ರಾಮನಗರ: ರೈಸ್ ಮಿಲ್‌ನಲ್ಲಿ ನಾಡ ಬಾಂಬ್ ಸ್ಫೋಟ, ವ್ಯಕ್ತಿ ಕೈ ಛಿದ್ರ ಛಿದ್ರ
ರಾಮನಗರ, ಡಿಸೆಂಬರ್ 03: ತೆಂಗಿನಕಾಯಿ ಎಂದುಕೊಂಡು ಕೈಯಲ್ಲಿ ಹಿಡಿದಿದ್ದ ನಾಡ ಬಾಂಬ್ ಸ್ಫೋಟಗೊಂಡಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ನೇರಳೆಹಳ್ಳಿ ದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಕೋಲಾರದ ಮೂಲದ ನಿವಾಸಿ ಕೌಶದ್ (25) ನೇರಳೆಹಳ್ಳಿ ದೊಡ್ಡಿ ಗ್ರಾಮದ ಅಕ್ಕಿ ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅಕ್ಕಿಯ ಮೇಲೆ ತೆಂಗಿನಕಾಯಂತಹ ವಸ್ತುವು ಬಿದ್ದಿತ್ತು. ಇದನ್ನು ಗಮನಿಸಿದ ಕೌಶದ್ ಆ ವಸ್ತುವನ್ನು ಕೈಯಲ್ಲಿ ಹಿಡಿದು ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಏಕಾಏಕಿ ಸ್ಫೋಟಗೊಂಡಿದೆ. ಇನ್ನು ಕೌಶಿದ್ ವಸ್ತುವನ್ನು ಏನೆಂದು ತಿಳಿಯಲು ಚಚ್ಚಿದ್ದಾರೆ ಎನ್ನಲಾಗಿದೆ. ಸ್ಫೋಟಗೊಂಡ ಬಳಿಕ ನಾಡ ಬಾಂಬ್ ಎಂದು ತಿಳಿದು ಬಂದಿದೆ.

ಘಟನೆಯಲ್ಲಿ ಕೌಶದ್ ಕೈಗೆ ಗಂಭೀರ ಗಾಯವಾಗಿದೆ. ಸ್ಫೋಟದ ರಭಸಕ್ಕೆ ಕೌಶದ್ ಬಲಗೈ ಹಸ್ತದ ಎರಡು ಬೆರಳು ಛಿದ್ರ ಛಿದ್ರವಾಗಿದೆ. ಸದ್ಯ ಕೌಶದ್ ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಇನ್ನು ಕೋಡಿಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಕಾಡುಹಂದಿ ಬೇಟೆಗೆ ಇಟ್ಟಿದ್ದ ನಾಡಬಾಂಬ್ ಸ್ಫೋಟವಾಗಿರುವ ಶಂಕೆ ವ್ಯಕ್ತವಾಗಿದೆ.
ಪಾರ್ಟ್ ಟೈಂ ಜಾಬ್ ಆಫರ್: ವ್ಯಕ್ತಿಗೆ 12 ಲಕ್ಷ ಪಂಗನಾಮ
ಸಾಮಾಜಿಕ ಜಾಲತಾಣದಲ್ಲಿ ಬಂದ ಪಾರ್ಟ್ ಟೈಂ ಜಾಬ್ ಆಫರ್ ನಂಬಿ ವ್ಯಕ್ತಿಯೊಬ್ಬ 12 ಲಕ್ಷ ರೂ ಕಳೆದುಕೊಂಡಿರುವ ಘಟನೆ ಬಿಡದಿಯ ಬೈರಮಂಗಲ ಗ್ರಾಮದಲ್ಲಿ ನಡೆದಿದೆ. ಬೈರಮಂಗಲ ಗ್ರಾಮದ ಯುವಕನಿಗೆ ವ್ಯಾಟ್ಸಾಪ್‌ಗೆ ಪಾರ್ಟ್ ಟೈಂ ಜಾಬ್ ಇದೆ ಎನ್ನುವ ಸಂದೇಶ ಬಂದಿತ್ತು.
ಆ ಸಂದೇಶದ ಲಿಂಕ್ ಓಪನ್ ಮಾಡಿದಾಗ ಟೆಲಿಗ್ರಾಂ ಖಾತೆಯಲ್ಲಿ ಮತ್ತೊಂದು ಲಿಂಕ್ ಓಪನ್ ಆಗಿ ಅಲ್ಲಿ ಗೂಗಲ್‌ನಲ್ಲಿ ರೆಸ್ಟೋರೆಂಟ್‌ಗಳಿಗೆ ರೆಂಟಿಗ್ಸ್ ಕೊಟ್ಟು ಅದರ ಸ್ಕ್ರೀನ್ ಶಾಟ್ ಮಾಡಿ ಟೆಲಿಗ್ರಾಂನಲ್ಲಿ ವಾಪಸ್ಸು ಕಳಿಸಿದಾಗ ಹಣವನ್ನ ಕಳುಹಿಸುತ್ತೇವೆ. ಒಟ್ಟು 22 ಟಾಸ್ಕ್ ಮುಗಿಸಿದರೆ ಒಂದು ದಿನಕ್ಕೆ 7,500 ರೂ ನಿಮಗೆ ಬರುತ್ತದೆ ಎಂದು ಹೇಳಿ ನಂಬಿಸಲಾಗಿತ್ತು.
ಇದನ್ನ ನಂಬಿದ ಆತ ಟಾಸ್ಕ್‌ಗಳನ್ನು ಪೂರೈಸಲು ಆರಂಭಿಸಿದ್ದ. ಟಾಸ್ಕ್ ಪೂರೈಸಿ ಹಣ ಕೇಳಿ, ಬ್ಯಾಂಕ್ ಖಾತೆ ವಿವರ ಪಡೆದಿದ್ದಾರೆ. ಹಣ ಖಾತೆಗೆ ಹಾಕಲಾಗಿದೆ ಆದರೆ ರಾಂಗ್ ಆಡರ್ ಪಾಸ್ ಆಗಿದೆ ಇದನ್ನು ಸರಿಪಡಿಸಬೇಕಾದರೆ 5 ಲಕ್ಷ ಹಣ ಆಗುತ್ತದೆ ಎಂದು ಹೇಳಿದ್ದಾರೆ. ಇದನ್ನ ನಂಬಿ ಹಣವನ್ನು ಅವರು ನೀಡಿದ ಖಾತೆಗೆ ಹಾಕಿದ್ದಾನೆ. ಹೀಗೆ ಹಂತಹಂತವಾಗಿ 12 ಲಕ್ಷ ರೂ ಕಳೆದುಕೊಂಡ ಮೇಲೆ ವಂಚನೆಗೊಳಾಗಿರುವುದು ತಿಳಿದು ಬಂದಿದೆ. ಘಟನೆ ಸಂಬಂಧ ಯುವಕ ರಾಮನಗರ ಸಿ.ಇ.ಎನ್ ಅಪರಾದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.











Click it and Unblock the Notifications