ಜೆಡಿಎಸ್ - ಬಿಜೆಪಿ ಜಂಗಿ ಕುಸ್ತಿಗೆ ವೇದಿಕೆಯಾದ ಚನ್ನಪಟ್ಟಣದಲ್ಲಿ ನಡೆಯುವ ಬಮೂಲ್ ಉತ್ಸವ
ಫೆಬ್ರವರಿ 27ರಂದು ಚನ್ನಪಟ್ಟಣದಲ್ಲಿ ಬಮೂಲ್ ಉತ್ಸವ ನಡೆಯುತ್ತಿದ್ದು, ಇದು ಜೆಡಿಎಸ್, ಬಿಜೆಪಿ ನಾಯಕರ ಗದ್ದಲಕ್ಕೆ ಸಾಕ್ಷಿಯಾಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ರಾಮನಗರ, ಫೆಬ್ರವರಿ, 23: ಮರದ ಅಟಿಕೆಗಳ ತಯಾರಿಕೆಯಲ್ಲಿ ವಿಶ್ವಪ್ರಸಿದ್ದಿ ಪಡೆದ ಬೊಂಬೆನಗರಿ ಚನ್ನಪಟ್ಟಣ ಇತ್ತೀಚಿನ ದಿನಗಳಲ್ಲಿ ರಾಜಕೀಯ ಜಂಗಿ ಕುಸ್ತಿಗಳಿಗೂ ಕುಖ್ಯಾತಿ ಪಡೆಯುತ್ತಿದೆ. ಚುನಾವಣೆ ಸಮೀಪಿಸುತ್ತಿರು ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಹಮ್ಮಿಕೊಂಡಿರುವ ಬಮೂಲ್ ಉತ್ಸವ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ನಡುವೆ ಜಟಾಪಟಿಗೆ ವೇದಿಕೆಯಾದಂತಾಗಿದೆ.
ಕ್ಷೇತ್ರದ ಬಮೂಲ್ ನಿರ್ದೇಶಕ ಹಾಗೂ ತಾಲೂಕು ಜೆಡಿಎಸ್ ಅಧ್ಯಕ್ಷ ಜಯಮುತ್ತು ನೇತೃತ್ವದಲ್ಲಿ ಹಮ್ಮಿಕೊಂಡಿರುವ ಬಮೂಲ್ ಉತ್ಸವದಲ್ಲಿ ಪ್ರೋಟೊಕಾಲ್ ಉಲ್ಲಂಘನೆಯಾಗಿದೆ. ಕಾರ್ಯಕ್ರಮಕ್ಕೆ ನಾವು ಕಪ್ಪುಪಟ್ಟಿ ಪ್ರದರ್ಶನ ಮಾಡುತ್ತೇವೆ ಎಂದು ಬಿಜೆಪಿ ಮುಖಂಡರು ಸವಾಲ್ ಹಾಕಿದ್ದಾರೆ. ಈ ಮೂಲಕ ಫೆಬ್ರವರಿ 27ರಂದು ನಡೆಯುವ ಬಮೂಲ್ ಉತ್ಸವ ರಾಜಕಾರಣಿಗಳ ಗದ್ದಲಕ್ಕೆ ಸಾಕ್ಷಿಯಾಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
Channapatna Constituency: ಜೆಡಿಎಸ್‌ನ ಭದ್ರಕೋಟೆ ವಶಕ್ಕೆ ಬಿಜೆಪಿ-ಕಾಂಗ್ರೆಸ್ ತಂತ್ರವೇನು.? ಇಲ್ಲಿದೆ ವರದಿ
ಚುನಾವಣೆ ಹೊತ್ತಲ್ಲಿ ಬೊಂಬೆನಗರಿ ಚನ್ನಪಟ್ಟಣದಲ್ಲಿ ಇದೇ 27ರಂದು ಆಯೋಜಿಸಿರುವ ಬಮೂಲ್ ಉತ್ಸವ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ನಡುವೆ ಜಟಾಪಟಿಗೆ ಸಾಕ್ಷಿಯಾಗಲಿದೆ. ಬಮೂಲ್ ನಿರ್ದೇಶಕ ಎಚ್.ಸಿ. ಜಯಮುತ್ತು ನೇತೃತ್ವದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಸ್ಥಳೀಯ ಬಿಜೆಪಿ ಮುಖಂಡ, ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಹಾಗೂ ನಾಮ ನಿರ್ದೇಶಿತ ಸದಸ್ಯ ಲಿಂಗೇಶ್ ಕುಮಾರ್ ಹೆಸರು ಹಾಕದೆ ಪ್ರೋಟೊಕಾಲ್ ಉಲ್ಲಂಘನೆ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡರು ಆರೋಪಿಸಿದರು.

ಎಚ್ಚರಿಕೆ ನೀಡಿದ ಲಿಂಗೇಶ್ ಕುಮಾರ್
ಬಮೂಲ್ ಉತ್ಸವ ಕಾರ್ಯಕ್ರಮ ಬೆಂಗಳೂರು ಹಾಲು ಒಕ್ಕೂಟದ ಅಧಿಕೃತ ಕಾರ್ಯಕ್ರಮವಾಗದೇ ಜೆಡಿಎಸ್ ಪಕ್ಷದ ಕಾರ್ಯಕ್ರಮದ ರೀತಿ ಬಿಂಬಿತವಾಗುತ್ತಿದೆ. ಹಾಗಾಗಿ ಇದರ ಬಗ್ಗೆ ನಾವು ಬಮೂಲ್‌ನ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಅಧಿಕಾರಿಗಳು ಕೂಡ ಬಮೂಲ್ ಹಾಗೂ ನಂದಿನಿ ಲೋಗೊ ಬಳಸಬಾರದು ಎಂದು ಆಯೋಜಕರಿಗೆ ಸೂಚಿಸಿದ್ದಾರೆ. ಇದನ್ನು ದಿಕ್ಕರಿಸಿ ಕಾರ್ಯಕ್ರಮ ಮಾಡಿದರೆ ಸುಮಾರು 10 ಸಾವಿರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಹಾಗೂ ಹಾಲು ಉತ್ಪಾದಕರು ಕಪ್ಪು ಪಟ್ಟಿ ಪ್ರದರ್ಶನ ಮಾಡುತ್ತೇವೆ ಎಂದು ಬಮೂಲ್‌ನ ನಾಮ ನಿರ್ದೇಶಿತ ಸದಸ್ಯ ಲಿಂಗೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಪಿತೂರಿ ಮಾಡುತ್ತಿದ್ದಾರೆ-ಜಯಮುತ್ತು
ನಾಮ ನಿರ್ದೇಶಕ ಲಿಂಗೇಶ್ ಕುಮಾರ್ ಆರೋಪಗಳನ್ನು ತಳ್ಳಿಹಾಕಿದ ಬಮೂಲ್ ನಿರ್ದೇಶಕ ಜಯಮುತ್ತು, ಬಿಜೆಪಿ ಮುಖಂಡರು ಬಮೂಲ್ ಉತ್ಸವ ಕಾರ್ಯಕ್ರಮವನ್ನು ನಿಲ್ಲಿಸುವ ದುರುದ್ದೇಶದಿಂದಲೇ ಇಷ್ಟೆಲ್ಲಾ ಪಿತೂರಿಗಳನ್ನು ಮಾಡುತ್ತಿದ್ದಾರೆ. ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಯಾವುದೇ ಪ್ರೋಟೊಕಾಲ್ ಉಲ್ಲಂಘನೆಯಾಗಿಲ್ಲ. ಕಳೆದ ಮೂರು ತಿಂಗಳಿನಿಂದ ಶ್ರಮಪಟ್ಟು ಈ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ. ರೈತರು ಹಾಗೂ ಯುವಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದರು.

ಬ್ಯಾನರ್‌ಗಳಲ್ಲಿ ಹೆಸರು ಬಳಸುವುದಿಲ್ಲ
ಕಳೆದ ಎರಡು ದಿನಗಳ ಹಿಂದೆ ಬಮೂಲ್‌ನ ಎಂಡಿ ಅವರು ಲೋಗೊ ಮತ್ತು ಬಮೂಲ್ ಹೆಸರನ್ನು ಬಳಸಬಾರದು ಎಂದು ಸೂಚನೆ ನೀಡಿದ್ದಾರೆ. ನಾವು ಕಾನೂನಿಗೆ ತಲೆಬಾಗುತ್ತೇವೆ. ಹಾಗೆಯೇ ಕಾನೂನಿನ ಅಡಿಯಲ್ಲಿ ಕಾರ್ಯಕ್ರಮವನ್ನು ಮಾಡುತ್ತೇವೆ. ಈಗಾಗಲೇ ಹಂಚಿರುವ ಆಹ್ವಾನ ಪತ್ರಿಕೆಯಲ್ಲಿ ಲೋಗೊ ಬಳಸಲಾಗಿದೆ. ಕಾರ್ಯಕ್ರಮದಲ್ಲಿ ಆಗಲಿ, ಮುಂದೆ ಬಳಸುವ ಬ್ಯಾನರ್‌ಗಳಲ್ಲಿ ಹೆಸರು ಬಳಸುವುದಿಲ್ಲ ಎಂದು ಬಮೂಲ್ ನಿರ್ದೇಶಕ ಜಯಮುತ್ತು ಸ್ಪಷ್ಟನೆ ನೀಡಿದರು.

ಕಾರ್ಯಕ್ರಮದಲ್ಲಿ ಯಾರೆಲ್ಲ ಭಾಗಿಯಾಗಲಿದ್ದಾರೆ?
ಇನ್ನು ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ದೇವೆಗೌಡರವರು, ಮಾಜಿ ಸಿಎಂ ಕುಮಾರಸ್ವಾಮಿ, ವಿವಿಧ ಮಠಾಧೀಶರು, ಮಂತ್ರಿಗಳು ಪಾಲ್ಗೊಳ್ಳುತ್ತಾರೆ. ಹಾಗೆಯೇ ತಾಲೂಕಿನ ಸುಮಾರು 20 ಸಾವಿರಕ್ಕೂ ಹೆಚ್ವು ಹಾಲು ಉತ್ಪಾದಕರು ಭಾಗವಹಿಸಲಿದ್ದಾರೆ. ಅಲ್ಲದೇ ಹಾಲು ಉತ್ಪಾದಕರ ಮಕ್ಕಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಉದ್ಯೋಗ ಮೇಳ ಹಾಗೂ ಆರೋಗ್ಯ ಮೇಳವನ್ನು ಸಹ ಅಯೋಜಿಸಲಾಗಿದೆ ಎಂದರು.












Click it and Unblock the Notifications