ಭಾರೀ ಮಳೆಗೆ ಉಕ್ಕಿ ಹರಿಯುತ್ತಿರುವ ಕಣ್ವ ನದಿ; ನೀರಿನಲ್ಲಿ ತೇಲುತ್ತಿವೆ ಶವಗಳು
ರಾಮನಗರ, ನವೆಂಬರ್ 17: ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ರಾಮನಗರ ಜಿಲ್ಲೆಯ ಬೊಂಬೆ ನಗರಿಯ ಕಣ್ವ ಜಲಾಶಯ ತುಂಬದಿದ್ದರೂ, ಚನ್ನಪಟ್ಟಣದ ದಕ್ಷಿಣ ಭಾಗದಲ್ಲಿ ಕಣ್ವ ನದಿ ಉಕ್ಕಿ ಹರಿಯುತ್ತಿದೆ. ರಭಸದಿಂದ ಹರಿಯುತ್ತಿರುವ ನೀರಿನಿಂದಾಗಿ ನದಿ ದಡದಲ್ಲಿ ಹೂಳಲಾಗಿದ್ದ ಶವಗಳು ಮೇಲೆದ್ದು ತೇಲುತ್ತಿವೆ.
ಕಳೆದ ಒಂದು ವಾರದಿಂದಲೂ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಚನ್ನಪಟ್ಟಣ ಬಹುತೇಕ ಎಲ್ಲಾ ಕೆರೆಗಳು ತುಂಬಿ ಕೋಡಿ ಹರಿಯುತ್ತಿವೆ. ಆದರೆ ಕಣ್ವ ಜಲಾಶಯ ಇನ್ನೂ ಭರ್ತಿಯಾಗಲು 5 ಅಡಿಗೂ ಹೆಚ್ಚು ನೀರು ಬೇಕಿದೆ. ಈ ಮಧ್ಯೆ ವಿರೂಪಾಕ್ಷಿಪುರ ಹೋಬಳಿಯ ಕೆರೆ-ಕಟ್ಟೆಗಳು, ಹಳ್ಳ- ಕೊಳ್ಳಗಳಲ್ಲಿ ನೀರು ತುಂಬಿ ಹರಿದಿದ್ದರಿಂದ ಬೆಂಗಳೂರು ಮೈಸೂರು ಹೆದ್ದಾರಿಯ ದಕ್ಷಿಣಕ್ಕೆ ಕಣ್ವ ನದಿ ಮೈದುಂಬಿ ಹರಿಯುತ್ತಿದೆ.
ಕಣ್ವ ಜಲಾಶಯ ಸದ್ಯ 28 ಅಡಿಗಳಾಗಿದ್ದು, ಜಲಾಶಯದ ನೀರಿನ ಮಟ್ಟ 33.5 ಅಡಿ ಇದ್ದು, ಜಲಾಶಯ ತುಂಬದಿದ್ದರೂ ಹತ್ತಾರು ಕೆರೆ ತುಂಬಿ ಕೊಡಿ ಬಿದ್ದಿದ್ದರಿಂದ ವಿರೂಪಾಕ್ಷಿಪುರ ಹೋಬಳಿ ಭಾಗದ ಸಾದರಹಳ್ಳಿ, ಹುಣಸನಗಳ್ಳಿ, ಕೊಂಡಾಪುರ, ಮಾದಾಪುರ, ಬಾಣಗಹಳ್ಳಿ, ಅಂಬಾಡಹಳ್ಳಿ, ನೆಲಮಾಕನಹಳ್ಳಿ ಸಾಮಂದಿಪುರ ಸರಹದ್ದಿನಲ್ಲಿ ಕೆರೆಗಳು ತುಂಬಿ ಮೈದುಂಬಿ ಹರಿಯುತ್ತಿದ್ದು, ನದಿ ನೀರು ನದಿ ನೀರು ಶಿಂಷಾನದಿಯಲ್ಲಿ ಸಂಗಮಗೊಂಡು, ಮುತ್ತತ್ತಿ ಬಳಿ ಕಾವೇರಿ ನದಿಗೆ ಸೇರುತ್ತಿದೆ.
ಎರಡು ದಶಕಗಳ ನಂತರ ಇದೇ ಪ್ರಥಮ ಭಾರಿಗೆ ಕಣ್ವ ಜಲಾಶಯ ತುಂಬುತ್ತಿದೆ. ಇದಲ್ಲದೆ ಜಲಾಶಯದ ಅಚ್ಚುಕಟ್ಟು ಪ್ರದೇಶಗಳ ಗ್ರಾಮಗಳು ಎಚ್ಚರಿಕೆಯಿಂದ ಇರುವಂತೆ ಚನ್ನಪಟ್ಟಣ ತಾಲೂಕು ಆಡಳಿತ ಎಚ್ಚರಿಕೆಯನ್ನು ಕೂಡ ನೀಡಿದೆ.
ತೇಲುತ್ತಿರುವ ಶವಗಳು
ಈ ಮಧ್ಯೆ ಹುಣಸನಹಳ್ಳಿ- ಕೊಂಡಾಪುರ ಮಧ್ಯೆ ಶವಗಳು ತೇಲಿಕೊಂಡು ಬರುತ್ತಿದೆ. ಹಲವು ಗ್ರಾಮಗಳಲ್ಲಿ ಸ್ಮಶಾನವಿಲ್ಲದೆ ಕಣ್ವ ನದಿ ದಡದಲ್ಲಿ ಹೂಳಲಾಗಿದ್ದ ಶವಗಳು ತೇಲಿಕೊಂಡು ಬರುತ್ತಿವೆ.
ಕಳೆದ ಎರಡು ದಶಕಗಳ ಕಾಲ ಉತ್ತಮ ಮಳೆಯಿಲ್ಲದೆ ಬತ್ತಿ ಹೋಗಿದ್ದ ಕಣ್ವ ನದಿ ಕಾಲುವೆಯ ದಡದಲ್ಲಿ ಶವ ಹೂಳಲಾಗಿತ್ತು. ಸ್ಮಶಾನ ಇಲ್ಲದ ಗ್ರಾಮಗಳು ಹಾಗೂ ನದಿ ದಂಡೆಯಲ್ಲಿ ಜಮೀನು ಹೊಂದಿರುವ ಜನರು, ನದಿ ದಂಡೆಯಲ್ಲಿ ಅಂತ್ಯಸಂಸ್ಕಾರ ಮಾಡುತ್ತಿದ್ದರು. ಪ್ರಸ್ತುತ ಹೆಚ್ಚಾದ ಮಳೆಯಿಂದ ಹೂಳಲಾಗಿದ್ದ ಶವಗಳು ನೀರಿನಲ್ಲಿ ತೇಲುತ್ತಿವೆ.
ಹತ್ತಾರು ಕೆರೆ-ಕಟ್ಟೆ, ಹಳ್ಳ- ಕೊಳ್ಳಗಳು ಬಾರಿ ಮಳೆಗೆ ಮೈದುಂಬಿ ಹರಿದಿದ್ದರಿಂದ ನೀರಿನ ಕೊರೆತಕ್ಕೆ ಹೆಣಗಳು ಮೇಲೆದ್ದು ತೇಲುತ್ತಿವೆ. ಇದರ ಜೊತೆಗೆ ತೋಟಗಳಲ್ಲಿ ಹಾಕಲಾಗಿದ್ದ ತೆಂಗಿನಕಾಯಿ ಕೂಡ ಹಳ್ಳಗಳ ಮೂಲಕ ನದಿಗೆ ಬಂದು ತೇಲುತ್ತಿವೆ.

ರಾಜ್ಯದ ವಾತಾವರಣ ಹೇಗಿರಲಿದೆ?
ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ಮಳೆಯಾಗಲಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹೇಳಲಾಗಿದೆ.
ಇನ್ನು ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.