DK Shivakumar: ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ್ರಾ ಡಿಕೆ ಶಿವಕುಮಾರ್
ಮುಡಾ ಸೈಟು ಹಂಚಿಕೆ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ದಾಖಲಾಗಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಒಂದು ಕಡೆ ವಿಪಕ್ಷಗಳು ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದ್ದರೆ ಮತ್ತೊಂದು ಕಡೆ ಕಾಂಗ್ರೆಸ್‌ನಲ್ಲೂ ಒಳಗೊಳಗೆ ಸಿದ್ದರಾಮಯ್ಯ ರಾಜೀನಾಮೆ ಕೊಡಲು ಸಿಎಂ ಆಕಾಂಕ್ಷಿಗಳು ಕಾಯುತ್ತಿದ್ದಾರಾ ಎನ್ನುವ ಅನುಮಾನವಿದೆ.
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ದಾಖಲಾಗುತ್ತಿದ ಬೆನ್ನಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ್ರಾ ಎನ್ನುವ ಅನುಮಾನ ಶುರುವಾಗಿದೆ. ಕನಕಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ನೀಡಿರುವ ಹೇಳಿಕೆಯಿಂದಾಗಿ ರಾಜಕೀಯ ವಲಯದಲ್ಲಿ ಚರ್ಚೆ ಶುರುವಾಗಿದೆ.

ರಾಮನಗರ ಜಿಲ್ಲೆಯ ಕನಕಪುರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಕ್ಷೇತ್ರದ ಜನ ನನಗೆ ಆಶೀರ್ವಾದ ಮಾಡಿದ್ದಾರೆ. ರಾಜ್ಯದ ಸೇವೆ ಮಾಡಬೇಕು ಎಂದು ದೊಡ್ಡ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಹೋರಾಟ ಕೂಡ ನಡೆಯುತ್ತಿದೆ, ಈಗ ನಾನೇನಾದರೂ ಇದರ ಬಗ್ಗೆ ಮಾತನಾಡಿದರೆ ಬೇರೆ ರೀತಿಯಲ್ಲಿ ಬಿಂಬಿಸಲಾಗುತ್ತದೆ ಎಂದು ಹೇಳಿದ್ದಾರೆ.
ಇಲ್ಲಿಗೆ ನಾನು ಡಿಸಿಎಂ ಆಗಿ ಬಂದಿಲ್ಲ, ಶಾಸಕನಾಗಿ ಬಂದಿದ್ದೇನೆ. ನಾನು ಶಾಸಕನಾಗುವ ಮೊದಲು ಕನಕಪುರ ಹೇಗಿತ್ತು, ಶಾಸಕನಾದ ಬಳಿಕ ಕನಕಪುರ ಹೇಗೆ ಬದಲಾಗಿದೆ ಎಂದು ಚಿತ್ರ ತಯಾರು ಮಾಡಿದ್ದೇನೆ. ಅದನ್ನು ಕ್ಷೇತ್ರದ ಜನತೆಗೆ ತೋರಿಸುತ್ತೇನೆ. ಡಿಕೆ ಸುರೇಶ್ ಕಷ್ಟಪಟ್ಟು ಕೆಲಸ ಮಾಡಿರುವ ಕಾರಣ ಇಂದು ಬೆಂಗಳೂರು-ಕನಕಪುರ ರಸ್ತೆ ಶಿಕ್ಷಣ ಕಾರಿಡಾರ್ ಆಗಿದೆ ಎಂದು ಹೇಳಿದರು.
ಸಿಎಂ ಬದಲಾವಣೆ ಸಾಧ್ಯತೆ?
ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯುತ್ತಿದ್ದಂತೆ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಬಹಿರಂಗವಾಗಿಯೇ ಸ್ಪರ್ಧೆ ನಡೆದಿತ್ತು. ದೆಹಲಿಯಲ್ಲಿ ಎರಡೂ ನಾಯಕರ ಬಣಗಳು ಬೀಡಿ ಬಿಟ್ಟಿದ್ದವು. ಹಲವು ದಿನಗಳ ಕಸರತ್ತಿನ ಬಳಿಕ ಹೈಕಮಾಂಡ್ ಸಿದ್ದರಾಮಯ್ಯರನ್ನು ಸಿಎಂ ಎಂದು ಘೋಷಣೆ ಮಾಡಿತ್ತು. ಡಿಕೆ ಶಿವಕುಮಾರ್ ಡಿಸಿಎಂ ಆಗಲು ಒಪ್ಪಿಕೊಂಡಿದ್ದರು.
2.5 ವರ್ಷಗಳ ಅವಧಿಗೆ ಅಧಿಕಾರ ಹಂಚಿಕೆ ಮಾಡಲಾಗಿದೆ ಎನ್ನಲಾಗಿತ್ತು, ಬಳಿಕ ಸಿದ್ದರಾಮಯ್ಯ ನಾನೇ 5 ವರ್ಷಗಳ ಅವಧಿಗೆ ಸಿಎಂ ಎಂದಿದ್ದರು. ಮುಡಾ ಹಗರಣದಲ್ಲಿ ಅವರ ವಿರುದ್ಧ ಎಫ್‌ಐಆರ್ ದಾಖಲಾದ ಬಳಿಕ ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿ ಒತ್ತಾಯಿಸಿದ್ದರಿಂದ, ಕಾಂಗ್ರೆಸ್‌ನಲ್ಲಿ ಸಿಎಂ ಪಟ್ಟದ ಆಕಾಂಕ್ಷಿಗಳ ಉತ್ಸಾಹ ಹೆಚ್ಚಾಗಿದೆ ಎನ್ನಲಾಗಿದೆ.
ಸಿದ್ದರಾಮಯ್ಯನವರಿಗೆ ಹೈಕಮಾಂಡ್ ಬೆಂಬಲವಿದ್ದು, ಪಕ್ಷದಲ್ಲಿ ಕೂಡ ಸಾಕಷ್ಟು ಬೆಂಬಲ ಇರುವ ಕಾರಣ, ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಇದೀಗ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ಕುತೂಹಲ ಕೆರಳಿಸಿದೆ.












Click it and Unblock the Notifications