ಡಿ.ಕೆ.ಸುರೇಶ್ ಎದುರಿಸುವ ಗಂಡಸ್ತನ ಹೆಚ್‌ಡಿಕೆಗೆ ಇಲ್ವಾ?: ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್
ರಾಮನಗರ, ಮಾರ್ಚ್ 13: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ರಂಗೇರುತ್ತಿದೆ. ಮತ್ತೆ ಜಿಲ್ಲೆಯಲ್ಲಿ ತಾಕತ್ತು, ಗಂಡಸ್ತನ, ಸವಾಲು ಕೇಳಿ ಬರುತ್ತಿವೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿ ಆಗಿ ಡಾ.ಮಂಜುನಾಥ್ ಖಚಿತ ಎಂಬ ಮಾಹಿತಿ ಹೊರಬಿದ್ದ ಹಿನ್ನಲೆಯಲ್ಲಿ ರಾಮನಗರದ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಹೆಚ್‌ಡಿಕೆ ಹಾಗೂ ಬಿಜೆಪಿ ನಾಯಕರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ.

ಡಾ.ಮಂಜುನಾಥ್ ಅವರು ಒಳ್ಳೇ ಡಾಕ್ಟರ್. ಅವರು ರಾಜಕೀಯಕ್ಕೆ ಅಮಾಯಕರು. ಪಾಪಾ ಅವರನ್ನು ರಾಜಕೀಯಕ್ಕೆ ತಂದು ಬಲಿಪಶು ಮಾಡ್ತಿದ್ದಾರೆ. ಯಾಕೆ ಹೆಚ್ಡಿಕೆಗೆ ತಾಕತಿಲ್ವಾ, ನಿಮಗೆ ಗಂಡಸ್ತನ ಇಲ್ವಾ..? ರಾಮಮಂದಿರ ಕಟ್ತೀವಿ ಅಂತ ಓಡಾಡ್ತಿದ್ರಲ್ಲ, ಅಶ್ವತ್ಥ್ ನಾರಾಯಣ್, ಹಿಂದೆ ಇಲ್ಲಿ ಉಸ್ತುವಾರಿ ಮಂತ್ರಿ ಆಗಿದ್ದರಲ್ಲ. ಅವರನ್ನು, ನಿಲ್ಲಿಸಬಹದಿತ್ತಲ್ವಾ.?, ಅಷ್ಟೆಲ್ಲಾ ಯಾಕೆ ಸಿ.ಪಿ.ಯೋಗೇಶ್ವರ್ ಅವರೇ ನಿಲ್ಲಬಹುದಿತ್ತಲ್ಲಾ.? ಎಂದು ಜೆಡಿಎಸ್ ಬಿಜೆಪಿ ನಾಯಕರನ್ನು ಶಾಸಕ ಇಕ್ಬಾಲ್ ಹುಸೇನ್ ಪ್ರಶ್ನೆ ಮಾಡಿದ್ದಾರೆ.
ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು, ಸಂಸದ ಡಿ.ಕೆ.ಸುರೇಶ್ ವಿರುದ್ಧ ಸ್ಪರ್ಧೆ ಮಾಡುವ ತಾಕತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಇಲ್ಲವೇ. ಡಿ.ಕೆ.ಸುರೇಶ್ ಅವರ ವಿರುದ್ಧ ಸ್ಪರ್ಧೆ ಮಾಡುವ ಅಭ್ಯರ್ಥಿ ಇಲ್ಲ ಅನ್ನುವುದು ಗೊತ್ತಾಗಿ, ಪಾಪ ಮಂಜುನಾಥ್ ಅವರನ್ನು ಅಭ್ಯರ್ಥಿ ಮಾಡಿ ಹರಕೆ ಕುರಿ ಮಾಡುತ್ತಿದ್ದಾರೆ ಎಂದು ಮೈತ್ರಿ ಪಕ್ಷದ ನಾಯಕರ ವಿರುದ್ಧ ಶಾಸಕ ಇಕ್ಬಾಲ್ ಹುಸೇನ್ ಕಿಡಿ ಕಾರಿದರು.
ನೀವು ಮುಖ್ಯಮಂತ್ರಿಯಾದಾಗ ಕಿರಾತಕರು ಎನ್ನುವುದು ಗೊತ್ತಿರಲಿಲ್ಲವೇ
ಡಿ.ಕೆ ಸಹೋದರರ ವಿರುದ್ಧ ಕಿರಾತಕರನ್ನು ಸೋಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಶಾಸಕ ಇಕ್ಬಾಲ್ ಹುಸೇನ್ ನಿಮ್ಮನ್ನು ಮುಖ್ಯಮಂತ್ರಿ ಮಾಡಿದಾಗ ಅವರು ಕಿರಾತಕರಾಗಿರಲಿಲ್ವಾ.?, ಒಬ್ಬ ಮುಸ್ಲಿಂ ವ್ಯಕ್ತಿಯನ್ನು ಗೆಲ್ಲಿಸಿದಕ್ಕೆ ಅವರು ಕಿರಾತಕರಾದ್ರಾ.? ಕಿರಾತಕರು ಎಂಬ ಪದ ನಿಮಗೆ ಅನ್ವಯಿಸುತ್ತದೆ, ನೀವು ಕಿರಾತಕರು, ತಮ್ಮ ಸೋಲಿನ ಹತಾಶೆಯಲ್ಲಿ ಮಾತನಾಡ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಜೆಡಿಎಸ್ ಅವನತಿಯತ್ತ ಸಾಗಿದೆ
ಜೆಡಿಎಸ್ ವರಿಷ್ಠರ ಕುಟುಂಬದ ಸದಸ್ಯರಾಗಿದ್ದರು, ಜೆಡಿಎಸ್ ಬಿಟ್ಟು ಬಿಜೆಪಿ ಚಿಹ್ನೆಯಿಂದ ಡಾ.ಮಂಜುನಾಥ್ ಸ್ಪರ್ಧೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಜೆಡಿಎಸ್ ಎಲ್ಲಿದೆ.? ಜೆಡಿಎಸ್ ಅವನತಿಯತ್ತ ಸಾಗ್ತಿದೆ. ಜೆಡಿಎಸ್ ಪಕ್ಷದಲ್ಲಿರುವ 19 ಜನ ಶಾಸಕರಲ್ಲಿ 10 ರಿಂದ 12 ಮಂದಿ ಶಾಸಕರು ಕಾಂಗ್ರೆಸ್‌ಗೆ ಬರ್ತಾರೆ, ಜೆಡಿಎಸ್ ಪಕ್ಷದಲ್ಲಿ ಯಾವುದೇ ಸಿದ್ಧಾಂತ ಇಲ್ಲ. ಹಾಗಾಗಿ ಎಲ್ರೂ ಕಾಂಗ್ರೆಸ್ ಗೆ ಬರಲು ಸಿದ್ಧರಾಗಿದ್ದಾರೆ. ಹತ್ತಕ್ಕೂ ಹೆಚ್ಚು ಶಾಸಕರು ಚುನಾವಣೆಗೂ ಮುಂಚೆ ನಮ್ಮ ಪಕ್ಷಕ್ಕೆ ಬರ್ತಾರೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೊಸ ಬಾಂಬ್ ಸಿಡಿಸಿದರು.
ಗಿಪ್ಟ್ ಪಾಲಿಟಿಕ್ಸ್ ಸಮರ್ಥನೆ ಮಾಡಿಕೊಂಡ ಶಾಸಕ
ಲೋಕಸಭಾ ಚುನಾವಣೆ ಗೆಲ್ಲಲು ಕಾಂಗ್ರೆಸ್ ಜನರಿಗೆ ಸೀರೆ, ಕುಕ್ಕರ್ ಹಂಚಿಕೆ ಮಾಡುತ್ತಿದೆ ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ ಟೀಕೆಗೆ ಪ್ರತಿಕ್ರಿಯೆ ನೀಡಿದ ಅವರು, ಹಬ್ಬ-ಹುಣ್ಣಮೆಗೆ ಗಿಫ್ಟ್ ಕೊಡೊದು ಸಾಮಾನ್ಯ. ಗಿಫ್ಟ್ ಕೊಡುವಷ್ಟು ಶಕ್ತಿ ನಮಗಿದೆ. ಎಲ್ಲಾ ವರ್ಗದ ಬಡ ಜನರಿಗೆ ಕೈಲಾದ ಸಹಾಯ ಮಾಡುತ್ತೇವೆ. ನಿಮಗೆ ಶಕ್ತಿ ಇದ್ದರೆ ನೀವೂ ಕೊಡಿ. ನಾವು ಇಲ್ಲೇ ಹುಟ್ಟಿ ಬೆಳೆದಿರುವವರು. ನಮ್ಮ ಜನಕ್ಕೆ ಹಬ್ಬ ಹುಣ್ಣಿಮೆಗೆ ಗಿಫ್ಟ್ ಕೊಡುತ್ತೇವೆ ಎಂದರು.












Click it and Unblock the Notifications