ರಾಮನಗರ: ಆಪರೇಷನ್ ಹಸ್ತ ಪ್ರಾರಂಭಿಸಿ HDKಗೆ ಸ್ವಕ್ಷೇತ್ರದಲ್ಲೇ ಶಾಕ್ ಕೊಡಲು ಮುಂದಾದ ಡಿ.ಕೆ.ಬ್ರದರ್ಸ್
ರಾಮನಗರ, ಅಕ್ಟೋಬರ್, 01: ರಾಜ್ಯದಲ್ಲಿ ಪ್ರತಿಧ್ವನಿಸುತ್ತಿರುವ ಕಾವೇರಿ ಕಿಚ್ಚಿನ ನಡುವೆಯೂ ಮುಂದಿನ ಲೋಕಸಭಾ ಚುನಾವಣೆಗೆ ತಯಾರಿ ನಡೆಸಿರುವ ಡಿ.ಕೆ.ಸಹೋದರರು ಸದ್ದಿಲ್ಲದೇ ಅಪರೇಷನ್ ಹಸ್ತಕ್ಕೆ ಮುಂದಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಪ್ತನಿಗೆ ಗಾಳ ಹಾಕುವ ಮೂಲಕ ಹೆಚ್.ಡಿ.ಕುಮಾರಸ್ವಾಮಿಗೆ ಸ್ವಕ್ಷೇತ್ರದಲ್ಲೇ ಠಕ್ಕರ್ ನೀಡಲು ಮುಂದಾಗಿದ್ದಾರೆ.
ಕೈ-ತೆನೆ ಸಮ್ಮಿಶ್ರ ಸರ್ಕಾರದ ಅವಧಿಯ ಜೋಡೆತ್ತುಗಳಾದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಇಬ್ಬರು ನಾಯಕರು ಪರಸ್ಪರ ಅಣಿಯಲು ತಂತ್ರ-ಪ್ರತಿತಂತ್ರ ರೂಪಿಸುತ್ತಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಸೋಲಿಸಲು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಎದುರಾಳಿ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಜೊತೆ ಕೈ ಜೋಡಿಸಿದ್ದಾರೆ.

ಹೆಚ್.ಡಿ.ಕುಮಾರಸ್ವಾಮಿ- ಸಿ.ಪಿ.ಯೋಗೇಶ್ವರ್ ಕೈಜೋಡಿಸಿದ ಬೆನ್ನಲ್ಲೇ ಸಂಸದ ಡಿ.ಕೆ.ಸುರೇಶ್, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಪ್ತ ಮಾಜಿ ಶಾಸಕ ಎಂ.ಸಿ.ಅಶ್ವಥ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯುವ ಮೂಲಕ ಹೆಚ್.ಡಿ.ಕೆ ಸ್ವಕ್ಷೇತ್ರ ಬೊಂಬೆನಾಡು ಚನ್ನಪಟ್ಟಣದಲ್ಲೇ ಠಕ್ಕರ್ ನೀಡಲು ಮುಂದಾಗಿದ್ದು, ಇಂದು ಮಾಜಿ ಶಾಸಕ ಎಂ.ಸಿ.ಅಶ್ವಥ್ ನಿವಾಸಕ್ಕೆ ಬೇಟಿ ನೀಡಿದ ಸಂಸದ ಡಿ.ಕೆ.ಸುರೇಶ್, ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ನೀಡಿದರು.
ಮಾಜಿ ಶಾಸಕ ಎಂ.ಸಿ.ಅಶ್ವತ್ಥ್ ಭೇಟಿಯಾಗಿ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ನೀಡಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯ ಡಿ.ಕೆ.ಸುರೇಶ್, ಜೆಡಿಎಸ್ ಹಾಗೂ ಬಿಜೆಪಿ ಎರಡು ಪಕ್ಷಗಳ ಮೈತ್ರಿ ಪವಿತ್ರವೂ ಅಥವಾ ಅಪವಿತ್ರವೂ ಎಂಬುದನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನರು ತೀರ್ಮಾನ ಮಾಡುತ್ತಾರೆ ಎಂದು ಕಿಡಿಕಾರಿದರು.
ಕಳೆದ ಮೂವತ್ತು ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿರುವ ಮಾಜಿ ಶಾಸಕ ಎಂ.ಸಿ.ಅಶ್ವತ್ಥ್, ಅವರೊಂದಿಗೆ ನಮ್ಮ ಕುಟುಂಬದ ಸ್ನೇಹವಿದೆ. ಅವರು ಬೇರೆ ಪಕ್ಷದಲ್ಲಿದ್ದರು ನಮ್ಮ ಸ್ನೇಹಕ್ಕೆ ಯಾವುದೇ ಧಕ್ಕೆಯಾಗಿಲ್ಲ. ಈ ಹಿಂದೆಯೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಶ್ವಥ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ಮಾಡಿದ್ದರು. ಆದರೆ ಅಶ್ವಥ್ ಒಪ್ಪಿರಲಿಲ್ಲ. ಆದರೆ ಇಂದು ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ನೀಡಿದ್ದೇನೆ. ಅವರು ನಮ್ಮ ಮನವಿಗೆ ಸ್ಪಂದಿಸಿದ್ದಾರೆ ಎಂದರು.
ಜೆಡಿಎಸ್ ಮುಖಂಡ ಮಾಜಿ ಶಾಸಕ ಎಂ.ಸಿ.ಅಶ್ವಥ್ ಹಾಗೂ ಅವರ ಬೆಂಬಲಿಗರು ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಛೇರಿಯಲ್ಲಿ ಅಕ್ಟೋಬರ್ 2 ಸೋಮವಾರ ಗಾಂಧಿ ಜಯಂತಿಯಂದು ಅಧಿಕೃತವಾಗಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತ ಮೆಚ್ಚಿ ಯಾರೇ ಕಾಂಗ್ರೆಸ್ ಪಕ್ಷಕ್ಕೆ ಬಂದರೂ ಮುಕ್ತವಾಗಿ ಸ್ವಾಗತಿಸುತ್ತೇವೆ ಎಂದು ಸಂಸದ ಡಿ.ಕೆ.ಸುರೇಶ್, ಮಾಧ್ಯಮಗಳ ಮೂಲಕ ಆಹ್ವಾನ ನೀಡಿದರು.












Click it and Unblock the Notifications