ಚನ್ನಪಟ್ಟಣ: ಪ್ರಧಾನಿ ಮೋದಿ ಕಾರ್ಯಕ್ರಮಲ್ಲಿ ವೇದಿಕೆ ಹಂಚಿಕೊಂಡ ರೌಡಿ ಶೀಟರ್, ಫೋಟೋ ವೈರಲ್
ರಾಮನಗರ, ಮೇ, 01: ವಿಧಾನಸಭೆ ಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಲು ಚನ್ನಪಟ್ಟಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಿದ್ದರು. ಈ ವೇಳೆ ನರೇಂದ್ರ ಮೋದಿ ಅವರ ಜೊತೆ ವೇದಿಕೆಯಲ್ಲಿ ರೌಡಿ ಶೀಟರ್ ಮುದ್ದುಕೃಷ್ಣ ಕಾಣಿಸಿಕೊಂಡಿರುವುದು ಇದೀಗ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ.
ಚನ್ನಪಟ್ಟಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಕುಖ್ಯಾತ ರೌಡಿ ಮುದ್ದುಕೃಷ್ಣ ವೇದಿಕೆ ಹಂಚಿಕೊಂಡಿದ್ದಾರೆ. ಅಲ್ಲದೆ ಪಂಚಲೋಹದಿಂದ ತಯಾರಿಸಲಾಗಿದ್ದ ಅಪ್ರಮೇಯ ಅಂಬೆಗಾಲು ಕೃಷ್ಣನ ವಿಗ್ರಹವನ್ನು ರೌಡಿ ಮುದ್ದುಕೃಷ್ಣ ಮೋದಿ ಅವರಿಗೆ ಉಡುಗೊರೆ ನೀಡಿರುವ ಫೋಟೋ ಎಲ್ಲೆಡೆ ವೈರಲ್ ಆಗಿದೆ.

ಇತ್ತೀಚೆಗಷ್ಟೇ ರೌಡಿಶೀಟರ್ ಫೈಟರ್ ರವಿಗೆ ಕೈ ಮುಗಿದಿದ್ದ ಮೋದಿ, ಇದೀಗ ಮತ್ತೊಬ್ಬ ರೌಡಿ ಶೀಟರ್ ಸಮ್ಮುಖದಲ್ಲಿ ಸನ್ಮಾನ ಸ್ವೀಕರಿಸಿದ್ದಾರೆ. ಇದೀಗ ಇದಕ್ಕೆ ರೌಡಿ ಶೀಟರ್ ಮೋದಿ ಕಾರ್ಯಕ್ರದಲ್ಲಿ ಭಾಗವಹಿಸಿದ್ದು ಹೇಗೆ? ಭದ್ರತಾ ತಂಡ, ರಾಜ್ಯ ಬಿಜೆಪಿ ನಾಯಕರಿಗೂ ಈ ಬಗ್ಗೆ ಅರಿವಿಲ್ಲವೇ? ಎನ್ನುವ ಪ್ರಶ್ನೆಗಳು ಎದ್ದಿವೆ.
ಜನಸಾಮಾನ್ಯರು, ಮಾಧ್ಯಮದವರು ಕುರ್ಚಿಗಾಗಿ ಪರದಾಡುತ್ತಿದ್ದರು. ಇತ್ತ ನಟೋರಿಯಸ್ ರೌಡಿ ಶೀಟರ್ ಮುದ್ದುಕೃಷ್ಣ ಸುಲಭವಾಗಿ ವೇದಿಕೆ ಏರಿದ್ದ. ಫೈಟರ್ ರವಿ, ಸೈಲೆಂಟ್ ಸುನೀಲ, ವಿಲ್ಸನ್ ಗಾರ್ಡನ್ ನಾಗ, ಬೆತ್ತನಗೆರೆ ಶಂಕರ್, ಆನೇಕಲ್ ಮಂಜುನಾಥ್ ಅಲಿಯಾಸ್ ಉಪ್ಪಿ ಬಳಿಕ ಇದೀಗ ಕುಖ್ಯಾತ ರೌಡಿ ಶೀಟರ್ ಮುದ್ದುಕೃಷ್ಣ ಸರದಿ ಆಗಿದೆ.
ಭೂಗತ ಪಾತಾಕಿಗಳ ಜೊತೆ ನಂಟು ಹೊಂದಿರುವ ಚನ್ನಪಟ್ಟಣದ ಎಲೆಕೇರಿಯ ಮುದ್ದುಕೃಷ್ಣ ಸಿ.ಪಿ.ಯೋಗೇಶ್ವರ್ ಅವರ ಪರಮಾಪ್ತ ಆಗಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ. ಈ ರೌಡಿ ಶೀಟರ್ ಮೋದಿ ಜೊತೆ ವೇದಿಕೆ ಹಂಚಿಕೊಂಡಿರುವುದು ಇದೀಗ ಮೂಲ ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲೂ ಭಾರಿ ಖಂಡನೆ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಬಿಜೆಪಿಯ ರೌಡಿ ಮೋರ್ಚಾಕ್ಕೆ ಮತ್ತೊಬ್ಬ ಸದಸ್ಯ ಸೇರ್ಪಡೆ ಎಂದು ವಿಡಿಯೋವೊಂದನ್ನು ಹರಿಬಿಟ್ಟಿದ್ದಾರೆ ಎನ್ನಲಾಗಿದೆ.
ಮತ್ತೊಂದೆಡೆ ರೌಡಿ ಶೀಟರ್ ಕೈಯಲ್ಲಿ ಸನ್ಮಾನ ಸ್ವೀಕಾರ ಮಾಡಿರುವ ಪ್ರಧಾನಿ ಅವರದ್ದು ಇದೆಂತಹ ದೌರ್ಭಾಗ್ಯ ಎನ್ನುವ ಟೀಕೆಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿವೆ. ಹೀಗೆ ಸಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ವೈರಲ್ ಆದ ನಂತರ ಎಚ್ಚೆತ್ತ ಪೊಲೀಸ್ ಇಲಾಖೆ ತನಿಖೆ ಪ್ರಾರಂಭಿಸಿದೆ.












Click it and Unblock the Notifications