Chennapatna By Election: ಚನ್ನಪಟ್ಟಣ ಮತದಾನಕ್ಕೆ 8 ಪ್ಯಾರಾ ಮಿಲಿಟರಿ ಪಡೆ ಕಣ್ಗಾವಲು
ರಾಮನಗರ, ನವೆಂಬರ್ 12: ರಾಮನಗರ ಜಿಲ್ಲೆಯ ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆ 2024ರ ಬಹಿರಂಗ ಪ್ರಚಾರ ಸೋಮವಾರ ಸಂಜೆ ಅಂತ್ಯಗೊಂಡಿದೆ. ನವೆಂಬರ್ 13ರ ಬುಧವಾರ ಮತದಾನ ನಡೆಯಲಿದ್ದು, ನವೆಂಬರ್ 23ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಉಪ ಚುನಾವಣೆ ಫಲಿತಾಂಶ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಉಪ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಜಿಲ್ಲಾಡಳಿತ ತಯಾರಿ ನಡೆಸಿದೆ. ಅದಕ್ಕಾಗಿ ಹೆಚ್ಚಿನ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಚನ್ನಪಟ್ಟಣದ ಉಪ ಚುನಾವಣೆಯಲ್ಲಿ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಮತ್ತು ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಪ್ರತಿಷ್ಠೆ ಅಡಗಿದೆ. ಚನ್ನಪಟ್ಟಣದಲ್ಲಿ ಯಾರಿಗೆ ಗೆಲುವು? ಎಂಬ ಚರ್ಚೆಗಳು ಈಗ ಜೋರಾಗಿವೆ. ಕ್ಷೇತ್ರದ 2,45,804 ಮತದಾರರು ಬುಧವಾರ ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ.

ಚನ್ನಪಟ್ಟಣ ಉಪ ಚುನಾವಣೆಗೆ ಬಿಜೆಪಿ-ಜೆಡಿಎಸ್‌ನಿಂದ ಎಚ್. ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿ. ಸಿ. ಪಿ. ಯೋಗೇಶ್ವರ ಕಾಂಗ್ರೆಸ್ ಅಭ್ಯರ್ಥಿ. ಒಟ್ಟು 31 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ಯಾರಿಗೆ ಗೆಲುವು? ಎಂಬುದು ನವೆಂಬರ್ 23ರ ಶನಿವಾರ ತಿಳಿಯಲಿದೆ.
8 ಪ್ಯಾರಾ ಮಿಲಿಟರಿ ಪಡೆ ನಿಯೋಜನೆ: ಚನ್ನಪಟ್ಟಣ ಉಪ ಚುನಾವಣೆ ಮೇಲೆ ಕಣ್ಗಾವಲು ಇಡಲು 10 ಪ್ಯಾರಾ ಮಿಲಿಟರಿ ಪಡೆ ಮಂಜೂರು ಮಾಡಬೇಕು ಎಂದು ರಾಮನಗರ ಜಿಲ್ಲಾ ಪೊಲೀಸರು ಕೇಂದ್ರಕ್ಕೆ ಪತ್ರವನ್ನು ಬರೆದಿದ್ದರು. ಉಪ ಚುನಾವಣೆಗೆ 8 ಪ್ಯಾರಾ ಮಿಲಿಟರಿ ಪಡೆಯನ್ನು ನಿಯೋಜನೆ ಮಾಡಲಾಗಿದೆ.
ಪ್ಯಾರಾ ಮಿಲಿಟರಿ ಪಡೆಗಳು ಈಗಾಗಲೇ ವಿವಿಧ ಕಡೆ ಪಥ ಸಂಚಲನ ನಡೆಸುವ ಮೂಲಕ ಭದ್ರತೆಯ ಉಸ್ತುವಾರಿಯನ್ನು ವಹಿಸಿಕೊಂಡಿವೆ. ಬುಧವಾರ ಮತದಾನ ನಡೆಯುವ ಹಿನ್ನಲೆಯಲ್ಲಿ ಆಯ್ದ ಮತಗಟ್ಟೆಗಳಿಗೆ ಪ್ಯಾರಾ ಮಿಲಿಟರಿ ಪಡೆಯ ಶಸ್ತ್ರ ಸಜ್ಜಿತ ಸಿಬ್ಬಂದಿ ಭದ್ರತೆ ನೀಡಲಿದ್ದಾರೆ.
ಚನ್ನಪಟ್ಟಣ ಕ್ಷೇತ್ರದಲ್ಲಿ 2,45,804 ಮತದಾರಿದ್ದಾರೆ. 276 ಮತಗಟ್ಟೆಗಳಲ್ಲಿ ಬುಧವಾರ ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯ ತನಕ ಮತದಾನ ನಡೆಯಲಿದೆ. 276 ಮತಗಟ್ಟೆ ಪೈಕಿ 197 ಸಾಮಾನ್ಯ, 119 ಸೂಕ್ಷ್ಮ ಮತಗಟ್ಟೆಗಳು. ಮತಗಟ್ಟೆಗಳಲ್ಲಿ ಪೊಲೀಸರು, ಹೋಂ ಗಾರ್ಡ್ ಮತ್ತು ಪ್ಯಾರಾ ಮಿಲಿಟರಿ ಸಿಬ್ಬಂದಿ ಭದ್ರತೆ ಒದಗಿಸಲಿದ್ದಾರೆ.
2023ರ ವಿಧಾನಸಭೆ ಚುನಾವಣೆಯಲ್ಲಿ ನೀಡಿದ್ದ ಭದ್ರತೆಗಿಂತ 10 ಪಟ್ಟು ಹೆಚ್ಚು ಭದ್ರತೆಯನ್ನು ಉಪ ಚುನಾವಣೆಗೆ ನೀಡಲಾಗಿದೆ. ಬಹಿರಂಗ ಪ್ರಚಾರ ಮುಕ್ತಾಯವಾದ ಹಿನ್ನಲೆಯಲ್ಲಿ 48 ಗಂಟೆಗಳ ಅವಧಿಯಲ್ಲಿ ಚನ್ನಪಟ್ಟಣದ ವ್ಯಾಪ್ತಿಯಲ್ಲಿ ಕೇವಲ 50 ಸಾವಿರ ರೂ. ಹಣ ಸಾಗಣೆ ಮಾಡಲು ಅನುಮತಿ ನೀಡಲಾಗಿದೆ. 50 ಸಾವಿರಕ್ಕಿಂತ ಹೆಚ್ಚು ಹಣ ಸಾಗಣೆ ಮಾಡಲು ಅಗತ್ಯ ದಾಖಲೆ ಹೊಂದಿರಬೇಕು.
2024ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಲ್ಲಿ ಗೆಲವು ಸಾಧಿಸಿದ ಬಳಿಕ ಎಚ್. ಡಿ. ಕುಮಾರಸ್ವಾಮಿ ಚನ್ನಪಟ್ಟಣದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕ್ಷೇತ್ರದಲ್ಲಿ ಪುತ್ರನನ್ನು ಗೆಲ್ಲಿಸಿಕೊಂಡು ಬರಬೇಕು ಎಂದು ಅವರು ಪಣ ತೊಟ್ಟಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ, 2023ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರದಲ್ಲಿ ಸೋತ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಸಿದ್ದಾರೆ.
ಬಿಜೆಪಿಯಲ್ಲಿದ್ದ, ಎಂಎಲ್‌ಸಿಯಾಗಿದ್ದ ಸಿ. ಪಿ. ಯೋಗೇಶ್ವರ ಈಗ ಕಾಂಗ್ರೆಸ್ ಅಭ್ಯರ್ಥಿ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಡಿ. ಕೆ. ಶಿವಕುಮಾರ್ ಮತ್ತು ಡಿ. ಕೆ. ಸುರೇಶ್ ಸಿ. ಪಿ. ಯೋಗೇಶ್ವರ ಗೆಲ್ಲಿಸಿಕೊಂಡು ಬರುವುದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಬುಧವಾರ ಮತದಾರರು ತಮ್ಮ ತೀರ್ಪು ನೀಡಲಿದ್ದಾರೆ.












Click it and Unblock the Notifications