Karnataka election 2023: ರಾಮನಗರದಲ್ಲಿನ ಮತ ಎಣಿಕೆ ಕೇಂದ್ರದ ಸುತ್ತಮುತ್ತ ಬಿಗಿಬಂದೋಬಸ್ತ್ ಹೀಗಿದೆ
ರಾಮನಗರ, ಮೇ, 12: ಈಗಾಗಲೇ ರಾಜ್ಯ ವಿಧಾನಸಭೆ ಚುನಾವಣೆಯ ಮತದಾನ ಮುಗಿದಿದ್ದು, ಮೇ 13ರಂದು ನಾಳೆ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಆದ್ದರಿಂದ ಇದೀಗ ಎಲ್ಲರ ಚಿತ್ತ ಮತ ಎಣಿಕೆ ಕಡೆ ಇದೆ. ಹಾಗಾದರೆ ರಾಮನಗರದಲ್ಲಿ ಮತ ಎಣಿಕೆ ಕೇಂದ್ರದ ಸುತ್ತ ಯಾವ ರೀತಿ ಬಿಗಿಭದ್ರತೆ ಇದೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಆಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕಂದಾಯ ಸಚಿವ ಆರ್.ಆಶೋಕ್ ಸೇರಿದಂತೆ ಘಟಾನುಘಟಿ ಆಭ್ಯರ್ಥಿಗಳ ಸ್ಪರ್ದೆಯಿಂದಾಗಿ ರಾಜ್ಯದ ಗಮನ ಸೆಳೆದಿರುವ ರೇಷ್ಮೆನಾಡು ರಾಮನಗರ ಜಿಲ್ಲೆಯ ಚುನಾವಣಾ ಫಲಿತಾಂಶದತ್ತ ಜನರು ತಮ್ಮ ಚಿತ್ತವನ್ನು ನೆಟ್ಟಿದ್ದಾರೆ.

ಈಗಾಗಲೇ ಜಿಲ್ಲೆಯ ನಾಲ್ಕು ತಾಲ್ಲೂಕಿನ ಆಭ್ಯರ್ಥಗಳ ಹಣೆ ಬರಹವನ್ನು ಮೇ 10ರಂದು ಮತದಾರ ಪ್ರಭು ತಮ್ಮ ಮತದಾನದ ಮೂಲಕ ಇವಿಎಂ ಮತ ಯಂತ್ರದಲ್ಲಿ ಭದ್ರಪಡಿಸಿದ್ದಾನೆ. ಅಭ್ಯರ್ಥಿಗಳ ಹಣೆಬರಹ ಹೊತ್ತ ಇವಿಎಂ ಮತ ಯಂತ್ರಗಳು ಪೊಲೀಸ್ ಹಾಗೂ ಪ್ಯಾರಾ ಮಿಲಿಟರಿ ಸಿಬ್ಬಂದಿಗಳ ಸರ್ಪಗಾವಲಿನಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಸ್ಟ್ರಾಂಗ್ ರೂಂನಲ್ಲಿ ಭದ್ರವಾಗಿವೆ.
ಹಳೆ ಬೆಂಗಳೂರು ಮೈಸೂರು ಹೆದ್ದಾರಿಗೆ ಪಕ್ಕದ ಜಾನಪದಲೋಕದ ಬಳಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ಸ್ಥಾಪಿಸಿರುವ ಸ್ಟ್ರಾಂಗ್ ರೂಂ ಸೇರಿದಂತೆ ಮತ ಎಣಿಕೆ ನಡೆಯುವ ಕಟ್ಟಡಕ್ಕೆ ಬಿಗಿ ಭದ್ರತೆ ಎರ್ಪಡಿಸಲಾಗಿದೆ. ಭದ್ರತೆಗಾಗಿ 2 ಪ್ಯಾರಾ ಮಿಲಿಟರಿ ಪೋರ್ಸ್, 2 ಕೆಎಸ್ಆರ್ಪಿ ತುಕಡಿ, ಒಬ್ಬರು ಡಿವೈಎಸ್‌ಪಿ, ಒಬ್ಬರು ಇನ್ಸ್‌ಪೆಕ್ಟರ್, 4 ಜನ ಸಬ್ ಇನ್ಸ್‌ಪೆಕ್ಟರ್ ಹಾಗೂ 30 ಮಂದಿ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.
ಜಿಲ್ಲೆಯಲ್ಲಿ ಮೇ 10ರಂದು ನಡೆದ ಮತದಾನದಲ್ಲಿ ಜಿಲ್ಲೆಯ ಒಟ್ಟು 9,04,702 ಮತದಾರಲ್ಲಿ ಶೇಕಡಾ 85.04 ಅಂದರೆ 7,69,338 ಮತದಾರರು ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ. ನಾಳೆ ಮೇ 13ರಂದು ಮತ ಎಣಿಕೆ ಕಾರ್ಯಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲೆಯಲ್ಲಿ ಒಟ್ಟು 4 ವಿಧಾನಸಭಾ ಕ್ಷೇತ್ರಗಳಿದ್ದು, ಪ್ರತಿ ಮತ ಕ್ಷೇತ್ರದ ಒಂದು ಕೊಠಡಿಗೆ 7 ಟೇಬಲ್‍ನಂತೆ ಒಟ್ಟು 14 ಮತ ಏಣಿಕೆ ಟೇಬಲ್‍ಗಳು ಹಾಗೂ ಅಂಚೆ ಮತದಾನಕ್ಕೆ 1 ಕೊಠಡಿಯಲ್ಲಿ 3 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದೆ.
ಮತ ಏಣಿಕೆ ಸಂದರ್ಭದಲ್ಲಿ ಒಬ್ಬರು ಮೈಕ್ರೋ ಅಬ್ಸರ್ವರ್, ಒಬ್ಬರು ಸಹಾಯಕರು, ಒಬ್ಬರು ಮೇಲ್ವಿಚಾರಕರು ಹಾಗೂ 400 ಸಿಬ್ಬಂದಿಗಳನ್ನು ಮತ ಏಣಿಕೆಗೆ ಕಾರ್ಯಕ್ಕೆ ಜಿಲ್ಲಾಢಳಿತ ನಿಯೋಜನೆ ಮಾಡಿದೆ. ಬೆಳಗ್ಗೆ 8 ಗಂಟೆಗೆ ಪ್ರಾರಂಭವಾಗುವ ಮತ ಎಣಿಕೆ ಕಾರ್ಯ ಬಹುತೇಕ ಸುಮಾರು 11 ಗಂಟೆಯ ಸಮಯಕ್ಕೆ ಅಭ್ಯರ್ಥಿಗಳ ಸೋಲು ಗೆಲುವಿನ ಸಂಪೂರ್ಣ ಚಿತ್ರಣ ಬಯಲಾಗುವ ನಿರೀಕ್ಷೆಯಿದೆ.
1. 182-ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 300 ಮತಗಟ್ಟೆಗಳಿದ್ದು, ಅಂದಾಜು 22 ಸುತ್ತಿನ ಮತ ಏಣಿಕೆ ನಡೆಯಲಿದೆ.
2. 183-ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 276 ಮತಗಟ್ಟೆಗಳಿದ್ದು, ಅಂದಾಜು 20 ಸುತ್ತಿನ ಮತ ಏಣಕೆ ಕಾರ್ಯ ನಡೆಯಲಿದೆ.
3. 184-ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 297 ಮತಗಟ್ಟೆಗಳಿದ್ದು, ಅಂದಾಜು 22 ಸುತ್ತಿನ ಮತ ಏಣಿಕೆ ಆಗಲಿದೆ.
4. 185-ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ 266 ಮತಗಟ್ಟೆಗಳಿದ್ದು, ಅಂದಾಜು 19 ಸುತ್ತಿನ ಮತ ಏಣಿಕೆ ಕಾರ್ಯ ನಡೆಯಲಿದೆ












Click it and Unblock the Notifications