷ ಸೇರ್ಪಡೆ ಕೆಲಸದ ಹಿಂದೆ ಕ್ಷೇತ್ರದ ಅಭ್ಯರ್ಥಿ ಇಕ್ಬಾಲ್ ಹುಸೇನ್ ಅವರ ಶ್ರಮವಿದೆ ಎನ್ನುವುದಂತೂ ಸತ್ಯ.

Karnataka elections 2023: Congress plan for victory in Ramanagara Assembly Constituency

ಈಗಾಗಲೇ ಮತದಾರರ ಮನವೊಲಿಸುವ ಕೆಲಸದಲ್ಲಿ ನಿರತರಾಗಿರುವ ಇಕ್ಬಾಲ್ ಹುಸೇನ್‌, ಗ್ರಾಮೀಣ ಪ್ರದೇಶಗಳಿಂದ ನಗರಪ್ರದೇಶಗಳವರೆಗೂ ಓಡಾಡಿ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ. ಅಲ್ಲದೆ, ಮುಖಂಡರನ್ನೆಲ್ಲ ಪಕ್ಷಕ್ಕೆ ಸೇರಿಸುವುದರಲ್ಲಿ ಯಶಸ್ವಿ ಆಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇಕ್ಬಾಲ್ ಹುಸೇನ್‌ಗೆ ಗೆಲುವಿನ ಕನವರಿಕೆ

ರಾಮನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅನ್ನು ಗೆಲ್ಲಿಸಲೇಬೇಕೆಂಬುದು ಕಾಂಗ್ರೆಸ್ ನಾಯಕರ ಹಲವು ವರ್ಷಗಳ ಕನಸಾಗಿದೆ. ಈಗಂತೂ ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದ ಬಳಿಕ ತಮ್ಮ ಕ್ಷೇತ್ರದ ಜೊತೆಗೆ ಜಿಲ್ಲೆಯ ಇತರೆ ಕ್ಷೇತ್ರಗಳನ್ನು ಗೆಲ್ಲಿಸಿಕೊಂಡು ಬರುವುದು ಅನಿವಾರ್ಯವಾಗಿದೆ. ಜೊತೆಗೆ ಪ್ರತಿಷ್ಠೆಯ ವಿಚಾರವೂ ಆಗಿದೆ. ಆದ್ದರಿಂದ ಅವರ ಪರವಾಗಿ ಒಂದಷ್ಟು ಮುಖಂಡರು ಕ್ಷೇತ್ರದಲ್ಲಿ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದಾರೆ.

ಹಾಗೆ ನೋಡಿದರೆ ಕ್ಷೇತ್ರ ವಿಂಗಡಣೆಯ ಬಳಿಕ ರಾಮನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲು ಸಾಧ್ಯವಾಗಿಲ್ಲ. ಸಿ.ಎಂ.ಲಿಂಗಪ್ಪ ಅವರ ನಂತರ ಸುಮಾರು 20 ವರ್ಷಗಳಿಂದ ಕ್ಷೇತ್ರವು ಕಾಂಗ್ರೆಸ್ ಶಾಸಕರನ್ನು ನೋಡಿಲ್ಲ. ಹೀಗಾಗಿ ಈ ಕ್ಷೇತ್ರ ಜೆಡಿಎಸ್ ಭದ್ರಕೋಟೆ ಎನ್ನುವುದನ್ನು ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ತೀವ್ರ ಪೈಪೋಟಿ ನೀಡಿ ಪರಾಭವಗೊಂಡ ಇಕ್ಬಾಲ್ ಹುಸೇನ್ ಅವರು ಸೋಲು ಕಂಡಿದ್ದು, ಈ ಬಾರಿ ಮತ್ತೆ ಗೆಲ್ಲಲೇಬೇಕೆಂಬ ಪಣತೊಟ್ಟು ಕಣಕ್ಕಿಳಿದಿದ್ದಾರೆ.

ಜೆಡಿಎಸ್‌ಗೆ ಸೆಡ್ಡು ಹೊಡೆಯುವ ತಂತ್ರ

2023ರ ಚುನಾವಣೆಯಲ್ಲಿ ರಾಮನಗರ ಜಿಲ್ಲೆಯ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಗುರಿಯನ್ನು ಹೊಂದಿದ್ದಲ್ಲದೆ, ಆ ಮೂಲಕ ಡಿ.ಕೆ.ಶಿವಕುಮಾರ್ ಅವರಿಗೆ ಶಕ್ತಿ ತುಂಬುವ ಕೆಲಸಕ್ಕೆ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಆದರೆ ಜೆಡಿಎಸ್ ಭದ್ರಕೋಟೆಯಲ್ಲಿ ಕಾಂಗ್ರೆಸ್‌ಗೆ ಗೆಲುವು ಅಷ್ಟು ಸುಲಭವಾಗಿಲ್ಲ. ಆದರೂ ಜೆಡಿಎಸ್‌ಗೆ ಸೆಡ್ಡು ಹೊಡೆಯಲು ಹಲವು ರೀತಿಯ ತಂತ್ರಗಳನ್ನು ಮಾಡುತ್ತಿರುವುದು ಕಾಣಿಸುತ್ತಿದೆ.

ಇನ್ನು ಬಿಜೆಪಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ. ಮೂರು ಪಕ್ಷಗಳು ನಾಮಪತ್ರ ಸಲ್ಲಿಸಿದ ನಂತರ ಮುಂದಿನ ರಾಜಕೀಯ ಚಿತ್ರಣ ಹೇಗಿರಲಿದೆ ಎಂಬುದು ಗೊತ್ತಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+