ರಾಮನಗರ; ಕೋವಿಡ್ ಲಸಿಕೆ ಪಡೆಯುವ ಜನರಿಗೆ ಸಿಹಿ ಸುದ್ದಿ
ರಾಮನಗರ, ಜುಲೈ 01; ರಾಮನಗರ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಅಭಿಯಾನ ಚುರುಕುಗೊಳ್ಳಲಿದೆ. ಜನರನ್ನು ಮನೆಯಿಂದ ವಾಹನಗಳಲ್ಲಿ ಕರೆತಂದು ಲಸಿಕೆ ಪಡೆದ ನಂತರ ಪುನಃ ಮನೆಗೆ ತಲುಪಿಸಲು 10 ವಾಹನಗಳಿಗೆ ಚಾಲನೆ ನೀಡಲಾಗಿದೆ.
ಗುರುವಾರ ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ಕೆ. ಲಸಿಕೆ ಅಭಿಯಾನದ ವಾಹನಗಳಿಗೆ ಚಾಲನೆ ನೀಡಿದರು. ಚನ್ನಪಟ್ಟಣ, ಕನಕಪುರ, ಮಾಗಡಿ ಹಾಗೂ ರಾಮನಗರ ತಾಲೂಕಿನಲ್ಲಿ ಗ್ರಾಮವಾರು ಕೋವಿಡ್ 2ನೇ ಡೋಸ್ ಬಾಕಿ ಇರುವಂತಹ ಫಲಾನುಭವಿಗಳಿಗೆ ಲಸಿಕೆ ನೀಡಲು ಅಭಿಮಾನ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಅಭಿಯಾನಕ್ಕಾಗಿ ಇಂಡಿಯಾ ವಿಲೇಜ್ ಸಂಸ್ಥೆ ವತಿಯಿಂದ ಸ್ವರಾಜ್ ಮಜ್ದಾ 4 ವಾಹನ, ಬ್ರಿಟಾನಿಯಾ ಸಂಸ್ಥೆ 1 ಟೆಂಪೋ ವಾಹನ, ಹಿಂದೂಸ್ಥಾನ್ ಕೋಕಾ-ಕೋಲಾ ಸಂಸ್ಥೆ 2 ಸ್ವರಾಜ್ ಮಜ್ದಾ ವಾಹನ, ಟ್ರೈನಿಟ್ ಕೇರ್ ಫೌಂಡೇಶನ್ ಸಂಸ್ಥೆ 3 ಆಟೋ ವಾಹನವನ್ನು 30 ದಿನಗಳಿಗೆ ಆರೋಗ್ಯ ಇಲಾಖೆಗೆ ನೀಡಿದ್ದಾರೆ.
ಈ ವಾಹನಗಳು ಹಳ್ಳಿಗಳಿಗೆ ತೆರಳಿ ಲಸಿಕೆ ಕೇಂದ್ರಗಳಿಗೆ ಜನರನ್ನು ಕರೆತಂದು ಲಸಿಕೆ ಪಡೆದ ನಂತರ ಪುನ: ಅವರನ್ನು ಮನೆಗೆ ಬಿಟ್ಟು ಬರಲಿದೆ. ಜನರು ಈ ವಾಹನದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಕರೆ ನೀಡಿದರು.

ಎಲ್ಲರೂ ಕೋವಿಡ್ ಲಸಿಕೆ ಪಡೆದುಕೊಳ್ಳಬೇಕು. ಕೋವಿಡ್ ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ವಾಹನವನ್ನು ಸದುಪಯೋಗ ಪಡಿಸಿಕೊಂಡು. ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು ಲಸಿಕೆ ಪಡೆಯುವಂತೆ ಮನವಿ ಮಾಡಿದರು.












Click it and Unblock the Notifications