ಡ್ಯಾಂಗಳ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ದೂರು: ಡಿಕೆಶಿ
ರಾಮನಗರ, ಆಗಸ್ಟ್ 22: ರಾಜ್ಯದ ಯಾವ ಡ್ಯಾಂ ಗಳು ಬಿರುಕು ಬಿಟ್ಟಿಲ್ಲ. ಅದೆಲ್ಲವೂ ಕೇವಲ ಸುಳ್ಳು ಸುದ್ದಿ ಅಷ್ಟೇ. ಈ ಬಗ್ಗೆ ವಂದತಿ ಹಬ್ಬಿಸಿದವರ ವಿರುದ್ಧ ಸೈಬರ್ ಕ್ರೈಮ್ ಗೂ ಕೂಡ ದೂರು ನೀಡಲಾಗಿದೆ. ಇದೇ ವಿಚಾರವಾಗಿ ಸಿಎಂ ವರದಿ ಕೇಳಿದ್ದರು. ಅವರಿಗೂ ಕೂಡ ರಿಪೋರ್ಟ್ ನೀಡಿದ್ದೇವೆ ಎಂದು ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.
ಕೊಡಗಿನಲ್ಲಿ ರಣಮಳೆಯಿಂದ ಕಂಗೆಟ್ಟ ನೆರೆಸಂತ್ರಸ್ತರಿಗೆ ರಾಮನಗರ ಜಿಲ್ಲಾಡಳಿತದಿಂದ ಸಹಾಯಹಸ್ತ ಚಾಚಲಾಗಿದ್ದು, ರಾಮನಗರ ಜಿಲ್ಲಾಧಿಕಾರಿಗಳ ಕಚೇರಿಯಿಂದ 5 ಕ್ಯಾಂಟರ್ ನಲ್ಲಿ ಅಗತ್ಯ ಆಹಾರ ಹಾಗೂ ಔಷಧಿ ಪದಾರ್ಥಗಳನ್ನು ಕಳುಹಿಸುತ್ತಿದ್ದು, ಕೊಡಗಿನ ಕಡೆಗೆ ಪಯಣ ಬೆಳೆಸಿದ ವಾಹನಗಳಿಗೆ ಡಿ.ಕೆ.ಶಿವಕುಮಾರ್ ಹಸಿರು ಬಾವುಟ ತೋರಿಸಿ ಚಾಲನೆ ಕೊಟ್ಟರು.
ಈ ವೇಳೆ ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕೊಡಗಿನ ಮಳೆ ಅವಾಂತರದ ಬಗ್ಗೆ ಮಾತನಾಡಿದ ಡಿಕೆಶಿ, ಸಂತ್ರಸ್ತರಿಗೆ ರಾಮನಗರ ಜಿಲ್ಲೆಯಿಂದಲೂ ಹಲವು ಖಾಸಗಿ ಕಂಪನಿಗಳು, ಕಾರ್ಖಾನೆಗಳು ಹಾಗೂ ಸಾರ್ವಜನಿಕರು ಸಹಾಯ ಮಾಡಿದ್ದಾರೆ.
ಈಗಾಗಲೇ ನೆರೆಯಲ್ಲಿ ಸಿಲುಕಿರುವ ಜನರ ರಕ್ಷಣಾ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ. ಮುಖ್ಯವಾಗಿ ಅವರಿಗೆ ಶಾಶ್ವತವಾಗಿ ಪರಿಹಾರ ಕಲ್ಪಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದರು.












Click it and Unblock the Notifications