ಚನ್ನಪಟ್ಟಣ ನಗರಸಭೆ ಜೆಡಿಎಸ್ ತೆಕ್ಕೆಗೆ; ಫಲಿಸಲಿಲ್ಲ ಸಿಪಿವೈ ಯೋಜನೆ
ರಾಮನಗರ, ನವೆಂಬರ್ 8: ಚನ್ನಪಟ್ಟಣ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆ ಜೆಡಿಎಸ್ ಪಕ್ಷದ ಪಾಲಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರು ಚುನಾವಣೆಯಲ್ಲಿ ಸ್ಪರ್ಧೆ ಮಾಡದ ಹಿನ್ನೆಲೆಯಲ್ಲಿ ಅವಿರೋಧವಾಗಿ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಜೆಡಿಎಸ್‌ಗೆ ಒಲಿದಿದೆ.
ಪರಿಶಿಷ್ಟ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚನ್ನಪಟ್ಟಣದ 26ನೇ ವಾರ್ಡ್‌ನ ಜೆಡಿಎಸ್ ಸದಸ್ಯ ಪ್ರಶಾಂತ್ ಅವಿರೋಧವಾಗಿ ಆಯ್ಕೆಯಾದರು ಹಾಗೂ ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಅಲ್ಪಸಂಖ್ಯಾತ ಸಮುದಾಯದ ಹಸೀನಾ ಫರೀನ್ ಉಪಾಧ್ಯಕ್ಷರಾಗಿ ಆಯ್ಕೆಗೊಂಡರು.
ಚನ್ನಪಟ್ಟಣ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ ಸೋಮವಾರ ಬೆಳಿಗ್ಗೆ 10ಕ್ಕೆ ಪ್ರಾರಂಭವಾದವು. ಅಧ್ಯಕ್ಷ ಸ್ಥಾನಕ್ಕೆ ಪ್ರಶಾಂತ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹಸೀನಾ ಫರೀನ್ ನಾಮಪತ್ರ ಸಲ್ಲಿಸಿದರು. ಇಬ್ಬರನ್ನು ಬಿಟ್ಟು ಬೇರೆ ಯಾರೂ ನಾಮಪತ್ರ ಸಲ್ಲಿಸಿದ ಹಿನ್ನಲೆಯಲ್ಲಿ ಚುನಾವಾಣಾ ಆಧಿಕಾರಿಯಾಗಿ ನೇಮಕವಾಗಿದ್ದ ಎಸಿ ಮಂಜುನಾಥ್, ಅಂತಿಮವಾಗಿ ಪ್ರಶಾಂತ್ ಮತ್ತು ಹಸೀನಾ ಫರೀನ್ ಅವಿರೋಧವಾಗಿ ಆಯ್ಕೆಯಾಗಿರುವ ಬಗ್ಗೆ ಘೋಷಣೆ ಮಾಡಿದರು.
ಮೀಸಲಾತಿ ತೊಡಿಕಿನಿಂದ 2 ವರ್ಷಗಳ ಬಳಿಕ ಕಳೆದ ಏಪ್ರಿಲ್‌ನಲ್ಲಿ ಚುನಾವಣೆ ನಡೆದು ಜೆಡಿಎಸ್ ಬಹುಮತ ಗಳಿಸಿತ್ತು. ಒಟ್ಟು 31 ಸದಸ್ಯರಿರುವ ನಗರಸಭೆಯಲ್ಲಿ, ಜೆಡಿಎಸ್ 16, ಬಿಜೆಪಿ 7 ಕಾಂಗ್ರೆಸ್ 7 ಹಾಗೂ ಒಬ್ಬ ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದರು.
ಅಧ್ಯಕ್ಷ, ಉಪಾಧ್ಯಕ್ಷರ ಪ್ರತಿಕ್ರಿಯೆ
ಆಯ್ಕೆಯಾದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ನಗರಸಭೆ ನೂತನ ಅಧ್ಯಕ್ಷ ಪ್ರಶಾಂತ್ ಹಾಗೂ ಉಪಾಧ್ಯಕ್ಷ ಹಸೀನಾ ಫರೀನ್, ಜೆಡಿಎಸ್ ವರಿಷ್ಠ ದೇವೇಗೌಡರು, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯವರಿಗೆ ಕೃತಜ್ಞತೆಯನ್ನು ಅರ್ಪಿಸಿದರು. ನಗರಸಭೆಯ ಆಡಳಿತವನ್ನು ಜನರ ಬಳಿಗೆ ತಲುಪಿಸಿ ಮೂಲ ಸೌಕರ್ಯಕ್ಕೆ ಒತ್ತು ನೀಡುವುದಾಗಿ ತಿಳಿಸಿದರು.
ಜೆಡಿಎಸ್ ಅಧ್ಯಕ್ಷರ ಪ್ರತಿಕ್ರಿಯೆ
ಇನ್ನು ಈ ವೇಳೆ ಮಾತನಾಡಿದ ಜೆಡಿಎಸ್ ತಾಲೂಕು ಅಧ್ಯಕ್ಷ ಜಯಮುತ್ತು, ಕುಮಾರಣ್ಣನವರ ಅಭಿವೃದ್ಧಿ ನೋಡಿ ಅತಿ ಹೆಚ್ಚು ನಗರಸಭೆ ಸದಸ್ಯರನ್ನು ಜನರು ಆಯ್ಕೆ ಮಾಡಿದ್ದರು. ಇಂದು ಅವಿರೋಧವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಗಳಿಸಿರುವುದು ತಮಗೆ ಸಂತಸ ತಂದಿದೆಯಲ್ಲದೇ, ಸ್ಥಳೀಯ ಮುಖಂಡರಲ್ಲಿ ಆತ್ಮವಿಶ್ವಾಸ ಮೂಡಿದೆ ಎಂದರು

ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಕ್ಷೇತ್ರಕ್ಕೆ ನೀಡಿದ ಬರಪೂರ ಅನುದಾನ ಹಾಗೂ ಅಭಿವೃದ್ಧಿಯನ್ನು ಮನಗಂಡ ಚನ್ನಪಟ್ಟಣದ ಮತದಾರ ಅತಿ ಹೆಚ್ಚು ಜೆಡಿಎಸ್ ಸದಸ್ಯರನ್ನು ಚುನಾಯಿಸಿದ್ದರು. ಅಲ್ಲದೇ ಕಳೆದ 13 ವರ್ಷಗಳ ಅನ್ಯ ಪಕ್ಷಗಳ ದುರಾಡಳಿತಕ್ಕೆ ಬೇಸತ್ತಿದ್ದ ಮತದಾರ ಜೆಡಿಎಸ್‌ಗೆ ಸ್ಪಷ್ಟ ಬಹುಮತ ನೀಡಿ ನಗರಸಭೆ ಅಧಿಕಾರದ ಚುಕ್ಕಾಣಿಯನ್ನು ಜೆಡಿಎಸ್ ಕೈಗೆ ನೀಡಿದ್ದಾನೆ ಎಂದರು.
ಫಲಿಸದ ಕಾಂಗ್ರೆಸ್- ಬಿಜೆಪಿ ಮೈತ್ರಿ
ಚನ್ನಪಟ್ಟಣ ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟು ಬಿಜೆಪಿ ಪಕ್ಷವು ಕಾಂಗ್ರೆಸ್‌ನೊಡನೆ ಮೈತ್ರಿ ಮಾಡಿಕೊಳ್ಳಲು ಹವಣಿಸಿತ್ತು. ಇದರಿಂದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆ ತೀವ್ರ ಕುತೂಹಲ ಸೃಷ್ಟಿಸಿತ್ತು. ಸ್ಪಷ್ಟ ಬಹುಮತ ಹೊಂದಿದ್ದ ಜೆಡಿಎಸ್ ಅವಿರೋಧವಾಗಿ ಅಧ್ಯಕ್ಷ ಗಾದಿ ಗಿಟ್ಟಿಸಿಕೊಂಡು ಬಿಜೆಪಿ ಮತ್ತು ಕಾಂಗ್ರೆಸ್ ತಂತ್ರಕ್ಕೆ ಟಕ್ಕರ್ ನೀಡಿದೆ.
ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ ಕಾಂಗ್ರೆಸ್ ಜೊತೆಗೆ ಕೈಜೋಡಿಸಿ ಜೆಡಿಎಸ್‌ಗೆ ಟಾಂಗ್ ಕೊಡುತ್ತಾರೆ ಎಂಬ ವದಂತಿ ಹರಿದಾಡಿತ್ತು. ಕಾಂಗ್ರೆಸ್ ಬೆಂಬಲಿಸುವ ಮೂಲಕ ಎಚ್‌ಡಿಕೆಗೆ ಟಾಂಗ್ ಕೊಡಲು ತಂತ್ರ ಹೆಣದಿದ್ದರು, ಸಿಪಿವೈ ಪ್ರಯತ್ನಕ್ಕೆ ಕಾಂಗ್ರೆಸ್ ಬೆಂಬಲ ಕೊಡದ ಹಿನ್ನೆಲೆ ಕೊನೆ ಹಂತದಲ್ಲಿ ಬಿಜೆಪಿಯ ಯೋಜನೆ ಫೇಲ್ ಆಗಿದೆ ಎನ್ನಲಾಗುತ್ತಿದೆ.