"ನನ್ನ ಮಗನನ್ನು ಕಂಡರೆ ಸರ್ಕಾರಕ್ಕೆ ತುಂಬಾ ಪ್ರೀತಿ"
ರಾಮನಗರ, ಅಕ್ಟೋಬರ್ 5: ಇಂದು ಬೆಳಿಗ್ಗೆ ಕನಕಪುರದ ದೊಡ್ಡ ಆಲದಹಳ್ಳಿಯಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು, ಈ ಕುರಿತು ಡಿಕೆಶಿ ತಾಯಿ ಗೌರಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾಳಿ ಕುರಿತು ಕೋಡಿಹಳ್ಳಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನನ್ನ ಮಗನನ್ನು ಕಂಡರೆ ಸರ್ಕಾರಕ್ಕೆ ಹಾಗೂ ಅಧಿಕಾರಿಗಳಿಗೆ ಪ್ರೀತಿ. ಅದಕ್ಕಾಗಿಯೇ ಪದೇ ಪದೇ ನನ್ನ ಮಗನನ್ನು ಟಾರ್ಗೆಟ್ ಮಾಡ್ತಿದ್ದಾರೆ" ಎಂದು ಹೇಳಿದ್ದಾರೆ. "ದೊಡ್ಡ ಆಲಹಳ್ಳಿ ಗ್ರಾಮದ ಮನೆಯಲ್ಲಿ ಪರಿಶೀಲನೆ ನಡೆಸಿ ಅಲ್ಲಿರುವ ಇಟ್ಟಿಗೆಗಳನ್ನೂ ತೆಗೆದುಕೊಂಡು ಹೋಗಲಿ. ಅವರಿಗೂ ಮಾಡೋಕೆ ಕೆಲಸವಿಲ್ಲ, ಸುಮ್ಮನೆ ತಿರುಗುತ್ತಾರೆ. ಸುಮ್ಮನೆ ನಮ್ಮ ಹೊಟ್ಟೆ ಉರಿಸುತ್ತಾರೆ. ನಮ್ಮ ಮಗನನ್ನ ಅವರ ಮನೆಗೆ ಕರೆದುಕೊಂಡು ಕೂರಿಸಿಕೊಳ್ಳಲಿ. ಬೇಕಾದ್ರೆ ನಾನು ಹೋಗಿ ಕುಳಿತುಕೊಳ್ಳುತ್ತೇನೆ ಸಮಯಕ್ಕೆ ಸರಿಯಾಗಿ ಊಟ ಕೊಟ್ಟರೆ ಸಾಕು" ಎಂದು ಆಕ್ರೋಶ ಹೊರಹಾಕಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಕನಕಪುರದ ನಿವಾಸದ ಮೇಲೆ ಇಂದು ಬೆಳಿಗ್ಗೆ ಸಿಬಿಐ ದಾಳಿ ನಡೆದಿದೆ. ಬೆಂಗಳೂರಿನ ಸದಾಶಿವ ನಗರದಲ್ಲಿರುವ ನಿವಾಸ, ಡಿ. ಕೆ. ಸುರೇಶ್ ನಿವಾಸದ ಮೇಲೆಯೂ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ರಾಜ್ಯ ಸರ್ಕಾರದ ಅನುಮತಿ ಮೇರೆಗೆ ಇಂದು ಬೆಳಗ್ಗೆ 8 ಗಂಟೆಗೆ ಸಿಬಿಐ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ ಡಿಕೆಶಿಗೆ ಸೇರಿದ ಹಲವು ಕಡೆಗಳಲ್ಲೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.












Click it and Unblock the Notifications