ಆರೋಪಿಗಳನ್ನು ರಾಮನಗರಕ್ಕೆ ತಂದದ್ದು ಸರ್ಕಾರದ ಸಣ್ಣತನ: ಎಚ್ಡಿಕೆ
ರಾಮನಗರ, ಏಪ್ರಿಲ್ 26: ಕೊರೊನಾ ವೈರಸ್ ಸೋಂಕಿತ ಪಾದರಾಯನಪುರದ ಕೈದಿಗಳನ್ನು ಕರೆತಂದು ನೆಮ್ಮದಿಯಾಗಿದ್ದ ರಾಮನಗರಕ್ಕೆ ಕೊರೊನಾ ಸೋಂಕು ಹರಡಿಸಿದ ಸಣ್ಣತನ ನಿಮ್ಮದು, ನನ್ನದಲ್ಲ ಎಂದು ಟ್ವೀಟ್ ಮಾಡುವ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಪಾದರಾಯನಪುರದ ಗಲಭೆಕೋರರನ್ನು ರಾಮನಗರ ಜೈಲಿಗೆ ಸ್ಥಳಾಂತರ ಮಾಡಿದ್ದ ವಿಚಾರದಲ್ಲಿ ಸರ್ಕಾರದ ಸಚಿವರು ನೀಡುತ್ತಿರುವ ಹೇಳಿಕೆಗಳಿಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಖಾರವಾಗಿಯೇ ಎಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಪಾದರಾಯನಪುರದ ಗಲಭೆಕೋರರನ್ನು ರಾಮನಗರ ಜೈಲಿಗೆ ಸ್ಥಳಾಂತರ ಮಾಡುವ ವಿಷಯದಲ್ಲಿ ಎಡಬಿಡಂಗಿತನ ಮತ್ತು ರಾಜಕಾರಣ ಮಾಡಿದ್ದು ನಿಮ್ಮದೇ ಬಿಜೆಪಿ ಸರ್ಕಾರ ಎನ್ನುವುದು ನಿಮಗೆ ಗೊತ್ತಿಲ್ಲವೇ ಎಂ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಪ್ರಶ್ನೆ ಮಾಡಿದ್ದಾರೆ.

ನಾನು ಸಣ್ಣತನ ಮಾಡುತ್ತೇನೆ ಎಂದು ದೂಷಿಸುವ ಸರ್ಕಾರ ಮತ್ತ್ಯಾಕೆ ಯು-ಟರ್ನ್ ತೆಗೆದುಕೊಂಡು ಕೈದಿಗಳನ್ನು ಬೆಂಗಳೂರಿಗೆ ಸ್ಥಳಾಂತರ ಮಾಡಿತು, ಮೊದಲೇ ಈ ಕೆಲಸ ಮಾಡಿದ್ದರೆ ನಿಮ್ಮ ಸರ್ಕಾರಕ್ಕೊಂದು ಮರ್ಯಾದೆ ಸಿಗುತ್ತಿತ್ತು.
ರಾಮನಗರ ಜಿಲ್ಲೆಯ ಜನತೆಯಲ್ಲಿ ಆತಂಕ ಸೃಷ್ಟಿಸಿ ಬಿಜೆಪಿ ಸರ್ಕಾರ ಸಾದಿಸಿದ್ದಾದರೂ ಏನು?, ರೋಗ ನಿಯಂತ್ರಿಸಬೇಕಾದ ಸರ್ಕಾರವೇ ರೋಗ ಹಂಚಿದ್ದು ಸರ್ಕಾರದ ವೈಪಲ್ಯವಲ್ಲದೇ ಮತ್ತೇನು ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.












Click it and Unblock the Notifications