ರಾಮನಗರದಲ್ಲಿ ಡಿಕೆಶಿ ವಿರುದ್ದ ಸ್ಪರ್ಧೆ: ಅಡ್ಡಗೋಡೆ ಮೇಲೆ ದೀಪವಿಟ್ಟ ನಿಖಿಲ್ ಕುಮಾರಸ್ವಾಮಿ
ರಾಮನಗರ, ಫೆ 23: ಒಂದು ಕಾಲದ ಕಟ್ಟಾ ರಾಜಕೀಯ ವಿರೋಧಿಗಳಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕುಟುಂಬಕ್ಕೆ ರಾಮನಗರ ಎನ್ನುವುದು ರಾಜಕೀಯ ಕರ್ಮಭೂಮಿ. ಇಲ್ಲಿ ಹಿಡಿತ ಸಾಧಿಸಲು ಎರಡೂ ಕುಟುಂಬಗಳು ಪ್ರಭಾವ ಬೀರುವುದು ಹೊಸದೇನಲ್ಲ.
ಕೆಪಿಸಿಸಿ ಪ್ರಾಯೋಜಿತ ಎರಡನೇ ಹಂತದ ಮೇಕೆದಾಟು ಪಾದಯಾತ್ರೆ ಇದೇ ಬರುವ ಫೆಬ್ರವರಿ 27ರಿಂದ ಆರಂಭವಾಗಲಿದೆ. ಈ ಯಾತ್ರೆ ರಾಮನಗರ ಜಿಲ್ಲೆಯಿಂದ ಪುನರಾರಂಭಗೊಳ್ಳುತ್ತಿದೆ ಎನ್ನುವುದು ಜೆಡಿಎಸ್ ಪಾಲಿಗೆ ಕಸಿವಿಸಿಯಾಗುವ ಸಂಗತಿ.
ಈ ಯಾತ್ರೆಯ ಬಗ್ಗೆ ಎಚ್.ಡಿ.ಕುಮಾರಸ್ವಾಮಿಯವರು ಲೇವಡಿ ಮಾಡಿದ್ದರೂ, ನೀರಿಗಾಗಿ ನಮ್ಮ ಹೋರಾಟ ಎನ್ನುವ ಹೆಸರಿನಲ್ಲಿ ನಡೆಯುತ್ತಿರುವ ಪಾದಯಾತ್ರೆ ಆಗಿರುವುದರಿಂದ ಎಲ್ಲಿ ತಮ್ಮ ಸುಭದ್ರ ವೋಟ್ ಬ್ಯಾಂಕಿಗೆ ಧಕ್ಕೆ ಬರುತ್ತೋ ಎನ್ನುವ ಆತಂಕ ದಳಪತಿಗಳಿಗೆ.
ಈ ನಡುವೆ, ರಾಮನಗರದಿಂದ ಮುಂದಿನ ಚುನಾವಣೆಯಲ್ಲಿ ದಳಪತಿಗಳ ಕುಟುಂಬದಿಂದ ಯಾರು ಸ್ಪರ್ಧಿಸಲಿದ್ದಾರೆ ಎನ್ನುವುದು ಮುನ್ನಲೆಗೆ ಬರುತ್ತಿದೆ. ಈ ವಿಚಾರದಲ್ಲಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರ ಹೆಸರೂ ಕೇಳಿ ಬರುತ್ತಿರುವುದರಿಂದ, ನಿಖಿಲ್ ಅವರು ಅಡ್ಡಗೋಡೆಯ ಮೇಲೆ ದೀಪವಿಟ್ಟ ಹಾಗೇ ಹೇಳಿಕೆಯನ್ನು ನೀಡಿದ್ದಾರೆ.

ಎಲ್ಲಿಂದ ಮೊಟಕುಗೊಳಿಸಲಾಗಿತ್ತೋ ಅಲ್ಲಿಂದಲೇ ಮತ್ತೆ ಆರಂಭ - ಡಿ.ಕೆ.ಸುರೇಶ್
ಮೇಕೆದಾಟು ಪಾದಯಾತ್ರೆ ಹೈಕೋರ್ಟ್ ಚಾಟಿ ಬೀಸಿದ ನಂತರ ನಿಂತಿತ್ತು. ಈಗ, ಎಲ್ಲಿಂದ ಮೊಟಕುಗೊಳಿಸಲಾಗಿತ್ತೋ ಅಲ್ಲಿಂದಲೇ ಮತ್ತೆ ಆರಂಭಿಸಲು ಸಂಸದ ಡಿ.ಕೆ.ಸುರೇಶ್ ನಿರ್ಧರಿಸಿದ್ದಾರೆ. ಇದರಂತೇ, ಪಾದಯಾತ್ರೆ ಮೊದಲ ದಿನ ರಾಮನಗರಿಂದ ಹೊರಟು ಬಿಡದಿಯಲ್ಲಿ ರಾತ್ರಿ ವಾಸ್ತವ್ಯ ಮಾಡಲಿದೆ. ಎರಡನೇ ದಿನ ಬಿಡದಿ ಯಿಂದ ಹೊರಟುವ ಪಾದಯಾತ್ರೆ ಕೆಂಗೇರಿ ಮೂಲಕ ಬೆಂಗಳೂರು ಪ್ರವೇಶ ಮಾಡಲಿದೆ. ಮೊದಲಿದ್ದ ರೂಟ್ ಮ್ಯಾಪ್ ಅನ್ನು ಬದಲಿಸಿ, ಬೆಂಗಳೂರು ನಗರ ವ್ಯಾಪ್ತಿಯ ಹೆಚ್ಚಿನ ಅಸೆಂಬ್ಲಿ ಕ್ಷೇತ್ರದಲ್ಲಿ ಹಾದುಹೋಗುವಂತೆ ಮಾಡಲಾಗಿದೆ. ಬಸವನಗುಡಿಯ ನ್ಯಾಶನಲ್ ಕಾಲೇಜು ಮೈದಾನದಲ್ಲಿ ಮಾರ್ಚ್ ಮೂರರಂದು ಪಾದಯಾತ್ರೆ ಅಂತ್ಯಗೊಳ್ಳಲಿದೆ.

ರಾಮನಗರ ಮತ್ತು ಚನ್ನಪಟ್ಟಣ ಎರಡೂ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಚ್.ಡಿ.ಕುಮಾರಸ್ವಾಮಿ
ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ರಾಮನಗರ ಮತ್ತು ಚನ್ನಪಟ್ಟಣ ಎರಡೂ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಚ್.ಡಿ.ಕುಮಾರಸ್ವಾಮಿ ಎರಡರಲ್ಲೂ ಗೆದ್ದಿದ್ದರು. ಇದಾದ ನಂತರ ಚನ್ನಪಟ್ಟಣ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಗೆಲುವು ಸಾಧಿಸಿದ್ದರು. ಕೊನೇ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿಯನ್ನೇ ಹೈಜಾಕ್ ಮಾಡಿ ಡಿಕೆಶಿ ಸಹೋದರರು ಬಿಜೆಪಿಗೆ ಸಡ್ಡು ಹೊಡೆದಿದ್ದರು. "ಈ ಭಾಗದ ಜನರು ನಮ್ಮ ತಾಯಿಗೆ ದೊಡ್ಡ ಮಟ್ಟದಲ್ಲಿ ಗೆಲುವು ತಂದು ಕೊಟ್ಟು ಹರಸಿದ್ದಾರೆ. ಸಾಕಷ್ಟು ಅಭಿವೃದ್ದಿ ಕೆಲಸಗಳನ್ನು ನಮ್ಮ ತಂದೆ ಮತ್ತು ನಮ್ಮ ತಾಯಿ ಮಾಡಿದ್ದಾರೆ"ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಪಕ್ಷದ ವರಿಷ್ಠರ ವಿವೇಚನೆಗೆ ಬಿಟ್ಟಂತಹ ವಿಚಾರ
"ಯುವ ಸಮುದಾಯಕ್ಕೆ ನನ್ನ ಮೇಲೆ ನಿರೀಕ್ಷೆಯಿದೆ, ಅವರ ಜೊತೆಗೂಡಿ ನಾನೂ ನನ್ನ ಕೈಲಾದ ಕೆಲಸವನ್ನು ಮಾಡುತ್ತೇನೆ. ಸಂಘಟನೆ ಮಾಡುವ ಇಚ್ಚಾಶಕ್ತಿಯನ್ನು ಇಟ್ಟುಕೊಂಡು ನಾನು ಇಲ್ಲಿಗೆ ಬಂದಿದ್ದೇನೆ"ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ವಿರುದ್ದ ರಾಮನಗರದಲ್ಲಿ ಸ್ಪರ್ಧಿಸುತ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ನಿಖಿಲ್, "ಅದು ಪಕ್ಷದ ವರಿಷ್ಠರ ವಿವೇಚನೆಗೆ ಬಿಟ್ಟಂತಹ ವಿಚಾರ, ಆ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದು ತಪ್ಪು"ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
Recommended Video

ಡಿಕೆಶಿ ವಿರುದ್ದ ಸ್ಪರ್ಧೆ: ಅಡ್ಡಗೋಡೆಯ ಮೇಲೆ ದೀಪವಿಟ್ಟ ನಿಖಿಲ್
"ಅದನ್ನೆಲ್ಲಾ ಈಗ ಚರ್ಚೆ ಮಾಡುವುದು ಸೂಕ್ತವಲ್ಲ, ಸಂಘಟನಾ ಕೆಲಸ ನಡೆಯುತ್ತಿದೆ. ಬಹಳ ಶಕ್ತಿಯುತವಾಗಿ ಜೆಡಿಎಸ್ ಹೊರಹೊಮ್ಮಲಿದೆ. ರಾಮನಗರ ಜಿಲ್ಲೆಯಲ್ಲಿ ಜೆಡಿಎಸ್ ಅತ್ಯಂತ ಶಕ್ತಿಯುತವಾಗಿದೆ. 2023ರ ಚುನಾವಣೆಯಲ್ಲಿ ನಮ್ಮ ಶಕ್ತಿ ಪ್ರದರ್ಶನವಾಗುತ್ತದೆ"ಎಂದು ನಿಖಿಲ್ ಕುಮಾರಸ್ವಾಮಿ ಹೇಳುವ ಮೂಲಕ, ಡಿಕೆಶಿ ಕುಟುಂಬದ ವಿರುದ್ದ ಸ್ಪರ್ಧೆಯ ಬಗ್ಗೆ ಖಚಿತ ನಿಲುವನ್ನು ತಾಳಲಿಲ್ಲ.












Click it and Unblock the Notifications