ಸ್ಥಳೀಯರಿಗೆ ಟಿಕೆಟ್ ನೀಡಿ, ಇಲ್ಲದಿದ್ರೆ ಬಂಡಾಯ: ಕನಕಪುರ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ
ರಾಮನಗರ, ಏಪ್ರಿಲ್, 08: ರಾಜ್ಯ ವಿಧಾನಸಭೆ ಚುನಾವಣೆಗೆ ಇದೇ ತಿಂಗಳು ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಟಿಕೆಟ್ ಆಕಾಂಕ್ಷಿಗಳ ಮನದಲ್ಲಿ ಅಳುಕು ಭಾವನೆ ಮನೆ ಮಾಡಿದ್ದು, ಪಕ್ಷದಿಂದ ಬಿ ಪಾರಂ ಖಾತ್ರಿಮಾಡಿಕೊಳ್ಳಲು ನಾನಾ ಕಸರತ್ತುಗಳನ್ನು ನಡೆಸುತ್ತಿದ್ದಾರೆ. ಇನ್ನೂ ಕೆಲವೆಡೆ ಅಭ್ಯರ್ಥಿ ವಿಚಾರವಾಗಿ ಭಿನ್ನಪತ ಸ್ಫೋಟಗೊಳ್ಳುತ್ತಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪರ್ಧೆ ಮಾಡುತ್ತಿರುವ ಕನಕಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಚಾರವಾಗಿ ಕನಕಪುರ ಬಿಜೆಪಿ ಪಾಳಯದಲ್ಲಿ ಭಿನ್ನಮತ ಸ್ಫೋಟವಾಗಿದ್ದು, ಕ್ಷೇತ್ರದ ಬಿಜೆಪಿ ಸಂಘಟನೆಯಲ್ಲಿ ತೊಡಗಿರುವ ಸ್ಥಳೀಯ ಮುಖಂಡರನ್ನು ಗುರುತಿಸಿ ಅಭ್ಯರ್ಥಿ ಮಾಡಬೇಕು. ಯಾವುದೇ ಕಾರಣಕ್ಕೂ ವಲಸೆ ಅಭ್ಯರ್ಥಿಗಳನ್ನು ಚುನಾವಾಣೆಗೆ ನಿಲ್ಲಿಸಬಾರದು ಎಂದು ಕಾರ್ಯಕರ್ತರು ಬಿಜೆಪಿ ವರಿಷ್ಠರನ್ನು ಒತ್ತಾಯಿಸಿದ್ದಾರೆ.

ಅಪ್ಪಾಜಿ ಗೌಡರನ್ನ ಕಣಕ್ಕಿಳಿಸಲು ಬಿಜೆಪಿ ಪ್ಲಾನ್
ಬಿಜೆಪಿ ವರಿಷ್ಠರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಸಮರ್ಥ ಪೈಪೋಟಿ ನೀಡುವ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸೂಕ್ತ ಅಭ್ಯರ್ಥಿ ಹುಡುಕಾಟ ಮುಂದುವರೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವು ಅಭ್ಯರ್ಥಿಗಳ ಹೆಸರು ಹರಿದಾಡುತ್ತಿದೆ. ಅಂತಯೇ ಒಕ್ಕಲಿಗರ ಸಂಘದ ನಿರ್ದೇಶಕರಾದ ಡಾ.ಅಪ್ಪಾಜಿ ಗೌಡ ಅವರು ಕನಕಪುರ ಕ್ಷೇತ್ರದ ಅಭ್ಯರ್ಥಿ ಆಗುತ್ತಾರೆ ಎನ್ನುವ ಮಾತುಗಳು ಜೋರಾಗಿ ಕೇಳಿಬರುತ್ತಿವೆ.
ಬಿಜೆಪಿ ಜಿಲ್ಲಾಧ್ಯಕ್ಷರಿಗೆ ತರಾಟೆ
ಕನಕಪುರ ಕ್ಷೇತ್ರದಿಂದ ಡಾ. ಅಪ್ಪಾಜಿಗೌಡ ಸ್ಪರ್ಧೆ ಮಾಡುತ್ತಾರೆ ಎನ್ನುವ ಸುದ್ದಿ ಹರಡಿದ ಹಿನ್ನೆಲೆಯಲ್ಲಿ ಮೊನ್ನೆ (ಏಪ್ರಿಲ್ 06) ನಗರದ ಗಣಪತಿ ದೇವಾಲಯದಲ್ಲಿ ಬಿಜೆಪಿ ಪಕ್ಷದ ಸಂಸ್ಥಾಪನಾ ದಿನಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ವೇದಿಕೆಯಲ್ಲಿ ಡಾ.ಅಪ್ಪಾಜಿಗೌಡ ಪರ ಹಾಗೂ ವಿರೋಧ ಘೋಷಣೆ ಹಾಕುವ ಮೂಲಕ ಕಾರ್ಯಕರ್ತರು ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಸ್ಥಳೀಯ ಅಭ್ಯರ್ಥಿಗೆ ಅವಕಾಶ ಕೊಡಿ ಎಂದ ಕೆಲ ಕಾರ್ಯಕರ್ತರು ಪಟ್ಟುಹಿಡಿದರೆ, ಮತ್ತಷ್ಟು ಕಾರ್ಯಕರ್ತರು ಡಾ.ಅಪ್ಪಾಜಿಗೌಡ ಅವರೇ ಅಭ್ಯರ್ಥಿ ಆಗಬೇಕೆಂದು ಪಟ್ಟುಹಿಡಿದರು.

ಡಾ.ಅಪ್ಪಾಜಿಗೌಡ ವಿರುದ್ಧ ಘೋಷಣೆ
ಇನ್ನು ಸ್ಥಳೀಯರ ಕಾರ್ಯಕರ್ತರು ಸಂಭವನೀಯ ಅಭ್ಯರ್ಥಿ ಡಾ.ಅಪ್ಪಾಜಿಗೌಡ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಕ್ಷೇತ್ರದ ಹೊರಗಿನವರಿಗೆ ಅವಕಾಶ ಮಾಡಿಕೊಡದಂತೆ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದರು. ಕ್ಷೇತ್ರದಲ್ಲಿ ಪಕ್ಷ ಕಟ್ಟುವ ಕೆಲಸ ಮಾಡಿರುವಂತಹ ಕಾರ್ಯಕರ್ತರಿಗೆ ಅವಕಾಶ ಕೊಡಿ. ಹೊರಗಿನಿಂದ ಬಂದವರು ಚುನಾವಣೆ ಬಳಿಕ ಕಾರ್ಯಕರ್ತರ ಕೈಗೆ ಸಿಗುವುದಿಲ್ಲ ಎಂದು ಆರೋಪಿಸಿದರು. ಹಾಗೆಯೇ ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜ್ ಅವರನ್ನು ಸ್ಥಳೀಯ ಬಿಜೆಪಿ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡರು.
ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಎಚ್ಚರಿಕೆ
ಡಾ.ಅಪ್ಪಾಜಿಗೌಡ ಸ್ಪರ್ಧೆಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿರುವ ಕನಕಪುರ ತಾಲೂಕು ಬಿಜೆಪಿ ಘಟಕದ ಸಂಚಾಲಕ ರವಿಕುಮಾರ್ ಗೌಡ, ಡಿ.ಕೆ.ಶಿವಕುಮಾರ್ ಸಹೋದರ ಅಬ್ಬರದಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಕಟ್ಟಲು ಆಗುತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿದ್ದೇನೆ. ಆದರೆ ಬಿಜೆಪಿಯ ನಾಯಕರು ಒಂದು ದಿನವೂ ಕ್ಷೇತ್ರಕ್ಕೆ ಬಾರದವರಿಗೆ ಟಿಕೆಟ್ ನೀಡಿಲು ಮುಂದಾಗಿದ್ದಾರೆ ಎಂದು ಖಂಡಿಸಿದರು.
ಪಕ್ಷದ ಸಂಘಟನೆಗಾಗಿ ದುಡಿಯುತ್ತಿರುವ ಸ್ಥಳಿಯ ಮುಖಂಡರನ್ನು ಗುರುತಿಸಿ ಚುನಾವಣೆ ಸ್ಪರ್ಧೆಗೆ ಅವಕಾಶ ಮಾಡಿಕೊಡವ ಭರವಸೆಯನ್ನು ಜಿಲ್ಲಾ ಬಿಜೆಪಿ ಮುಖಂಡರು ನೀಡಿದ್ದರು. ಆದರೆ ಇದೀಗ ಅಪ್ಪಾಜಿ ಗೌಡರ ಹೆಸರು ಕೇಳಿಬರುತ್ತಿದೆ. ಪಕ್ಷದ ವರಿಷ್ಠರ ನಡೆಗೆ ನಮ್ಮ ವಿರೋಧ ಇದೆ.
ಒಂದು ವೇಳೆ ಪಕ್ಷದ ನಾಯಕರು ಸ್ಥಳೀಯ ಮುಖಂಡರ ವಿರೋಧದ ನಡುವೆಯೂ ಡಾ.ಅಪ್ಪಾಜಿಗೌಡ ಅವರಿಗೆ ಟಿಕೆಟ್ ಕೊಟ್ಟರೆ ಬಂಡಾಯ ಅಭ್ಯರ್ಥಿ ಆಗಿ ಸ್ಪರ್ಧೆ ಮಾಡುತ್ತೇನೆ ಎಂದು ಬಿಜೆಪಿ ವರಿಷ್ಠರಿಗೆ ಕನಕಪುರ ತಾಲೂಕು ಬಿಜೆಪಿ ಘಟಕದ ಸಂಚಾಲಕ ರವಿಕುಮಾರ್ ಗೌಡ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications