ಸ್ಥಳೀಯರಿಗೇ ಬೇಡವಾದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಿಂದ ಬಿಜೆಪಿಗೇ ಏನು ಲಾಭವಿಲ್ಲ!
ರಾಮನಗರ, ಮೇ. 01: ಕಳೆದ ತಿಂಗಳು ಅದ್ದೂರಿಯಾಗಿ ಕಾರ್ಯಾರಂಭ ಮಾಡಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯನ್ನು ಬಿಜೆಪಿ ವಿಧಾನಸಭಾ ಚುಣಾವಣೆಗೆ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. ಪದೇ ಪದೇ ಅಭಿವೃದ್ಧಿ ಎಂದರೇ ಬೃಹತ್ ರಸ್ತೆಗಳ ನಿರ್ಮಾಣ ಎಂಬಂತೆ ಬಿಜೆಪಿ ನಾಯಕರು ಮಾತನಾಡುತ್ತಾ ಇದೇ ಹೆದ್ದಾರಿಯನ್ನು ರಾಜ್ಯದ ಜನರಿಗೆ ತೋರಿಸುತ್ತಿದ್ದಾರೆ.
ಹಾಗಾದರೇ ವಿವಾದಗಳಿಂದಲೇ ಹೆಸರು ಪಡೆದ ಈ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ವೋಟ್‌ಬ್ಯಾಂಕ್ ಅಗಿ ಕೆಲಸ ಮಾಡುತ್ತದೆ ಎಂದರೇ ಅದಕ್ಕೆ ಇಲ್ಲ ಎಂದರೇ ಉತ್ತರಿಸಬೇಕಾಗುತ್ತದೆ. ಏಕೆಂದರೆ, ಇದು ಸ್ಥಳಿಯರನ್ನು ಹೊರಗಿಟ್ಟು ಮಾಡಿರುವ ಯೋಜನೆ. ಈ ಭಾಗದ ಜನರಿಗೆ ಯಾವುದೇ ಉಪಯೋಗವಿಲ್ಲದ ಹೆದ್ದಾರಿಯಿಂದ ಇಲ್ಲಿನ ಮತಗಳನ್ನು ನೀರಿಕ್ಷಿಸುವುದು ಮೂರ್ಖತನ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಿಂದ ಕೇವಲ 7 ಕಿ.ಮೀ ದೂರದಲ್ಲಿರುವ ರಾಮನಗರದ ಅಬ್ಬನಕುಪ್ಪೆ ಗ್ರಾಮದ 63 ವರ್ಷದ ಲಕ್ಷ್ಮಮ್ಮ ಅವರು ಇದನ್ನು ಇದುವರೆಗೆ ನೋಡಿಲ್ಲ. ಬಿಡದಿಯ ಹತ್ತಿರದ ಕಾರ್ಖಾನೆಯೊಂದಕ್ಕೆ ಕೆಲಸ ಮಾಡಿ ದಿನಕ್ಕೆ 100 ರೂಪಾಯಿ ಗಳಿಸುವ ಇವರು,"ನನಗೆ ಬೇಕಾಗಿರುವುದು ನಮ್ಮ ಶಾಸಕರು ಒದಗಿಸಿದ ಕುಡಿಯುವ ನೀರು. ನಾವು ಎಂದಿಗೂ ಎಕ್ಸ್‌ಪ್ರೆಸ್‌ವೇ ಬಯಸುವುದಿಲ್ಲ" ಎಂದಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಉಲ್ಲೇಖಿಸಿದೆ.
ಜೆಡಿಎಸ್ ಶಾಸಕ ಎ ಮಂಜುನಾಥ್ ಪ್ರತಿನಿಧಿಸುವ ರಾಮನಗರ ಜಿಲ್ಲೆಯ ಮಾಗಡಿ ವಿಧಾನಸಭಾ ಕ್ಷೇತ್ರಕ್ಕೆ ಅಬ್ಬನಕುಪ್ಪೆ ಬರುತ್ತದೆ. ಇವರ ಜೊತೆಗೆ ನೆರೆಹೊರೆಯವರಾದ ಬೈರವ ಅವರು ಎಕ್ಸ್‌ಪ್ರೆಸ್‌ವೇ ಉತ್ತಮವಾಗಿದೆ. ಆದರೆ ಅದು ಅವರಿಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡುತ್ತಿಲ್ಲ ಎನ್ನುತ್ತಾರೆ. "ನಾವು ಅವರನ್ನು ಈ ರಸ್ತೆ ಬೇಕು ಎಂದು ಕೇಳಿಲ್ಲ. ನಮಗೆ ಬೇಕಾದ ಮೂಲ ಸೌಕರ್ಯಗಳನ್ನು ನಮ್ಮ ಶಾಸಕರೇ ನೋಡಿಕೊಳ್ಳುತ್ತಾರೆ. ಅವರು ನಮ್ಮ ಅಗತ್ಯಗಳಿಗೆ ತಕ್ಷಣ ಲಭ್ಯವಿದ್ದಾರೆ. ನಾವು ಕರೆದರೆ ಪ್ರಧಾನಿ ನರೇಂದ್ರ ಮೋದಿ ಅಥವಾ ಮೈಸೂರು ಸಂಸದ ಪ್ರತಾಪ್ ಸಿಂಹ ಬರುವುದಿಲ್ಲ" ಎಂದಿದ್ದಾರೆ.

ಎಕ್ಸ್‌ಪ್ರೆಸ್‌ವೇ ಸ್ಥಳೀಯರಿಂದ ಯಾವ ಮೆಚ್ಚುಗೆಯನ್ನು ಪಡೆದಿಲ್ಲ. ರಾಮನಗರ ಮತ್ತು ಮಂಡ್ಯ ಜಿಲ್ಲೆಗಳ ನೂರಾರು ಹಳ್ಳಿಗಳ ಜನರು ಎಕ್ಸ್‌ಪ್ರೆಸ್‌ವೇ ಪಕ್ಕದಲ್ಲಿ ನೆಲೆಸಿರುವುದು ತಮಗೆ ಅನಾನುಕೂಲವಾಗಿದೆ ಎಂದು ಹೇಳುತ್ತಾರೆ. ಹೀಗಾಗಿಯೇ ಈ ಎಕ್ಸ್‌ಪ್ರೆಸ್‌ವೇ ಬಿಜೆಪಿಗೆ ವಿಧಾನಸಭಾ ಚುನಾವಣೆಯಲ್ಲಿ ಸಹಾಯ ಮಾಡದಿರಬಹುದು.
ರಾಮನಗರದಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳಿದ್ದು, ಮೂರು ಕ್ಷೇತ್ರಗಳನ್ನು ಜೆಡಿಎಸ್ ಮತ್ತು ಕನಕಪುರವನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿನಿಧಿಸುತ್ತಿದ್ದಾರೆ. ಹಲವು ಸಮೀಕ್ಷೆಯಲ್ಲೂ ಮತ್ತೆ ಇದೇ ಫಲಿತಾಂಶ ಬರುವ ನಿರೀಕ್ಷೆಯಿದೆ. ಇಲ್ಲಿ ಜೆಡಿಎಸ್ ಬಗ್ಗೆ ಇರುವ ವಿಶ್ವಾಸವನ್ನು ಬಿಜೆಪಿ ಕಸಿದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬುದು ಇಲ್ಲಿನ ಸ್ಥಳೀಯರ ಮಾತು ಕೇಳಿದರೆ ಅರಿವಾಗುತ್ತದೆ.

"ನಮ್ಮ ಜೀವನೋಪಾಯಕ್ಕಾಗಿ ನಾವು ಜಾನುವಾರುಗಳನ್ನು ಅವಲಂಬಿಸಿದ್ದೇವೆ. ನನಗೆ ಎಂಜಿನಿಯರಿಂಗ್ ನಂತರ ಎಂಬಿಎ ಓದಿದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕುಮಾರಸ್ವಾಮಿ ಸರ್ಕಾರದ ಅವಧಿಯಲ್ಲಿ ಸೊಸೈಟಿ ಸಾಲ ಮನ್ನಾ ಮಾಡಿದ್ದರಿಂದ ಅಲ್ಪ ಸಂಪಾದನೆ ಮಾಡಿ ನನ್ನ ಹೆಣ್ಣು ಮಕ್ಕಳು ಸ್ವಾವಲಂಬಿಗಳಾಗುವಂತೆ ಮಾಡಿದೆ. ಸಾಯುವವರೆಗೂ ಜೆಡಿಎಸ್‌ಗೆ ಮತ ಹಾಕುತ್ತೇನೆ" ಎಂದು ಹೈನುಗಾರ ಮಾದೇಗೌಡ ಹೇಳುತ್ತಾರೆ.
ಕೆಂಪನಹಳ್ಳಿಯ ರಾಜೇಶ್ ಕೂಡ ಜೆಡಿಎಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಬಿಜೆಪಿಯು ಎಕ್ಸ್‌ಪ್ರೆಸ್‌ವೇಯನ್ನು ನಿರ್ಮಿಸಲಿ, ಆದರೆ ಅದರಿಂದ ನಮಗೆ ಯಾವುದೇ ವ್ಯತ್ಯಾಸವಾಗುವುದಿಲ್ಲ. ನಮ್ಮ ರಸ್ತೆಗಳು ಡಾಂಬರೀಕರಣವಾಗಿದ್ದು, ಜೆಡಿಎಸ್‌ಗೆ ಮತ ಹಾಕುತ್ತೇವೆ. ಇಲ್ಲಿ ಬಿಜೆಪಿಗೆ ಕಾಲಿಡಲು ಸಾಧ್ಯವಿಲ್ಲ" ಎಂದಿದ್ದಾರೆ.
ಚನ್ನಪಟ್ಟಣದಲ್ಲಿ ಕಳೆದ ಹಲವು ದಶಕಗಳಿಂದ ಸಾವಿರಾರು ಕಲಾವಿದರು, ಕಾರ್ಮಿಕರು ಮರದ ಆಟಿಕೆಗಳನ್ನೇ ಅವಲಂಬಿಸಿದ್ದಾರೆ. ಈ ಹಿಂದೆ ಚನ್ನಪಟ್ಟಣ ಮತ್ತು ಮದ್ದೂರು ನಡುವಿನ ಹೆದ್ದಾರಿಯಲ್ಲಿ 20 ಮೆಗಾ ಟಾಯ್ ಶೋರೂಂಗಳು ಸಾಲಾಗಿದ್ದವು ಎನ್ನುತ್ತಾರೆ ಶ್ರೀ ಕಾರ್ಖಾನೆ ಮಾಲೀಕ ಈಶ್ವರ್ ರಾಜ್.
ಈಗ, ಹಿಂದಿನ ಹೆದ್ದಾರಿಯನ್ನು ಅನೇಕರು ಬಳಸದ ಕಾರಣ ಹಲವು ಅಂಗಡಿಗಳನ್ನುವನ್ನು ಮುಚ್ಚಲಾಗಿದೆ. "ಎಕ್ಸ್‌ಪ್ರೆಸ್‌ವೇ ಅಕ್ಷರಶಃ ನಮ್ಮ ಜೀವನೋಪಾಯವನ್ನು ಕೊಂದಿದೆ. ಇಲ್ಲಿ ಜೆಡಿಎಸ್ ಶಾಸಕರಿದ್ದು, ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಬಿಜೆಪಿ ಸರಕಾರವೇ ಇಲ್ಲಿ ಕ್ಲಸ್ಟರ್ ಸ್ಥಾಪಿಸಬೇಕಿತ್ತು. ಆಗ, ಎಕ್ಸ್‌ಪ್ರೆಸ್‌ವೇ ನಮ್ಮ ಮೇಲೆ ಕೆಟ್ಟ ಪರಿಣಾಮ ಬೀರುತ್ತಿರಲಿಲ್ಲ" ಎಂದು ಹೇಳುತ್ತಾರೆ.
2018ರಲ್ಲಿ ಕುಮಾರಸ್ವಾಮಿ ಚನ್ನಪಟ್ಟಣದಿಂದ ಸ್ಪರ್ಧಿಸಿ ಶೇ.46.55ರಷ್ಟು ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ನಂತರ ಏಳು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಮಂಡ್ಯ ಬರುತ್ತದೆ. ಅವರಲ್ಲಿ ಕೆಆರ್ ಪೇಟೆ ಹೊರತುಪಡಿಸಿ ಉಳಿದೆಲ್ಲರು ಜೆಡಿಎಸ್ ಪ್ರತಿನಿಧಿಗಳು. ಮದ್ದೂರು, ಮಂಡ್ಯ ಮತ್ತು ಶ್ರೀರಂಗಪಟ್ಟಣದ ಮೂಲಕ ಎಕ್ಸ್‌ಪ್ರೆಸ್‌ವೇ ಹಾದು ಹೋಗಿದ್ದು, ಇವೆಲ್ಲಾ ಕ್ಷೇತ್ರಗಳನ್ನೂ ಜೆಡಿಎಸ್ ಪ್ರತಿನಿಧಿಸುತ್ತದೆ.
ಎಕ್ಸ್‌ಪ್ರೆಸ್‌ವೇ ಬ ಮದ ನಂತರ ರೈತರು ತಮ್ಮ ಜಮೀನುಗಳ್ನನು ತಲುಪಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆ. ವಡ್ಡರದೊಡ್ಡಿಯ ರೈತ ಕೃಷ್ಣ ಅವರು ತಮ್ಮ ಮನೆ ನಿಡಘಟ್ಟ ಬಳಿಯಿದ್ದರೆ, ಕೆಲವೇ ಮೀಟರ್ ಅಂತರದಲ್ಲಿರುವ ವಡ್ಡರದೊಡ್ಡಿಯಲ್ಲಿ ಅವರ ತೋಟವಿದೆ ಎಂದು ಹೇಳುತ್ತಾರೆ. ಆದರೆ ಈ ನಡುವೆ ಎಕ್ಸ್‌ಪ್ರೆಸ್‌ವೇ ಬಂದಿದೆ. ತೋಟಕ್ಕೆ ಹೋಗಲು ಮೊದಲು ನಡೆದುಕೊಂಡು ಹೊಗುತ್ತಿದ್ದವರು ಈಗ ಎಕ್ಸ್‌ಪ್ರೆಸ್‌ವೇಯಿಂದಾಗಿ 4 ಕಿಮೀ ಸುತ್ತು ಹಾಕಬೇಕು ಎಂದು ಅಸಮಾಧಾನ ಹೊರಹಾಕಿದ್ದಾರೆ.
ಹೀಗಾಗಿಯೇ ಮಂಡ್ಯ, ರಾಮನಗರ ಮತ್ತು ಚನ್ನಪಟ್ಟಣ ಭಾಗಗಳಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ತೋರಿಸಿ ಮತಗಳಿಸಲು ಬಯಸಿದ್ದ ಬಿಜೆಪಿಗೆ ಇದ್ಯಾವುದು ಸುಲಭವಲ್ಲ. ಆದಾಯ, ಬದುಕು ಕಿತ್ತುಕೊಂಡ ಎಕ್ಸ್‌ಪ್ರೆಸ್‌ವೇ ಮೇಲೆ ಸ್ಥಳೀಯರಿಗೆ ಭಾರೀ ಕೋಪವಿದೆ. ಅದಕ್ಕಿಂತ ಸರ್ವಿಸ್ ರಸ್ತೆ, ಟೋಲ್ ವಿಷಯದಲ್ಲೂ ಅಸಮಾಧಾನವಿದ್ದು, ಬಿಜೆಪಿಗೆ ಇದೇ ಮಾರಕವಾಗುವ ಸಂಭವವಿದೆ.
(ಮಾಹಿತಿ ಕೃಪೆ- ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್)












Click it and Unblock the Notifications