ರಾಮನಗರ: ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿದ ಎಂಇಎಸ್ ನಿಷೇಧಿಸುವಂತೆ ಕಸಾಪ ಆಗ್ರಹ
ರಾಮನಗರ, ಡಿಸೆಂಬರ್ 18: ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ದುಷ್ಕರ್ಮಿಗಳು ವಿಕೃತಗೊಳಿಸಿರುವ ಮತ್ತು ಸರಕಾರಿ ವಾಹನಗಳನ್ನು ಜಖಂ ಮಾಡಿರುವ ಘಟನೆ ನಾಗರಿಕ ಸಮಾಜ ತಲೆತಗ್ಗಿಸುವಂತಹದ್ದು ಎಂದು ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಟಿ. ನಾಗೇಶ್ ಖಂಡಿಸಿದ್ದಾರೆ.
ಅಪ್ರತಿಮ ದೇಶಭಕ್ತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವೀರಮರಣವನ್ನಪ್ಪಿ ದೇಶಕ್ಕೆ ತಮ್ಮನ್ನು ತಾವು ಸಮರ್ಪಣೆ ಮಾಡಿಕೊಂಡ ವೀರಯೋಧ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿರುವುದು ನಾಡಿನ ಸ್ವಾಭಿಮಾನಿ ಸ್ವಾತಂತ್ರ್ಯ ಸೇನಾನಿಗೆ ಮಾಡಿದ ಅಪಮಾನವೆಂದು ತಿಳಿಸಿದ್ದಾರೆ.
ಈ ಕೃತ್ಯಕ್ಕೆ ಕಾರಣರಾದವರ ಮೇಲೆ ಕಠಿಣ ಕ್ರಮವನ್ನು ಸರ್ಕಾರ ತೆಗೆದುಕೊಳ್ಳಬೇಕು. ಕರ್ನಾಟಕದ ಜನತೆ ಸಹನಾ ಪ್ರಿಯರೆಂದು ಎಂಇಎಸ್ ಪುಂಡರು ಮೇಲಿಂದ ಮೇಲೆ ಇಂತಹ ದುಂಡಾವರ್ತನೆ ಮಾಡುತ್ತಾ ಬರುತ್ತಿದ್ದು, ಸರ್ಕಾರ ಈ ವಿಷಯದಲ್ಲಿ ಸಹನೆಯಿಂದ ವರ್ತಿಸದೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.

ಈ ವಿಷಯದಲ್ಲಿ ಎಲ್ಲಾ ಪಕ್ಷಗಳು ರಾಜಕೀಯ ಮಾಡದೇ ಕನ್ನಡಿಗರ ಕರ್ನಾಟಕದ ಸ್ವಾಭಿಮಾನವನ್ನು ಉಳಿಸಲು ಮುಂದಾಗಬೇಕು. ರಾಜ್ಯ ಸರ್ಕಾರ ಯಾವುದೇ ಧರ್ಮ, ಜಾತಿ ಎಂದು ವಿಂಗಡಣೆ ಮಾಡದೇ ಮುಂದಡಿಯಿಡಬೇಕಿದೆ. ರಾಜ್ಯದಲ್ಲಿ ಎಂಇಎಸ್ ಅನ್ನು ನಿಷೇಧ ಮಾಡಬೇಕೆಂದು ಒತ್ತಾಯಿಸಲಾಯಿತು.
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಭಾವಚಿತ್ರಕ್ಕೆ ಕಪ್ಪು ಮಸಿ
ರಾಮನಗರ ಕಳೆದ ರಾತ್ರಿ ಬೆಳಗಾವಿಯಲ್ಲಿ ಎಂಇಎಸ್ ಕಿಡಿಗೇಡಿಗಳು ಪುಂಡಾಟಿಕೆ ನಡೆಸಿರುವುದನ್ನು ಖಂಡಿಸಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಭಾವಚಿತ್ರಕ್ಕೆ ಕಪ್ಪು ಮಸಿ ಬಳಿಯುವ ಮೂಲಕ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಪ್ರತಿಭಟನೆ ನಡೆಸಿದರು.
ಚನ್ನಪಟ್ಟಣ ನಗರದ ಕಾವೇರಿ ಸರ್ಕಲ್‌ನಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ವೇದಿಕೆ ರಾಜ್ಯಾಧ್ಯಕ್ಷ ರಮೇಶ್ ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಬೆಳಗಾವಿ ಘಟನೆಯನ್ನು ಖಂಡಿಸಿದರು.

ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಸಮಯದಲ್ಲೇ ಮರಾಠಿಗರು ಪುಂಡಾಟಿಕೆ ಪ್ರದರ್ಶನ ಮಾಡುತ್ತಿರುವುದು ದುರದೃಷ್ಟಕರ, ಸರ್ಕಾರ ಕೂಡಲೇ ಎಂಇಎಸ್ ಮೇಲಿನ ಮೃದು ಧೋರಣೆ ಬಿಟ್ಟು ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಅಧಿವೇಶನ ನಡೆಯುವ ಸಮಯದಲ್ಲೇ ಮರಾಠಿಗರು ಸಂಗೂಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿ, ಪೊಲೀಸ್ ವಾಹನಕ್ಕೆ ಬೆಂಕಿ ಹಾಕಿ ಹಾಗೂ ಕಲ್ಲು ತೂರಿ ತಮ್ಮ ಪುಂಡಾಟಿಕೆ ಮಾಡುತ್ತಿರುವವರ ಹಿಂದೆ ಮಹಾರಾಷ್ಟ್ರ ಸರ್ಕಾರದ ಕುಮ್ಮಕ್ಕು ಇದೆ ಎಂದು ವೇದಿಕೆಯ ಕಾರ್ಯಕರ್ತರು ಆರೋಪಿಸಿದರು.
ಮಹಾರಾಷ್ಟ್ರ ಸರ್ಕಾರ ಎಂಇಎಸ್ ಪುಂಡರಿಗೆ ಬೆಂಬಲ ಕೊಡುತ್ತಿರುವುದನ್ನು ಖಂಡಿಸಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಭಾವಚಿತ್ರಕ್ಕೆ ಕಪ್ಪು ಮಸಿ ಬಳಿಯುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ಪುಂಡಾಟಿಕೆ ನಡೆಸಿರುವುದನ್ನು ಖಂಡಿಸಿದ ಮಾಜಿ ಸಿಎಂ
ಬೆಳಗಾವಿಯಲ್ಲಿ ಶುಕ್ರವಾರ ತಡರಾತ್ರಿ ವಿವಿಧ ಸಂಘಟನೆಗಳ ಪ್ರತಿಭಟನೆ ಸಂದರ್ಭದಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ, ಪುಂಡಾಟಿಕೆ ನಡೆಸಿರುವುದು ಖಂಡನೀಯ. ದುಷ್ಕರ್ಮಿಗಳ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಳ್ಳಬೇಕು. ಪ್ರಚೋದನೆ, ಪುಂಡಾಟಿಕೆಗೆ ಅವಕಾಶ ನೀಡದೆ, ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ ಎಲ್ಲ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇನೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಕೂ ಮಾಡಿದ್ದಾರೆ.

ಪುಂಡಾಟಿಕೆ ಮಾಡುವವರಿಗೆ ತಕ್ಕ ಶಿಕ್ಷೆ ಕಾದಿದೆ ಎಂದ ಸಚಿವ ವಿ. ಸೋಮಣ್ಣ
ಎಂಇಎಸ್ ಸಂಘಟನೆ ನಿಷೇಧಿಸುವ ಚಿಂತನೆ ಸರ್ಕಾರದ ಮುಂದೆ ಇಲ್ಲ. ಅವರು ನಮ್ಮವರೇ, ನಮ್ಮಲಿಯೇ ಇದ್ದಾರೆ. ಅವರ ಹಕ್ಕನ್ನು ಅವರು ಕೇಳಲಿ. ಆದರೆ ಪುಂಡಾಟ ಮಾಡುವುದು ಸರಿಯಲ್ಲ ಎಂದು ಸಚಿವ ಸೋಮಣ್ಣ ಎಂಇಎಸ್ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.
ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಚಿಕ್ಕಮುದುವಾಡಿ ಗ್ರಾಮದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ವಿ. ಸೋಮಣ್ಣ, ಬೆಳಗಾವಿಯಲ್ಲಿ ನಡೆದ ಘಟನೆ ಖಂಡನೀಯ. ಪುಂಡಾಟಿಕೆ ಮಾಡುವವರಿಗೆ ತಕ್ಕ ಶಿಕ್ಷೆ ಕಾದಿದೆ ಎಂದು ಎಚ್ಚರಿಸಿದರು.
ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡುವುದಿಲ್ಲ, ಎಂಇಎಸ್ ಪುಂಡರಿಗೆ ತಕ್ಕ ಶಿಕ್ಷೆ ನೀಡಲಿದೆ. ಅಧಿವೇಶನ ಮುಗಿದ ಬಳಿಕ ಎಲ್ಲಾ ಬಿಗಿ ಕ್ರಮವಹಿಸಲಾಗುತ್ತದೆ. ಈಗಾಗಲೇ ಘಟನೆ ಸಂಬಂದ ಸಿಸಿಟಿವಿ ವಿಡಿಯೋ ಸಹ ಇದ್ದು, ಅದರ ಪ್ರಕಾರವಾಗಿ ನಾವು ಕ್ರಮವಹಿಸುತ್ತೇವೆ ಎಂದು ಸಚಿವ ವಿ. ಸೋಮಣ್ಣ ತಿಳಿಸಿದರು.
ಬೆಳಗಾವಿ ಕೈತಪ್ಪುತ್ತಿರುವ ಹಿನ್ನೆಲೆಯಲ್ಲಿ ಹೀಗಾಗುತ್ತಿದೆ. ಹಿಂದೆ ಬೆಳಗಾವಿ ಪಾಲಿಕೆಯಲ್ಲಿ ಎಂಇಎಸ್‌ನವರು ಇದ್ದರು. ಆದರೆ ಈಗ ಬಿಜೆಪಿ ಪಕ್ಷದವರು ಇದ್ದಾರೆ. ಊರು ಇದ್ದ ಮೇಲೆ ಕೆಲವರು ಇದ್ದೇ ಇರುತ್ತಾರೆ. ವಿವಾದ ಜೀವಂತವಾಗಿರುವುದು ಕೆಲವರಿಗೆ ಬೇಕಾಗಿದೆ. ಹಾಗಾಗಿ ಕಿತಾಪತಿಗಳು ನಡೆಯುತ್ತಿವೆ ಎಂದರು.
ಬೆಳಗಾವಿ ಅವರ ಕೈತಪ್ಪಿದೆ ಎಂದು ಗೊತ್ತಾಗಿದ್ದರಿಂದ ಹೀಗೆ ಮಾಡುತ್ತಿದ್ದಾರೆ. ಪುಂಡರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತೆ. ಈ ಹಿಂದೆ ಇದ್ದ ರೀತಿ ಎಂಇಎಸ್ ಇಲ್ಲ, ಈಗ ಕಡಿಮೆಯಾಗಿದೆ ನಾವು ಮೊದಲು ಕನ್ನಡಾಂಬೆಯ ಮಕ್ಕಳು ನಂತರ ನಾವು ಭಾರತೀಯರು ಎಂದು ಸಚಿವ ವಿ. ಸೋಮಣ್ಣ ತಿಳಿಸಿದರು.












Click it and Unblock the Notifications