KSRTC ಬಸ್‌ನಲ್ಲಿ ಟಿಕೆಟ್ ಗೋಲ್‌ಮಾಲ್: ಕಂಡಕ್ಟರ್ ಅಮಾನತು
ರಾಮನಗರ, ಜನವರಿ 16: ಕರ್ನಾಟಕ ಸರ್ಕಾರದ ಸಂಸ್ಥೆಗಳಾದ ಕೆಎಸ್ಆರ್ ಟಿಸಿ ಮತ್ತು ಬಿಎಂಟಿಸಿಯಲ್ಲಿ ಕೆಲಸ ಸಿಗುವುದೇ ಪುಣ್ಯ, ಒಮ್ಮೆ ಇಂತಹ ಸಂಸ್ಥೆಗಳಲ್ಲಿ ಕೆಲಸ ಸಿಕ್ಕರೆ ಸಾಕು ಎಂದು ಅನೇಕರು ಕೇಳಿಕೊಳ್ಳುತ್ತಿರುತ್ತಾರೆ. ಆದರೆ ಇನ್ನೂ ಕೆಲವರು ಕೆಲಸ ಸಿಕ್ಕ ಮೇಲೆ ತೋರುವ ನಿರ್ಲಕ್ಷ್ಯದಿಂದ ಬಹಳ ಸುಲಭವಾಗಿ ಕೆಲಸ ಕಳೆದುಕೊಳ್ಳುತ್ತಾರೆ. ಇಂತಹದ್ದೇ ಘಟನೆ ಇದೀಗ ರಾಮನಗರ ಜಿಲ್ಲೆಯ ಕನಕಪುರದಲ್ಲಿ ನಡೆದಿದೆ.
ಕನಕಪುರ ಡಿಪೋಗೆ ಸೇರಿದ KA42-F0746 ಕೆಎಸ್ಆರ್‌ಟಿಸಿ ಬಸ್‌ನ ನಿರ್ವಾಹಕ ಕೆಲಸದ ಮೇಲೆ ತೋರಿದ ನಿರ್ಲಕ್ಷ್ಯದಿಂದ ಸದ್ಯ ಆತನನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ಚಾಲಕ ಕಂ ನಿರ್ವಾಹಕ ನವೀನ್ ಟಿ.ಎನ್ ಕರ್ತವ್ಯದಿಂದ ಅಮಾನತಾದ ಕೆಎಸ್ಆರ್‌ಟಿಸಿ ಸಿಬ್ಬಂದಿ.

ಕಂಡಕ್ಟರ್ ನವೀನ್ KA42-F0746 ಕೆಎಸ್ಆರ್‌ಟಿಸಿ ಬಸ್‌ನ ಚಾಲಕ ಹಾಗೂ ನಿರ್ವಾಹಕ ಆಗಿ ಕೆಲಸ ಮಾಡುತ್ತಿದ್ದರು. ಜೊತೆಗೆ ತಮ್ಮ ಬಸ್‌ನಲ್ಲಿ ಖಾಸಗಿ ವ್ಯಕ್ತಿಗೆ ಕೆಲಸ ನೀಡಿದ್ದರು. ಕೆಎಸ್ಆರ್‌ಟಿಸಿ ಬಸ್‌ನ ಟಿಕೆಟ್ ಮಷಿನ್ ಅನ್ನು ಆ ಖಾಸಗಿ ವ್ಯಕ್ತಿಗೆ ನೀಡಿ ಟಿಕೆಟ್ ನೀಡುವಂತೆ ಹೇಳಿದ್ದರು ಎನ್ನಲಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಟಿಕೆಟ್ ನೀಡುತ್ತಿದ್ದ ಯುವಕ ಸಾಮಾನ್ಯವಾಗಿ ಮಹಿಳೆಯರಿಗೆ ಉಚಿತ ಟಿಕೆಟ್ ನೀಡುತ್ತಿದ್ದ ಆದರೆ ಪುರುಷರ ಟಿಕೆಟ್ ವಿಚಾರಕ್ಕೆ ಬಂದರೆ ಹಣ ಪಡೆದು ಟಿಕೆಟ್ ನೀಡದೇ ಯಾಮಾರಿಸುತ್ತಿದ್ದ ಎನ್ನುವ ಆರೋಪ ಕೇಳಿ ಬಂದಿದೆ.
ಪುರುಷರ ಬಳಿ ದುಡ್ಡು ಪಡೆದು ಟಿಕೆಟ್ ಕೊಡದೇ ಮುಂದೆ ಹೋಗುತ್ತಿದ್ದ. ಇದರಿಂದ ಪ್ರಯಾಣಿಕರಿಗೆ ಭಯವಾಗಿದ್ದು, ಮುಂದೆ ಚೆಕ್ಕಿಂಗ್ ಅಧಿಕಾರಿಗಳು ಬಂದರೆ ನಾವೇನು ಮಾಡುವುದು ಎಂದು ಟಿಕೆಟ್ ನೀಡುತ್ತಿದ್ದ ಯುವಕನನ್ನು ಪ್ರಶ್ನಿಸಿದ್ದಾರೆ. ಅಧಿಕಾರಿಗಳಿಗೆ ಮಾಮೂಲಿ ಕೊಡುತ್ತೇವೆ. ನಮ್ಮ ಬಸ್‌ಅನ್ನು ಯಾರೂ ಚೆಕ್ಕಿಂಗ್ ಮಾಡಲು ಬರುವುದಿಲ್ಲ. ಅದನೆಲ್ಲಾ ನಾನು ನೋಡಿಕೊಳ್ಳುತ್ತೇನೆ ಎಂದು ನೇರವಾಗಿ ಹೇಳುತ್ತಿದ್ದ.
ಕೆಎಸ್ಆರ್‌ಟಿಸಿ ಬಸ್‌ನಲ್ಲಿ ನಡೆಯುತ್ತಿದ್ದ ಈ ವ್ಯವಹಾರವನ್ನು ಪ್ರಯಾಣಿಕರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ವೈರಲ್ ಆಗಿ ಕೊನೆಗೆ ಕೆಎಸ್ಆರ್‌ಟಿಸಿ ಅಧಿಕಾರಿಗಳನ್ನು ತಲುಪಿದೆ. ಈ ಬಗ್ಗೆ ವಿಚಾರಣೆ ನಡೆಸಿದ ಶಿಸ್ತುಪಾಲನಾ ವಿಭಾಗೀಯ ನಿಯಂತ್ರಣಾಧಿಕಾರಿ ಚಾಲಕ ಕಂ ನಿರ್ವಾಹಕ ನವೀನ್ ಟಿ.ಎನ್ ಕರ್ತವ್ಯದಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಟಿಕೆಟ್ ನೀಡುತ್ತಿದ್ದ ಯುವಕನ ವಿರುದ್ಧ ಕನಕಪುರ ಡಿಪೋ ಮ್ಯಾನೇಜರ್ ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.












Click it and Unblock the Notifications