'ನಿಮ್ಮ ಮನೆಯ ಮಗ' ಕುಮಾರಸ್ವಾಮಿ ಸಾರ್ವಜನಿಕರಿಗೆ ನೀಡಿದ ಮುಕ್ತ ಅವಕಾಶ
ರಾಮನಗರ, ಜುಲೈ 5: ಇತ್ತೀಚಿನ ದಿನಗಳಲ್ಲಿ ರಾಜಧಾನಿ ಬೆಂಗಳೂರಿಗಿಂತ ಹೆಚ್ಚಾಗಿ, ರಾಮನಗರ ಜಿಲ್ಲೆ ಬಿಡದಿಯ ತಮ್ಮ ತೋಟದ ಮನೆಯಲ್ಲಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ತಮ್ಮನ್ನು ಭೇಟಿ ಮಾಡಲು ಬರುವ ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಕುಮಾರಸ್ವಾಮಿ, ಸೋಮವಾರದಿಂದ ಶನಿವಾರದ ವರೆಗೆ ಪ್ರತೀದಿನ ಸಾರ್ವಜನಿಕರು ನನ್ನನ್ನು ಭೇಟಿಯಾಗಬಹುದು ಎಂದು ಹೇಳಿದ್ದಾರೆ. ಅವರು ಕಳುಹಿಸಿರುವ ಸಂದೇಶ ಈ ರೀತಿಯಿದೆ:
ರಾಮನಗರ ಜಿಲ್ಲೆ ಬಿಡದಿ ಸಮೀಪ ಇರುವ ಕೇತಗಾನಹಳ್ಳಿಯ ನನ್ನ ತೋಟದ ಮನೆಯಲ್ಲಿ ಕಳೆದ ಆರು ತಿಂಗಳಿಂದ ವಾಸ್ತವ್ಯ ಹೂಡಿದ್ದೇನೆ. ನನ್ನ ಹೊಲ ಮತ್ತು ತೋಟದ ಕೃಷಿಯನ್ನು ಇಸ್ರೇಲ್ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇನೆ.

ನನ್ನ ಭೇಟಿಗೆ ರಾಜ್ಯದ ನಾನಾ ಭಾಗಗಳಿಂದ ನಮ್ಮ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಹಿತೈಷಿಗಳು ಆಗಮಿಸುತ್ತಿದ್ದಾರೆ. ಈ ಮೂಲಕ ನನ್ನ ವಿನಮ್ರ ಮನವಿಯೆಂದರೆ, ಬೆಳಗ್ಗೆ 8.30 ರಿಂದ 10.30 ಗಂಟೆಯವರೆಗೆ ನನ್ನ ತೋಟದ ಮನೆಯಲ್ಲಿ ಭೇಟಿಯಾಗಲು ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ.
ಭಾನುವಾರ ಹೊರತುಪಡಿಸಿ, ಉಳಿದ ದಿನಗಳಲ್ಲಿ ಈ ಸಮಯದಲ್ಲಿ ಬಂದು ನನ್ನನ್ನು ಭೇಟಿ ಮಾಡಬಹುದು. ಸಾರ್ಜನಿಕರು ನನ್ನನ್ನು ಭೇಟಿ ಮಾಡುವ ಸದುದ್ದೇಶಕ್ಕಾಗಿಯೇ ನನ್ನ ತೋಟದ ಮನೆಯಲ್ಲಿ ಪುಟ್ಟ ಕಚೇರಿಯೊಂದನ್ನು ಆರಂಭಿಸಿದ್ದೇನೆ.
ಈ ದಿನ (5.6.2021) ಕಚೇರಿಗೆ ಔಪಚಾರಿಕವಾಗಿ ಪೂಜೆ ನೆರವೇರಿಸಿದ್ದೇನೆ. ಇದನ್ನು ತಮ್ಮ ಅವಗಾಹನೆಗೆ ತರುತ್ತಿದ್ದೇನೆ. ನಿಮ್ಮ ಮನೆಯ ಮಗ, ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿಗಳು.












Click it and Unblock the Notifications