ಚನ್ನಪಟ್ಟಣ: ಬಮೂಲ್ ಉತ್ಸವಕ್ಕೆ ಹಸಿರು ನಿಶಾನೆ ತೋರಿದ ಹೈಕೋರ್ಟ್, ಕಾರ್ಯಕ್ರಮದ ವಿವರ ತಿಳಿಯಿರಿ
ಜೆಡಿಎಸ್ ಮತ್ತು ಬಿಜೆಪಿ ಮುಖಂಡರ ನಡುವಿನ ಸಂಘರ್ಷಕ್ಕೆ ವೇದಿಕೆಯಾಗಿದ್ದ ಬೊಂಬೆನಾಡು ಬಮೂಲ್ ಉತ್ಸವಕ್ಕೆ ಅಂತಿಮವಾಗಿ ಹೈಕೋರ್ಟ್ ಅನುಮತಿ ನೀಡಿದೆ. ಇದರಿಂದ ಬಮೂಲ್ ನಾಮನಿರ್ದೇಶಕ ಲಿಂಗೇಶ್ ಕುಮಾರ್ ಹಾಗೂ ವಿಧಾನ ಪರಿಷತ್ ಸದಸ್ಯ, ಬಿಜೆಪಿ ಮುಖಂಡ ಸಿ.ಪಿಯೋಗೇಶ್ವರ್ ಮತ್ತು
ರಾಮನಗರ, ಫೆಬ್ರವರಿ, 27: ಜೆಡಿಎಸ್ ಮತ್ತು ಬಿಜೆಪಿ ಮುಖಂಡರ ನಡುವಿನ ಸಂಘರ್ಷಕ್ಕೆ ವೇದಿಕೆಯಾಗಿದ್ದ ಬೊಂಬೆನಾಡು ಬಮೂಲ್ ಉತ್ಸವಕ್ಕೆ ಅಂತಿಮವಾಗಿ ಹೈಕೋರ್ಟ್ ಅನುಮತಿ ನೀಡಿದೆ. ಇದರಿಂದ ಬಮೂಲ್ ನಾಮನಿರ್ದೇಶಕ ಲಿಂಗೇಶ್ ಕುಮಾರ್ ಹಾಗೂ ವಿಧಾನ ಪರಿಷತ್ ಸದಸ್ಯ, ಬಿಜೆಪಿ ಮುಖಂಡ ಸಿ.ಪಿಯೋಗೇಶ್ವರ್ ಮತ್ತು ಅವರ ಬೆಂಬಲಿಗರಿಗೆ ಇರಿಸುಮುರಿಸು ಉಂಟಾಗಿದೆ ಎನ್ನಲಾಗಿದೆ.
ಬೊಂಬೆನಾಡು ಬಮೂಲ್ ಉತ್ಸವ ರೈತರ ಕಾರ್ಯಕ್ರಮವಾಗದೇ ಕೇವಲ ಒಂದು ಪಕ್ಷದ ಕಾರ್ಯಕ್ರಮವಾಗಿದೆ ಎಂದು ಇತ್ತೀಚೆಗಷ್ಟೇ ಆರೋಪಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ತಡೆ ನೀಡಬೇಕು ಎಂದು ಬಮೂಲ್ ನಾಮ ನಿರ್ದೇಶಕ ಲಿಂಗೇಶ್ ಕುಮಾರ್ ಹೈಕೋರ್ಟ್ ಮೆಟ್ಟಿಲೇರಿದರು. ಆದರೆ ಲಿಂಗೇಶ್ ಕುಮಾರ್ ಅರ್ಜಿ ವಜಾ ಮಾಡಿದ ಹೈಕೋರ್ಟ್ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿದೆ.
ಜೆಡಿಎಸ್ - ಬಿಜೆಪಿ ಜಂಗಿ ಕುಸ್ತಿಗೆ ವೇದಿಕೆಯಾದ ಚನ್ನಪಟ್ಟಣದಲ್ಲಿ ನಡೆಯುವ ಬಮೂಲ್ ಉತ್ಸವ
ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಉತ್ತೇಜಿತರಾಗಿರುವ ಬಮೂಲ್ ನಿರ್ದೇಶಕ ಎಚ್.ಸಿ.ಜಯಮುತ್ತು, ದೊಡ್ಡಮಳೂರುನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನ್ಯಾಯಕ್ಕೆ ಜಯ ಲಭಿಸಿದೆ. ಕಳೆದ ಮೂರು ವರ್ಷ ಕೋವಿಡ್ ಭೀತಿಯಲ್ಲಿ ಬಮೂಲ್ ಉತ್ಸವ ಅದ್ದೂರಿಯಾಗಿ ನಡೆಸಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಈ ಬಾರಿ ಕ್ಷೀರಕ್ರಾಂತಿಗೆ ಕಾರಣರಾದ ಹಾಲು ಉತ್ಪಾದಕರನ್ನು ಗೌರವಿಸುವ ಕೆಲಸವನ್ನು ಮಾಡುತ್ತಿದ್ದೇವೆ ಎಂದರು.

ಚನ್ನಪಟ್ಟಣದಲ್ಲಿ ಬಮೂಲ್ ಉತ್ಸವ
ಚನ್ನಪಟ್ಟಣದಲ್ಲಿ ಬಮೂಲ್ ಉತ್ಸವಕ್ಕೆ ಭರದ ಸಿದ್ಧತೆ ನಡೆಯುತ್ತಿದ್ದು, ದೊಡ್ಡಮಳೂರು ಗ್ರಾಮದಲ್ಲಿ ಬೃಹತ್ ಕಾರ್ಯಕ್ರಮ ನಡೆಸಲು ಈಗಾಗಲೇ ವೇದಿಕೆ ಸಜ್ಜುಗೊಳ್ಳುತ್ತಿದೆ. ಇನ್ನು ಬೃಹತ್ ವೇದಿಕೆ ಹಾಗೂ 30 ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದೆ. ಇನ್ನು ಬೊಂಬೆನಾಡಿನ ಉತ್ಸವ ಸಮಾರಂಭದ ಬೃಹತ್ ವೇದಿಕೆಯ ಪೂರ್ವ ಸಿದ್ದತೆಯನ್ನು ಬಮೂಲ್ ನಿರ್ದೇಶಕ ಎಚ್.ಸಿ.ಜಯಮುತ್ತು ಪರೀಶಿಲನೆ ನಡೆಸಿದ್ದಾರೆ.

ವೇದಿಕೆ ಸಿದ್ಧತೆ ಪರಿಶೀಲಿಸಿದ ಜಯಮುತ್ತು
ವೇದಿಕೆ ಸಿದ್ಧತೆ ವಿಕ್ಷಿಸಿ ನಂತರ ಮಾತನಾಡಿದ ಬಮೂಲ್ ನಿರ್ದೇಶಕ ಎಚ್.ಸಿ.ಜಯಮುತ್ತು ಹಾಲು ಉತ್ಪಾದಕರನ್ನು ಗೌರವಿಸುವ ಜೊತೆಗೆ ಬಮೂಲ್ ಉತ್ಸವದಲ್ಲಿ ಕೃಷಿಮೇಳ, ಉದ್ಯೋಗ ಮೇಳ, ಆರೋಗ್ಯ ತಪಾಸಣಾ ಶಿಬಿರವನ್ನು ಸಹ ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಇನ್ನು ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ಮುಖಂಡರು ಭಾಗಿಯಾಗಲಿದ್ದಾರೆ. ಹಾಗೆಯೇ ತಾಲೂಕಿನ ಹಾಲು ಉತ್ಪಾದಕರಿಗೆ ನಾಗರೀಕ ಸನ್ಮಾನ ಮಾಡಲಾಗುವುದು ಎಂದು ತಿಳಿಸಿದರು.

ವಿರೋಧಿಗಳಿಗೂ ಆಹ್ವಾನ ನೀಡಿದ ನಿರ್ದೇಶಕ
ಬೊಂಬೆನಾಡು ಬಮೂಲ್ ಕಾರ್ಯಕ್ರಮದಲ್ಲಿ ಬಮೂಲ್ ಹೆಸರು ಹಾಗೂ ಲೋಗೋ ಬಳಸಬಾರದು. ಒಂದು ವೇಳೆ ಇದನ್ನು ಮೀರಿದರೆ ಬಿಜೆಪಿ ಕಾರ್ಯಕರ್ತರು ಹಾಗೂ ಹಾಲು ಉತ್ಪಾದಕರು ಸೇರಿದಂತೆ 10 ಸಾವಿರಕ್ಕೂ ಜನರೊಂದಿಗೆ ಬಂದು ಕಪ್ಪು ಪಟ್ಟಿ ಪ್ರದರ್ಶನ ಮಾಡುತ್ತೇವೆ ಎಂದು ಬಿಜೆಪಿ ಮುಖಂಡ ಹಾಗೂ ಬಮೂಲ್ ನಾಮ ನಿರ್ದೇಶಿತ ಸದಸ್ಯ ಲಿಂಗೇಶ್ ಕುಮಾರ್ ಎಚ್ಚರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಬಮೂಲ್ ನಿರ್ದೇಶಕ ಎಚ್.ಸಿ.ಜಯಮುತ್ತು, ಕಾರ್ಯಕ್ರಮಕ್ಕೆ ಬರಲಿ. ಪ್ರತಿಭಟನೆಯನ್ನಾದರೂ ಮಾಡಲಿ ಅಥವಾ ರೈತರ ಕಾರ್ಯಕ್ರಮ ಎಂದು ಸಹಕಾರವನ್ನಾದರೂ ನೀಡಲಿ ಎಂದು ಲಿಂಗೇಶ್ ಕುಮಾರ್ ಹಾಗೂ ಸಿ.ಪಿ. ಯೋಗೇಶ್ವರ್ ಬೆಂಬಲಿಗರಿಗೆ ಟಾಂಗ್ ನೀಡಿದರು.

ಸಿ.ಪಿ.ವೈ, ಲಿಂಗೇಶ್ ಕುಮಾರ್‌ಗೆ ಟಾಂಗ್
ಬೆಂಗಳೂರು ಹಾಲು ಒಕ್ಕೂಟಕ್ಕೆ ಒಳಪಟ್ಟಿರುವ ಎಲ್ಲಾ ತಾಲೂಕುಗಳಲ್ಲೂ ಬಮೂಲ್ ಉತ್ಸವ ಯಶಸ್ವಿಯಾಗಿ ನಡೆದಿದೆ. ಅದೇ ರೀತಿ ಚನ್ನಪಟ್ಟಣದಲ್ಲೂ ಬಮೂಲ್ ಉತ್ಸವವನ್ನು ಹಮ್ಮಿಕೊಂಡಿದ್ದೇವೆ. ಅದರೆ ಕೆಲವರು ರಾಜಕೀಯ ಲಾಭಕ್ಕಾಗಿ ಉತ್ಸವವನ್ನು ವಿರೋಧಿಸುತ್ತಿದ್ದಾರೆಯೇ ಹೊರತು ಬೇರೇನೂ ಇಲ್ಲ ಎಂದು ಆರೋಪಿಸಿದು.

ಕಾರ್ಯಕ್ರಮದಲ್ಲಿ ಯಾರೆಲ್ಲ ಭಾಗಿಯಾಗಲಿದ್ದಾರೆ?
ಹಾಗೆಯೇ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌರ ಸಾಧನೆ ಗುರುತಿಸಿ ಕಾರ್ಯಕ್ರಮದಲ್ಲಿ ಅವರಿಗೆ ನಾಗರೀಕ ಸನ್ಮಾನವನ್ನು ಹಮ್ಮಿಕೊಳ್ಳಲಾಗಿದೆ. ಇನ್ನು ಕಾರ್ಯಕ್ರಮಕ್ಕೆ ಬೃಹತ್ ವೇದಿಕೆ ನಿರ್ಮಿಸುತ್ತಿದ್ದು, ಸುಮಾರು 20 ಸಾವಿರಕ್ಕೂ ಹೆಚ್ಚು ಹಾಲು ಉತ್ಪಾದಕರು ಭಾಗಿಯಾಗುವ ನಿರೀಕ್ಷೆಇದೆ. ಕಾರ್ಯಕ್ರಮದಲ್ಲಿ ಹೈನೋದ್ಯಮದ ಅಭಿವೃದ್ಧಿಗೆ ಕೈಜೋಡಿಸಿದ ಹಾಲು ಉತ್ಪಾದಕರ ಸಹಕಾರ ಸಂಘದ ಎಲ್ಲ ಸಕ್ರಿಯ ಸದಸ್ಯರಿಗೆ ನೆನಪಿನ ಕಾಣಿಕೆ ವಿತರಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ, ಸ್ಫಟಿಕಪುರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀನಂಜಾವಧೂತ ಸ್ವಾಮೀಜಿ ಸೇರಿದಂತೆ ಹಲವು
ಮಠಾಧೀಶರು ಭಾಗಿಯಾಗಲಿದ್ದಾರೆ. ಹಾಗೆಯೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ಜನ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಬಮೂಲ್ ನಿರ್ದೇಶಕ ಎಚ್.ಸಿ.ಜಯಮುತ್ತು ತಿಳಿಸಿದರು.

ಮೇಳಗಳ ಸಂಪೂರ್ಣ ವಿವರ ಇಲ್ಲಿದೆ
ಬೊಂಬೆನಾಡು ಬಮೂಲ್ ಉತ್ಸವದಲ್ಲಿ ತಾಲೂಕಿನ ನಿರುದ್ಯೋಗಿ ಯುವಕ, ಯುವತಿಯರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಇದರಲ್ಲಿ ರಾಜ್ಯದ ಸುಮಾರು 60ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗಿಯಾಗಲಿವೆ. ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಉದ್ಯೋಗ ಮೇಳ ನಡೆಯಲಿದೆ. ಯುವಜನರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಯಮುತ್ತು ಕರೆ ನೀಡಿದರು.

ಹೊಸ ತಂತ್ರಜ್ಞಾನಗಳ ಪರಿಚಯ
ಹಾಗೆಯೇ ಬಮೂಲ್ ಉತ್ಸವದಲ್ಲಿ ರೈತರಿಗೆ ನೆರವಾಗುವ ದೃಷ್ಟಿಯಿಂದ ಕೃಷಿ ಮೇಳವನ್ನು ಹಮ್ಮಿಕೊಳ್ಳಲಾಗುವುದು. ಕೃಷಿಗೆ ಸಂಬಂಧಿಸಿದ ವಿವಿಧ ಇಲಾಖೆಗಳು ಹಾಗೂ ಖಾಸಗಿ ಕಂಪನಿಗಳು ಭಾಗಿಯಾಗಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಹೊಸ ತಂತ್ರಜ್ಞಾನಗಳ ಕುರಿತು ರೈತರಿಗೆ ಮಾಹಿತಿ ನೀಡಲಿದ್ದಾರೆ. ಅಲ್ಲದೇ ಬೆಂಗಳೂರಿನ ಕೆಂಪೇಗೌಡ ಆಸ್ಪತ್ರೆಯ ಸಹಯೋಗದೊಂದಿಗೆ ವಿವಿಧ ವಿಭಾಗಗಳ ನುರಿತ ವೈದ್ಯರುಗಳು ಸಹಕಾರದಿಂದ ಆರೋಗ್ಯ ತಪಸಣಾ ಶಿಬಿರವನ್ನು ಸಹ ಆಯೋಜಿಸಲಾಗಿದೆ. ರೈತರು ಇವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಹೈನುಗಾರರನ್ನು ಒಂದೆಡೆ ಸೇರಿಸಿ ಸಂಭ್ರಮಿಸುವುದು ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ. ಇದೊಂದು ಪಕ್ಷಾತೀತ ಕಾರ್ಯಕ್ರಮವಾಗಿದೆ. ಕಾರ್ಯಕ್ರಮದ ಕುರಿತಂತೆ ಯಾವುದೇ ಗೊಂದಲವಿಲ್ಲ. ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಬಮೂಲ್‍ನ ಎಲ್ಲಾ ನಿರ್ದೇಶಕರು, ವ್ಯವಸ್ಥಾಪಕ ನಿರ್ದೇಶಕರು, ಅಧಿಕಾರಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಎಲ್ಲರೂಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಂಪಿಸಿಎಸ್ ನೌಕರರ ಸಂಘದ ಅಧ್ಯಕ್ಷ ಪುಟ್ಟೇಗೌಡ, ಕಾರ್ಯದರ್ಶಿ ಪುಟ್ಟರಾಜು, ಪದಾಧಿಕಾರಿಗಳಾದ ಬಿಳಿಗೌಡ, ಚನ್ನಪ್ಪ, ರವಿಕುಮಾರ್, ಮತ್ತೀಕೆರೆ ಹರ್ಷ, ನಟರಾಜು, ಸಚಿನ್, ವಿಜಯ್ ಕುಮಾರ್ ಸೇರಿದಂತೆ ಮತ್ತಿತರರು ಹಾಜರಿದ್ದರು.












Click it and Unblock the Notifications