DK Shivakumar V/s HD Kumaraswamy:ಮತ್ತೆ ಚನ್ನಪಟ್ಟಣದಲ್ಲಿ ಡಿಕೆ ಶಿವಕುಮಾರ್ ಮತ್ತು ಎಚ್‌ಡಿ ಕುಮಾರಸ್ವಾಮಿ ನಡುವೆ ಪೈಪೋಟಿ!
ಚನ್ನಪಟ್ಟಣ, ಜೂನ್.23: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಾವು ಚನ್ನಪಟ್ಟಣ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿರುವುದು ರಾಜ್ಯ ರಾಜಕೀಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಇದು ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿ ನಾಯಕರ ನಡುವೆ ರಾಜಕೀಯ ಜಿದ್ದಾಜಿದ್ದಿ ಏರ್ಪಡುವಂತೆ ಮಾಡಿದೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಸಹೋದರ ಡಿಕೆ ಸುರೇಶ್ ಅವರ ಸೋಲನ್ನು ವೈಯಕ್ತಿಕ ಸೋಲು ಎಂದು ಭಾವಿಸಿರುವ ಡಿಸಿಎಂ ಡಿಕೆ ಶಿವಕುಮಾರ್ ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯನ್ನು ಪ್ರತಿಷ್ಠೆಯನ್ನಾಗಿಸಿಕೊಂಡಿದ್ದಾರೆ. ಹೇಗಾದರೂ ತಮ್ಮನನ್ನು ರಾಜಕೀಯವಾಗಿ ಸಕ್ರೀಯಗೊಳಿಸುವ ಯೋಚನೆಯಲ್ಲಿರುವ ಅವರು ಉಪಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಹೇಳಿಕೊಂಡಿದ್ದಾರೆ.

ಮತ್ತೆ ಡಿಕೆಶಿ ಮತ್ತು ಎಚ್‌ಡಿಕೆ ಪೈಪೋಟಿ
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಫರ್ಧಿಸಿ ಈಗ ಕೇಂದ್ರ ಸಚಿವ ಸ್ಥಾನ ಅಲಂಕರಿಸಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವಿನ ರಾಜಕೀಯ ಪೈಪೋಟಿ ತೀವ್ರಗೊಂಡಿದೆ. ಚನ್ನಪಟ್ಟಣ ಉಪಚುನಾವಣೆಯಲ್ಲಿ ಡಿಕೆ ಶಿವಕುಮಾರ್ ಸ್ಪರ್ಧಿಸಬಹುದು ಎಂಬ ಸೂಚನೆಗಳ ಬೆನ್ನಲ್ಲೇ ಎಚ್‌ಡಿ ಕುಮಾರಸ್ವಾಮಿ ಕಣಕ್ಕೆ ಇಳಿಯುವಂತಿದೆ.
2004 ರಿಂದ (2009 ಹೊರತುಪಡಿಸಿ) ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಎಚ್.ಡಿ.ಕುಮಾರಸ್ವಾಮಿ ಸತತವಾಗಿ ಗೆದ್ದಿದ್ದಾರೆ. ಆದರೆ, 2018ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಮತ್ತು ಚನ್ನಪಟ್ಟಣ ಎರಡರಿಂದಲೂ ಸ್ಪರ್ಧಿಸಲು ಆಯ್ಕೆ ಮಾಡಿಕೊಂಡಿದ್ದರು. ಎರಡೂ ಸ್ಥಾನಗಳನ್ನು ಗೆದ್ದ ನಂತರ, ಎಚ್‌ಡಿ ಕುಮಾರಸ್ವಾಮಿ ಅವರು ರಾಮನಗರವನ್ನು ಬಿಟ್ಟು, ಚನ್ನಪಟ್ಟಣವನ್ನು ಉಳಿಸಿಕೊಂಡರು.

ರಾಮನಗರವನ್ನು ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿಗೆ ಬಿಟ್ಟು ಕೊಟ್ಟರು. 2023 ರ ವಿಧಾನಸಭಾ ಚುನಾವಣೆಯಲ್ಲಿ, ಎಚ್ ಡಿ ಕುಮಾರಸ್ವಾಮಿ ಚನ್ನಪಟ್ಟಣದಿಂದ ಸ್ಪರ್ಧಿಸಿ, ಅವರ ಮಗ ನಿಖಿಲ್ ಕುಮಾರಸ್ವಾಮಿ ಅವರನ್ನು ರಾಮನಗರದಿಂದ ಸ್ಪರ್ಧಿಸುವಂತೆ ಮಾಡಿದರು. ಕುಮಾರಸ್ವಾಮಿ ಕುಟುಂಬದ ಭದ್ರಕೋಟೆ ಎನಿಸಿರುವ ರಾಮನಗರದಲ್ಲಿ ನಿಖಿಲ್‌ಗೆ ಗೆಲುವು ಎಂದೇ ನಿರೀಕ್ಷಿಸಲಾಗಿತ್ತು. ಆದರೆ, ಎಚ್‌ಎ ಇಕ್ಬಾಲ್ ಹುಸೇನ್ ನಿಖಿಲ್ ಅವರನ್ನು ಸೋಲಿಸಿ ರಾಮನಗರವನ್ನು ಕಾಂಗ್ರೆಸ್ ಭದ್ರಕೋಟೆಯನ್ನಾಗಿ ಮಾಡಿದರು.
ಡಿಕೆ ಶಿವಕುಮಾರ್‌ಗೆ ಪೆಟ್ಟು ಕೊಟ್ಟ ಡಿ.ಕೆ.ಸುರೇಶ್ ಸೋಲು
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎಚ್ ಡಿ ಕುಮಾರಸ್ವಾಮಿ ಅವರ ಸೋದರ ಮಾವ, ಜಯದೇವ ಹೃದ್ರೋಗ ಶಾಸ್ತ್ರದ ಮಾಜಿ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರು ಡಿ.ಕೆ.ಸುರೇಶ್ ಅವರನ್ನು ಸೋಲಿಸಿದ್ದಾರೆ. ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಸಂಸದೀಯ ಕ್ಷೇತ್ರದಲ್ಲಿ ಸಹೋದರ ಡಿ.ಕೆ.ಸುರೇಶ್ ಅವರ ಸೋಲನ್ನು ಡಿಕೆ ಶಿವಕುಮಾರ್‌ಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಚನ್ನಪಟ್ಟಣ ಗೆ್ದದು ಆ ಬೇಸರ ಸರಿದೂಗಿಸಲು ಪ್ರಯತ್ನಿಸುತ್ತಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಸೋತಿರುವ ತನ್ನ ಸಹೋದರನನ್ನು ಮತ್ತೆ ರಾಜಕೀಯಕ್ಕೆ ಕರೆಯರಲು ಸಿದ್ಧತೆ ಮಾಡಿಕೊಂಡಿದ್ದಾರೆ. ತಾವು ಚನ್ನಪಟ್ಟಣ ಉಪಚುನಾವಣೆಯಲ್ಲಿ ಗೆದ್ದು, ತಾವು ಈಗ ಶಾಸಕರಾಗಿರುವ ಕನಕಪುರ ವಿಧಾನಸಭಾ ಕ್ಷೇತ್ರವನ್ನು ತಮ್ಮನಿಗೆ ಬಿಟ್ಟುಕೊಡುವ ಫ್ಲ್ಯಾನ್‌ನಲ್ಲಿದ್ದಾರೆ. ಆದರೆ, ಇದೊಂದು ಕಾಂಗ್ರೆಸ್‌ನ ಫ್ಲ್ಯಾನ್ ಅಷ್ಟೇ. ಅಭ್ಯರ್ಥಿ ಬೇರೊಬ್ಬರು ಎನ್ನಲಾಗುತ್ತಿದೆ.
ಚನ್ನಪಟ್ಟಣದಲ್ಲಿ ಡಿಕೆ ಶಿವಕುಮಾರ್ ಕಣಕ್ಕೆ ಇಳಿಯುತ್ತಾರೆ ಎನ್ನುವ ಸುಳಿವು ಸಿಕ್ಕ ಕೂಡಲೆ ಎಚ್ ಡಿ ಕುಮಾರಸ್ವಾಮಿ ಕೂಡ ಕಣಕ್ಕಿಳಿದಿದ್ದಾರೆ. ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿರುವ ಅವರು ಚನ್ನಪಟ್ಟಣದಲ್ಲಿಯೂ ದೊಡ್ಡ ಗೆಲುವು ಸಾಧಿಸುವ ಭರವಸೆ ನೀಡಿದ್ದಾರೆ. ಹೀಗಾಗಿಯೇ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಇಲ್ಲಿಯೂ ಗೌಡರ ಕುಟುಂಬದ ಸದಸ್ಯ ಕಣಕ್ಕೆ ಇಳಿಯುವ ಸಾಧ್ಯತೆ ಇಲ್ಲಿದೆ.
ಈ ಹಿನ್ನೆಲೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳ ಬಗ್ಗೆ ಕುತೂಹಲದ ಪೈಪೋಟಿ ಏರ್ಪಟ್ಟಿದೆ. ಬಿಜೆಪಿಯಿಂದ ಚನ್ನಪಟ್ಟಣ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಕಣಕ್ಕಿಳಿಯುವ ಊಹಾಪೋಹ ಜೋರಾಗಿದ್ದು, ಜೆಡಿಎಸ್ ನಿಂದ ನಿಖಿಲ್ ಕುಮಾರಸ್ವಾಮಿ ಅಥವಾ ಎಚ್.ಡಿ.ಕುಮಾರಸ್ವಾಮಿ ಕುಟುಂಬದ ಮತ್ತೊಬ್ಬರು ಮತ್ತೆ ಸ್ಪರ್ಧಿಸುವ ಸಾಧ್ಯತೆ ಇದೆ ಎಂಬ ಚರ್ಚೆಗಳು ನಡೆಯುತ್ತಿವೆ.












Click it and Unblock the Notifications