ಕೋವಿಡ್-19 ನಿಭಾಯಿಸಲು ಡಿಸಿಎಂ ಅಶ್ವಥ್ ನಾರಾಯಣ್ ವಿಫಲ: ಕಾಂಗ್ರೆಸ್ ಆರೋಪ
ರಾಮನಗರ, ಜುಲೈ 29: ರಾಮನಗರ ಜಿಲ್ಲೆಯಲ್ಲಿ ಮಿತಿ ಮೀರುತ್ತಿರುವ ಕೊರೊನಾ ಆರ್ಭಟವನ್ನು ನಿಯಂತ್ರಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಡಿಸಿಎಂ ಡಾ.ಅಶ್ವಥ್ ನಾರಾಯಣ್ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಮಾಜಿ ಶಾಸಕ ಎಚ್.ಸಿ ಬಾಲಕೃಷ್ಣ ಆರೋಪಿಸಿದ್ದಾರೆ.
Recommended Video
ರಾಮನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ನಾಯಕರಾದ ಎಂಎಲ್ಸಿ ಎಸ್.ರವಿ ಹಾಗೂ ಮಾಗಡಿಯ ಮಾಜಿ ಶಾಸಕ ಎಚ್.ಸಿ ಬಾಲಕೃಷ್ಣ ಅವರು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಹರಿಹಾಯ್ದರು.
ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್ ಉಡಾಫೆ, ಉದಾಸೀನದ ಮನುಷ್ಯ, ಜಿಲ್ಲೆಯ ಬಗ್ಗೆ ಅವರಿಗೆ ಕಾಳಜಿಯೇ ಇಲ್ಲ, ಇಂತಹವರನ್ನು ನಾವು ನೋಡೆ ಇಲ್ಲ, ಜಿಲ್ಲೆಯ ಪ್ರವಾಸ ಮಾಡುವ ಮನಸ್ಸು ಅವರಿಗಿಲ್ಲ ಎಂದು ಕಿಡಿಕಾರಿದರು.

ಈವರೆಗೂ ಜಿಲ್ಲೆಯಲ್ಲಿ ಜನ ಮೆಚ್ಚುವ ಯಾವುದೇ ಕೆಲಸ ಅವರು ಮಾಡಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಸ್.ರವಿ ಟೀಕಿಸಿದರು. ಇನ್ನು ಜಿಲ್ಲೆಯ ಜನರನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೋವಿಡ್-19 ವೈರಸ್ ಸೋಂಕಿತ ರೋಗಿಗಳ ಕಷ್ಟಗಳಿಗೆ ಸ್ಪಂದಿಸುವಲ್ಲಿ ಡಿಸಿಎಂ ಅಶ್ವಥ್ ನಾರಾಯಣ್ ಸಂಪೂರ್ಣ ವಿಫಲರಾಗಿದ್ದಾರೆ ಎಂದರು.
RR ನಗರದ ಆಸ್ಪತ್ರೆಯಲ್ಲಿರುವ ಸೋಂಕಿತರ ಬಗ್ಗೆ ಕಾಳಜಿಯೇ ಇಲ್ಲ, ಇನ್ನು ನಗರದ ಕಂದಾಯ ಭವನದಲ್ಲಿನ ಕೋವಿಡ್-19 ರೆಫೆರಲ್ ಅಸ್ಪತ್ರೆಯಲ್ಲಿ ವ್ಯವಸ್ಥೆ ಸರಿಯಿಲ್ಲ. ಅಲ್ಲಿನ ರೋಗಿಗಳಿಗೆ ಮೂಲಭೂತ ಸೌಕರ್ಯವೇ ಇಲ್ಲ, ಉತ್ತಮವಾದ ಊಟ ಕೊಡಲಾಗಿಲ್ಲ. ಆದರೆ ಇವರಿಗೆ ಡಿಕೆಎಸ್ ಟ್ರಸ್ಟ್ ನಿಂದ ಸೋಂಕಿತರಿಗೆ ಉತ್ತಮ ಊಟ ಕೊಡಲಾಗುತ್ತಿದೆ ಎಂದು ಮಾಗಡಿ ಮಾಜಿ ಶಾಸಕ ಬಾಲಕೃಷ್ಣ ಡಿಸಿಎಂ ಅಶ್ವಥ್ ನಾರಾಯಣ್ ವಿರುದ್ಧ ವಾಗ್ದಾಳಿ ನಡೆಸಿದರು.












Click it and Unblock the Notifications