ರಾಮನಗರ; ನೇಣಿಗೆ ಕೊರಳೊಡ್ಡಿದ 7ತಿಂಗಳ ಗರ್ಭಿಣಿ
ರಾಮನಗರ, ಜನವರಿ 27; ಗಂಡನ ಹಾಗೂ ಆತನ ಕುಟುಂಬದ ಕಿರುಕುಳಕ್ಕೆ ಬೇಸತ್ತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆ 7 ತಿಂಗಳ ಗರ್ಭಿಣಿಯಾಗಿದ್ದು, ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.
ಗಂಡನ ಮನೆಯವರ ಕ್ರೌರ್ಯಕ್ಕೆ ಬಲಿಯಾದ 23ರ ಹರೆಯದ ಹುಡುಗಿ ಹೆಸರು ಜಾಹ್ನವಿ. ಈಕೆ ರಾಮನಗರದ ಮಂಜುನಾಥ ನಗರ ಬಡಾವಣೆಯ ನಿವಾಸಿ ದಿ. ಚನ್ನೇಗೌಡ, ಗೀತಾ ದಂತಿಗಳ ಪುತ್ರಿ.
'ನನ್ನಂತ ಹೆಣ್ಣು ಮಕ್ಕಳಿಗೆ ನ್ಯಾಯ ಕೊಡಿಸಿ' ಎಂದು ಡೆತ್ ನೋಟ್ ಬರೆದಿಟ್ಟು 7 ಗರ್ಭಿಣಿ ಜಾಹ್ನವಿ ತನ್ನ ತವರು ಮನೆಯಲ್ಲಿ ನೇಣಿಗೆ ಕೊರಳೊಡ್ಡಿದ್ದಾಳೆ. ಸುಂದರ ಸಂಸಾರ ನಡೆಸುತ್ತಾ ಗಂಡನೊಂದಿಗೆ ಬದುಕು ಕಟ್ಟಿಕೊಳ್ಳುವ ಮಹದಾಸೆ ಇಟ್ಟುಕೊಂಡಿದ್ದ ಸಾವಿಗೆ ಶರಣಾಗಿದ್ದಾಳೆ.

ಪತಿ, ಆತನ ಮನೆಯವರ ಕಿರುಕುಳ ತಾಳಲಾಗದೇ ಒಂದು ತಿಂಗಳ ಹಿಂದಷ್ಟೇ ತವರು ಮನೆ ಸೇರಿಕೊಂಡಿದ್ದಳು ಜಾಹ್ನವಿ. ತವರಿಗೆ ಬಂದ ನಂತರವೂ ಪತಿ ಕರ್ಣನ ಕುಚೇಷ್ಟೆ ಹೆಚ್ಚಾಗಿತ್ತು. ಇತರೆ ಮಹಿಳೆಯರ ಜೊತೆ ನಗ್ನ ವಿಡಿಯೋ ಚಾಟಿಂಗ್ ಮಾಡುತ್ತಿದ್ದ, ಜಾಹ್ನವಿ ಅಶ್ಲೀಲ ವಿಡಿಯೋ, ಫೋಟೋ ಇಟ್ಟುಕೊಂಡು ಮತ್ತಷ್ಟು ವರದಕ್ಷಿಣೆ ಹಣ ತರುವಂತೆ ಪೀಡಿಸುತ್ತಿದ್ದ ಎಂದು ಡೆತ್ ನೋಟ್ ಬರೆದಿಟ್ಟು ಜಾಹ್ನವಿ ನೇಣು ಹಾಕಿಕೊಂಡಿದ್ದಾಳೆ.
ಕಳೆದ 9 ತಿಂಗಳ ಹಿಂದೆ ಮನೆಯವರು ಒಪ್ಪಿದ್ದಂತೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಬಲ್ಲೇನಹಳ್ಳಿ ಗ್ರಾಮದ ಕರ್ಣ ಎಂಬುವವನ ಜತೆ ಜಾಹ್ನವಿ ವಿವಾಹವಾಗಿತ್ತು. ಇನ್ನು ಸಂಸಾರದ ಹಲವು ಆಸೆ ಆಕಾಂಕ್ಷೆಗಳನ್ನು ಇಟ್ಟುಕೊಂಡಿದ್ದ ಜಾಹ್ನವಿಗೆ ಮನ ಬಂದಂತೆ ಥಳಿಸಿ ಪತಿ, ಮಾವ ಬೋರೆಗೌಡ, ಅತ್ತೆ ಸವಿತಾ ಸೇರಿಕೊಂಡು ಕಿರುಕುಳ ಕೊಡುತ್ತಿದ್ದರು ಎಂದು ಜಾಹ್ನವಿ ಪೋಷಕರು ಆರೋಪಿಸಿದ್ದಾರೆ.
ಇದೇ ವಿಚಾರವಾಗಿ ಹಲವು ಬಾರಿ ನ್ಯಾಯ ಪಂಚಾಯಿತಿ ಕೂಡ ನಡೆದಿತ್ತು. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಕರ್ಣ ಬೇರೆ ಮಹಿಳೆಯರ ಜೊತೆ ಸ್ನೇಹ ಬೆಳಸಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನಲ್ಲದೇ ವಾಟ್ಸಾಪ್‌ನಲ್ಲಿ ನಗ್ನ ಚಾಟಿಂಗ್ ಮಾಡುತ್ತಿದ್ದ ವಿಕೃತ ವ್ಯಕ್ತಿಯಾಗಿದ್ದ ಎಂದುಮೃತ ಜಾಹ್ನವಿ ಸಂಬಂಧಿಕರು ಆರೋಪಿಸಿದ್ದಾರೆ.
ಮೃತ ಜಾಹ್ನವಿ ಇಂಜಿನಿಯರಿಂಗ್ ಪದವಿಯ ಕಡೆಯ ವರ್ಷ ವ್ಯಾಸಂಗ ಮಾಡುತ್ತಿದ್ದಳು. ಅಲ್ಲದೇ ಆಕೆಯ ತಾಯಿ ಅಗ್ನಿ ಶಾಮಕ ಇಲಾಖೆಯಲ್ಲಿ ಎಸ್.ಡಿ.ಎ ಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇನ್ನು ಇದನೆಲ್ಲಾ ತಿಳಿದ ಕರ್ಣ ಲಕ್ಷ ಲಕ್ಷ ಹಣ ತಂದುಕೊಡುವಂತೆ ಕಿರುಕುಳ ನೀಡುತ್ತಿದ್ದ ಅಲ್ಲದೇ ಸಿಗರೇಟ್‌ನಿಂದ ಸುಟ್ಟು ಜಾಹ್ನವಿಗೆ ಚಿತ್ರಹಿಂಸೆ ನೀಡುತ್ತಿದ್ದನಂತೆ.
ಹಣ ತಂದುಕೊಡದಿದ್ದರೆ ನಿನ್ನ ಅಶ್ಲೀಲ ವಿಡಿಯೋ, ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುವ ಬೆದರಿಕೆ ಹಾಕಿದ್ದ ಕರ್ಣ ಹಾಗೂ ಕಿರುಕುಳ ನೀಡಿದ ಆತನ ಮನೆಯವರಿಗೆ ಶಿಕ್ಷೆಯಾಗಬೇಕೆಂದು ಮೃತಳ ಸೋದರ ಮಾವ ಪುಟ್ಟಸ್ವಾಮಿ ಆಗ್ರಹಿಸಿದ್ದಾರೆ.
ಇನ್ನು ಪದವಿ ಮುಗಿಸಿ ಇನ್ನೇನು ಒಂದೆರಡು ತಿಂಗಳಲ್ಲಿ ಮಗು ಗಂಡನ ಜತೆಯಲ್ಲಿ ಸುಖವಾಗಿ ಬಾಳಬೇಕೆಂದು ಜಾಹ್ನವಿ ಅಂದುಕೊಂಡಿದ್ದಳು. ಈ ನಿಟ್ಟಿನಲ್ಲಿ ಹಲವು ಬಾರಿ ಗಂಡನೊಂದಿಗೆ ಅನ್ಯೋನ್ಯವಾಗಿ ಇರಬೇಕು ಎಂದು ಪ್ರಯತ್ನ ಸಹ ಪಟ್ಟಿದ್ದಳಂತೆ. ಆದರೆ ಆತನ ಕಿರುಕುಳ ಹಾಗೂ ಕೊಂಕು ಮಾತುಗಳಿಂದ ಜಾಹ್ನವಿ ಬೇಸತ್ತು ಹೋಗಿದ್ದಳು. ಇದರಿಂದಾಗಿ ನೇಣಿಗೆ ಕೊರಳೊಡ್ಡಿದ್ದಾಳೆ.
ಈ ಬಗ್ಗೆ ಐಜೂರು ಪೊಲೀಸ್ ಠಾಣೆಯಲ್ಲಿ ಕರ್ಣ ಹಾಗೂ ಅವರ ತಂದೆ, ತಾಯಿ ವಿರುದ್ಧ ಜಾಹ್ನವಿ ಪೋಷಕರು ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ರಾಮನಗರ ಎಸ್‌ಪಿ ಸಂತೋಷ್ ಬಾಬು ತಿಳಿಸಿದ್ದಾರೆ.
ಒಟ್ಟಾರೆ ಸುಂದರ ಬದುಕಿನ ಕನಸು ಕಟ್ಟಿಕೊಂಡಿದ್ದ ತುಂಬು ಗರ್ಭಿಣಿ ಪತಿಯ ವಿಕೃತ ಕಿರುಕುಳಕ್ಕೆ ಬಲಿಯಾಗಿದ್ದು ದುರದೃಷ್ಟಕರ. ಇನ್ನು ಪ್ರಪಂಚವನ್ನು ನೋಡದ ಕಂದನನ್ನು ಒಡಲೊಳಗೆ ಇಟ್ಟುಕೊಂಡು ಜಾಹ್ನವಿ ಆತ್ಮಹತ್ಯೆ ಮಾಡಿಕೊಳ್ಳುವ ಬದಲು ಮಗುವಿನ ಲಾಲನೆ ಪಾಲನೆ ಮಾಡುತ್ತಾ ತನ್ನ ನೋವನ್ನು ಮರೆಯಬಹುದಿತ್ತು. ಆದರೆ ದುಡುಕಿ ನೇಣುಹಾಕಿಕೊಂಡದ್ದು ಮಾತ್ರ ನಿಜಕ್ಕೂ ವಿಪರ್ಯಾಸ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಆರಂಭಿಸಿದೆ. ಸಹಾಯವಾಣಿ ಸಂಖ್ಯೆ 080 - 25497777











Click it and Unblock the Notifications