Breaking News: ಕೆಲವೇ ಕ್ಷಣಗಳಲ್ಲಿ ಸಿ. ಪಿ. ಯೋಗೇಶ್ವರ ರಾಜೀನಾಮೆ
ಬೆಂಗಳೂರು, ಅಕ್ಟೋಬರ್ 21: ರಾಮನಗರ ಜಿಲ್ಲೆಯ ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆ ಕುತೂಹಲಕ್ಕೆ ಕಾರಣವಾಗಿದ್ದು, ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ. ಕ್ಷೇತ್ರಕ್ಕೆ ಬಿಜೆಪಿ-ಜೆಡಿಎಸ್ ಅಭ್ಯರ್ಥಿ ಯಾರು? ಎಂಬುದು ಇನ್ನೂ ಅಂತಿಮವಾಗಿಲ್ಲ. ಟಿಕೆಟ್ ಆಕಾಂಕ್ಷಿಯಾಗಿರುವ ಬಿಜೆಪಿ ನಾಯಕ, ಎಂಎಲ್‌ಸಿ ಸಿ. ಪಿ. ಯೋಗೇಶ್ವರ ನಡೆ ಅಚ್ಚರಿಗೆ ಕಾರಣವಾಗಿದೆ. ಶುಕ್ರವಾರ ಅವರು ನಾಮಪತ್ರ ಸಲ್ಲಿಕೆ ಮಾಡಲು ತಯಾರಿ ನಡೆಸಿದ್ದು, ಕೆಲವೇ ಕ್ಷಣಗಳಲ್ಲಿ ರಾಜೀನಾಮೆ ನೀಡಲಿದ್ದಾರೆ.
ಮೂರು ಕ್ಷೇತ್ರಗಳ ಉಪ ಚುನಾವಣೆ ಪೈಕಿ ಎರಡು ಕ್ಷೇತ್ರಗಳನ್ನು ಬಿಜೆಪಿಗೆ ಜೆಡಿಎಸ್ ಬಿಟ್ಟುಕೊಟ್ಟಾಗಿದೆ. ಸಂಡೂರು, ಶಿಗ್ಗಾವಿ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಆದರೆ ನವೆಂಬರ್ 13ರಂದು ನಡೆಯುವ ಉಪ ಚುನಾವಣೆಗೆ ಚನ್ನಪಟ್ಟಣದ ಅಭ್ಯರ್ಥಿ ಯಾರು? ಎಂಬುದು ಇನ್ನೂ ಅಂತಿಮವಾಗಿಲ್ಲ.

ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಯಾರು?. ಸಿ. ಪಿ. ಯೋಗೇಶ್ವರ ಯಾವ ಪಕ್ಷದಿಂದ ಸ್ಪರ್ಧೆ ಮಾಡಲಿದ್ದಾರೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಅಕ್ಟೋಬರ್ 25 ಕೊನೆಯ ದಿನವಾಗಿದೆ. ಸಿ. ಪಿ. ಯೋಗೇಶ್ವರ ನಡೆ ಬಗ್ಗೆ ಈಗ ಮೂರು ಪಕ್ಷದ ನಾಯಕರು ಕಾದು ನೋಡುತ್ತಿದ್ದಾರೆ.
ಯಾವುದೇ ಕ್ಷಣದಲ್ಲಿ ರಾಜೀನಾಮೆ: ಚನ್ನಪಟ್ಟಣದ ಬಿಜೆಪಿ ಟಿಕೆಟ್ ಸಿ. ಪಿ. ಯೋಗೇಶ್ವರ ಕೈತಪ್ಪಲಿದೆಯೇ? ಎಂಬ ಪ್ರಶ್ನೆ ಎದುರಾಗಿದೆ. ಬಿಜೆಪಿ ನಾಯಕ ಸಿ. ಪಿ. ಯೋಗೇಶ್ವರ ಪ್ರಸ್ತುತ ವಿಧಾನ ಪರಿಷತ್ ಸದಸ್ಯರು. ಅವರ ಸದಸ್ಯತ್ವದ ಅವಧಿ 2026ರ ತನಕ ಇದೆ. ಈಗ ಅವರು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಸಿ. ಪಿ. ಯೋಗೇಶ್ವರ ಹುಬ್ಬಳ್ಳಿಗೆ ಪ್ರಯಾಣ ಮಾಡುತ್ತಿದ್ದಾರೆ. ಸಂಜೆ 4 ಗಂಟೆಗೆ ಅವರು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಭೇಟಿಯಾಗಲು ಸಮಯ ಪಡೆದಿದ್ದಾರೆ. ಸಭಾಪತಿಗಳನ್ನು ಭೇಟಿಯಾಗಿ ಅವರು ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಲಿದ್ದಾರೆ. ಮುಂದೇನು? ಎಂಬ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ.
ಎಚ್. ಡಿ. ಕುಮಾರಸ್ವಾಮಿ ಅವರ ಷರತ್ತು, ಮೈತ್ರಿ ಧರ್ಮದ ಮಾತಿನಂತೆ ಚನ್ನಪಟ್ಟಣದಲ್ಲಿ ಸಿ. ಪಿ. ಯೋಗೇಶ್ವರ ಸ್ಪರ್ಧೆ ಮಾಡುವುದಾದರೆ ಅವರು ಜೆಡಿಎಸ್ ಪಕ್ಷದ ಚಿಹ್ನೆಯಿಂದ ಕಣಕ್ಕಿಳಿಯಬೇಕು. ಹಾಲಿ ಬಿಜೆಪಿಯಲ್ಲಿರುವ ಅವರು ಬೇರೆ ಪಕ್ಷದಿಂದ ಕಣಕ್ಕಿಳಿಯಲು ಪರಿಷತ್ ಸದಸ್ಯತ್ವ, ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕು.
ಆದರೆ ಸಿ. ಪಿ. ಯೋಗೇಶ್ವರ ಜೆಡಿಎಸ್‌ನಿಂದ ಕಣಕ್ಕಿಳಿಯಲು ಒಪ್ಪಿಲ್ಲ ಎಂಬ ಮಾತಿದೆ. ಅವರು ಉಪ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದು, ಅದಕ್ಕಾಗಿ ಶುಕ್ರವಾರ ನಾಮಪತ್ರ ಸಲ್ಲಿಸಲು ಪಕ್ಷೇತರ ಅಭ್ಯರ್ಥಿ ಅಫಿಡೆವಿಟ್ ಸಿದ್ಧಮಾಡಿಕೊಂಡಿದ್ದಾರೆ. ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಬಿಜೆಪಿಯನ್ನು ತೊರೆದು ಪಕ್ಷೇತರ ಅಭ್ಯರ್ಥಿಯಾಗುತ್ತಾರಾ? ಎಂಬುದು ಸದ್ಯದ ಪ್ರಶ್ನೆ.
ಸಿ. ಪಿ. ಯೋಗೇಶ್ವರ ಚನ್ನಪಟ್ಟಣದಲ್ಲಿ ಪಕ್ಷಕ್ಕಿಂತ ಹೆಚ್ಚಾಗಿ ವೈಯಕ್ತಿಕ ವರ್ಚಸ್ಸು ಹೊಂದಿದ್ದಾರೆ. ವಿವಿಧ ಪಕ್ಷದಿಂದ ಚನ್ನಪಟ್ಟಣದಲ್ಲಿ ಅವರು ಕಣಕ್ಕಿಳಿದು ಗೆಲುವು, ಸೋಲು ಕಂಡಿದ್ದಾರೆ. ಈಗ ಬಿಜೆಪಿ-ಜೆಡಿಎಸ್ ನಾಯಕರ ನಡೆಯಿಂದ ಅಸಮಾಧಾನಗೊಂಡಿರುವ ಅವರು ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ? ಎಂದು ಅಂದಾಜಿಸಲಾಗಿದೆ.
ಬಿಜೆಪಿ, ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಸಿ. ಪಿ. ಯೋಗೇಶ್ವರ ಚನ್ನಪಟ್ಟಣದಲ್ಲಿ ಪಕ್ಷೇತರ ಅಭ್ಯರ್ಥಿಯಾದರೆ ನಿಖಿಲ್ ಕುಮಾರಸ್ವಾಮಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಲಿದ್ದಾರೆ. ಕಾಂಗ್ರೆಸ್‌ನಿಂದ ಡಿ. ಕೆ. ಸುರೇಶ್ ಅಭ್ಯರ್ಥಿ ಎಂಬ ಸುದ್ದಿಗಳು ಹಬ್ಬಿವೆ. ಆದರೆ ಯಾವುದೇ ಅಧಿಕೃತ ಘೋಷಣೆಯಾಗಿಲ್ಲ.












Click it and Unblock the Notifications