ರಾಜ್ಯವೇ ತಲೆತಗ್ಗಿಸುವ ಘಟನೆ: ವಿದ್ಯಾರ್ಥಿನಿಯರಿಗೆ 'ಬಿಯರ್ ಕುಡೀರಿ, ಡ್ಯಾನ್ಸ್ ಮಾಡಿ' ಎಂದ ಶಿಕ್ಷಕರು!
ಪಠ್ಯೇತರ ಚಟುವಟಿಕೆ ಹೆಸರಿನಲ್ಲಿ ಶಾಲಾ ಕಾಲೇಜುಗಳಿಂದ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದೊಯ್ಯುವ ಪದ್ಧತಿ ಇದೆ. ಈ ವೇಳೆ ವಿದ್ಯಾರ್ಥಿಗಳ ಜವಾಬ್ದಾರಿ ಸಂಪೂರ್ಣವಾಗಿ ಶಿಕ್ಷಕರ ಮೇಲೆಯೇ ಇರುತ್ತೆ. ಇನ್ನು ಯಾವ ಶಿಕ್ಷಕನೂ ತಮ್ಮ ವಿದ್ಯಾರ್ಥಿಗಳಿಗೆ ದಾರಿ ತಪ್ಪುವಂತೆ ಮಾರ್ಗದರ್ಶನ ನೀಡುವುದಿಲ್ಲ.
ಆದರೆ, ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ಕಟ್ಟಿಕೊಡಬೇಕಾದ ಶಿಕ್ಷಕ ಸ್ಥಾನದಲ್ಲಿರುವವರೇ ದಾರಿ ತಪ್ಪಿಸುವ ಕೆಲಸ ಮಾಡಿರುವುದು ರಾಜ್ಯದಲ್ಲೇ ನಡೆದಿದೆ. ಈ ಘಟನೆಯಿಂದಾಗಿ ಇಡೀ ಶಿಕ್ಷಕ ವೃಂದ ತಲೆತಗ್ಗಿಸುವಂತಾಗಿದೆ. ಪ್ರವಾಸಕ್ಕೆ ಕರೆದೊಯ್ದಿದ್ದ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರೇ ಬಲವಂತವಾಗಿ ಬಿಯರ್ ಕುಡಿಸಿರುವ ನೀಚ ಸಂಗತಿ ಬೆಳಕಿಗೆ ಬಂದಿದೆ.

ರಾಮನಗರ ಜಿಲ್ಲೆಯ ಕನಕಪುರ ಪಟ್ಟಣದ ಗ್ರಾಮಾಂತರ ಪದವಿ ಪೂರ್ವ ಕಾಲೇಜಿನಿಂದ ವಿದ್ಯಾರ್ಥಿಗಳನ್ನು ಮಡಿಕೇರಿಗೆ ಪ್ರವಾಸಕ್ಕೆ ಕರೆದೊಯ್ಯಲಾಗಿತ್ತು. ಸುಮಾರು ಐದು ದಿನಗಳ ಈ ಪ್ರವಾಸಕ್ಕೆ ಕಾಲೇಜಿನ ವಿದ್ಯಾರ್ಥಿನಿಯರು ಕೂಡ ಹೋಗಿದ್ದರು ಎನ್ನಲಾಗಿದೆ.
ಪ್ರವಾಸದ ಒಂದು ದಿನ ರಾತ್ರಿ ಖುದ್ದು ಕಾಲೇಜು ಪ್ರಿನ್ಸಿಪಾಲ್ ಬಿಯರ್ ಕುಡಿಯುವ ಮೂಲಕ ತಮ್ಮ ಜವಾಬ್ದಾರಿ ಮರೆತಿದ್ದಾರೆ. ಇಷ್ಟೇ ಅಲ್ಲದೆ, ಮೂವರು ನೀಚ ಉಪನ್ಯಾಸಕರು ವಿದ್ಯಾರ್ಥಿನಿಯರಿಗೆ ಬಲವಂತವಾಗಿ ಬಿಯರ್ ಕುಡಿಸಿದ್ದಾರೆ ಎಂದು ವರದಿಯಾಗಿದೆ. ವಿದ್ಯಾರ್ಥಿನಿಯರನ್ನು ಒಂದು ರೂಂನಲ್ಲಿ ಲಾಕ್ ಮಾಡಿ, ಬಿಯರ್ ಕುಡಿಸಿದ್ದಾರೆ. ಬಳಿಕ ತಮ್ಮೊಂದಿಗೆ ಡ್ಯಾನ್ಸ್ ಮಾಡುವಂತೆಯೂ ವಿದ್ಯಾರ್ಥಿಗಳಿಗೆ ಬಲವಂತ ಮಾಡಿದ್ದಾರಂತೆ. ಈ ಘಟನೆ ನಡೆದು ಸುಮಾರು ದಿನಗಳು ಕಳೆದಿದ್ದು, ಇದೀಗ ತಡವಾಗಿ ಬೆಳಕಿಗೆ ಬಂದಿದೆ.

ವಿದ್ಯಾರ್ಥಿನಿಯರು ಪ್ರವಾಸ ಮುಗಿಸಿ ವಾಪಸ್ ಬಂದ ಬಳಿಕ ತಮಗೆ ಬಿಯರ್ ಕುಡಿಸಿದರ ಬಗ್ಗೆ ಮಹಿಳಾ ಉಪನ್ಯಾಸಕರ ಬಳಿ ಹೇಳಿಕೊಂಡಿದ್ದಾರೆ. ಇದರ ಗಂಭೀರತೆ ಅರಿಯದ ಮಹಿಳಾ ಉಪನ್ಯಾಸಕರು ಕೂಡ, ಟ್ರಿಪ್ ಅಂದ ಮೇಲೆ ಇದೆಲ್ಲ ಕಾಮನ್ ಎಂದು ಲೈಟ್ ಆಗಿ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಸದ್ಯ ಈ ವಿಚಾರವು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಕಿವಿಗೆ ತಲುಪಿದ್ದು, ಇಂತಹ ಬೇಜವಾಬ್ದಾರಿಯುತ ಉಪನ್ಯಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆಗೆ ಪತ್ರದ ಮೂಲಕ ಖಡಕ್ ಸೂಚನೆ ನೀಡಿದೆಯಂತೆ. ಜೊತೆಗೆ ಈ ವಿಚಾರವಾಗಿ ತಕ್ಷಣವೇ ತನಿಖೆ ನಡೆಸಿ, ಏಳು ದಿನಗಳಲ್ಲಿ ಸ್ಪಷ್ಟ ವರದಿ ಸಲ್ಲಿಸುವಂತೆ ಸೂಚನೆಯೂ ನೀಡಿದೆ.
ಹೆಣ್ಣುಮಕ್ಕಳನ್ನು ಪ್ರವಾಸಕ್ಕೆ ಕಳಿಸುವಾಗ ಪೋಷಕರು ಹಿಂದೂ ಮುಂದು ಯೋಚಿಸುತ್ತಾರೆ. ಕೊನೆಗೆ ಶಿಕ್ಷಕರೇ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡುತ್ತಾರೆ ಎಂಬ ಧೈರ್ಯದಲ್ಲಿ ಪ್ರವಾಸಕ್ಕೆ ಕಳಿಸಿಕೊಡುತ್ತಾರೆ. ಆದರೆ, ಇಂತಹ ಘಟನೆಯು ಇಡೀ ಗುರುವೃಂದ ತಲೆತಗ್ಗಿಸುವ ಕೆಲಸ ಮಾಡಿದ್ದಲ್ಲದೆ, ಪೋಷಕರಿಗೂ ಶಿಕ್ಷಕರ ಮೇಲಿನ ಗೌರವ ಕಡಿಮೆಯಾಗುವಂತೆ ಮಾಡಿದೆ.
ಶಿಕ್ಷಕರನ್ನು ನಂಬಿಯೇ ಹೆಣ್ಣುಮಕ್ಕಳನ್ನು ಪ್ರವಾಸ ಕಳಿಸುತ್ತೇವೆ. ತಪ್ಪು ಮಾಡಿದಾಗ ತಿದ್ದಬೇಕಾದ ಶಿಕ್ಷಕರೇ ಅದರಲ್ಲೂ ಹೆಣ್ಣುಮಕ್ಕಳಿಗೆ ಬಿಯರ್ ಕುಡಿಸಿ, ಡ್ಯಾನ್ಸ್ ಮಾಡುವಂತೆ ಒತ್ತಾಯಿಸುತ್ತಾರೆ ಎಂದರೆ ಅವರು ನಿಜವಾಗಿಯೂ ಶಿಕ್ಷಕರು ಎನಿಸಿಕೊಳ್ಳಲು ಹೇಗೆ ಸಾಧ್ಯ? ಎಂದು ಆಕ್ರೋಶ ಕೂಡ ವ್ಯಕ್ತವಾಗಿದೆ. ಇದು ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವೆ ಹಿಂದಿನಿಂದಲೂ ಇರುವ ಒಳ್ಳೆಯ ಸಂಬಂಧಕ್ಕೆ ಒಂದು ಕಪ್ಪುಚುಕ್ಕೆ ತರುವ ಘಟನೆ ಎಂದೂ ಹೇಳಲಾಗುತ್ತಿದೆ.












Click it and Unblock the Notifications