ಬಿಜೆಪಿಗೆ ಮತ್ತೆ ಆಘಾತ: ಅರ್ಹರಿಗೆ ಮಾಗಡಿ ಟಿಕೆಟ್ ನೀಡಿಲ್ಲ ಎಂದು ಎಚ್‌ಎಂ ಕೃಷ್ಣಮೂರ್ತಿ ಅಸಮಾಧಾನ
ರಾಮನಗರ, ಏಪ್ರಿಲ್ 16: ರಾಜ್ಯ ವಿಧಾನಸಭೆಗೆ ಟಿಕೆಟ್ ಘೋಷಿಸಿದ ಬಳಿಕ ಬಿಜೆಪಿಯಲ್ಲಿ ಎದ್ದಷ್ಟು ಬಂಡಾಯ ಇತರೆ ಪಕ್ಷಗಳಲ್ಲಿ ಸೃಷ್ಟಿಯಾದಂತಿಲ್ಲ. ಇದೀಗ ರಾಮನಗ ಜಿಲ್ಲೆ ವ್ಯಾಪ್ತಿಯಲ್ಲಿ ಬಿಜೆಪಿ ಬಂಡಾಯ ಬಿಸಿ ಎದುರಿಸಬೇಕಿದೆ.
ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಕ್ಷೇತ್ರಕ್ಕೆ ಬಿಜೆಪಿ ಪಕ್ಷವು ಅರ್ಹ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ ಎಂಬ ಕಾರಣಕ್ಕೆ ಮಾಗಡಿ ಬಿಜೆಪಿ ಪಾಳಯದಲ್ಲಿ ಅಸಮಾಧಾನ ವ್ಯಕ್ತವಾಗಿದ್ದು, ಕೆಂಪೇಗೌಡ ಪ್ರಾಧಿಕಾರದ ನಾಮ ನಿರ್ದೇಶಕ ಎಚ್.ಎಂ.ಕೃಷ್ಣ ಮೂರ್ತಿ ಬಿಜೆಪಿ ವಿರುದ್ಧ ಆರೋಪ ಮಾಡಿದ್ದಾರೆ.

ಭಾನುವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಎಂ.ಕೃಷ್ಣಮೂರ್ತಿ, ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಆರ್.ಪ್ರಸಾದ್ ಗೌಡ, ಜನತೆಗೆ ಸುಳ್ಳುಗಳ ಸರಮಾಲೆಯನ್ನು ಹೇಳುತ್ತಿದ್ದಾರೆ. ಬಿಜೆಪಿ ಆಭ್ಯರ್ಥಿಯ ವರ್ತನೆ ಹೀಗೇ ಮುಂದುವರಿದರೆ ಕ್ಷೇತ್ರದಲ್ಲಿ ಬಿಜೆಪಿ ಸರ್ವನಾಶವಾಗುತ್ತದೆ ಎಂದು ಆರೋಪಿಸಿದರು. ಸದ್ಯದ ಬಿಜೆಪಿ ಅಭ್ಯರ್ಥಿ ಕೆ.ಆರ್.ಪ್ರಸಾದ್ ಗೌಡ ಕೆಂಪೇಗೌಡ ಜಯಂತಿ ವೇದಿಕೆಗೆ ಅಲ್ಪ ಸಹಕಾರ ಮಾಡಿ ಕಾರ್ಯಕ್ರಮಕ್ಕೆ ಬಂದಾಗ ಅವರು ಕಾಣಿಸಿಕೊಂಡಿದ್ದರು. ಅದರ ಹೊರತಾಗಿ ಪಕ್ಷ ಸಂಘಟನೆಯಲ್ಲಿ ಅವರು ಸಕ್ರಿಯವಾಗಿಲ್ಲ ಎಂದು ಅವರು ದೂರಿದರು.
ಕ್ಷೇತ್ರದಲ್ಲಿ ಪ್ರಸಾದ್ ಗೌಡ ಅವರು 300 ಬೂತ್‌ಗಳಿಗೆ ಗಣಪತಿ ವಿಗ್ರಹ ಕೊಡುವುದಾಗಿ ಭರವಸೆ ನೀಡಿ ನಂತರ ಗಣೇಶ ವಿಗ್ರಹ ನೀಡಲಿಲ್ಲ. ತಾಲೂಕಿನ ದೇವಾಲಯಗಳಿಗೆ ಹಣ ಸಹಾಯ ಮಾಡುವುದಾಗಿ ಹೇಳಿದ್ದ ಮಾತಿನಂತೆ ನಡೆದುಕೊಂಡಿಲ್ಲ. ಪ್ರಚಾರದ ವೇಳೆ ನನ್ನನ್ನು ಪ್ರಶ್ನಿಸುತ್ತಿದ್ದಾರೆ. ಇವರಿಂದ ಕ್ಷೇತ್ರಕ್ಕೆ ಏನು ಪ್ರಯೋಜನವಿಲ್ಲ. ಬಿಜೆಪಿ ಪಕ್ಷ ಅರ್ಹತೆ ಇಲ್ಲದೆ ಪ್ರಸಾದ್ ಗೌಡ ಅವರಿಗೆ ಟಿಕೆಟ್ ನೀಡಿರುವುದು ದುರ್ದೈವ ಎಂದರು.
ಮಾಗಡಿಯಲ್ಲಿ ಕಮಲಕ್ಕೆ ನೀರುಣಿಸಲಿಲ್ಲ
ಮಾಗಡಿಯಲ್ಲಿ ಬಿಜೆಪಿ ಕ್ರಮೇಣ ಬಲಿಷ್ಠವಾಗಿ ಬೆಳೆಯುತ್ತಿದೆ. ಕಾರ್ಯಕರ್ತರು ನಾಯಕರ ಮೇಲೆ ವಿಶ್ವಾಸವಿಟ್ಟಿದ್ದರು. ಸಚಿವ ಅಶ್ವಥ್ ನಾರಾಯಣ್ ಅವರು ಮಾಗಡಿ ತಾಲೂಕಿನವರು ಎಂಬ ಖುಷಿಯಿತ್ತು. ಮಾಗಡಿಯಲ್ಲಿ ಬಿಜೆಪಿ ಅರಳುವ ಕಮಲಕ್ಕೆ ನೀರು ಹಾಕದೇ ಒಣಗಿಸಿದಂತಾಗಿದೆ ಎಂದು ಅವರು ಮಾರ್ಮಿಕವಾಗಿ ಹೇಳಿದರು.

ಜಿಲ್ಲೆಯಲ್ಲಿ ಕಮಲ ಅರಳಲಿಲ್ಲ ಇವರನ್ನು ನಂಬಿ ಬಂದವರಿಗೆ ರಕ್ಷಣೆಯಾಗಲಿಲ್ಲ. ಇದನ್ನು ಯೋಚಿಸಿ ಕಳೆದ 6 ತಿಂಗಳ ಅವಶ್ಯಕತೆ ಇಲ್ಲ ಎಂದು ಸುಮ್ಮನಿದ್ದೆ. ಜಿಲ್ಲಾ ಉಸ್ತುವಾರಿ ಸಚಿವರು ರಾತ್ರಿ ಹಗಲು ಶಾಸಕರೊಂದಿಗೆ ಸುತ್ತಾಡಿದರೆ ಬಿಜೆಪಿ ಪಕ್ಷ ಸಂಘಟನೆಗೆ ಸಾಧ್ಯ. ಇದರಿಂದ ಜಿಲ್ಲೆಯಲ್ಲಿ ಬಿಜೆಪಿ ಸಂಪೂರ್ಣ ನಾಶವಾಗಿದೆ ಎಂದು ಸಚಿವ ಅಶ್ವಥ್ ನಾರಾಯಣ ವಿರುದ್ಧ ಕೃಷ್ಣಮೂರ್ತಿ ಲೇವಡಿ ಮಾಡಿದರು.
ನಾನು ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಕಟ್ಟಲು ಪಣತೊಟ್ಟು ಗ್ರಾ.ಪಂ ಚುನಾವಣೆ ವೇಳೆ ಕೋಟಿ ಗಟ್ಟಲೆ ಹಣ ಕಳೆದುಕೊಂಡಿದ್ದೇನೆ. ನಮ್ಮದೆಯಾದ ಸಿದ್ಧಾಂತ, ಹೋರಾಟದಿಂದ ಬಂದಿದ್ದೇನೆ ಕಾಡಿ ಬೇಡಿ ರಾಜಕಾರಣ, ಸ್ವಾಭಿಮಾನ ನನಗಿದೆ. ಟಿಕೆಟ್ ನೀಡುವ ವಿಚಾರವಾಗಿ ಸಭೆ ಕರೆದು ಅನಿಸಿಕೆ, ಅಭಿಪ್ರಾಯ ಪಡೆಯುವ ಸೌಜನ್ಯ ಇಲ್ಲ ಇವರನ್ನು ನಾಯಕರು ಎಂದು ಒಪ್ಪಿಕೊಳ್ಳುವುದು ಹೇಗೆ ಎಂದು ಉಸ್ತುವರಿ ಸಚಿವ ಡಾ.ಅಶ್ವಥ್ ನಾರಾಯಣ್ ವಿರುದ್ಧ ಕೃಷ್ಣಮೂರ್ತಿ ಕಿಡಿ ಕಾರಿದರು.
ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದವರು ಭೇಟಿ ಆಗುವುದಾಗಿ ಹೇಳಿದ್ದಾರೆ. ಹಾಗಾಗಿ ಏಪ್ರಿಲ್ 17 ರಂದು ಪಟ್ಟಣದ ಕೆಂಪೇಗೌಡ ಪ್ರತಿಮೆ ಬಳಿ ನನ್ನೆಲ್ಲ ಹಿತೈಶಿಗಳನ್ನು ಹಾಗೂ ಅಭಿಮಾನಿಗಳೊಂದಿಗೆ ಸಭೆ ಮಾಡಿ ಅವರ ಸಲಹೆ ಮತ್ತು ಮಾರ್ಗದರ್ಶನ ಪಡೆದು ನಂತರ ನಾನು ಯಾವ ಪಕ್ಷ ಸೇರಬೇಕು ಎಂದು ನಿರ್ಧಾರ ಮಾಡುತ್ತೇನೆ ಎಂದು ಆಘಾತ ನೀಡಿದರು.












Click it and Unblock the Notifications