Chennapatna By Election: ಚನ್ನಪಟ್ಟಣ ಉಪ ಚುನಾವಣೆ ಪ್ರಚಾರಕ್ಕೆ ಎಂಟ್ರಿ ಕೊಟ್ಟ ಡಿ. ಕೆ. ಶಿವಕುಮಾರ್
ರಾಮನಗರ, ನವೆಂಬರ್ 04: ರಾಮನಗರ ಜಿಲ್ಲೆಯ ಚನ್ನಪಟ್ಟಣ ಉಪ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ನವೆಂಬರ್ 13ರಂದು ಮತದಾನ ನಡೆಯಲಿದ್ದು, ನವೆಂಬರ್ 23ರಂದು ಫಲಿತಾಂಶ ಘೋಷಣೆಯಾಗಲಿದೆ. ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಮತ್ತು ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಪ್ರತಿಷ್ಠೆ ಚುನಾವಣಾ ಫಲಿತಾಂಶದಲ್ಲಿ ಅಡಗಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿಯೂ ಚನ್ನಪಟ್ಟಣದಲ್ಲಿ ಪ್ರಚಾರ ಜೋರಾಗಿಯೇ ನಡೆದಿದೆ.
ಚನ್ನಪಟ್ಟಣದ ಉಪ ಚುನಾವಣೆ ಪ್ರಚಾರದ ಕಣದ ಕಾವು ಸೋಮವಾರದಿಂದ ಮತ್ತಷ್ಟು ಹೆಚ್ಚಾಗಲಿದೆ. ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಇಂದು ಉಪ ಚುನಾವಣೆ ಪ್ರಚಾರ ಕಣಕ್ಕೆ ಎಂಟ್ರಿ ಕೊಡಲಿದ್ದಾರೆ. ವಿವಿಧ ಹಳ್ಳಿಗಳಲ್ಲಿ ಅವರು ಪ್ರಚಾರ ನಡೆಸಲಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಿ. ಪಿ. ಯೋಗೇಶ್ವರ ಪ್ರರವಾಗಿ ಅಬ್ಬರದ ಪ್ರಚಾರವನ್ನು ನಡೆಸಲಿದ್ದಾರೆ.

ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಈ ಕುರಿತು ಮಾಹಿತಿ ನೀಡಿದ್ದಾರೆ.
'ಚನ್ನಪಟ್ಟಣ ಉಪ ಚುನಾವಣೆ ಹಿನ್ನೆಲೆಯಲ್ಲಿ ನಾಳೆ (ಸೋಮವಾರ) ವಿವಿಧ ಸ್ಥಳಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಸಿ. ಪಿ. ಯೋಗೇಶ್ವರ ಅವರ ಪರವಾಗಿ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹಾಗೂ ಇತರೆ ನಾಯಕರೊಂದಿಗೆ ಚುನಾವಣಾ ಪ್ರಚಾರವನ್ನು ನಡೆಸಲಿದ್ದೇನೆ' ಎಂದು ಹೇಳಿದ್ದಾರೆ.
"ಚನ್ನಪಟ್ಟಣದ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದ್ದು, ತಾವೆಲ್ಲರೂ ಮುಂಬರುವ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಆಶೀರ್ವದಿಸುವ ಮೂಲಕ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮತದಾರರದಲ್ಲಿ ಮನವಿ ಮಾಡುತ್ತೇನೆ" ಎಂದು ರಾಮಲಿಂಗಾ ರೆಡ್ಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.
ಎಲ್ಲೆಲ್ಲಿ ಡಿ. ಕೆ. ಶಿವಕುಮಾರ್ ಪ್ರಚಾರ?; ಡಿ. ಕೆ. ಶಿವಕುಮಾರ್ ಸೋಮವಾರ ಬೆಳಗ್ಗೆ 11 ರಿಂದ 11.30ರ ತನಕ ಹೊಂಗನೂರು. 11.45 ರಿಂದ 12.15 ವಿರೂಪಾಕ್ಷಿಪುರ. ಮಧ್ಯಾಹ್ನ 12.30 ರಿಂದ 1.15ರ ತನಕ ಕೋಡಂಬಳ್ಳಿಯಲ್ಲಿ ಪ್ರಚಾರವನ್ನು ನಡೆಸಲಿದ್ದಾರೆ. 1.30 ರಿಂದ 2ರ ತನಕ ಅಕ್ಕೂರಿನಲ್ಲಿ ಪ್ರಚಾರ ಮಾಡಲಿದ್ದಾರೆ. ಮಧ್ಯಾಹ್ನ 2.45 ರಿಂದ 5 ಗಂಟೆಯ ತನಕ ಕಾರ್ಯಕ್ರಮ ಕಾಯ್ದಿರಿಸಲಾಗಿದೆ.
ಸಂಜೆ 5 ರಿಂದ 6.15ರ ತನಕ ಚನ್ನಪಟ್ಟಣ ಟೌನ್ ಮತ್ತು ಮಂಗಳವಾರ ಪೇಟೆಯಲ್ಲಿ ಪ್ರಚಾರ ನಡೆಯಲಿದೆ. ಸಂಜೆ 5 ರಿಂದ 5.30ರ ತನಕ ಅಕ್ಕೂರು. 6.30 ರಿಂದ 7.15ರ ತನಕ ಕೋಟೆ ಮತ್ತು ಚನ್ನಪಟ್ಟಣ ಟೌನ್ (ರಾಜ ಕೆಂಪೇಗೌಡ ಬಡಾವಣೆ ಸರ್ಕಲ್). ಸಂಜೆ 7.30 ರಿಂದ 8.15ರ ತನಕ ಚನ್ನಪಟ್ಟಣ ಟೌನ್‌ನಲ್ಲಿ ಡಿ. ಕೆ. ಶಿವಕುಮಾರ್ ಪ್ರಚಾರವನ್ನು ನಡೆಸಲಿದ್ದಾರೆ.
ಸಿ. ಪಿ. ಯೋಗೇಶ್ವರ ಪರವಾಗಿ ಡಿ. ಕೆ. ಶಿವಕುಮಾರ್ ಸಹೋದರ ಡಿ. ಕೆ. ಸುರೇಶ್ ಚನ್ನಪಟ್ಟಣದಲ್ಲಿ ಸಕ್ರಿಯವಾಗಿ ಪ್ರಚಾರವನ್ನು ನಡೆಸುತ್ತಿದ್ದಾರೆ. ಸಚಿವ ದಿನೇಶ್ ಗುಂಡೂರಾವ್, ಶಾಸಕ ಪ್ರದೀಪ್ ಈಶ್ವರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಪ್ರಚಾರವನ್ನು ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಪ್ರಚಾರಕ್ಕೆ ಆಗಮಿಸುವ ನಿರೀಕ್ಷೆ ಇದೆ.
ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸಿ. ಪಿ. ಯೋಗೇಶ್ವರ ಎದುರಾಳಿ. ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಪುತ್ರನನ್ನು ಗೆಲ್ಲಿಸಲು ಚನ್ನಪಟ್ಟಣದಲ್ಲಿ ಬಿರುಸಿನ ಪ್ರಚಾರವನ್ನು ನಡೆಸುತ್ತಿದ್ದಾರೆ. ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಸೋಮವಾರ ಮೊಮ್ಮಗನ ಪರವಾಗಿ ಪ್ರಚಾರ ಮಾಡಲಿದ್ದಾರೆ.
ಕೇಂದ್ರ ಸಚಿವ ವಿ. ಸೋಮಣ್ಣ, ಮಾಜಿ ಸಂಸದ ಪ್ರತಾಪ್ ಸಿಂಹ, ವಿರೋಧ ಪಕ್ಷದ ನಾಯಕ ಆರ್. ಅಶೋಕ ಸೇರಿದಂತೆ ಬಿಜೆಪಿ, ಜೆಡಿಎಸ್ ಪಕ್ಷದ ನಾಯಕರು ನಿಖಿಲ್ ಕುಮಾರಸ್ವಾಮಿ ಪ್ರರವಾಗಿ ಪ್ರಚಾರವನ್ನು ನಡೆಸಿದ್ದಾರೆ.












Click it and Unblock the Notifications