'ದಕ್ಷಿಣ ಭಾರತದಲ್ಲಿ ಬಿಜೆಪಿ ಹೆಬ್ಬಾಗಿಲನ್ನು ಜನ ಬಂದ್ ಮಾಡುತ್ತಾರೆ'
ರಾಮನಗರ, ಏಪ್ರಿಲ್ 9: ಬಿಜೆಪಿ ಮತ್ತು ಸಂಘ ಪರಿವಾರದ ವಿರುದ್ದ ಕಿಡಿಕಾರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಪರ್ವ ಮುಂದುವರಿದಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಹೆಬ್ಬಾಗಿಲನಂತಿರುವ ಕರ್ನಾಟಕದಲ್ಲಿ ಬಿಜೆಪಿಗೆ ಜನ ಪಾಠ ಕಲಿಸಲಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.
"ನನ್ನ ನೇತೃತ್ವದ ಸಮ್ಮಿಶ್ರ ಸರಕಾರವನ್ನು ಪತನಗೊಳಿಸುವಂತಹ ಕುತಂತ್ರವನ್ನು ಬಿಜೆಪಿಯವರು ಮಾಡಿದ್ದರು ಎಂದು ಈ ಹಿಂದೆಯೂ ಬಹಳ ಸ್ಪಷ್ಟವಾಗಿ ಹೇಳಿದ್ದೇನೆ. ನನ್ನ ಸರಕಾರ ಪತನಗೊಂಡ ಎರಡೇ ತಿಂಗಳಲ್ಲಿ ಉತ್ತರ ಕರ್ನಾಟಕದಲ್ಲಿ ಪ್ರವಾಹ ಎದುರಾಗಿದ್ದರಿಂದ ನಾನು ಮೌನಕ್ಕೆ ಶರಣಾಗಿದ್ದೆ"ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.
"ಲಕ್ಷಾಂತರ ಜನರು ಬೀದಿಗೆ ಬಂದರು, ಬೆಳೆ ನಾಶವಾಯಿತು. ಅಂತಹ ಸಂದರ್ಭದಲ್ಲಿ ನನ್ನ ಸರಕಾರವನ್ನು ಪತನಗೊಳಿಸಲಾಯಿತು ಎಂದು ಟೀಕೆ ಮಾಡುತ್ತಾ ಹೋದರೆ, ಸಾರ್ವಜನಿಕರು ಅಪಾರ್ಥ ಮಾಡಿಕೊಳ್ಳಬಾರದು ಎಂದು ಸುಮ್ಮನಾಗಿದ್ದೆ"ಎಂದು ಕುಮಾರಸ್ವಾಮಿ ಅಂದಿನ ಘಟನೆಯನ್ನು ಮೆಲುಕು ಹಾಕಿದರು.

"ಇದಾದ ನಂತರ ಕೋವಿಡ್ ಅನಾಹುತ ಆರಂಭವಾಯಿತು, ಆಗಲೂ, ಸರಕಾರ ಸರಿಯಾದ ದಾರಿಯಲ್ಲಿ ನಡೆಯಲಿ ಎಂದು ಅವಕಾಶವನ್ನು ಕೊಟ್ಟೆವು. ಕೋವಿಡ್ ಅನ್ನು ಸರಕಾರ ಯಾವರೀತಿ ನಿಭಾಯಿಸಿತು ಎನ್ನುವ ಚರ್ಚೆಗೆ ನಾನು ಹೋಗುವುದಿಲ್ಲ. ಈಗ ತಮ್ಮ ಅಂಗ ಪಕ್ಷಗಳ ಮೂಲಕ ನಾಡಿನಲ್ಲಿ ಸಾಮರಸ್ಯ ಕದಡುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ"ಎಂದು ಕುಮಾರಸ್ವಾಮಿ ಆಕ್ರೋಶ ಹೊರಹಾಕಿದರು.
"ಕಾಂಗ್ರೆಸ್ಸಿನವರು ಧ್ವನಿ ಎತ್ತದೇ ಇದ್ದಿದ್ದರಿಂದ ನಾನು ಮಾತಾಡಬೇಕಾಗಿ ಬಂದಿದೆ. ನಮ್ಮ ಮೌನವನ್ನು ಬಿಜೆಪಿಯವರು ದುರುಪಯೋಗ ಪಡಿಸಿಕೊಂಡರೆ, ಜನರಿಗೆ ಏನೆಂದು ನಾನು ಉತ್ತರ ಕೊಡಲಿ. ಹಿಜಾಬ್, ಜಟ್ಕಾ, ಹಲಾಲ್ ಮುಂತಾದ ವಿಚಾರಗಳು ಬಿಜೆಪಿಗೆ ತಿರುಗುಬಾಣವಾಗಲಿದೆ"ಎಂದು ಕುಮಾರಸ್ವಾಮಿ ಎಚ್ಚರಿಸಿದರು.
"ಈಗ ನಡೆಯುತ್ತಿರುವ ಎಲ್ಲಾ ವಿದ್ಯಮಾನಗಳು ಬಿಜೆಪಿಗೆ ನಷ್ಟ ತಂದೊಡ್ಡಲಿದೆ ಎನ್ನುವುದು ಸ್ಪಷ್ಟ. ದಕ್ಷಿಣ ಭಾರತದಲ್ಲಿ ಬಿಜೆಪಿಯ ಹೆಬ್ಬಾಗಿಲು ಎಂದೇನು ಕರ್ನಾಟಕವನ್ನು ಕರೆಯುತ್ತಿದ್ದಾರೋ ಅದು ಬಂದ್ ಆಗಲಿದೆ"ಎಂದು ಎಚ್.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದರು.












Click it and Unblock the Notifications