ಜನತಾ ಜಲಧಾರೆಗೆ ಚಾಲನೆ; ಹೊರಟು ನಿಂತ 15 ಗಂಗಾ ರಥಗಳು
ರಾಮನಗರ, ಏಪ್ರಿಲ್ 12; ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೆ ಕೃಷಿ ಮತ್ತು ಕುಡಿಯಲು ಸಮೃದ್ಧ ನೀರು ಒದಗಿಸುವ ಮಹಾ ಸಂಕಲ್ಪದೊಂದಿಗೆ ಜೆಡಿಎಸ್ ಪಕ್ಷ ಜನತಾ ಜಲಧಾರೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಲಾಗಿದೆ.
ಜಲ ಸಂಗ್ರಹಕ್ಕೆ ಹೊರಟ 15 ಗಂಗಾ ರಥಗಳಿಗೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ರಾಮನಗರದಲ್ಲಿ ಚಾಲನೆ ನೀಡಿದರು. ನಗರದ ಶಕ್ತಿ ದೇವತೆ ಚಾಮುಂಡೇಶ್ವರಿ ಅಮ್ಮನವರಿಗೆ ಪೂಜೆ ಸಲ್ಲಿಸಿ ಸಂಕಲ್ಪ ಮಾಡಿದ ನಂತರ ರಾಜ್ಯದ 15 ಸ್ಥಳಗಳಲ್ಲಿ ಜಲ ಸಂಗ್ರಹಕ್ಕೆ ಹೊರಟ ಗಂಗಾ ರಥಗಳನ್ನು ದಳಪತಿಗಳು ಬೀಳ್ಕೊಟ್ಟರು.
ಈ ಪೂಜಾ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹಾಗೂ ಪಕ್ಷದ ಎಲ್ಲ ಶಾಸಕರು, ಮುಖಂಡರು, ಜಿಲ್ಲಾ ನಾಯಕರು ಹಾಜರಿದ್ದರು. ಚಾಂಡೇಶ್ವರಿ ಅಮ್ಮನವರಿಗೆ ಪೂಜೆ ಸಲ್ಲಿಸಿದ ನಂತರ ಮಾಜಿ ವಿಧಾನ ಪರಿಷತ್ ಸದಸ್ಯ ಸಿ. ಎಂ. ಇಬ್ರಾಹಿಂ ಜೊತೆಗೆ ಮುಸ್ಲಿಂ ದರ್ಗಾ ಫಿರನ್ ಷಾ ವಾಲಿದರ್ಗದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ರಾಮನಗರ ಜಿಲ್ಲಾ ಕ್ರೀಡಾಂಗಣದಲ್ಲಿ ಪಕ್ಷದ ಸಮಾವೇಶ ನಡೆಯಿತು. ವೇದಿಕೆಯಲ್ಲಿ ವಿಧಾನಸಭೆ ಉಪನಾಯಕ ಬಂಡೆಪ್ಪ ಖಾಷೆಂಪೂರ್, ಶಾಸಕಿ ಅನಿತಾ ಕುಮಾರಸ್ವಾಮಿ, ಶಾಸಕ ಸುರೇಶ್ ಗೌಡ, ಅನ್ನದಾನಿ, ಡಾ. ಶ್ರೀನಿವಾಸಮೂರ್ತಿ, ಎ. ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಮಂಜೇಗೌಡ, ಮುಖಂಡರಾದ ಶರವಣ, ಅಪ್ಪಾಜಿ ಗೌಡ ಮುಂತಾದವರು ಉಪಸ್ಥಿತರಿದ್ದರು.
ಇದೇ ವೇಳೆ ದೇವೇಗೌಡರಿಂದ ಪಕ್ಷದ ಬಾವುಟವನ್ನು ಸ್ವೀಕರಿಸುವ ಮೂಲಕ ಮಾಗಡಿ ಶಾಸಕ ಎ. ಮಂಜುನಾಥ್ ರಾಮನಗರ ಜೆಡಿಎಸ್ ಜಿಲ್ಲಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.

ಸಂಸತ್ತಿನಲ್ಲಿ ಅಪಮಾನ; ದೇವೇಗೌಡ
ರಾಜ್ಯದ ನೀರಾವರಿ ವಿಚಾರಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪ ಮಾಡಿದ ಕಾರಣಕ್ಕೆ ತಮಗಾದ ನೋವನ್ನು ದೇವೇಗೌಡರು ಸಮಾವೇಶದಲ್ಲಿ ತೋಡಿಕೊಂಡರು. "ರಾಜ್ಯ ಅನೇಕ ನೀರಾವರಿ ಕಷ್ಟಗಳನ್ನು ಅನುಭವಿಸುತ್ತಿದೆ. ಲೋಕಸಭೆಯಲ್ಲಿ ನನಗಾದ ಅವಮಾನ ಅಷ್ಟಿಷ್ಟಲ್ಲ. ಆದರೆ ಎಲ್ಲ ನೀರಾವರಿ ಯೋಜನೆಗಳ ಜಾರಿಗೆ ನನ್ನ ಕೊನೆ ಉಸಿರು ಇರುವ ತನಕ ಹೋರಾಟ ಮಾಡುವೆ. ನಾನಿನ್ನು ಬದುಕಿದ್ದೇನೆ. ನನ್ನ ಕೊನೆ ಉಸಿರಿರುವರೆಗೂ ನನ್ನ ರಾಜ್ಯದ ನೀರು ಉಳಿಸಲು ಹೋರಾಟ ಮಾಡುತ್ತೇನೆ. ನನಗೆ ಮಂಡಿ ನೋವು ಇರಬಹುದು. ಆದರೆ ಈ ತಲೆಯಲ್ಲಿನ ನೋವನ್ನು ಮರೆಯಲು ಸಾಧ್ಯವಿಲ್ಲ" ಎಂದರು.

ಚುನಾವಣೆ ಗಿಮಿಕ್ ಮಾಡುತ್ತಿಲ್ಲ
"ಜಲಧಾರೆ ಚುನಾವಣೆಗಾಗಿ ಮಾಡುತ್ತಿರುವ ಗಿಮಿಕ್ ಅಲ್ಲ. ನಾವು ಈಗ ನೀರಿನ ಸಂಕಷ್ಟದಲ್ಲಿ ಇದ್ದೇವೆ. ಹನಿ ನೀರಿಗಾಗಿಯೂ ಹೋರಾಟ ಮಾಡುತ್ತಿದ್ದೇವೆ. ಎಂದಿಗೂ ನಮ್ಮ ರೈತನನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ನೀರಾವರಿ ವಿಚಾರಕ್ಕೆ ಯಾವ ಪಕ್ಷ ಬೇಕಿದ್ದರೂ, ಆಹ್ವಾನ ನೀಡಿದರೆ ನಾನು ಕೂಡ ಹೋರಾಟಕ್ಕೆ ಹೋಗುತ್ತೆನೆ" ಎಂದು ದೇವೇಗೌಡರು ಘೋಷಣೆ ಮಾಡಿದರು.

ಜನರ ಋಣ ದೊಡ್ಡದು
"ನಾನು ಇದೇ ರಾಮನಗರದಿಂದ ಚುನಾವಣೆಯಲ್ಲಿ ಗೆದ್ದು, ಮುಖ್ಯಮಂತ್ರಿ ಆಗಿದ್ದೆ. ಇಲ್ಲಿನ ಜನ ನನ್ನನ್ನು ತಲೆ ಮೇಲೆ ಹೊತ್ತು ಗೆಲ್ಲಿಸಿದರು. ಅವರ ಋಣ ದೊಡ್ಡದು. ಈ ಪುಣ್ಯ ನೆಲದಿಂದ ಜಲಧಾರೆ ವಾಹನಗಳನ್ನು ರಾಜ್ಯದ ಎಲ್ಲಾ ಕಡೆಗಳಿಗೆ ಕಳಿಸಿಕೊಟ್ಟಿದ್ದೇನೆ, ಇದು ನನ್ನ ಪುಣ್ಯ" ಎಂದರು.
"ಕೊಟ್ಟ ಮಾತನ್ನು ಈ ದೇವೇಗೌಡ ಯಾವತ್ತೂ ಮರೆತಿಲ್ಲ. ಎಲ್ಲವನ್ನೂ ನಡೆಸಿಕೊಂಡಿದ್ದೇನೆ. ನಾನು ಹೋರಾಟವನ್ನು ನಿಲ್ಲಿಸುವ ಪ್ರಶ್ನೆ ಇಲ್ಲ. ಈ ಪಕ್ಷವನ್ನು ಮುಗಿಸುತ್ತೇವೆ ಎಂಬುದು ಯಾರಿಂದಲೂ ಸಾಧ್ಯ ಇಲ್ಲ ಎಂಬುದನ್ನು ನಮ್ಮ ಜನ, ಕಾರ್ಯಕರ್ತರು ನಿರೂಪಿಸಿದ್ದಾರೆ" ಎಂದು ಹೇಳಿದರು.

ಸಿ. ಎಂ. ಇಬ್ರಾಹಿಂ ಭಾಗಿ
ಜೆಡಿಎಸ್ ಪಕ್ಷದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಕೇಂದ್ರದ ಮಾಜಿ ಸಚಿವ ಸಿ. ಎಂ. ಇಬ್ರಾಹಿಂ, "ಈ ರಾಮನಗರದಿಂದ ಕುಮಾರ ಪರ್ವ ಆರಂಭವಾಗಲಿದ್ದು, ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗುವುದು ಖಚಿತ. ಜೆಡಿಎಸ್ ಪಕ್ಷಕ್ಕೆ ಬರಲು ಅನೇಕರು ತುದಿಗಾಲಿನಲ್ಲಿ ನಿಂತಿದ್ದಾರೆ. ಜೂನ್ ತಿಂಗಳು ಬರಲಿ, ಎಲ್ಲವೂ ನಡೆಯುತ್ತದೆ. ಮುಂದಿನ ಚುನಾವಣೆಗೆ ಇದು ದಿಕ್ಸೂಚಿಯಾಗಲಿದೆ" ಎಂದು ಹೇಳಿದರು.












Click it and Unblock the Notifications